ದುವರ್ತನೆ ಆರೋಪದಡಿಯಲ್ಲಿ ವಕೀಲ ಜಗದೀಶ್‌ ಬಂಧನ; ಪೊಲೀಸರ ವಿರುದ್ಧ ಪಕ್ಷಪಾತದ ಆಪಾದನೆ

ಬೆಂಗಳೂರು; ವಕೀಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೃತ್ತಿಗೆ ಚ್ಯುತಿ ಬರುವ‌ ರೀತಿಯಲ್ಲಿ ನಡೆದುಕೊಂಡಿರುವುದು ಮತ್ತು ಗಲಾಟೆ ಮಾಡಿ ನ್ಯಾಯಾಲಯದ ‌ಆವರಣದಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಪ್ರತಿನಿಧಿಗಳು ನೀಡಿದ್ದ ದೂರಿನ ಮೇಲೆ ವಕೀಲ ಜಗದೀಶ್‌ ಎಂಬುವರನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ.

 

ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌ ಅವರು ಸಾವಿರಾರು ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ವಕೀಲ ಜಗದೀಶ್‌ ಎಂಬುವರು ಆರೋಪವೆಸಗಿದ್ದರು.  ಈ  ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್‌ ಅವರ ವಿರುದ್ಧ ರವಿ ಚನ್ನಣ್ಣನವರ್‌ ಅವರು ಹೂಡಿದ್ದ ಮಾನನಷ್ಟ ದಾವೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂದರ್ಭದಲ್ಲೇ ನ್ಯಾಯಾಲಯದ ಆವರಣದಲ್ಲಿ ಅಶಾಂತಿ ಉಂಟಾಗಿತ್ತು.

 

ಈ ವೇಳೆ  ವಕೀಲರನ್ನು ಪ್ರಚೋದಿಸಿ ಗಲಾಟೆಗೆ ಕಾರಣವಾಗಿದ್ದಾರೆ ಎಂಬ ಆಪಾದನೆಯಡಿಯಲ್ಲಿ ವಕೀಲ ಜಗದೀಶ್ ವಿರುದ್ಧವೇ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಪೊಲೀಸರು ಪಕ್ಷಪಾತ ಎಸಗಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.

 

ಸದ್ಯ ವಕೀಲ ಜಗದೀಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆ ಬೆದರಿಕೆ-ಯತ್ನ ಮತ್ತಿತರೆ ಆರೋಪಗಳ ಅಡಿಯಲ್ಲಿ ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ವಕೀಲ ನಾರಾಯಣಸ್ವಾಮಿ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 120(ಬಿ), 143, 147, 153(ಎ) 307, 323, 341, 504, 506, 149 ಅಡಿಯಲ್ಲಿ ಜಗದೀಶ್‌ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಎಫ್‌ಐಆರ್‌ ಪ್ರತಿ

 

ಪೊಲೀಸರು ಪಕ್ಷಪಾತಿಗಳಾದರೇ?

 

ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಘಟನೆಯಲ್ಲಿ ವಕೀಲ ಜಗದೀಶ್‌ ಅವರ ಮಗನ ಮೇಲೂ ಹಲ್ಲೆಯಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಆದರೆ ವಕೀಲ ಜಗದೀಶ್‌ ಅವರ ವಿರುದ್ಧ ದೂರು ಸಲ್ಲಿಕೆಯಾದ ಮರು ಗಳಿಗೆಯಲ್ಲಿಯೇ ಅವರನ್ನು ಬಂಧಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಕೇಳಿ ಬಂದಿದೆಯಲ್ಲದೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಟೀಕೆಗಳೂ ಕೇಳಿ ಬರುತ್ತಿವೆ.

 

ವಕೀಲರ ಉಡುಪಿನಲ್ಲಿ ನ್ಯಾಯಾಲಯಕ್ಕೆ ಪ್ರವೇಶಿಸಿದವರು ಎಂದು ಹೇಳಲಾಗಿರುವ ವ್ಯಕ್ತಿಗಳು  ಜಗದೀಶ್‌ ಅವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅವರ  ಮೇಲೆ ಐಪಿಸಿ 307 (ಕೊಲೆಗೆ ಯತ್ನ) ದಾಖಲಿಸಬೇಕಿತ್ತು. ಆದರೆ ವಕೀಲ ಜಗದೀಶ್‌ ಮೇಲೆಯೇ 307 ದಾಖಲಿಸಲಾಗಿದೆ. ಸೆಕ್ಷನ್‌ 307ರ ಅಡಿಯಲ್ಲಿ ದೂರು ನೀಡಿದ ವ್ಯಕ್ತಿಗೆ ಅಥವಾ ಇನ್ನಾವುದೇ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಆಗಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೋದ ಪ್ರಕಾರ ವಕೀಲ ಜಗದೀಶ್‌ ಅವರು ಎಲ್ಲಿಯೂ ಕೊಲೆಗೆ ಯತ್ನ ಅಥವಾ ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ಕಾಣುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಕೀಲರೊಬ್ಬರು.

 

ಯಾವುದೇ ಪೊಲೀಸ್‌ ಅಧಿಕಾರಿ ತನ್ನ ಠಾಣಾ ವ್ಯಾಪ್ತಿಯಲ್ಲಿ ಈ ರೀತಿ ಹಲ್ಲೆಯಾದ ಪ್ರಕರಣದ ವಿಷಯ ತಿಳಿದ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಜಗದೀಶ್‌ ಅವರ 16 ವರ್ಷದ ಮಗನ ಮೇಲೆ ವಕೀಲರ ಉಡುಪಿನಲ್ಲಿದ್ದ ಕೆಲವರು ಹಲ್ಲೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಮಾರಣಾಂತಿಕ ಹಲ್ಲೆ ಆಗಿದೆ ಎಂಬುದು ಠಾಣಾಧಿಕಾರಿ ಗಮನಕ್ಕೆ ಬಂದಿದ್ದರೂ ಸಹ ಹಲ್ಲೆ ನಡೆಸಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಿಲ್ಲ. ಇದು ಪಕ್ಷಪಾತ ಎಸಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎನ್ನುತ್ತಾರೆ ಮತ್ತೊಬ್ಬ ವಕೀಲರು.

 

ಇನ್ನು, ಜಗದೀಶ್‌ ಅವರು ಕೇವಲ ಕೊಲೆ ಬೆದರಿಕೆ ಹಾಕಿದ್ದರೆ ಅದು 506, 504 ಮತ್ತು 506 (ಬಿ)ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇದು ಜಾಮೀನು ನೀಡಬಹುದಾದ ಪ್ರಕರಣ. ಆದರೆ ವಕೀಲ ಜಗದೀಶ್‌ ಅವರನ್ನು ಜೈಲಿಗೆ ಕಳಿಸುವ ದುರುದ್ದೇಶದಿಂದಲೇ ಸೆಕ್ಷನ್‌ 307ನ್ನು ಪೊಲೀಸರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಬಲವಾದ ಆರೋಪಗಳು ಕಾನೂನು ತಜ್ಞರ ವಲಯದಿಂದಲೇ ಕೇಳಿ ಬಂದಿದೆ.

 

‘ನ್ಯಾಯಾಲಯದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನಡೆದ ಘಟನೆಗೆ ಇಬ್ಬರು ಮಹಿಳೆಯರ ಪ್ರಚೋದನೆಯೇ ಕಾರಣ. ಆದರೆ ಎಫ್‌ಐಆರ್‌ನಲ್ಲಾಗಲಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ನೀಡಿದ್ದ ದೂರಿನಲ್ಲಾಗಲಿ, ಮತ್ತೊಬ್ಬ ವಕೀಲ ನಾರಾಯಣಸ್ವಾಮಿ ಅವರು ನೀಡಿದ್ದ ದೂರಿನಲ್ಲಾಗಲಿ ಹೆಸರುಗಳಿಲ್ಲ,’ ಎಂದು ಘಟನೆ ನಡೆದ ಸಂದರ್ಭದಲ್ಲಿದ್ದ ಪ್ರತ್ಯಕ್ಷದರ್ಶಿ ವಕೀಲರೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದರು.

 

ಈ ಪ್ರಕರಣದಲ್ಲಿ ವಕೀಲ ಜಗದೀಶ್‌ ಅವರನ್ನೇ ಗುರಿಯಾಗಿಸಿಕೊಂಡು ನೀಡಿದ ದೂರಿನ ಮೇಲೆ ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂಬ ಮಾತುಗಳು ಕಾನೂನು ತಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ.

 

ಐಪಿಎಸ್‌ ರವಿಚನ್ನಣ್ಣನವರ್‌ ಅವರ ಕುಟುಂಬ ಸದಸ್ಯರು ಗದಗ್‌, ಮುಂಡರಗಿ, ನೀಲಗುಂದ ಸೇರಿದಂತೆ ಹಲವೆಡೆ ಖರೀದಿಸಿರುವ ಆಸ್ತಿ ವಿವರಗಳನ್ನು ವಕೀಲ ಜಗದೀಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ ಈ ಸಂಬಂಧ ಆರ್‌ಟಿಸಿ, ಪಹಣಿ, ಶುದ್ಧ ಕ್ರಯಪತ್ರ ಸೇರಿದಂತೆ ಹಲವು ದಾಖಲೆಗಳನ್ನಾಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು.

 

ಜಗದೀಶ್‌ ವಿರುದ್ಧ ಮಾನನಷ್ಟ ದಾವೆ

 

ರವಿ ಚನ್ನಣ್ಣನವರ್‌ ಅವರು ಜಗದೀಶ್‌ ವಿರುದ್ಧ ಮಾನನಷ್ಟ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಯು ಫೆ.10ರಂದು ನಿಗದಿಯಾಗಿತ್ತು. ಅಂದು ಪ್ರಕರಣದ ವಿಚಾರಣೆಯು ಮುಂದೂಡಿಕೆಯಾಗಿತ್ತು. ಈ ವೇಳೆ ರವಿಚನ್ನಣ್ಣವರ ವಕೀಲ ಸುಧನ್ವ ಎಂಬುವರು ಸೇರಿದಂತೆ ಕೆಲ ವಕೀಲರ ಮೇಲೆ ಹರಿಹಾಯ್ದಿದ್ದರು ಎಂದು ಹೇಳಲಾಗಿದೆ. ಈ ವೇಳೆ ಜಗದೀಶ್‌ ಮತ್ತು ಮತ್ತಿತರ ವಕೀಲರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದಾದ ನಂತರ ವಕೀಲ ಜಗದೀಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

 

ಫೆ.11ರಂದು ನ್ಯಾಯಾಲಯದ ಆವರಣಕ್ಕೆ ತೆರಳಿದ್ದ ಜಗದೀಶ್‌ ಅವರು ವಕೀಲರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದ ಕೆಲ ವಕೀಲರು ಮತ್ತು ಜಗದೀಶ್‌ ಮಧ್ಯೆ ಘರ್ಷಣೆ ನಡೆದಿತ್ತು. ಈ ವೇಳೆಯೇ ಜಗದೀಶ್‌ ಅವರ ಪುತ್ರನ ಮೇಲೆಯೂ ಕೆಲವರು ಮಾರಣಾಂತಿಕ ಹಲ್ಲೆಯನ್ನೂ ನಡೆಸಿದ್ದರು. ಅದೇ ದಿನದಂದು ಜಗದೀಶ್‌ ಅವರ ಸ್ನೇಹಿತರೊಬ್ಬರು ತಮ್ಮ ಮೇಲೂ ಹಲ್ಲೆಯಾಗಿದೆ ಎಂದು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

 

ವಕೀಲ ನಾರಾಯಣ ಸ್ವಾಮಿ ನೀಡಿದ್ದ ದೂರಿನಲ್ಲೇನಿತ್ತು?

 

ವಕೀಲ ಜಗದೀಶ್ ಮಹದೇವ್, ಪ್ರಶಾಂತಿ ಸುಭಾಷ್, ಶರತ್ ಕದ್ರಿ ಮತ್ತಿತರರು ಸಾಮಾಜಿಕ ಜಾಲತಾಣದಲ್ಲಿ ವಕೀಲರ ಬಗ್ಗೆ ಹಾಗೂ ಸಮಾಜದ ಗಣ್ಯರ ವಿರುದ್ಧ ಅವಹೇಳನಕಾರಿ ನಿಂದನೆ ಮಾಡಿದ್ದರು. ಈ ವಿಚಾರವಾಗಿ ಅವರಿಗೆ ವಕೀಲರ ಸಂಘದಿಂದ ವತಿಯಿಂದ ಬುದ್ದಿವಾದ ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ನನ್ನ ವಿರುದ್ಧ ದ್ವೇಷ ಸಾಧಿಸಿದ ವಕೀಲ ಜಗದೀಶ್ ಫೆ.10ರಂದು ನನ್ನ ಮೇಲಿ ಗಲಾಟೆ ಮಾಡಿದ್ದಲ್ಲದೇ, ನಿನ್ನನ್ನ ಕೊಲೆ ಮಾಡುತ್ತೇನೆಂದು ಹೇಳಿ ಹೋಗಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಹಲ್ಲೆ ಮಾಡಲು ಮತ್ತು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಗಲಾಟೆ ಮಾಡಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.

 

ಮರು ದಿನ ಫೆ.11ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಜಗದೀಶ್ ಮಹದೇವ, ಪ್ರಶಾಂತಿ ಸುಭಾಷ್, ಶರತ್ ಕದ್ರಿ ಮತ್ತಿತರರು ವಕೀಲ ಸಮುದಾಯದ ನಡುವೆ ದ್ವೇಷ ಬಿತ್ತುವ ಒಳಸಂಚು ರೂಪಿಸಿಕೊಂಡು, ಸಿಟಿ ಸಿವಿಲ್ ಕೋರ್ಟ್ ಆರವಣಕ್ಕೆ 40-50 ಗೂಂಡಾಗಳೊಂದಿಗೆ ಬಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 1.45ವರೆಗೆ ಗಲಾಟೆ ಮಾಡಿ, ಕೋರ್ಟ್ ಆವರಣದಲ್ಲಿ ಅಶಾಂತಿ ಸೃಷ್ಟಿಸಿದರು.

 

 

ಈ ವೇಳೆ ತನ್ನ ಕುತ್ತಿಗೆ ಹಿಸುಕಿ, ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲು ಪ್ರಯತ್ನಿಸಿದರು. ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಬೆದರಿಕೆ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡುವುದರ ಜತೆಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಸುಮಾರು 300 ಜನ ಅಪರಿಚಿತವ್ಯಕ್ತಿಗಳಿಂದ ಬೆದರಿಕೆ ಕರೆ ಮಾಡಿಸಿದ್ದಾರೆ. ಈ ನಿಟ್ಟಿನಲ್ಲಿ ವಕೀಲ ಜಗದೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಂಡುವಂತೆ ಕೋರುತ್ತಿದ್ದೇನೆ ಎಂದು ದೂರುದಾರ ನಾರಾಯಣಸ್ವಾಮಿ ತಿಳಿಸಿದ್ದಾರೆ ಎಂದು ಲೀಗಲ್‌ ನ್ಯೂಸ್‌ ವರದಿ ಮಾಡಿದೆ.

 

‘ಇಡೀ ಪ್ರಕರಣವೇ ಒಂದು ದುರದೃಷ್ಟಕರ ಘಟನೆ. ಪೊಲೀಸ್‌ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಹೋರಾಟ ಮಾಡುತ್ತಿದ್ದ ವಕೀಲ ಜಗದೀಶ್‌ ಕೆಲವೊಮ್ಮೆ ಪ್ರಚೋದನಾತ್ಮಕ ಮಾತುಗಳನ್ನಾಡಿದ್ದಾರೆ. ಆದರೆ ಅದೇ ಸಮಯದಲ್ಲಿ ವಕೀಲರ ಗುಂಪು ಬೆಂಗಳೂರು ನ್ಯಾಯಾಲಯದ ಆವರಣದಲ್ಲಿ ಅವರ ಮಗನ ಮೇಲೂ ಹಲ್ಲೆ ಮಾಡಿರುವುದು ಸಹ ಕಾನೂನುಬಾಹಿರ ಕೃತ್ಯ, ಅಸಮರ್ಥನೀಯ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

 

ಹಲ್ಲೆ ವಿಚಾರವಾಗಿ ಈಗಾಗಲೇ ಹಲ್ಲೆಗೊಳಗಾದವರು ದೂರು ನೀಡಿದ್ದರೂ ಬೆಂಗಳೂರಿನ ಪೊಲೀಸರು ಇಲ್ಲಿಯ ತನಕ ಯಾವ ಕ್ರಮವನ್ನೂ ಜರುಗಿಸಿಲ್ಲ. ಆದರೆ ದೂರುಕೊಟ್ಟ ಅರ್ಧ ದಿನದ ಒಳಗೆಯೇ ವಕೀಲ ಜಗದೀಶ್‌ ಅವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಪಕ್ಷಪಾತಿತನವನ್ನು ತೋರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ ಎಂದೂ ರವಿಕೃಷ್ಣಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.

 

ಈ ಪ್ರಕರಣದಲ್ಲಿ ಎಲ್ಲರೂ ಅರಿತುಕೊಳ್ಳಬೇಕಾದ ಸತ್ಯವೇನಂದರೆ ಭ್ರಷ್ಟಾಚಾರ ವಿರುದ್ಧದ ಹೋರಾಟ ದೀರ್ಘವಾದದ್ದು, ಕಷ್ಟಕರವಾದದ್ದು, ಸವಾಲಿನದ್ದು. ಅದನ್ನು ಸಂಯಮದಿಂದ, ಶಿಸ್ತಿನಿಂದ ಹಾಗೂ ಸಂಘಟಿತವಾಗಿ ಎದುರಿಸಿದರೆ ಮಾತ್ರ ಜಯ ಸಿಗುತ್ತದೆ. ಹಾಗೆಯೇ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts