ಬೆಂಗಳೂರು; ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕವಾಗಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಗೋಮಾಳದ ವಿಸ್ತೀರ್ಣವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಕೆ ಮಾಡುವುದಲ್ಲದೆ ಗ್ರಾಮದ ಜಾನುವಾರುಗಳು ಮೇಯುವುದಕ್ಕೆ ಅನುಕೂಲವಾಗುವಂತಹ ಸಾಕಷ್ಟು ಅರಣ್ಯ ಪ್ರದೇಶವಿದ್ದರೆ ಅದರ ವಿಸ್ತೀರ್ಣಕ್ಕನುಗುಣವಾಗಿ ಗ್ರಾಮದೊಳಗಿನ ಗೋಮಾಳದ ವಿಸ್ತೀರ್ಣ ಕಡಿಮೆ ಮಾಡಲು ರಾಜ್ಯ ಬಿಜೆಪಿ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1) ಅನ್ವಯ ಗೋಮಾಳ ಜಮೀನನ್ನು ನಿಗದಿಪಡಿಸುವ ಬಗ್ಗೆ 2022ರ ಫೆ.24ರಂದು ಕಂದಾಯ ಇಲಾಖೆಯು ಹೊರಡಿಸಿರುವ ಸುತ್ತೋಲೆಯು ವಿವಾದಕ್ಕೆ ದಾರಿಮಾಡಿಕೊಡುವ ಸಾಧ್ಯತೆಗಳಿವೆ. ಈ ಸುತ್ತೋಲೆ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗೋಮಾಳ ಮತ್ತು ಸರ್ಕಾರಿ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ನಿಯಮ, ಕರ್ನಾಟಕ ಭೂ ಮಂಜೂರಾತಿ ನಿಯಮ ಸೇರಿದಂತೆ ಹಲವು ನಿಯಮಗಳು ಜಾರಿಯಲ್ಲಿದ್ದರೂ ಗೋಮಾಳ ಮಂಜೂರಾತಿಗೆ ಪ್ರತ್ಯೇಕ ನೀತಿ ರೂಪಿಸಲು ಹೊರಟಿರುವುದಕ್ಕೆ ಹಲವು ಆಕ್ಷೇಪಗಳು ಎದುರಾಗಿರುವ ನಡುವೆಯೇ ಗೋಮಾಳ ವಿಸ್ತೀರ್ಣವನ್ನು ನಿಗದಿಪಡಿಸುವ ಬಗ್ಗೆ 15 ವರ್ಷಗಳ ಹಿಂದೆ ಹೊರಡಿಸಿದ್ದ ಸುತ್ತೋಲೆಯಲ್ಲಿನ ನಿರ್ದೇಶನವನ್ನೂ ಹಿಂಪಡೆದಿದೆ.
‘ಅನೇಕ ಜಿಲ್ಲಾಧಿಕಾರಿಗಳು ಗೋಮಾಳ ವಿಸ್ತೀರ್ಣವನ್ನು ನಿಗದಿಪಡಿಸುವ ಬಗ್ಗೆ ಸ್ಪಷ್ಟೀಕರಣವನ್ನು ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ಸುತ್ತೋಲೆ (ಸಂಖ್ಯೆ; ಆರ್‌ಡಿ 83 ಎಲ್‌ಜಿಪಿ 2006. ದಿನಾಂಕ 05-01-2007) ಯಲ್ಲಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನೀಡಿರುವ ನಿರ್ದೇಶನಗಳನ್ನು ಹಿಂಪಡೆಯಲಾಗಿದೆ,’ ಎಂದು ಸುತ್ತೋಲೆಯಲ್ಲಿ ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿದೆ.
ಗೋಮಾಳ ಹಂಚಿಕೆ ಕುರಿತು ಪ್ರತ್ಯೇಕ ನೀತಿ ರೂಪಿಸಲು ಸಚಿವ ಆರ್ ಅಶೋಕ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿಯು ವರದಿ ನೀಡುವ ಮುನ್ನವೇ ಗೋಮಾಳ ವಿಸ್ತೀರ್ಣ ನಿಗದಿಪಡಿಸುವ ಸಂಬಂಧ ಹೊಸ ನಿರ್ದೇಶನಗಳನ್ನು ಸರ್ಕಾರವು ಇದೀಗ ಹೊರಡಿಸಿದೆ.
ಸುತ್ತೋಲೆಯಲ್ಲಿರುವ ನಿರ್ದೇಶನಗಳೇನು?
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಯಾವುದೇ ಗ್ರಾಮದಲ್ಲಿ ಉಚಿತ ಗೋಮಾಳವನ್ನು ಪ್ರತ್ಯೇಕವಾಗಿಡುವುದರಲ್ಲಿ ಅವಶ್ಯಕವಾದ ಭೂಮಿಯ ವಿಸ್ತೀರ್ಣವನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಬೇಕು.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರ ಅನ್ವಯ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್‌ಗಳಿಗೆ ಪ್ರತಿಯೊಂದು ಗ್ರಾಮದ ಜಾನುವಾರುಗಳಿಗೆ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿ ಕಾಯ್ದಿರಿಸಬೇಕು. ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳು ಪ್ರತಿಯೊಂದು ಗ್ರಾಮದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ ಹಾಗೂ ಸನ್ನಿವೇಶಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಗೋಮಾಳದ ವಿಸ್ತೀರ್ಣವನ್ನು ನಿಯಮ 97(1) ಅನ್ವಯ ನಿರ್ಧರಿಸಬೇಕು.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1) ಗಿಂತ ಹೆಚ್ಚಾಗಿ ಪ್ರತ್ಯೇಕವಾಗಿಡಲಾಗಿರುವ ಗೋಮಾಳ ಜಮೀನು ಅವಶ್ಯಕತೆ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸಿ, ಅವಶ್ಯಕತೆ ಇದ್ದಲ್ಲಿ ಹಾಗೆಯೇ ಹೆಚ್ಚಾಗಿ ಕಾಯ್ದಿರಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳು ಈಗಾಗಲೇ ಪ್ರತ್ಯೇಕವಾಗಿಡಲಾಗಿರುವ ಪ್ರದೇಶವು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕವಾಗಿರುವುದಕ್ಕಿಂತ ಬಹಳ ಹೆಚ್ಚಾಗಿದೆಯೆಂದು ಅಭಿಪ್ರಾಯಪಟ್ಟರೆ ಅದನ್ನು ನಿಯಮ 97(1)ರ ಡಿ ನಿಯಮಿಸಿದ ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(2)ರ ಅಡಿಯಲ್ಲಿ ಸಂಬಂಧಪಟ್ಟ ಗ್ರಾಮದಲ್ಲಿ ಅಥವಾ ಪಕ್ಕದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೆ ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರ್ಣವನ್ನು ಕಡಿಮೆ ಮಾಡಬಹುದು.
ನಿಯಮ 97(3)ರ ಅನ್ವಯ ಗ್ರಾಮದಲ್ಲಿ ಯಾವ ಗೋಮಾಳವು ಇಲ್ಲದಿದ್ದರೆ ಅಥವಾ ಇರುವ ಭೂಮಿಯು 97(1)ರ ಅನ್ವಯ ನಿಯಮಿಸಿದ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದ್ದೆ, ಪಕ್ಕದ ಗ್ರಾಮದಲ್ಲಿ ದೊರೆಯುವ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿಡುವುದರ ಮೂಲಕ ಆ ಕೊರತೆಯನ್ನು ತುಂಬಬಹುದು.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ ಹಾಗೂ ಸನ್ನಿವೇಶಗಳಿಗೆ ಅನುಸಾರವಾಗಿ ಗೋಮಾಳದ ಅವಶ್ಯಕತೆಯನ್ನು ನಿಯಮ 97(1)ರಂತೆ ನಿಗದಿಪಡಿಸಿದ ವಿಸ್ತೀರ್ಣಕ್ಕಿಂತ ಕಡಿಮೆ ಮಾಡಬಹುದು ಮತ್ತು ಈ ಕೆಳಕಂಡ ಉದ್ದೇಶಗಳಿಗೆ ಪ್ರಾದೇಶಿಕ ಆಯುಕ್ತರ ಪೂರ್ವಾನುಮತಿ ಇರುವುದಿಲ್ಲ.
ನಿವೇಶನ ರಹಿತ ವ್ಯಕ್ತಿಗೆ ಮನೆ, ನಿವೇಶನಗಳ ಉದ್ಧೇಶಕ್ಕಾಗಿ, ವ್ಯವಸಾಯದ ಉದ್ದೇಶಕ್ಕಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಭೂಮಿಯ ಮಂಜೂರಾತಿ, ಅನಧಿಕೃತ ಸಾಗುವಳಿಯ ಸಕ್ರಮಗೊಳಿಸುವಿಕೆ, ಸ್ಮಶಾನಕ್ಕಾಗಿ ಭೂಮಿಯ ಮೀಸಲಾತಿ, ಸರ್ಕಾರದ ವಿವಿಧ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವುದು ಅಥವಾ ಕಾಯ್ದಿರಿಸಬೇಕು. ಅಂದರೆ ಸರ್ಕಾರಿ ಶಾಲೆಗಳು, ಕಾಲೇಜುಗಳು, ವಸತಿ ಶಾಲೆ, ಹಾಶ್ಟೆಲ್, ಆಸ್ಪತ್ರೆಗಳು, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ, ಕರ್ನಾಟಕ ವಿದ್ಯುಚ್ಛಕ್ತಿ ಪ್ರರಣ ನಿಗಮದ ಉಪ ಸ್ಟೇಷನ್‌ಗಳು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋಗಳಿಗೆ ಕಾಯ್ದಿರಿಸಬಹುದು.
ಈ ಉದ್ದೇಶಗಳನ್ನು ಹೊರತುಪಡಿಸಿ ನಿಯಮ 97(1)ರಲ್ಲಿ ನಿಗದಿಪಡಿಸುವ ವಿಸ್ತೀರ್ಣವನ್ನು ಕಡಿಮೆ ಮಾಡಬೇಕಾದಲ್ಲಿ ಪ್ರಾದೇಶಿಕ ಪೂರ್ವಾನುಮತಿ ಪಡೆಯುವುದು ಅವಶ್ಯಕ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಅದೇ ರೀತಿ ಭೂಮಿಯ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದಂತೆ ನಮೂನೆ 50, 53 ಮತ್ತು 57ರ ಅರ್ಜಿಗಳು ಒಳಪಡುತ್ತದೆ ಎಂದು ತಿಳಿಸಿದೆ. ಜಿಲ್ಲಾಧಿಕಾರಿಗಳು ನಿಯಮ 97(1)ರಂತೆ ನಿಗದಿತ ವಿಸ್ತೀರ್ಣದ ಗೋಮಾಳವನ್ನು ನಿಗದಿಪಡಿಸಿದ ನಂತರ ಹೆಚ್ಚುವರಿ ಗೋಮಾಳವನ್ನು ನಮೂನೆ 50, 53 ಮತ್ತು 57ರ ಅರ್ಜಿಗಳನ್ನು ಸಲ್ಲಿಸಿದ ಅನಧಿಕೃತ ಸಾಗುವಳಿದಾರರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ 1969ರ ಅನ್ವಯ ಮಂಜೂರು ಮಾಡಬಹುದು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜಿಲ್ಲಾಧಿಕಾರಿಗಳು ಉಚಿತ ಗೋಮಾಳದ ವಿಸ್ತೀರ್ಣವನ್ನು ನಿಗದಿಪಡಿಸಿದ ನಂತರವೂ ಅಂತಹ ಭೂಮಿಯು ಉಚಿತ ಮೇವನ್ನು ಒದಗಿಸಲು ಲಭ್ಯವಿಲ್ಲದಿದ್ದರೆ ಅಥವಾ ಸಾಕಷ್ಟು ಇಲ್ಲದಿದ್ದರೂ ಸಹ ಅಂತಹ ಸಕ್ರಮವನ್ನು ನಿಯಮ 97(4) ಅನ್ವಯ ಒಂದು ಬಾರಿಯ ಕ್ರಮದ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ಅಧ್ಯಾಯ XIII-ಎ ಅನಧಿಕೃತ ಕೃಷಿಯನ್ನು ಸಕ್ರಮಗೊಳಿಸುವ ಉದ್ದೇಶಗಳಿಗಾಗಿ ಪರಿಗಣಿಸಬಹುದು. ಅಂದರೆ ನಮೂನೆ 50 ಮತ್ತು ನಮೂನೆ 53ರಲ್ಲಿ ಬಾಕಿ ಇರುವ ಅರ್ಜಿಗಳಿಗೆ ಪರಿಗಣಿಸಬಹುದಾಗಿದೆ. ಆದರೆ ಈ ವಿನಾಯ್ತಿಯು ನಮೂನೆ 57ರ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಜಿಲ್ಲಾಧಿಕಾರಿಗಳು ನಿಗದಿತ ಗೋಮಾಳವನ್ನು ನಿಗದಿಪಡಿಸಿದ ನಂತರ ಹೆಚ್ಚುವರಿ ಗೋಮಾಳ ಲಭ್ಯವಿದ್ದಲ್ಲಿ ನಮೂನೆ 57ರ ಅರ್ಜಿಗಳನ್ನು ಪರಿಗಣಿಸಲು ಅವಕಾಶವಿರುತ್ತದೆ. ಮತ್ತು ನಿಯಮ 97 (1)ರ ಅನ್ವಯ ಗೋಮಾಳ ವಿಸ್ತೀರ್ಣ ಕಡಿಮೆ ಇದ್ದಲ್ಲಿ ನಮೂನೆ 57ರ ಅರ್ಜಿಗಳನ್ನುಪರಿಗಣಿಸಲು ಅವಕಾಶವಿರುವುದಿಲ್ಲ ಎಂದು ಹೇಳಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 107.19 ಎಕರೆ, ಬೆಂಗಳೂರು ಗ್ರಾಮಾಂತರ; 34,564. 22 ಎಕರೆ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಒಟ್ಟು 19.39 ಲಕ್ಷ ಎಕರೆ ವಿಸ್ತೀರ್ಣದ ಗೋಮಾಳವಿದೆ. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ಹೊರಟಿರುವುದರ ಹಿಂದೆ ಸಂಘ ಪರಿವಾರದ ಆಶ್ರಯದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಜಮೀನು ಮಂಜೂರು ಮಾಡುವ ಉದ್ದೇಶವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.