ಬೆಂಗಳೂರು; ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಸಂಬಂಧ ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪದ ಕುರಿತು ಜೆಡಿಎಸ್‌ನ ಎಚ್ ಡಿ ರೇವಣ್ಣ ಅವರು ಕೇಳಿದ್ದ ಪ್ರಶ್ನೆಗೆ ಆರ್ಥಿಕ ಇಲಾಖೆಯು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.
ಶೇಕಡ 40ರಷ್ಟು ಕಮಿಷನ್ ಬೇಡಿಕೆ ಕುರಿತು 2021ರ ಡಿಸೆಂಬರ್ 4ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ (1560) ಪ್ರಶ್ನೆಗೆ 2 ತಿಂಗಳಾದರೂ ಉತ್ತರ ಒದಗಿಸಿಲ್ಲ. ಈ ಸಂಬಂಧ ಕ್ರೋಢೀಕರಿಸಿದ ಮಾಹಿತಿಯನ್ನು ತುರ್ತಾಗಿ ಒಂದು ವಾರದಲ್ಲಿ ಒದಗಿಸಬೇಕು ಎಂದು ಆರ್ಥಿಕ ಇಲಾಖೆಯ ವೆಚ್ಚ 1ರಿಂದ 12ರವರೆಗಿನ ಶಾಖೆಯ ಶಾಖಾಧಿಕಾರಿಗಳಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ರಾಜಮ್ಮ ಅವರು 2022ರ ಫೆ.4ರಂದು ಪತ್ರ (ಸಂಖ್ಯೆ; ಆಇ 343 ಸಿಡಿಎನ್ 2021) ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

ಸಾರ್ವಜನಿಕ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆದಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರದ ಮರಣಶಾಸನವನ್ನು ಸಾಬೀತುಪಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಎಚ್ಚರಿಸಿದ್ದರ ಬೆನ್ನಲ್ಲೇ ಎಚ್ ಡಿ ರೇವಣ್ಣ ಅವರು ಕೇಳಿರುವ ಪ್ರಶ್ನೆಗಳಿಗೆ ಒಂದು ವಾರದಲ್ಲಿ ಉತ್ತರ ಒದಗಿಸಬೇಕು ಎಂದು ಆರ್ಥಿಕ ಇಲಾಖೆಯು ತನ್ನ ಅಧೀನ ಅಧಿಕಾರಿಗಳಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ರೇವಣ್ಣ ಅವರು ಕೇಳಿದ್ದ ಪ್ರಶ್ನೆಯಲ್ಲೇನಿತ್ತು?
1. ವಿವಿಧ ಇಲಾಖೆಗಳಲ್ಲಿ ವಿವಿಧ ಹಂತದಲ್ಲಿ ಗುತ್ತಿಗೆದಾರರು ಟೆಂಡರ್ ಪಡೆಯಲು ಮತ್ತು ಟೆಂಡರ್ ಪಡೆದ ನಂತರ ಭರವಸೆ ಪತ್ರ ತರಲು, ತದನಂತರ ಹಣ ಬಿಡುಗಡೆ ಪಡೆಯಲು ಟೆಂಡರ್ ಮೊತ್ತದ ಶೇಕಡಾ ಸುಮಾರು 30ರಿಂದ 40ರವರೆಗೆ ಹೆಚ್ಚುವರಿ ಹಣ ನೀಡಬೇಕಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲವೆಂದು ಆರೋಪಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ (ಸಂಪೂರ್ಣ ಮಾಹಿತಿ ನೀಡುವುದು)
2. ಈ ಆಪಾದನೆಗಳುಳ್ಳ ಮನವಿಗಳನ್ನು ಪ್ರಧಾನಮಂತ್ರಿಯವರ ಕಾರ್ಯಾಲಯದಿಂದ ಮತ್ತು ರಾಜಭವನದಿಂದ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಪತ್ರ ಬರೆಯಲಾಗಿದೆಯೇ, ಹಾಗಿದ್ದಲ್ಲಿ ಈ ಬಗ್ಗೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳೇನು?

3. ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ಟೆಂಡರ್ ಮುಖೇನ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್‌ಗಳಿಗೆ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ನಂತರ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂಬ ಆರೋಪ ಸತ್ಯವೇ, ವಿವಿದ ಇಲಾಖೆಗಳ ಅಡಿಯಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳು ಸೇರಿದಂತೆ ಒfಟು 20,000 ಕೋಟಿ ಬಾಕಿ ಇರುವುದು ನಿಜವೇ, ಹಾಗಿದ್ದಲ್ಲಿ ಇಲಾಖಾವಾರು ಬಾಕಿ ಇರುವ ಮೊತ್ತದ ಸಂಪೂರ್ಣ ಮಾಹಿತಿ ನೀಡುವುದು
4. ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಅವರು ನೀಡಿರುವ ಮನವಿಯಲ್ಲಿ ಇಲಾಖಾ ಅಧಿಕಾರಿಳು, ಕೆಲವೊಂದು ಮಂತ್ರಿಗಳು ಮತ್ತು ಶಾಸಕರು ಒಳಗೊಂಡಂತೆ ತಮ್ಮ ಕ್ಷೇತ್ರಗಳಲ್ಲಿ ಗುತ್ತಿಗೆದಾರರನ್ನು ಹಿಂಸಿಸುತ್ತಿರುವುದಾಗಿ ಆಪಾದಿಸಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು, ಮತ್ತು ಪ್ರಧಾನಮಂತ್ರಿ, ರಾಜ್ಯಪಾಲರಿಗೆ ಗುತ್ತಿಗೆದಾರರು ನೀಡಿರುವ ಮನವಿ ಮೇಲೆ ಕ್ರಮ ಜರುಗಿಸುವ ಬಗ್ಗೆ ವರದಿ ನೀಡಲಾಗಿದೆಯೇ, ಹಾಗಿದ್ದಲ್ಲಿ ಸಂಪೂರ್ಣ ಮಾಹಿತಿ ನೀಡುವುದು.
ಬೆಳಗಾವಿಯಲ್ಲಿ 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಚ್ ಡಿ ರೇವಣ್ಣ ಅವರು ಪ್ರಶ್ನೆ ಕೇಳಿದ್ದರು. ಆದರೆ 2 ತಿಂಗಳಾದರೂ ಈ ಪ್ರಶ್ನೆಗಳಿಗೆ ಆರ್ಥಿಕ ಇಲಾಖೆಯು ಯಾವುದೇ ಉತ್ತರ ಒದಗಿಸಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.
ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ ಶೇಕಡ 40ರಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪಗಳನ್ನಾಧರಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು.
ಜಲಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ನಗರಾಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ ಇಲಾಖೆಗಳಲ್ಲಿ ವಿವಿಧ ರೀತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲೇ ಶೇಕಡಾ 40ರಷ್ಟು ಹಣವನ್ನು ಲಂಚದ ರೂಪದಲ್ಲಿ ಬೇಡಿಕೆ ಇರಿಸಲಾಗಿತ್ತು ಎಂದು ಗುತ್ತಿಗೆದಾರರ ಸಂಘವು ಮಾಡಿದ್ದ ಆರೋಪವು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಅನುದಾನ ಮಂಜೂರಾತಿ, ಹಂಚಿಕೆ, ಬಿಡುಗಡೆ, ಬಿಲ್ ಮೊತ್ತ ಗುತ್ತಿಗೆದಾರರಿಗೆ ಪಾವತಿ ಆಗುವ ಎಲ್ಲಾ ಹಂತಗಳಲ್ಲೂ ಶೇಕಡಾ 40ರಷ್ಟು ಹಣಕ್ಕೆ ಲಂಚ ರೂಪದಲ್ಲಿ ಬೇಡಿಕೆ ಇರಿಸಲಾಗಿದೆ ಎಂದು ಪ್ರಧಾನಿಗೆ ಬರೆದಿದ್ದ ಪತ್ರದಲ್ಲಿ ಆರೋಪಿಸಲಾಗಿತ್ತು.
ಹಲವು ಬಗೆಯ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಸದಸ್ಯರಾಗಿರುವ 52 ಸಂಘಗಳು ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯತ್ವ ಪಡೆದಿವೆ. ಅಂದಾಜು 1 ಲಕ್ಷಕ್ಕೂ ಅಧಿಕ ಗುತ್ತಿಗೆದಾರರು ಸದಸ್ಯರಾಗಿರುವ ಈ ಸಂಘ ಸರ್ಕಾರದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮೊದಲ ಬಾರಿಗೆ ಲಿಖಿತ ಪತ್ರದ ಮೂಲಕ ಆರೋಪಿಸಿತ್ತು.
ಶೇ 40ರಷ್ಟು ಹಣವನ್ನು ಲಂಚದ ರೂಪದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನೀಡಬೇಕಾಗಿದೆ. ಹೀಗಾಗಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಂಚಕ್ಕೆ ಕಡಿವಾಣ ಹಾಕಿದರೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರೀಕ್ಷಿಸಬಹುದು’ ಎಂದು ಮನವಿಯಲ್ಲಿ ಉಲ್ಲೆಖಿಸಿದ್ದನ್ನು ಸ್ಮರಿಸಬಹುದು.