ಸಂಸ್ಕೃತಕ್ಕೆ 392.64 ಕೋಟಿ, ಕನ್ನಡಕ್ಕೆ 25 ಕೋಟಿ; ವಿ.ವಿ.ಗಳಿಂದ ಅನುದಾನದ ಬೇಡಿಕೆ ಮಂಡನೆ

Photo Credit- TheNewsMinute

ಬೆಂಗಳೂರು; ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ 2022-23ನೇ ಸಾಲಿಗೆ ಮೂಲಭೂತ ಸೌಕರ್ಯಗಳಿಗೆ 392.64 ಕೋಟಿ ರು. ಅನುದಾನ ಒದಗಿಸಬೇಕು ಎಂದು ಸಂಸ್ಕೃತ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಮುಂದಿರಿಸಿದೆ.

 

2022-23ನೇ ಸಾಲಿನ ಆಯವ್ಯಯಕ್ಕೆ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಉನ್ನತ ಶಿಕ್ಷಣ ಇಲಾಖೆಯು ಸಂಸ್ಕೃತ ವಿ ವಿ ಸೇರಿದಂತೆ 15 ವಿಶ್ವವಿದ್ಯಾಲಯಗಳು ಅನುದಾನ ಕೋರಿ ಬೇಡಿಕೆ ಪಟ್ಟಿ ಸಲ್ಲಿಸಿದೆ. ಈ ಬೇಡಿಕೆ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೊದಲು ಕುಸಿದು ಬೀಳುವ ಹಂತದಲ್ಲಿರುವ ಸರ್ಕಾರೀ ಶಾಲೆಗಳನ್ನು ಉಳಿಸಿ, ನಿಮ್ಮ ಯೋಗ್ಯತೆಗೆ ಅಷ್ಟು ಸಾಕು! ಸಂಸ್ಕೃತ ವಿವಿ ಬೇಡ” ಎಂದು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಕರ್ನಾಟಕ ರಕ್ಷಣಾ ವೇದಿಕೆಯು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಬೆಳವಣಿಗೆಗಳ ಮಧ್ಯೆ ಸಂಸ್ಕೃತ ವಿಶ್ವವಿದ್ಯಾಲಯವು 392.64 ಕೋಟಿ ರು. ಬೇಡಿಕೆ ಪಟ್ಟಿಯು ಮುನ್ನೆಲೆಗೆ ಬಂದಿದೆ. ಬೇಡಿಕೆ ಪಟ್ಟಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ ನಾರಾಯಣ್‌ ಅವರು 2022ರ ಫೆ.9ರಂದು ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.

 

ಲಭ್ಯ ಇರುವ ಬೇಡಿಕೆ ಪಟ್ಟಿ ಇಂತಿದೆ

 

ಕನ್ನಡ ವಿ ವಿ – 25.00 ಕೋಟಿ

 

ಸಂಸ್ಕೃತ ವಿ ವಿ – 392.64 ಕೋಟಿ

 

ಜಾನಪದ ವಿ ವಿ – 2.00 ಕೋಟಿ

 

ಬೆಂಗಳೂರು ಉತ್ತರ ವಿ ವಿ – 4.10 ಕೋಟಿ

 

ರಾಯಚೂರು ವಿ ವಿ -33.00 ಕೋಟಿ

 

ಮಹಾರಾಣಿ ಕ್ಲಸ್ಟರ್‌ ವಿ ವಿ – 141.42 ಕೋಟಿ

 

ಮಂಡ್ಯ ವಿ ವಿ – 2.50 ಕೋಟಿ

 

ಕುವೆಂಪು ವಿ ವಿ – 49.00 ಕೋಟಿ

 

ಮಹಿಳಾ ವಿ ವಿ – 12.35 ಕೋಟಿ

 

ತುಮಕೂರು ವಿ ವಿ – 63.93 ಕೋಟಿ

 

 

ವಿವಿಗಳು ಮಂಡಿಸಿರುವ ಅನುದಾನದ ಬೇಡಿಕೆ ಪಟ್ಟಿ

 

ವಿಶೇಷವೆಂದರೆ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನದ ಅವಶ್ಯಕತೆ ಇದ್ದರೂ ರಾಜ್ಯ ಬಜೆಟ್‌ನಲ್ಲಿ ಅನುದಾನ ಹಂಚಿಕೆಯೇ ಆಗಿಲ್ಲ. ಈ ನಡುವೆಯೇ ಕನ್ನಡ ವಿಶ್ವವಿದ್ಯಾಲಯವು 2022-23ನೇ ಸಾಲಿಗೆ 25.00 ಕೋಟಿ ರು.ಗಳ ಬೇಡಿಕೆ ಇರಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

 

ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರದಿಂದ ಯಾವುದೇ ಅನುದಾನ ದೊರೆತಿಲ್ಲ. ವಿವಿ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆಯನ್ನು ಎರಡು ವರ್ಷದ ಹಿಂದೆ ನೀಡಿತ್ತಾದರೂ ಅನುದಾನ ಹಂಚಿಕೆಯಾಗಿಲ್ಲ. ರಾಜ್ಯ ಸರಕಾರ ಹಾಗೂ ಕೆಲ ಸಚಿವರು 100 ಕೋಟಿ ರು. ಅನುದಾನ ಘೋಷಣೆಯಾಗಿದೆಯಾದರೂ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಆದೇಶದ ಪ್ರತಿಯು ಸಂಸ್ಕೃತ ವಿ ವಿ ಗೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

 

ಕನ್ನಡ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಕುವೆಂಪು, ಮಹಿಳಾ ವಿವಿ, ತುಮಕೂರು, ರಾಯಚೂರು, ಬೆಂಗಳೂರು ಉತ್ತರ, ಮಂಡ್ಯ, ಜಾನಪದ ವಿವಿ ಸೇರಿದಂತೆ ಇತರೆ ವಿಶ್ವವಿದ್ಯಾಲಯಗಳು ಒಟ್ಟು 920.71 ಕೋಟಿ ರು. ಅನುದಾನದ ಬೇಡಿಕೆ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಸಲ್ಲಿಸಿದೆ.

 

 

ಕನ್ನಡ ವಿಶ್ವವಿದ್ಯಾಲಯದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆಯನ್ನು ಮಾಡುತ್ತಿದ್ದಾರೆ.‌ ಅವರಿಗೆ ಹಲವು ತಿಂಗಳಿಂದ ಸಂಶೋಧನೆ ನೀಡುವ ಫೆಲೋಶಿಪ್( ಸಹಾಯ ಧನ) ನೀಡಿಲ್ಲ. ಅಲ್ಲದೇ, ಪ್ರಾಧ್ಯಾಪಕರು ಹಾಗೂ ಹೊರಗುತ್ತಿಗೆ ನೌಕರರಿಗೂ ವೇತನವನ್ನೂ ನೀಡಿಲ್ಲ ಎಂದು ತಿಳಿದು ಬಂದಿದೆ.

 

ಶೃಂಗೇರಿ ಬಳಿ ಒಕ್ಕೂಟ ಸರ್ಕಾರ ಸಂಸ್ಕೃತ ವಿವಿ ಸ್ಥಾಪಿಸಿದೆ. ಆದರೆ ಶೇ.50 ರಷ್ಟು ದಾಖಲಾತಿ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎರಡನೇ ಸಂಸ್ಕೃತ ವಿವಿ ಏಕೆ? ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಆದರೆ ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತನಲ್ಲಿಯೇ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು. ಆದರೆ ಇನ್ನೊಂದೆಡೆ ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಸ್ಥಾಪನೆಯಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಸಮರ್ಪಕ ಅನುದಾನ ಕೊಡುತ್ತಿಲ್ಲ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

 

ಅದೇ ರೀತಿ ಕಾಲೇಜು ಶಿಕ್ಷಣ ಇಲಾಖೆಯು 2022-23ನೇ ಸಾಲಿಗೆ 5,094.58 ಕೋಟಿ ರು. ಬೇಡಿಕೆ ಸಲ್ಲಿಸಿದೆ. 2021-22ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯು 2,702.63 ಕೋಟಿ ರು. ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷಕ್ಕೆ 2,392 ಕೋಟಿ ರು. ಹೆಚ್ಚುವರಿ ಮೊತ್ತವನ್ನು ನಿರೀಕ್ಷಿಸಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯು 2022-23ನೇ ಸಾಲಿಗೆ 2,158.38 (2021-22ರಲ್ಲಿ 1,159.87 ಕೋಟಿ) ಬೇಡಿಕೆ ಸಲ್ಲಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 998.51 ಕೋಟಿ ರು. ಹೆಚ್ಚುವರಿಯಾಗಿದೆ.

 

ವಿಶ್ವವಿದ್ಯಾಲಯಗಳು ಒಟ್ಟಾರೆ 1,778.24 ಕೋಟಿ (2021-22ರಲ್ಲಿ 857.93 ಕೋಟಿ) ಬೇಡಿಕೆ ಸಲ್ಲಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಇಸದರೆ 920.31 ಕೋಟಿ ರು. ಹೆಚ್ಚುವರಿ ಅನುದಾನ ಕೋರಿದೆ. 2022-23ನೇ ಸಾಲಿಗೆ ಹೊಸ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ 431.4 ಕೋಟಿ ರು ಸೇರಿದಂತೆ ಒಟ್ಟಾರೆ 9,546.23 ಕೋಟಿ ರು. ಗೆ ಪ್ರಸ್ತಾವನೆ ಸಲ್ಲಿಸಿದೆ. ಇದು ಕಳೆದ ವರ್ಷಕ್ಕೆ (4,772.93 ಕೋಟಿ) ಹೋಲಿಸಿದರೆ 4,773.3 ಕೋಟಿ ರು. ಹೆಚ್ಚುವರಿಯಾಗಿದೆ.

 

ಅದೇ ರೀತಿ ಕಾಲೇಜು ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪ ಯೋಜನೆಯಡಿ 2022-23ನೇ ಸಾಲಿಗೆ ಟ್ಯಾಬ್ಲೆಟ್‌ ಪಿ ಸಿ ಗಳಿಗೆ 57.6 ಕೋಟಿ ರು., ಇದೇ ಉಪ ಯೋಜನೆಯಡಿ ಕಟ್ಟಡ ಮೂಲಭೂತ ಸೌಕರ್ಯಗಳಿಗೆ 384.17 ಕೋಟಿ ಸೇರಿ ಒಟ್ಟಾರೆ 441.77 ಕೋಟಿ ರು. ಬೇಡಿಕೆ ಸಲ್ಲಿಸಿದೆ.

 

ತಾಂತ್ರಿಕ ಶಿಕ್ಷಣ ಇಲಾಖೆಯು ಉಪ ಯೋಜನೆಯಡಿ ಕಟ್ಟಡ ಮೂಲಭೂತ ಸೌಕರ್ಯಗಳಿಗೆ 62.06 ಕೋಟಿ ರು., ಟ್ಯಾಬ್ಲೆಟ್‌ ಪಿ ಸಿ ಗಳಿಗೆ 7.5 ಕೋಟಿ ರು., ಸೇರಿ 69.56 ಕೋಟಿ ರು. ಸೇರಿದಂತೆ ಒಟ್ಟಾರೆ ಈ ಉಪಯೋಜನೆಯಡಿಯಲ್ಲಿ 511.33 ಕೋಟಿ ರು. ಬೇಡಿಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts