Monday | May 25, 2026 |

55 ಲಕ್ಷದಲ್ಲಿ 5 ಲಕ್ಷ ಸುಲಿಗೆ ಆರೋಪ ಸಾಬೀತು; ಸಿಪಿಐ, ಎಎಸ್‌ಐಗಳ ತಲೆದಂಡ, ಐಪಿಎಸ್‌ಗೆ ಕ್ಲೀನ್‌ಚಿಟ್‌

ಬೆಂಗಳೂರು; ಅತ್ತಿಬೆಲೆಯ ಕ್ರಷರ್‌ ಉದ್ಯಮಿಯೊಬ್ಬರಿಂದ 5 ಲಕ್ಷ ರುಪಾಯಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರನ್ನು ರಕ್ಷಿಸಿರುವ ಸರ್ಕಾರವು ಕೆಳಹಂತದ ಸಿಪಿಐ, ಎಎಸ್‌ಐಗಳಿಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಬೆಂಗಳೂರು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ಅವರು ಸಿಪಿಐ ಮತ್ತು ಎಎಸ್‌ಐಗಳಿಬ್ಬರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದರ ಬೆನ್ನಲ್ಲೇ ಅಮಾನತು ಆದೇಶವೂ ಹೊರಬಿದ್ದಿದೆ. 2022ರ ಫೆ.1ರಂದು ಹೊರಡಿಸಿರುವ  ಅಮಾನತು ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಅರ್ಜಿದಾರರಾದ ********** ಅವರು ಸಲ್ಲಿಸಿದ್ದ ದೂರು ಅರ್ಜಿಯನ್ನು ಬೆಂಗಳೂರು ಜಿಲ್ಲೆ ಪೊಲೀಸ್‌ ಅಧೀಕ್ಷಕರು ವಿಚಾರಣೆ ನಡೆಸಿ ವರದಿಯನ್ನು ಈ ಕಚೇರಿಗೆ ಸಲ್ಲಿಸಿದ್ದು ಈ ವಿಚಾರಣಾ ವರದಿಯಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುತ್ತೆದೆಂದು ತಿಳಿಸಿದ್ದಾರೆ,’ಎಂಬ ಅಂಶವನ್ನು ಅಮಾನತು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

 

ಬೆಂಗಳೂರು ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ (ಡಿಸಿಐಬಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ ಶ್ರೀನಿವಾಸ್‌ (ಹಾಲಿ ವಿಜಯಪುರ ವೃತ್ತ), ಎಎಸ್‌ಐ ಶುಭ, ಕೆ ಜಿ ಅನಿತಾ ಅವರು ಅಮಾನತುಗೊಂಡವರು.

 

ಅಮಾನತು ಆದೇಶದ ಪ್ರತಿ

 

ವಿಚಾರಣೆ ವರದಿಯಲ್ಲಿನ ಸಾಕ್ಷಿದಾರರ ಹೇಳಿಕೆಗಳು, ದಾಖಲಾತಿಗಳು ಹಾಗೂ ಅರ್ಜಿದಾರರು ಸಲ್ಲಿಸಿದ್ದ ಕಾಲ್‌ ರೆಕಾರ್ಡ್‌ಗಳ ಪರಿಶೀಲನೆಯಿಂದ ಟಿ ಶ್ರೀನಿವಾಸ್‌ ಅವರು ಮತ್ತು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿ ತಿಳಿಸಿರುವ ಅವಧಿಯಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿರುವುದು, ಬೆಂಗಳೂರು ಪೊಲೀಸ್‌ ಅಧೀಕ್ಷಕರಿಗೆ ನೀಡಿದ ದೂರು ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಡಿಸಿಬಿಐ ಅವರಿಗೆ ರವಾನಿಸಲಾಗಿತ್ತು.

 

ಆದರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಟಿ ಶ್ರೀನಿವಾಸ್‌ ಅವರು ಎಸ್‌ ಪಿ ಕಚೇರಿಯಿಂದ ತನಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ ಅಂತ ಸುಳ್ಳು ಹೇಳುತ್ತಿರುವುದು, ಅರ್ಜಿದಾರರು ಅರ್ಜಿ ವಿಚಾರವಾಗಿ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನ ವಿಚಾರವಾಗಿ ಅರ್ಜಿದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿರುವುದು ಕಂಡು ಬರುತ್ತದೆ,’ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿದೆ.

 

ಅಲ್ಲದೆ ‘ ಪಿ ಐ ಶ್ರೀನಿವಾಸ್‌ ಅವರ ಸೂಚನೆಯಂತೆ ಎ ಎಸ್‌ ಐ ಶುಭ ಮತ್ತು ಕೆ ಜಿ ಅನಿತಾ ಅವರಿಗೆ ಹಣ ನೀಡಿದ್ದಾಗಿ ನಿರ್ದಿಷ್ಟವಾಗಿ ಹೆಸರನ್ನೇ ಪ್ರಸ್ತಾಪಿಸಿರುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿರುವಂತೆ ಟಿ ಶ್ರೀನಿವಾಸ್‌, ಶುಭ, ಅನಿತಾ ಅವರ ಮುಖೇನ 5,00,000 ಲಕ್ಷ ರು.ಹಣವನ್ನು ಪಡೆದು ಅರ್ಜಿ ವಿಚಾರದಲ್ಲಿ ಅರ್ಜಿದಾರರಿಗೆ ಸಹಾಯ ಮಾಡುವುದಾಗಿ ಹೇಳಿ ನಂಬಿಸಿ ಹಣ ಪಡೆದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ‘ ಎಂದೂ ಅಮಾನತು ಆದೇಶದಲ್ಲಿ ಹೇಳಲಾಗಿದೆ.

 

ಅದೇ ರೀತಿ ‘ ಪೊಲೀಸ್‌ ಇಲಾಖೆಯಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಕರ್ತವ್ಯದಲ್ಲಿ ಲೋಪವೆಸಗುವ ಮೂಲಕ ನೀವು ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಾಗೂ ದುರ್ನಡತೆಯನ್ನು ಪ್ರದರ್ಶಿಸಿರುತ್ತೀರಿ. ಆದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್‌ (ಶಿಸ್ತು ನಡವಳಿ) ನಿಯಮಗಳು 1965/89ರ ನಿಯಮ 5 ರ ಅಡಿಯಲ್ಲಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತಿನಲ್ಲಿರಿಸಲಾಗಿದೆ,’ ಎಂದು ವಿವರಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಅಮಾನತು ಆದೇಶದ ಪ್ರತಿ

 

ಇದೇ ಪ್ರಕರಣದಲ್ಲಿ ಮತ್ತೊಬ್ಬ ಐಪಿಎಸ್‌ ಅಧಿಕಾರಿ ********** ಅವರು 25 ಲಕ್ಷ ರು. ಪಡೆದಿರುವ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಅವರನ್ನು ಈ ಪ್ರಕರಣದಿಂದ ಕೈ ಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಅಲ್ಲದೆ ಐಪಿಎಸ್‌ ಅಧಿಕಾರಿ ********** ಅವರನ್ನು ರಕ್ಷಿಸಿ ಕೆಳಹಂತದ ಅಧಿಕಾರಿಗಳ ತಲೆದಂಡ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಯನ್ನು ಪ್ರಕಟಿಸದಂತೆ ಐಪಿಎಸ್‌ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಂದಿರುವ ತಡೆಯಾಜ್ಞೆ ಮುಂದುವರೆದಿರುವುದರಿಂದ ಅವರ ********** ಹೆಸರನ್ನು ಮತ್ತು ದೂರುದಾರರ ಹೆಸರನ್ನು ಇಲ್ಲಿ ಉಲ್ಲೇಖಿಸಿಲ್ಲ. ಹಾಗೆಯೇ ಐಜಿಪಿ ಚಂದ್ರಶೇಖರ್‌ ಅವರು ವರದಿ ಜತೆ ಸಲ್ಲಿಸಿರುವ ಪತ್ರದಲ್ಲಿ ಐಪಿಎಸ್‌ ಅಧಿಕಾರಿ ********** ಹೆಸರು ಇರುವ ಕಾರಣ ಪತ್ರವನ್ನೂ ಇಲ್ಲಿ ಪ್ರಕಟಿಸುತ್ತಿಲ್ಲ.

 

ಅಂದಾಜು 5 ಕೋಟಿ ರು. ವಂಚನೆ ಮಾಡಲಾಗಿದೆ ಎಂದು ಕ್ರಷರ್‌ ಉದ್ಯಮಿಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ವಿಚಾರಣೆ ಕೈಗೊಂಡು ಆರೋಪಿಯನ್ನು ಬಂಧಿಸಬೇಕಿದ್ದ ಪೊಲೀಸ್‌ ಅಧಿಕಾರಿಗಳು 5 ಲಕ್ಷ ರು.ಗಳನ್ನು ದೂರುದಾರರಿಂದಲೇ ವಸೂಲು ಮಾಡಿದ್ದರು ಎಂಬುದು ವಿಚಾರಣೆ ವೇಳೆಯಲ್ಲಿ ದೃಢಪಟ್ಟಿತ್ತು ಎಂಬ ಅಂಶವನ್ನು ಐಜಿಪಿ ಅವರು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಬರೆದಿದ್ದ  ಪತ್ರದಲ್ಲಿ ಪ್ರಸ್ತಾಪಿಸಿದ್ದರು.

 

ಬೆಂಗಳೂರು ಜಿಲ್ಲೆಯ ಡಿಸಿಐಬಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿ ಶ್ರೀನಿವಾಸ್‌ (ಹಾಲಿ ವಿಜಯಪುರ ಸಿಪಿಐ) ಅವರು ಎಎಸ್‌ಐ ಎನ್ ಶುಭ ಮತ್ತು ಕೆ ಜಿ ಅನಿತಾ ಅವರ ಮುಖೇನ 5,00,000 ರು.ಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಐಜಿಪಿ ಚಂದ್ರಶೇಖರ್‌ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದರು.

 

ವಿಚಾರಣೆ ವೇಳೆಯಲ್ಲಿ ಐಜಿಪಿ ಚಂದ್ರಶೇಖರ್‌ ಅವರು ಐಪಿಎಸ್‌ ಅಧಿಕಾರಿ ********** ಅವರ ಹೇಳಿಕೆ ಪಡೆದಿದ್ದರು. ‘ತಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರತಿನಿತ್ಯ ಹಲವಾರು ಜನ ಅರ್ಜಿದಾರರು ತಮ್ಮ ದೂರುಗಳನ್ನು ಸಲ್ಲಿಸಲು ಕಚೇರಿಗೆ ಬರುತ್ತಿದ್ದು ಅದರಂತೆ ಅರ್ಜಿದಾರರು ದೂರನ್ನು ಕೊಟ್ಟಾಗ ಅದನ್ನು ಸೂಕ್ತ ಕ್ರಮಕ್ಕಾಗಿ ಅತ್ತಿಬೆಲೆ ಪೊಲೀಸ್‌ ಠಾಣೆಗೆ ತದನಂತರ ಸಿಇಎನ್‌ ಪೊಲೀಸ್‌ ಠಾಣೆಗೆ ರವಾನಿಸಲಾಗಿತ್ತು. ಉಳಿದಂತೆ ಯಾವುದೇ ವಿಚಾರಗಳು ತನಗೆ ಸಂಬಂಧಿಸಿರುವುದಿಲ್ಲ,’ ಎಂದು ಐಪಿಎಸ್‌ ಅಧಿಕಾರಿ **********  ತಿಳಿಸಿರುವುದನ್ನು ಐಜಿಪಿ ಪ್ರಸ್ತಾಪಿಸಿದ್ದರು.

 

‘ಇವರ ಹೇಳಿಕೆಯನ್ನು ಪರಿಶೀಲಿಸಿದ್ದು ಮತ್ತು ವರದಿಯಲ್ಲಿನ ಅಂಶಗಳಿಂದ ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ********** ಪಾತ್ರವು ಕಂಡುಬರುವುದಿಲ್ಲ,’ ಎಂದು ಐಜಿಪಿ ಚಂದ್ರಶೇಖರ್‌ ಅವರು ಉಲ್ಲೇಖಿಸಿದ್ದರು.

 

‘ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳಾದ ಟಿ ಶ್ರೀನಿವಾಸ್‌, ಎಎಸ್‌ಐ ಎನ್‌ ಶುಭ, ಮತ್ತು ಕೆ ಜಿ ಅನಿತಾ ಇವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಜರುಗಿಸಲು ಕೋರಲಾಗಿದೆ,’ ಬೆಂಗಳೂರು ಕೇಂದ್ರ ವಲಯದ ಪೊಲೀಸ್‌ ಮಹಾನಿರೀಕ್ಷಕ ಎಂ ಚಂದ್ರಶೇಖರ್‌ ಅವರು ಪತ್ರದಲ್ಲಿ ಡಿಜಿಐಜಿಪಿಯನ್ನು ಕೋರಿದ್ದನ್ನು ಸ್ಮರಿಸಬಹುದು.

 

ಪ್ರಕರಣದ ಹಿನ್ನೆಲೆ

 

ಹಲವರಿಂದ 3.96 ಕೋಟಿ ವಂಚನೆಯಾಗಿದೆ ಎಂದು ಕ್ರಷರ್‌ ಉದ್ಯಮಿಯೊಬ್ಬರು 2021ರ ಸೆಪ್ಟಂಬರ್‌ 28ರಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅದೇ ದೂರಿನ ಮೇಲೆ ಸೂಚಿಸಿದ್ದರು.

 

ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಲು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ದೂರಲಾಗಿತ್ತು. ಇವರಿಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಡೆಸಿದ್ದ ಸಂಭಾಷಣೆಯ ಧ್ವನಿಮುದ್ರಿಕೆಯೂ ತಮ್ಮ ಬಳಿ ಇದೆ ಎಂದು ದೂರುದಾರರು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದರು.

 

‘ನನಗೀಗ ಯಾವುದೇ ದಾರಿ ಕಾಣಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನಗೆ ಹೆಣ್ಣು ಮಗಳಿದ್ದಾಳೆ. ನಾನು ನನ್ನ ಜವಾಬ್ದಾರಿಯಿಂದ ಪಲಾಯನ ಮಾಡಲು ಮನಸು ಒಪ್ಪುತ್ತಿಲ್ಲ. ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಧ್ವನಿ ಮುದ್ರಣ, ವಾಟ್ಸಾಪ್‌ ಸಂದೇಶಗಳು ನನ್ನ ಬಳಿ ಇವೆ. ತನಿಖೆಯ ಸಂದರ್ಭದಲ್ಲಿ ಇವೆಲ್ಲವನ್ನೂ ಮುಂದಿರಿಸುತ್ತೇನೆ. ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು,’ ಎಂದು ದೂರಿನಲ್ಲಿ ಕೋರಿದ್ದರು.

 

ನನ್ನ ಮನೆ ಬ್ಯಾಂಕ್‌ನಿಂದ ಹರಾಜಿಗೆ ಬಂದಿದ್ದರೂ ಪೊಲೀಸ್‌ ಅಧಿಕಾರಿಗಳು ಬೇಡಿಕೆ ಇರಿಸಿದ್ದ ಹಣವನ್ನು ನೀಡಿದ್ದೇನೆ. ಆಭರಣಗಳ ಮಾರಾಟದಿಂದ ಬಂದ ಹಣವನ್ನು ನೀಡಿದ್ದರೂ ಪೊಲೀಸ್‌ ಅಧಿಕಾರಿಗಳು ಆರೋಪಿಗಳಿಗೆ ಸಹಕರಿಸಿದ್ದಾರೆ. ಐಪಿಎಸ್‌ ಅಧಿಕಾರಿ ********** ಗೆ 25.00 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಮತ್ತು ಡಿವೈಎಸ್ಪಿ ಕಚೇರಿಯ ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರು.ಗಳನ್ನು ನೀಡಲಾಗಿದೆ ಎಂದು ಆರೋಪಿಗಳ ಪೈಕಿ ಒಬ್ಬಾತ ಬಾಯ್ಬಿಟ್ಟಿದ್ದಾನೆ,’ಎಂದು ಅರ್ಜಿದಾರರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.

 

ವಂಚನೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗುವ ಮುನ್ನವೇ ಐಪಿಎಸ್‌ ಅಧಿಕಾರಿ ********** ಹೆಸರಿನಲ್ಲಿ 5.00 ಲಕ್ಷ ರು.ಗಳಿಗೆ ಬೇಡಿಕೆ ಇರಿಸಲಾಗಿತ್ತು. ಈ ಪೈಕಿ 4 ಲಕ್ಷ ರು.ಗಳನ್ನು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಎಂಬುವರ ಸೂಚನೆ ಮೇರೆಗೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಶುಭಾ/ಅನಿತಾ ಎಂಬುವರಿಗೆ ತಲುಪಿಸಲಾಗಿತ್ತು. ಹಣ ತಲುಪಿರುವ ಬಗ್ಗೆ ಶುಭಾ ಎಂಬುವರು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರಿಗೆ ಮೊಬೈಲ್‌ ಫೋನ್‌ ಮೂಲಕ ಖಚಿತಪಡಿಸಿದ್ದರು. ಬೇಡಿಕೆ ಇರಿಸಿದ್ದ ಒಟ್ಟು 5 ಲಕ್ಷ ರು. ಪೈಕಿ ಇನ್ನೂ ಒಂದು ಲಕ್ಷ ರು. ಬಾಕಿ ಹಣವನ್ನು ಐಪಿಎಸ್‌ ಅಧಿಕಾರಿ ********** ಕೇಳಿದ್ದರು ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

Hot this week

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...
Please Scan to make Your Contribution

Topics

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!