ಸ್ವಚ್ಛ ಭಾರತ್‌ ಸೇರಿ ಹಲವು ಯೋಜನೆ ಅನುದಾನ ಬಳಕೆಯಲ್ಲಿ ವಿಫಲ; ವೆಚ್ಚವಾಗದ 2,509 ಕೋಟಿ ರು

Photo Credit; thenewindianexpress

ಬೆಂಗಳೂರು; ಸ್ವಚ್ಛ ಭಾರತ್‌ ಅಭಿಯಾನ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಉತ್ಪಾದಕ ವೆಚ್ಚ ಕಾರ್ಯಕ್ರಮಗಳಿಗೆ ನೀಡಲಾಗಿದ್ದ ಒಟ್ಟು ಅನುದಾನದ ಪೈಕಿ 2,509 ಕೋಟಿ ರು. ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಇಲಾಖೆಯು ಕೈಗೆತ್ತಿಕೊಂಡಿರುವ ಮಹತ್ವದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವುದು ಮತ್ತು ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದರೂ ಉತ್ಪಾದಕಾ ವೆಚ್ಚದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಕ್ರಮ ವಹಿಸಬೇಕಿದ್ದ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮಾತುಗಳಲ್ಲೇ ಮುಳುಗಿದ್ದಾರೆ.

 

2021-22ನೇ ಸಾಲಿನ ಉತ್ಪಾದಕ ವೆಚ್ಚದಲ್ಲಿ 2022ರ ಜನವರಿ ಅಂತ್ಯಕ್ಕೆ ಹೆಚ್ಚಿಗೆ ಬಾಕಿ ಇರುವ ಇಲಾಖೆಗಳ ಪಟ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಮುಂಚೂಣಿಯಲ್ಲಿದೆ. ಈ ಸಂಬಂಧ ಯೋಜನಾ ಇಲಾಖೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪೌರ ಕಾರ್ಮಿಕರ ವಸತಿ, ಮಹಾತ್ಮಗಾಂಧಿ ನಗರ ವಿಕಾಸ, ಮುಖ್ಯಮಂತ್ರಿ ನೈರ್ಮಲ್ಯ, ಸ್ವಚ್ಛ ಭಾರತ, ಪೌಷ್ಠಿಕ ಆಹಾರಕ್ಕೆ ಬೆಂಬಲ, ಪ್ರಧಾನಮಂತ್ರಿ ಜನಾರೋಗ್ಯ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ವಿಧವಾ ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದಲ್ಲಿ 7 ಇಲಾಖೆಗಳು ಹಿಂದೆ ಬಿದ್ದಿವೆ.

 

2021-22ನೇ ಸಾಲಿನ ಉತ್ಪಾದಕ ವೆಚ್ಚದಲ್ಲಿ 2022ರ ಜನವರಿ ಅಂತ್ಯಕ್ಕೆ ಹೆಚ್ಚಿಗೆ ಬಾಕಿ ಇರುವ ಇಲಾಖೆಗಳ ಪಟ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಜತೆ ಕಂದಾಯ, ನಗರಾಭಿವೃದ್ಧಿ, ಪ್ರಾಥಮಿಕ, ಪ್ರೌಢಶಿಕ್ಷಣ, ಆರೋಗ್ಯ, ವಸತಿ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಇದೆ.

 

ಇಲಾಖೆಗಳಿಗೆ ಒಟ್ಟಾರೆ ಉತ್ಪಾದಕ ವೆಚ್ಚ ಬಾಬ್ತಿನಲ್ಲಿ 1,37,951.38 ಕೋಟಿ ರು. ಒದಗಿಸಿತ್ತು. ಈ ಪೈಕಿ 1,01,017.01 ಕೋಟಿ ರು. ಲಭ್ಯವಿತ್ತು. ಇದರಲ್ಲಿ 82,523.84 ಕೋಟಿ ವೆಚ್ಚ ಮಾಡಿರುವ ಇಲಾಖೆಗಳು 2022ರ ಜನವರಿ ಅಂತ್ಯಕ್ಕೆ 18,493.17 ಕೋಟಿ ರು. ಬಾಕಿ ಉಳಿಸಿಕೊಂಡಿವೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದರೂ ಉತ್ಪಾದಕ ವೆಚ್ಚಗಳಿಗೆ ಅನುದಾನಕ್ಕೆ ಶೇ.59.82ರಷ್ಟು ಮಾತ್ರ ವೆಚ್ಚ ಮಾಡಿದೆ.

 

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2,509 ಕೋಟಿ ಬಾಕಿ

 

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ಪಾದಕ ಅನುದಾನವೆಂದು ಒದಗಿಸಿದ್ದ 17,197.17 ಕೋಟಿ ರು ನಲ್ಲಿ 10,686.27 ಕೋಟಿ ರು. ಲಭ್ಯವಿತ್ತು. ಇದರಲ್ಲಿ 8,176.56 ಕೋಟಿ ರು. ವೆಚ್ಚ ಮಾಡಿರುವ ಇಲಾಖೆಯು ಇನ್ನೂ 2,509.71 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಜಲಜೀವನ್‌ ಮಿಷನ್‌ ಯೋಜನೆಗೆ 3,017.85 ಕೋಟಿ ರು.ಅನುದಾನ ಲಭ್ಯವಿದ್ದರೂ 2022ರ ಜನವರಿ ಅಂತ್ಯಕ್ಕೆ 1,889.56 ಕೋಟಿ ರು ಖರ್ಚಾಗಿದೆ. ಇದು ಉತ್ಪಾದಕ ಅನುದಾನಕ್ಕೆ ಶೇ.39.33ರಷ್ಟು ಮಾತ್ರ ವೆಚ್ಚವಾಗಿದೆ.

 

ಉತ್ಪಾದಕ ಕಾರ್ಯಕ್ರಮಗಳ ಬಾಕಿ ಉಳಿಸಿಕೊಂಡಿರುವ ಪಟ್ಟಿ (ಜನವರಿ ಅಂತ್ಯಕ್ಕೆ)

 

ಸ್ವಚ್ಛ ಭಾರತ್‌ ಅಭಿಯಾನಕ್ಕೆ 680.23 ಕೋಟಿ ರು. ಅನುದಾನ ಲಭ್ಯವಿದ್ದರೂ ಜನವರಿ ಅಂತ್ಯಕ್ಕೆ 324.50 ಕೋಟಿಯಷ್ಟು ಖರ್ಚು ಮಾಡಿರುವ ಇಲಾಖೆಯು ಇನ್ನೂ 355.73 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಈ ಅಭಿಯಾನಕ್ಕೆ ನೀಡಿದ್ದ ಒಟ್ಟಾರೆ ಅನುದಾನದಲ್ಲಿ ಶೇ. ಶೇ.29.60ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ವಿಶೇಷವೆಂದರೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ರೂರ್ಬನ್‌ ಅಭಿಯಾನಕ್ಕೆ 15.31 ಕೋಟಿ ರು. ಅನುದಾನ ಉತ್ಪಾದಕ ಬಾಬ್ತಿನಲ್ಲಿ ಲಭ್ಯವಿದ್ದರೂ 2022ರ ಜನವರಿ ಅಂತ್ಯದವರೆಗೂ ಬಿಡಿಗಾಸನ್ನೂ ಖರ್ಚು ಮಾಡದೇ ಶೂನ್ಯ ಸಂಪಾದಿಸಿದೆ.

 

ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದ ಇರುವ ಮೊತ್ತದಲ್ಲಿ 117.03 ಕೋಟಿ ರು. ಅನುದಾನದ ಪೈಕಿ 45.46 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಇದರಲ್ಲಿ 2022ರ ಜನವರಿ ಅಂತ್ಯಕ್ಕೆ ಕೇವಲ 26.54 ಕೋಟಿ ರು. ಮಾತ್ರ ವೆಚ್ಚವಾಗಿದೆ. ಲಭ್ಯವಿದ್ದ ಉತ್ಪಾದಕ ಅನುದಾನಕ್ಕೆ ಹೋಲಿಸಿದರೆ ಶೇ. 18.92ರಷ್ಟು ಮಾತ್ರ ವೆಚ್ಚವಾಗಿದೆ.

 

ರಾಷ್ಟ್ರೀಯ ಗ್ರಾಮ್‌ ಸ್ವರಾಜ್‌ ಅಭಿಯಾನದಲ್ಲಿ 264.39 ಕೋಟಿ ರು. ಅನುದಾನದ ಪೈಕಿ 97.32 ಕೋಟಿ ರು. ಬಿಡುಗಡೆಯಾಗಿದೆ. ಜನವರಿ ಅಂತ್ಯಕ್ಕೆ 48.66 ಕೋಟಿ ರು. ಮಾತ್ರ ವೆಚ್ಚವಾಗಿದೆ. ಇದು ಒಟ್ಟು ಉತ್ಪಾದಕ ಅನುದಾನಕ್ಕೆ ಹೋಲಿಸಿದರೆ ಶೇ. 18.40ರಷ್ಟು ಮಾತ್ರ ಖರ್ಚಾಗಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ಗ್ರಾಮೀಣ ನೀರು ಸರಬರಾಜು ಮತ್ತು ಜಲಧಾರೆ ಯೋಜನೆಗೆ 1,027.86 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಇದರಲ್ಲಿ ಉತ್ಪಾದನಾ ಬಾಬ್ತಿನಲ್ಲಿ 686.43 ಕೋಟಿ ರು. ಲಭ್ಯವಿತ್ತಾದರೂ 552.18 ಕೋಟಿ ರು. ಖರ್ಚಾಗಿದೆ. ಇನ್ನೂ 134.25 ಕೋಟಿ ರು. ಬಾಕಿ ಇದೆ. ಈ ಯೋಜನೆಯಲ್ಲಿ ಶೆ. 53.72ರಷ್ಟು ಸಾಧನೆ ಪ್ರದರ್ಶಿಸಿದೆ.

 

ನಮ್ಮ ಗ್ರಾಮ ನಮ್ಮ ರಸ್ತೆ ಒಳಗೊಂಡಂತೆ ಗ್ರಾಮೀಣ ಸುಮಾರ್ಗ ಯೋಜನೆಗೆ 1,318. 78 ಕೋಟಿ ರು. ಅನುದಾನದ ಪೈಕಿ 1,027.93 ಕೋಟಿ ರು ನಲ್ಲಿ 595.05 ಕೋಟಿ ರು. ವೆಚ್ಚವಾಗಿದೆ. ಇನ್ನೂ 432.88 ಕೋಟಿ ರು. ಬಾಕಿ ಉಳಿಸಿಕೊಂಡಿರುವ ಇಲಾಖೆಯು ಇದರಲ್ಲಿ ಶೇ. 45.12ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

 

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 198.08 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ 100.89 ಕೋಟಿ ರು. ಬಿಡುಗಡೆಯಾಗಿದ್ದರ ಪೈಕಿ 61.94 ಕೋಟಿ ರು. ವೆಚ್ಚ ಮಾಡಿ 38.95 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

2021ರ ಡಿಸೆಂಬರ್‌ ಅಂತ್ಯಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಒಟ್ಟು ಉತ್ಪಾದಕ ಅನುದಾನವೆಂದು 15,495.24 ಕೋಟಿ ರು. ಒದಗಿಸಲಾಗಿತ್ತು. ಇದರಲ್ಲಿ 9,960.5 ಕೋಟಿ ರು. ಬಿಡುಗಡೆಯಾಗಿತ್ತು. 6,949.99 ಕೋಟಿ ರು. ವೆಚ್ಚವಾಗಿದೆ. 3,010.51 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು.

the fil favicon

SUPPORT THE FILE

Latest News

Related Posts