ನರೇಗಾದಲ್ಲಿ ಮೇಲ್ವಿಚಾರಣೆ ಕೊರತೆ; ಗೈರುಹಾಜರಾದ ಕಾರ್ಮಿಕರಿಗೂ ಅಧಿಕ ಕೂಲಿ ಪಾವತಿ

Photo Credit; TimesOfIndia

ಬೆಂಗಳೂರು; ಗ್ರಾಮೀಣ ಪ್ರದೇಶಗಳಲ್ಲಿ ಕಾಮಗಾರಿ, ಬರಗಾಲ, ಅರಣ್ಯ ನಾಶ ಮತ್ತು ಮಣ್ಣಿನ ಸವೆತಗಳಿಂದಾಗಿ ಉಂಟಾಗುವ ಬಡತನಕ್ಕೆ ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ದೈಹಿಕ ಕೆಲಸ ನೀಡುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಹಲವು ಲೋಪದೋಷಗಳನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವರದಿಯು ಅನಾವರಣಗೊಳಿಸಿದೆ.

 

ಸೂಕ್ತ ಮೇಲ್ವಿಚಾರಣೆ ನಡೆಸದ ಕಾರಣ ನರೇಗಾ ಅನುಷ್ಠಾನದಲ್ಲಿ ಮುಗ್ಗುರಿಸಿದೆ. ಗಿಡ ನೆಡುವ ಕಾಮಗಾರಿಗಳಿಗೆ ಹೆಚ್ಚಿನ ಮೊತ್ತ ವಿನಿಯೋಗಿಸುವುದು, ಎನ್‌ಎಂಆರ್‌ಗಳಲ್ಲಿ ಹೆಬ್ಬೆಟ್ಟು ಗುರುತು ಹಾಕಿದ ಪ್ರಕರಣಗಳಲ್ಲಿ ದೃಢೀಕರಿಸದಿರುವುದು, ಕಾಮಗಾರಿ ನಡೆಸಿರುವ ಪ್ರಕರಣಗಳಲ್ಲಿ ಕಾಮಗಾರಿಗಳ ಅಳತೆ ಪುನರ್‌ ಪರಿಶೀಲನೆ, ಕಡ್ಡಾಯವಾಗಿ ಕೂಲಿ ಪಾವತಿಸದಿರುವುದು, ಕೂಲಿ ದರಕ್ಕಿಂತ ಹೆಚ್ಚಿನ ಕೂಲಿ ಪಾವತಿಸಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ವರದಿಯಲ್ಲಿ ವಿವರಿಸಲಾಗಿದೆ.

 

ನರೇಗಾ ಯೋಜನೆಯಡಿ 2018-19ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 2,837 ಕೋಟಿ ರು. ಇತರೆ ಮೂಲಗಳಿಂದ 5.76 ಕೋಟಿ ರು ಸೇರ್ಪಡೆ ಮತ್ತು ಆರಂಭಿಕ ಶಿಲ್ಕು 70 ಕೋಟಿ ಸೇರಿದಂತೆ ವರ್ಷದ ಅಂತ್ಯಕ್ಕೆ ಒಟ್ಟಾರೆ 2,913.10 ಕೋಟಿ ರು. ಅನುದಾನ ಸ್ವೀಕೃತವಾಗಿತ್ತು. ಈ ಪೈಕಿ 2,835 ಕೋಟಿ ರು. ವೆಚ್ಚವಾಗಿದ್ದು, ಇನ್ನುಳಿದ 77 ಕೋಟಿ ರು. ವೆಚ್ಚಾಗದೇ ಬಾಕಿ ಉಳಿದಿತ್ತು.

 

ಬೆಳಗಾವಿ ಜಿಲ್ಲೆಯ 63 ಗ್ರಾಮ ಪಂಚಾಯ್ತಿ ಸೇರಿದಂತೆ ರಾಜ್ಯದ 219 ಪಂಚಾಯ್ತಿಗಳು ನರೇಗಾಕ್ಕೆ ಸಂಬಂಧಿಸಿದಂತೆ 44 ಕೋಟಿ ರು.ಮೊತ್ತದ ಓಚರ್‌/ ದಾಖಲಾತಿಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಿರಲಿಲ್ಲ. ಇಷ್ಟೊಂದು ಮೊತ್ತದ ಆಕ್ಷೇಪಣೆ ಇದ್ದರೂ 219 ಪಂಚಾಯ್ತಿಗಳು ಕೇವಲ 1.59 ಲಕ್ಷ ರು. ಮಾತ್ರ ವಸೂಲು ಮಾಡಿತ್ತು.

 

ಬೆಳಗಾವಿ ಜಿಲ್ಲೆಯ 63 ಗ್ರಾಮ ಪಂಚಾಯ್ತಿಗಳು 12.68 ಕೋಟಿ ರು. ಮೊತ್ತದಷ್ಟು ಓಚರ್‌ ದಾಖಲಾತಿಗಳನ್ನು ಲೆಕ್ಕ ಪರಿಶೋಧನೆಗೆ ನೀಡಿರಲಿಲ್ಲ. ‘ಈ ಕುರಿತಂತೆ ಪರಿಶೀಲನೆ ಮಾಡಲು ಸಾಧ್ಯವಾಗಿರುವುದಿಲ್ಲವಾದ್ದರಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪಡೆದ ಅನುದಾನದಿಂದ ಯೋಜನೆಯ ಉದ್ದೇಶ ಪೂರ್ಣಗೊಳಿಸಲು ಸಫಲವಾಗಿರುವುದೇ ಮತ್ತು ಪರಿಣಾಮಕಾರಿಯಾಗಿರುವುದೇ ಎಂಬ ಶಂಕೆಯು ಮೂಡುತ್ತದೆ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ.

 

ನೋಂದಣಿ ಮತ್ತು ಉದ್ಯೋಗ ಚೀಟಿ ವಿತರಣೆ ಬಗ್ಗೆ ನರೇಗಾ ಕೈಪಿಡಿ ಪ್ರಕಾರ ನಮೂನೆ 1ರಿಂದ 7ರವರೆಗೆ ದಾಖಲಾತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ನಮೂನೆ 1ನ್ನು ಪರಿಶೀಲನೆಗೆ ಒದಗಿಸಿಲ್ಲದ ಕಾರಣ ಎನ್‌ಎಂಆರ್‌ಗಳಲ್ಲಿ ನಿಖರವಾಗಿ ಪಾವತಿಯಾಗಿರುವುದನ್ನು ಪರಿಶೀಲಿಸುವುದು ಲೆಕ್ಕಪರಿಶೋಧಕರಿಗೆ ಸಾಧ್ಯವಾಗಿಲ್ಲ. ಅದೇ ರೀತಿ ಎನ್‌ಎಂಆರ್‌ಗಳಲ್ಲಿ ಹೆಬ್ಬೆಟ್ಟು ಗುರುತು ಹಾಕಿದ ಬಹುತೇಕ ಪ್ರಕರಣಗಳಲ್ಲಿ ಕಾರ್ಯದರ್ಶಿಗಳಿಂದಾಗಲಿ, ಅಧ್ಯಕ್ಷರಿಂದಾಲಿ ದೃಢೀಕರಿಸಿರುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಉದ್ಯೋಗ ಖಾತರಿ ಯೋಜನೆಯಡಿ ಕೈಪಿಡಿ ಕಂಡಿಕೆ 12ರಲ್ಲಿ ತಿಳಿಸಿರುವಂತೆ ಗಿಡ ನೆಡುವ ಕಾಮಗಾರಿಗಳಿಗೆ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುವ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಪಂಚಾಯ್ತಿಯು ನಿಯೋಜಿಸಬೇಕು. ರಸ್ತೆಗಳನ್ನು ಕೊನೆಯ ಆದ್ಯತೆಯಾಗಿ ಒಟ್ಟು ಮೊತ್ತದ ಶೇ.10ಕ್ಕಿಂತ ಕಡಿಮೆ ಮೊತ್ತದಲ್ಲಿ ತೆಗೆದುಕೊಳ್ಳಬೇಕು ಎಂಬ ಸೂಚನೆಯನ್ನು ಪಾಲಿಸಿಲ್ಲ ಎಂದು ವರದಿಯಿಂದ ಗೊತ್ತಾಗಿದೆ.

 

ಖಾತರಿ ಯೋಜನೆಯ ಅಧಿನಿಯಮ ಪ್ರಕರಣ 3(3)ರಂತೆ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ನಂತರದ ದಿನಾಂಕದಿಂದ ಒಂದು ವಾರದೊಳಗೆ ಅಥವಾ 15ದಿನದೊಳಗೆ ಮೀರದಂತೆ ಕೂಲಿಯನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಿದೆ. ಆದರೆ ಅನೇಕ ಪ್ರಕರಣಗಳಲ್ಲಿ ಈ ಸೂಚನೆ ಪಾಲಿಸಿರುವುದು ಕಂಡುಬಂದಿರುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಇದೇ ಪುನರಾವರ್ತನೆಯಾದಲ್ಲಿ ಕೂಲಿ ಪಾವತಿ ಆಧಿನಿಯಮ 1936 (4/1936) ಅನ್ವಯ ಕೂಲಿ ಕಾರ್ಮಿಕರಿಗೆ ಪರಿಹಾರವನ್ನು ಕಾರ್ಯದರ್ಶಿ/ಅಧ್ಯಕ್ಷರು ಹೊಣೆ ಹೊರಬೇಕಾಗುತ್ತದೆ ಎಂದು ವರದಿಯು ಎಚ್ಚರಿಸಿದೆ.
ಬೆಂಗಳೂರು, ಬಾಗಲಕೋಟೆ, ದಾವಣಗೆರೆ, ಕೊಡಗು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಒಟ್ಟು 17 ಪಂಚಾಯ್ತಿಗಳಲ್ಲಿ ಕೂಲಿ ದರಕ್ಕಿಂತ ಒಟ್ಟು 2.20 ಕೋಟಿ ರು.ಮೊತ್ತದಷ್ಟು ಹೆಚ್ಚಿನ ಕೂಲಿ ಪಾವತಿಸಲಾಗಿದೆ.

 

ಅನಧಿಕೃತವಾಗಿ ಗೈರುಹಾಜರಾಗಿರುವ ಅಕುಶಲ ಕಾರ್ಮಿಕರಿಗೆ ಹಾಜರಾತಿ ನೀಡಿ ಹೆಚ್ಚಿನ ಮೊಬಲಗು ಪಾವತಿಸಲಾಗಿದೆ. ಕೆಲವೊಂದು ಸಾಮಗ್ರಿ ಸರಬರಾಜು ಬಿಲ್ಲಿನ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತ ನೀಡಿರುವುದು ಮತ್ತು ತಪ್ಪು ಲೆಕ್ಕಾಚಾರದಿಂದ ಹೆಚ್ಚುವರಿ ಪಾವತಿ ಹಾಗೂ ಕೆಲಸಗಾರರಿಗೆ ಕೆಲಸ ನಿರ್ವಹಿಸಿದ್ದಕ್ಕಿಂತ ಹೆಚ್ಚುವರಿ ಕೂಲಿ ಪಾವತಿಸಲಾಗಿದೆ ಎಂಬುದನ್ನು ವರದಿಯು ಹೊರಗೆಡವಿದೆ.

 

ವಿವಿಧ ತೆರಿಗೆಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಹಿಗಳನ್ನು ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ನಿರ್ವಹಿಸದ ಕಾರಣ ಈ ವಿಭಾಗದಲ್ಲಿ ಬೇಡಿಕೆ ಇದ್ದ ಒಟ್ಟು 1,855 ಕೋಟಿ ರು. ಪೈಕಿ 660 ಕೋಟಿ ರುಗಳನ್ನಷ್ಟೇ ವಸೂಲು ಮಾಡಿ ಇನ್ನೂ 1,195.59 ಕೋಟಿ ರು. ಬಾಕಿ ಉಳಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಹಿರಂಗಗೊಳಿಸಿತ್ತು.

 

ರಾಜಸ್ವ ಸ್ವೀಕೃತಿಯನ್ನು ಪಂಚಾಯ್ತಿ ನಿಧಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದು, ಸರ್ಕಾರದ ಪರವಾಗಿ ವಸೂಲಿ ಮಾಡಿರುವ ಉಪಕರಗಳನ್ನು ಸರ್ಕಾರಕ್ಕೆ ಜಮೆ ಮಾಡದೇ ಇರುವುದು, ಭರಿಸಲಾಗಿರುವ ವೆಚ್ಚಗಳಿಗೆ ಓಚರ್‌ಗಳನ್ನು ಹಾಜರುಪಡಿಸದಿರುವುದು, ಅನುಮೋದಿತ ಪಟ್ಟಿ ದರಕ್ಕಿಂತ ಹೆಚ್ಚಿನ ದರ ಪಾವತಿಸಿರುವ ಪ್ರಕರಣಗಳೂ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 409.96 ಕೋಟಿ ರು. ದುರುಪಯೋಗವಾಗಿದೆ ಎಂದು ವರದಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts