‘ದಿ ಫೈಲ್‌, ವಾರ್ತಾಭಾರತಿ’ವರದಿ ಪರಿಣಾಮ; ಅಸಮರ್ಪಕ ಮೌಲ್ಯಮಾಪನ ಕುರಿತು ತನಿಖೆಗೆ ಪತ್ರ

ಬೆಂಗಳೂರು; 2017ರಿಂದ 2020ರ ಮಾರ್ಚ್‌ 31ರ ಅಂತ್ಯದವರೆಗೆ ನಡೆದಿರುವ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರಿಂದ 23.09 ಲಕ್ಷ ರು.ಗಳನ್ನು ವಸೂಲಿಗೆ ಬಾಕಿ ಇರುವುದು ಸೇರಿದಂತೆ ಹಲವು ನ್ಯೂನತೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 2020-21ನೇ ಸಾಲಿನ ಲೆಕ್ಕಪರಿಶೋಧನೆ ವರದಿ ಕುರಿತು ‘ದಿ ಫೈಲ್‌ ಮತ್ತು ವಾತಾಭಾರತಿ,’ ವಿಶೇಷ ವರದಿ ಪ್ರಕಟಿಸಿತ್ತು.

ಅಸಮರ್ಪಕ ಮೌಲ್ಯಮಾಪನ ಹೆಚ್ಚಳ, 9.26 ಕೋಟಿ ವ್ಯತ್ಯಾಸ, ವಸೂಲಾಗದ 51.26 ಲಕ್ಷ ದಂಡ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 2020-21ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯು ಪ್ರಕಟವಾಗಿದ್ದು ಇದರಲ್ಲಿ 2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿರುವ ದಂಡದ ಮೊತ್ತ, ವಿದ್ಯಾರ್ಥಿಗಳು ಪಾವತಿಸಿರುವ ಪರೀಕ್ಷಾ ಶುಲ್ಕ ಮೊತ್ತ ಮತತ್ತು ಇದೇ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಿವಿಧ ಪ್ರವರ್ಗಗಳಿಗೆ ಸೇರಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಸ್ವೀಕರಿಸಿರುವ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಹೊರಗೆಡವಿದ್ದರು.

 

ಈ ಕುರಿತು ‘ದಿ ಫೈಲ್‌ ಮತ್ತು ವಾರ್ತಾಭಾರತಿ’ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವರದಿ ಪ್ರಕಟವಾದ ಬೆನ್ನಲ್ಲೇ ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು 2022ರ ಮಾರ್ಚ್‌ 3ರಂದು ಪತ್ರ ಬರೆದಿದ್ದಾರೆ.   ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸ್ವಾಯತ್ತ ಸಂಸ್ಥೆಯಾಗಿದ್ದು ಈ ಮೇಲ್ಕಂಡ ಅವಧಿಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಕೂಡಲೇ ಸರಿಪಡಿಸಬೇಕಾದ ಅವಶ್ಯಕತೆ ಇರುತ್ತದೆ. ಈ ಮೇಲ್ಕಂಡ ಅವಧಿಯಲ್ಲಿ ನಾನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವನಾಗಿ ಕಾರ್ಯನಿರ್ವಹಿಸಿದ್ದು ಈ ಬಗ್ಗೆಯೂ ಸಹ ಉಲ್ಲೇಖಿಸಿ ವರದಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು,’ ಎಂದು ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಪತ್ರದಲ್ಲಿ ಆಯುಕ್ತರನ್ನು ಕೋರಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾಜಿ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಬರೆದಿರುವ ಪತ್ರದ ಪ್ರತಿ

 

ವರದಿಯಲ್ಲೇನಿತ್ತು?

 

ಜುಲೈ ಮತ್ತು 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಕಾರ್ಯ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿರುವ ದಂಡದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ. ದಂಡದ ಮೊತ್ತ ವಸೂಲು ಮಾಡುವ ಶಾಖೆಯ ಲೆಕ್ಕದಂತೆ 3,49,700 ರು. ಇದ್ದರೆ ಮಂಡಳಿಯು ಲೆಕ್ಕ ಪರಿಶೋಧಕರಿಗೆ ನೀಡಿರುವ ಮಾಹಿತಿಯಂತೆ 13,18, 849 ರು. ಮತ್ತು ಸನ್ನದು ಲೆಕ್ಕ ಪರಿಶೋಧಕರ ವರದಿ ಪ್ರಕಾರ 12, 05,065 ರು. ಇದೆ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

 

2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಒಟ್ಟು 98,96,500 ರು.ಗಳ ದಂಡ ವಿಧಿಸಲಾಗಿತ್ತು. ಈ ಪೈಕಿ 75, 87, 254 ರು. ವಸೂಲು ಮಾಡಲಾಗಿದೆಯಾದರೂ ಇನ್ನೂ 23.09,246 ರು.ಗಳನ್ನು ವಸೂಲು ಮಾಡಿಲ್ಲ.

 

2017-18ರಲ್ಲಿ ನಡೆದ ಪರೀಕ್ಷೆ ವೇಳೆಯಲ್ಲಿ ಅಸಮರ್ಪಕವಾಗಿ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರಿಗೆ 24,95,800 ರು. ದಂಡ ಮೊತ್ತವನ್ನು ವಿಧಿಸಿದ್ದರೆ ಇದರಲ್ಲಿ 21,16,600 ರು ವಸೂಲು ಮಾಡಿರುವ ಮಂಡಳಿಯು ಇನ್ನೂ 3,79,200 ರು.ನ್ನು ವಸೂಲಿ ಮಾಡಿಲ್ಲ. 2018ರಲ್ಲಿ 33,38,500 ರು. ದಂಡ ಮೊತ್ತ ವಿಧಿಸಿದ್ದರೆ ಈ ಪೈಕಿ 27,42,100 ರು. ವಸೂಲು ಮಾಡಿ ಇನ್ನೂ 5,96,400 ರು.ಗಳನ್ನು ಬಾಕಿ ಇರಿಸಿಕೊಂಡಿದೆ. 2019-20ರಲ್ಲಿ 40,62,200 ರು. ದಂಡ ವಿಧಿಸಿದ್ದರೆ ಇದರಲ್ಲಿ 27, 28,554 ರು. ವಸೂಲು ಮಾಡಿರುವ ಮಂಡಳಿಯು ಇನ್ನೂ 13,33,646 ರು. ಸೇರಿದಂತೆ ಒಟ್ಟು 23, 09, 246 ರು.ಗಳನ್ನು ವಸೂಲಿಗೆ ಬಾಕಿ ಇರಿಸಿರುವುದು ವರದಿಯಿಂದ ತಿಳಿದು ಬಂದಿತ್ತು.

 

2020-21ನೇ ಸಾಲಿನಲ್ಲಿ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಸಂಬಂಧ 6,106 ಇದ್ದರೆ 2020 ಸೆಪ್ಟಂಬರ್‌ನಲ್ಲಿ 514 ಪ್ರಕರಣಗಳಿದ್ದವು. ಈ ಎಲ್ಲಾ ಪ್ರಕರಣಗಳಿಂದ ಒಟ್ಟಾರೆಯಾಗಿ 51,26,600 ರು. ದಂಡ ವಿಧಿಸಲಾಗಿತ್ತು. ಆದರೆ 2021ರ ಮಾರ್ಚ್‌ ಅಂತ್ಯದವರೆಗೂ ಈ ದಂಡದ ಮೊತ್ತವನ್ನು ವಸೂಲಿ ಮಾಡಿಲ್ಲ.

 

‘2021ರ ಮಾರ್ಚ್‌ 31ರ ಅಂತ್ಯಕ್ಕೆ 514 ಪ್ರಕರಣಗಳಿಂದ ಒಟ್ಟಾರೆಯಾಗಿ 51, 26, 600 ರು.ಗಳ ದಂಡದ ಮೊತ್ತವನ್ನು ವಸೂಲಿಸದಿರುವುದು ಕಂಡು ಬಂದಿರುತ್ತದೆ. ವರ್ಷದ ದಂಡ ಮೊತ್ತ ಮೊತ್ತ 51,26,600 ರು.ಗಳನ್ನು ವಸೂಲಾತಿಗೆ ತೀವ್ರಗತಿಯ ಕ್ರಮ ವಹಿಸುವುದು. ವಸೂಲಿಸಿ ಖಾತೆಗೆ ಜಮೆಯಾಗುವರಿಗೆ 51,26,600 ರು.ಗಳನ್ನು ವಸೂಲಾತಿಗೆ ಸೂಚಿಸಿದೆ,’ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ವಿವರಿಸಿದ್ದರು.

 

ಇಂತಹ ಪ್ರಕರಣಗಳಲ್ಲಿ ವಿಧಿಸುವ ದಂಡದ ಮೊತ್ತವನ್ನು ವಿಧಿಸುವುದು ಮತ್ತು ವಸೂಲು ಮಾಡದಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿಗೆಯಾಗುತ್ತಿದೆ. 2016-17ರಲ್ಲಿ 3,049 ಶಿಕ್ಷಕರು, 2017-18ರಲ್ಲಿ 4,171 ಶಿಕ್ಷಕರು, 2018-19ರಲ್ಲಿ 5,374 ಶಿಕ್ಷಕರು, 2019-20ರಲ್ಲಿ 6,620 ಶಿಕ್ಷಕರು ಅಸಮರ್ಪಕ ಮೌಲ್ಯಮಾಪನ ಕಾರ್ಯ ಮಾಡಿದ್ದಾರೆ. ಆದರೆ ಈ ಯಾವ ಶಿಕ್ಷಕರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಿರುವುದು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿತ್ತು.

 

ಅದೇ ರೀತಿ ಜುಲೈ ಮತ್ತು ಸೆಪ್ಟಂಬರ್‌ 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶುಲ್ಕದ ಮೊತ್ತದಲ್ಲಿಯೂ ವ್ಯತ್ಯಾಸ ಇರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. ಈ ಬಾಬ್ತಿನಲ್ಲಿ ಮಂಡಳಿ ನೀಡಿರುವ ಮಾಹಿತಿ ಪ್ರಕಾರ 18,23,08,849 ರು. ಇದ್ದರೆ ಸನ್ನದು ಲೆಕ್ಕಪರಿಶೋಧಕರ ವರದಿಯಂತೆ 25,81,66,846 ರು. ಇದೆ. ಇವೆರಡರ ನಡುವಿನ ವ್ಯತ್ಯಾಸ 7, 58, 57, 997 ರು. ಇದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.

 

ಇನ್ನು ಹಿಂದುಳಿದ ವರ್ಗಗಳ ಪ್ರವರ್ಗ 1, ಪ್ರವರ್ಗ 2 ಎ, 3 ಎ ಮತ್ತು 3 ಬಿಗೆ ಸೇರಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಸ್ವೀಕರಿಸಿರುವ ಮೊತ್ತದಲ್ಲಿಯೂ ವ್ಯತ್ಯಾಸವಿದೆ ಎಂಬ ಅಂಶ ಲೆಕ್ಕ ಪರಿಶೋಧನೆಯಿಂದ ತಿಳಿದು ಬಂದಿದೆ. ಮಂಡಳಿಯು ನೀಡಿರುವ ಮಾಹಿತಿ ಪ್ರಕಾರ 34,17,90,954 ರು. ಇದ್ದರೆ ಸನ್ನದು ಲೆಕ್ಕಪರಿಶೋಧಕರ ವರದಿಯಂತೆ  3 32, 49, 76, 319 ರು. ಇದೆ. ಇವೆರಡರ ನಡುವೆ 1,68,14,635 ರು. ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts