ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಬಿ ಸಿ ಪಾಟೀಲ್ ಮತ್ತು ಕೃಷಿ ಇಲಾಖೆ ರಾಯಭಾರಿ ನಟ ದರ್ಶನ್ ಅವರು ಬೆಳೆ ಸಮೀಕ್ಷೆ ಕುರಿತು ವಿಡಿಯೋ ತುಣಕುಗಳನ್ನು ಪ್ರಸಾರ ಮಾಡಿದ್ದ 11 ಸುದ್ದಿವಾಹಿನಿಗಳಿಗೆ 62.62 ಲಕ್ಷ ರು. ವೆಚ್ಚವಾಗಿದೆ.
ಕೃಷಿ ಇಲಾಖೆಗೆ ರಾಯಭಾರಿಯಾಗಿರುವ ನಟ ದರ್ಶನ್ ಅವರು ಯಾವುದೇ ಸಂಭಾವನೆ ಪಡೆದುಕೊಳ್ಳದಿದ್ದರೂ ಬೆಳೆ ಸಮೀಕ್ಷೆ ಕುರಿತು ಮಾಡಿದ್ದ ವಿಡಿಯೋ ತುಣುಕುಗಳ ಪ್ರಸಾರಕ್ಕೆ 62.62 ಲಕ್ಷ ರು ವೆಚ್ಚವಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಹಣ ಬಿಡುಗಡೆ ಮಾಡಲು ಕೃಷಿ ಇಲಾಖೆ ಆಯುಕ್ತರು ಅನುಮೋದನೆ ಕೋರಿ 2021ರ ಡಿಸೆಂಬರ್ 7ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
2021-22ನೇ ಸಾಲಿನ ಬೆಳೆ ಸಮೀಕ್ಷೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ ಸಿ ಪಾಟೀಲ್, ಕೃಷಿ ಇಲಾಖೆ ರಾಯಭಾರಿ ಹಾಗೂ ನಟ ದರ್ಶನ್ ಅವರು 40 ಸೆಕೆಂಡುಗಳ ವಿಡಿಯೋ ತುಣಕುಗಳನ್ನು ಸುದ್ದಿವಾಹಿನಿಗಳಲ್ಲಿ 2021ರ ಸೆಪ್ಟಂಬರ್ 27ರಿಂದ ಡಿಸೆಂಬರ್ 3ರವರೆಗೆ ಬಿತ್ತರಿಸಲಾಗಿತ್ತು. ಯಕ್ಷಿ ಕಮ್ಯುನಿಕೇಷನ್ ಮತ್ತು ಎಂಸಿ ಅಂಡ್ ಎ ಮೂಲಕ ಸುದ್ದಿವಾಹಿನಿಗಳಿಗೆ ಜಾಹೀರಾತು ಬಿಡುಗಡೆ ಮಾಡಲಾಗಿತ್ತು ಎಂಬುದು ಕೃಷಿ ಆಯುಕ್ತರ ಪತ್ರದಿಂದ ಗೊತ್ತಾಗಿದೆ.
ಟಿ ವಿ 9 ಕನ್ನಡ, ನ್ಯೂಸ್ 18 ಕನ್ನಡ, ಸುವರ್ಣ ನ್ಯೂಸ್, ಟಿ ವಿ 5 ಕನ್ನಡ, ಪವರ್ ಟಿವಿ, ಪಬ್ಲಿಕ್ ಟಿವಿಗೆ ಯಕ್ಷಿ ಕಮ್ಯುನಿಕೇಷನ್ ಮೂಲಕ ಬಿಡುಗಡೆಯಾಗಿದ್ದ ಜಾಹೀರಾತಿಗೆ 30,77,440 ರು., ಎಂ ಸಿ ಅಂಡ್ ಎ ಮೂಲಕ ಪಬ್ಲಿಕ್ ಟಿವಿ, ದಿಗ್ವಿಜಯ ನ್ಯೂಸ್ ಟಿವಿ, ಬಿ ಟಿ ವಿ ನ್ಯೂಸ್, ನ್ಯೂಸ್ ಫಸ್ಟ್, ಪ್ರಜಾ ಟಿವಿ ಮತ್ತು ರಾಜ್ ನ್ಯೂಸ್‌ಗೆ ಬಿಡುಗಡೆಯಾಗಿದ್ದ ಜಾಹೀರಾತಿಗೆ 31, 85,056 ರು. ವೆಚ್ಚವಾಗಿತ್ತು.
2021-22ನೇ ಸಾಲಿನ ಬೆಳೆ ಸಮೀಕ್ಷೆ ಕುರಿತು ರಾಜ್ಯದ ರೈತರಲ್ಲಿ ಅರಿವು ಮೂಡಿಸಲು 40 ಸೆಕೆಂಡುಗಳ ವಿಡಿಯೋ ತುಣುಕುಗಳನ್ನು ರಾಜ್ಯದ 11 ಸುದ್ದಿವಾಹಿನಿಗಳಿಗೆ ಪ್ರಚಾರ ಪಡಿಸಿರುವ ಸಂಬಂಧ ತಗುಲಿರುವ 62,62,496 ರುಗ.ಳನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಪಾವತಿಸುವ ಪ್ರಸ್ತಾವನೆಗೆ ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಕೋರಿ ಕಡತವನ್ನು 2022ರ ಜನವರಿ 13ರಂದು ಸಲ್ಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2020-21ರ ಸಾಲಿನಲ್ಲಿ ಸುಮಾರು 256. 77 ಲಕ್ಷ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಒಟ್ಟು 228.05 ಲಕ್ಷ ತಾಲೂಕುಗಳ ಶೇ.88.81ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ. 2020-21ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಒಟ್ಟು 12.80 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ.