ಕುಕ್ಕೆ, ಗೋಕರ್ಣ, ಮಾರಿಕಾಂಬ,ಬಾಬಾಬುಡನ್‌ ದರ್ಗಾದಲ್ಲಿ ನಡೆಯದ ಲೆಕ್ಕಪರಿಶೋಧನೆ

ಬೆಂಗಳೂರು; ಚಿಕ್ಕಮಗಳೂರು ಜಿಲ್ಲೆಯ ಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಮಾರಿಕಾಂಬ, ಗೋಕರ್ಣದ ಮಹಾಗಣಪತಿ, ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಸ್ಥಾನಗಳಲ್ಲಿ ಕಳೆದ ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯನ್ನೇ ನಡೆಸದಿರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದ ಪ್ರಕಾರ ಪ್ರವರ್ಗ ಎ ಮತ್ತು ಪ್ರವರ್ಗ ಬಿ ಪಟ್ಟಿಯಲ್ಲಿರುವ ದೇವಸ್ಥಾನಗಳು ಪ್ರತಿ ವರ್ಷವೂ ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಲೆಕ್ಕ ಪರಿಶೋಧನೆ ನಡೆಸಬೇಕು. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ನೂರಾರು ದೇವಸ್ಥಾನಗಳು ಕಳೆದ ಮೂರು ವರ್ಷಗಳಲ್ಲಿ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ಹೀಗಾಗಿ ಈ ದೇವಸ್ಥಾನಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ, ಅವ್ಯವಹಾರ, ಹಣಕಾಸು ದುರುಪಯೋಗದಂತಹ ಪ್ರಕರಣಗಳು ಬಯಲಿಗೇ ಬಂದಿಲ್ಲ!

ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಸ್ವತಂತ್ರಗೊಳಿಸಿ ಮತ್ತು ಅವುಗಳನ್ನು ಸ್ವಾಯತ್ತಗೊಳಿಸಲು ರಾಜ್ಯ ಬಿಜೆಪಿ ಸರ್ಕಾರವು ಮುಂದಾಗಿರುವ ಬೆನ್ನಲ್ಲೇ ಕಳೆದ ಮೂರು ವರ್ಷಗಳಿಂದಲೂ ರಾಜ್ಯದ ಹಲವು ದೇವಸ್ಥಾನಗಳು ಲೆಕ್ಕಪರಿಶೋಧನೆಯನ್ನೇ ನಡೆಸದಿರುವ ವಿಚಾರವು ಮುನ್ನೆಲೆಗೆ ಬಂದಿದೆ. ಲೆಕ್ಕ ಪರಿಶೋಧನೆಯನ್ನು ನಡೆಸದಿರುವ ಪಟ್ಟಿಯಲ್ಲಿ ಅಗ್ರ ಪಂಕ್ತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಲವು ದೇವಸ್ಥಾನಗಳಿವೆ. ಕಳೆದ 3 ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯನ್ನೇ ನಡೆಸದ ದೇವಸ್ಥಾನಗಳ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ದೇವಾಲಯಗಳಿಗೆ ವರ್ಷಾಸನ ಮತ್ತು ತಸ್ತಿಕ್‌ ರೂಪದಲ್ಲಿ 150.92 ಕೋಟಿ ರು. ಮತ್ತು ಭಕ್ತಾದಿಗಳಿಂದ ದೇವಸ್ಥಾನಗಳು ಲಕ್ಷಾಂತರ ರೂಪಾಯಿಯನ್ನು ಸಂಗ್ರಹಿಸುತ್ತಿವೆ. ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವುದು ಮತ್ತು ಸರ್ಕಾರ ಪ್ರತಿ ವರ್ಷವೂ ನೀಡುತ್ತಿರುವ ಅನುದಾನವು ಹೇಗೆ ಬಳಕೆಯಾಗಿದೆ ಎಂಬುದರ ಲೆಕ್ಕ ನಿರ್ವಹಣೆ ನಡೆಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ.

ಪ್ರತಿಷ್ಠಿತ ಮತ್ತು ಅಪಾರ ಭಕ್ತವೃಂದವನ್ನು ಹೊಂದಿರುವ ದೇವಸ್ಥಾನಗಳು ಕಳೆದ 3 ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯನ್ನೇ ನಡೆಸದಿರುವ ದೇಗುಲಗಳ ಆಡಳಿತ ಮಂಡಳಿಯ ಧೋರಣೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ. ಹಾಗೆಯೇ ಲೆಕ್ಕ ಪರಿಶೋಧನೆಯನ್ನು ನಡೆಸದ ದೇಗುಲಗಳ ಆಡಳಿತ ಮಂಡಳಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದ ಉದಾಹರಣೆಗಳಿಲ್ಲ. ಈ ಸಂಬಂಧ ಸಚಿವೆ ಶಶಿಕಲಾ ಜೊಲ್ಲೆ ಅವರೂ ಸಹ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗೊತ್ತಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 37(2)ರ ಅನ್ವಯ 5 ಲಕ್ಷ ರೂಪಾಯಿ ಅಥವಾ ಹೆಚ್ಚು ಒಟ್ಟು ವಾರ್ಷಿಕ ಆದಾಯವಿರುವ ಸಂಘಗಳ ಸಂದರ್ಭದಲ್ಲಿ ಲೆಕ್ಕಪತ್ರಗಳನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಲೆಕ್ಕ ಪರಿಶೋಧನೆ ಮಾಡಿಸಬೇಕು. ಅದರನ್ವಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಪ್ರವರ್ಗ ಎ ಮತ್ತು ಬಿ ಅಧಿಸೂಚಿತ ದೇವಾಲಯಗಳ ಲೆಕ್ಕಪರಿಶೋಧನೆಯನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಮಾಡಿಸಲಾಗುತ್ತಿದೆ.

ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿಯಮಗಳಲ್ಲಿ ಅವಕಾಶಗಳಿಲ್ಲದಿದ್ದರೂ ಲೆಕ್ಕ ಪರಿಶೋಧನೆ ವರದಿಗೆ ಅನುಪಾಲನ ವರದಿ ಸಲ್ಲಿಸಬೇಕು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 39(1)ರ ಅನ್ವಯ ಲೆಕ್ಕ ಪರಿಶೋಧಕನು ಸೂಚಿಸಿದ ಯಾವುದೇ ದೋಷಗಳು ಮತ್ತು ಅಕ್ರಮಗಳನ್ನು ಸರಿಪಡಿಸಿ ಆ ಬಗೆಗಿನ ವರದಿಯನ್ನು ತನ್ನ ವಿವರಣೆ ಮತ್ತು ಅಗತ್ಯಪಡಿಸಲಾದ ಯಾವೊಬ್ಬ ಇತರ ವ್ಯಕ್ತಿಯ ವಿವರಣೆಯೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸುವುದು ಅಂಥ ಅಧ್ಯಕ್ಷ, ವ್ಯವಸ್ಥಾಪಕ ಅಥವಾ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಇತರ ವ್ಯಕ್ತಿಯ ಕರ್ತವ್ಯವೂ ಹೌದು.

ಅದರನ್ವಯ ಧಾರ್ಮಿಕ ದತ್ತಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ಅಧಿಸೂಚಿತ ದೇವಾಲಯಗಳ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಸ್ತಾಪಿಸಿರುವ ಆಕ್ಷೇಪಣೆ ಕಂಡಿಕೆಗಳಿಗೆ ಅನುಪಾಲನ ವರದಿ ಸಲ್ಲಿಸಲು ಹಾಗೂ ವಸೂಲಾತಿಗೆ ಸೂಚಿಸಿರುವ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ಸಂಸ್ಥೆಗೆ ಪಾವತಿಸಬೇಕು. ಎಂದು 2020ರ ಮಾರ್ಚ್ 6ರಂದು ಧಾರ್ಮಿಕ ದತ್ತಿ ಇಲಾಖೆ ಅಯುಕ್ತರು ಪತ್ರ ಬರೆದಿರುವುದು ತಿಳಿದು ಬಂದಿದೆ.

ಅದೇ ರೀತಿ 2021ರ ನವೆಂಬರ್‌ 16ರಂದು ನಡೆದಿರುವ ಇಲಾಖಾಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯಾಯ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಡಿಟ್‌ ವರದಿಗಳಲ್ಲಿನ ಆಕ್ಷೇಪಣೆಗಳಿಗೆ ಅನುಪಾಲನಾ ವರದಿಯಲ್ಲಿನ ಜನವರಿ 2022ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ ದೇವಾಲಯಕ್ಕೆ ಆರ್ಥಿಕ ನಷ್ಟಕ ಉಂಟಾಗಿರುವ ಮೊತ್ತವನ್ನು ಆಯಾಯ ಅಧಿಕಾರಿ, ಸಿಬ್ಬಂದಿಗಳಿಂದಲೇ ವಸೂಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ ಎಂದು ಗೊತ್ತಾಗಿದೆ.

ಪ್ರವರ್ಗ ಎ ದೇವಾಲಯಗಳ ವಿವರ

ಚಾಮರಾಜನಗರದ ಬಿಳಿಗಿರಿ ರಂಗನಾಥ, ಮೂಡಿಗೆರೆಯ ಗುರುದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ದಲ್ಲಿ 2018-19, 2019-20, 2020-21ನೇ ಸಾಲಿನ ಮೂರೂ ವರ್ಷಗಳಲ್ಲೂ ಲೆಕ್ಕ ಪರಿಶೋಧನೆ ನಡೆದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನ ಶರವೂರು ದುರ್ಗಾಪರಮೇಶ್ವರಿ, ಸೋಮೇಶ್ವರದ ಸೋಮನಾಥ, ಕದ್ರಿಯ ಮಂಜುನಾಥ , ಪಣಂಬೂರಿನ ನಂದನೇಶ್ವರ, ಪಾಂಡೇಶ್ವರದ ಮಹಾಲಿಂಗೇಶ್ವರ, ಬೋಳಾರದ ಮಾರಿಯಮ್ಮ ಮಹಿಷಮರ್ದಿನಿ, ಹಳೆಯಂಗಡಿಯ ಸುಬ್ರಹ್ಮಣ್ಯ , ಶಿಬರೂರು ದೇಲಂತಬೆಟ್ಟು ಕೊಡಮಂತಾಯ ದೈವಸ್ಥಾನ, ಬಂಟ್ವಾಳ ತಾಲೂಕಿನ ಪೊಳಲಿಯ ರಾಜರಾಜೇಶ್ವರಿ, ನಂದಾವರದ ವಿನಾಯಕ ಶಂಕರನಾರಾಯಣ, ಕಾವಳಮುಡ್ನೂರು ಕಾರಿಂಜೇಶ್ವರ, ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ, ಬಂಟ್ವಾಳದ ಪೊರ್ಣೋಳಿಬೈಲ್‌ ಕಲ್ಲುರ್ಟಿ, ಆದ್ಯಪಾಡಿಯ ಆದಿನಾಥೇಶ್ವರ , ತಲಪಾಡಿಯ ದುರ್ಗಾಪರಮೇಶ್ವರಿ, ಕಂಕನಾಡಿ ಕಾವುಬೈಲು ಪಂಚಲಿಂಗೇಶ್ವರ, ಬಲಜಿಲಕೇರಿ ಕರಣೀಯ ಹನುಮಂತ, ಇಡ್ಯಾದ ಮಹಾಲಿಂಗೇಶ್ವರ, ಕೇಮಂತೂರು ಶ್ರೀ ಅದಿ ಜನಾರ್ಧನ, ಕುಂದಾಪುರದ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ , ಉಪ್ಪುಂದದ ದುರ್ಗಾಪರಮೇಶ್ವರಿ, ಅಂಬಲಪಾಡಿಯ ಜನಾರ್ಧನ ಮತ್ತು ಮಹಾಕಾಳಿ, ಉಡುಪಿಯ ಅನಂತೇಶ್ವರ ಚಂದ್ರಮೌಳೇಶ್ವರ, ಉಡುಪಿಯ ಪಡುಬಿದ್ರೆಯ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯು ಲೆಕ್ಕ ಪರಿಶೋಧನೆ ನಡೆಸಿಲ್ಲ.

ಬ್ರಹ್ಮಾವರದ ನೀಲಾವರದ ಮಹಿಷ ಮರ್ದಿನಿ, ಕೋಟದ ಅಮೃತೇಶ್ವರಿ, ಹಿರಿಯಡ್ಕದ ವೀರಭದ್ರ, ಕಾಪು ಜನಾರ್ಧನ, ಎಲ್ಲೂರಿನ ವಿಶ್ವೇಶ್ವರ, ಕಡಿಯಾಳಿಯ ಮಹಿಷ ಮರ್ದಿನಿ, ಗುಡ್ಡೆಟ್ಟು ಶ್ರೀ ವಿನಾಯಕ, ಸೇನಾಪುರದ ಸುಬ್ರಹ್ಮಣ್ಯ, ಮುಂಡ್ಕೂರಿನ ದುರ್ಗಾಪರಮೇಶ್ವರಿ, ಕೋಟೇಶ್ವರದ ಕೋಟಿಲಿಂಗೇಶ್ವರ, ಶಿರಸಿಯ ಮಾರಿಕಾಂಬ, ಇಡಗುಂಜಿಯ ವಿನಾಯಕ, ಭಟ್ಕಳದ ಸೂಸಗಡಿ ಚನ್ನಪಟ್ಟಣ ಹನುಮಂತ, ಶಿರಾಲಿಯ ದುರ್ಗಾಪರಮೇಶ್ವರಿ, ಶಿರಸಿ ತಾಲೂಕಿನ ಮಹಾಗಣಪತಿ ಶಂಕರ, ಮಂಜುಗುಣಿಯ ವೆಂಕರಮಣ, ಬಾಡ, ಗುಡೋ ಅಂಗಡಿಯ ಕಾಂಚಿಕಾ ಪರಮೇಶ್ವರಿ, ಬನವಾಸಿಯ ಮಧುಕೇಶ್ವರ, ಭಟ್ಕಳದ ಮುರ್ಡೇಶ್ವರ, ದೇವಸ್ಥಾನದಲ್ಲಿ 2018-19, 2019-20, 2020-21ನೇ ಸಾಲಿನ ಮೂರೂ ವರ್ಷಗಳಲ್ಲೂ ಲೆಕ್ಕ ಪರಿಶೋಧನೆ ಆಗಿಲ್ಲ.

ಅದೇ ರೀತಿ ಹಾಸನದ ಚೌಡೇಶ್ವರಿ, ಕೋಲಾರದ ಸೀತಿ ಶ್ರೀ ಪತೇಶ್ವರ ಭೈರವೇಶ್ವರ, ಪಾಂಡವಪುರದ ಡಿಂಕಾದಮ್ಮ ಮತ್ತು ಮಾರಮ್ಮ, ಮಳವಳ್ಳಿಯ ಮುತ್ತತ್ತಿ ಶ್ರೀ ಆಂಜನೇಯ, ಕೆ ಅರ್‌ ಪೇಟೆ ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ಕಲ್ಲುವೀರನಹಳ್ಳಿಯ ಮತ್ತಿ ತಾಳೇಶ್ವರ, ಬಲ್ಲೇನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದಲ್ಲಿ ಕಳೆದ ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆ ನಡೆದಿಲ್ಲ. ಇನ್ನು ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಯ ಶ್ರೀ ಭೂತರಾಯ ಚೌಡೇಶ್ವರಿ, ಹಜರತ್‌ ಸಾದತ್‌ ಆಲಿ ದರ್ಗಾ, ಕುಣಿಗಲ್‌ನ ಹುಲಿಯೂರಮ್ಮ, ಪಾವಗಡದ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿಯೂ ಕಳೆದ ಮೂರು ವರ್ಷಗಳಿಂದ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂಬುದು ಗೊತ್ತಾಗಿದೆ.

ಸುಳ್ಯದ ಚನ್ನಕೇಶವ ದೇವಸ್ಥಾನ, ತೋಡಿಕಾನದ ಮಲ್ಲಕಾರ್ಜುನ ದೇವಸ್ಥಾನ, ಪರಿವಾರ ಪಂಚಲಿಂಗೇಶ್ವರ, ಹರಿಹರೇಶ್ವರ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಆಗಿಲ್ಲ.

ಕಟೀಲು ದುರ್ಗಾಪರಮೇಶ್ವರಿ, ಮಂಗಳಾದೇವಿ, ಬೋಳಾರ ದೇಗುಲದಲ್ಲಿ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ನಡೆದಿಲ್ಲ. ಬಪ್ಪನಾಡು ದುರ್ಗಾ ಪರಮೇಶ್ವರಿ, ಕಾವೂರು ಮಹಾಲಿಂಗೇಶ್ವರ, ವಾಮಂಜೂರಿನ ಅಮೃತೇಶ್ವರ, ಕುಳಾಯಿಯ ಚಿತ್ರಾಪುರ ದುರ್ಗಾಪರಮೇಶ್ವರಿ ದೇಗುಲದಲ್ಲಿ 2019-20, 2020-21ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆ ನಡೆದಿಲ್ಲ. ಕುಡುಪು ಅನಂತ ಪದ್ಮನಾಭ, ದೇವಾಲಯದಲ್ಲಿ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ನಡೆದಿಲ್ಲ.

ಪ್ರವರ್ಗ ಬಿ ಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ತೇರಿನ ಬೀದಿಯಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ, ದೇವನಹಳ್ಳಿಯ ತಾಲೂಕಿನ ಮಹಿಮಾಪುರದ ವೆಂಕಟರಮಣ, ಟಿ ಬೇಗೂರಿನ ಕರಿತಿಮ್ಮರಾಯ, ದೇವನಹಳ್ಳಿಯ ರಂಗನಾಥಸ್ವಾಮಿ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಲಕ್ಷ್ಮಿನಾರಾಯಣ ಆಂಜನೇಯಸ್ವಾಮಿ, ಬಳ್ಳಾರಿಯ ಕುಮಾರಸ್ವಾಮಿ ದೇವಸ್ಥಾನ (ಫೈರ್‌ ಸ್ಟೇಷನ್‌ ಹತ್ತಿರ),ಹರಪನಹಳ್ಳಿಯ ಗೋಣಿಬಸವೇಶ್ವರ ದೇವಸ್ಥಾನ, ಬಳ್ಳಾರಿಯ ಶ್ರೀ ನಾಗೇಶ್ವರಸ್ವಾಮಿ, ಹಡಗಲಿಯ ವೀರಭದ್ರೇಶ್ವರ, ಬೆಚ್ಚದ ಮಲ್ಲೇಶ್ವರ, ಹುಲಿಕುಂಟೆಸ್ವಾಮಿ, ಬೆಳಗಾವಿಯ ಸಮಾದೇವಿ , ಚೋಳಗುಡ್ಡದ ಬನಶಂಕರಿ, ಬಾಗಲಕೋಟೆಯ ತುಳಸಿಗೇರಿಯ ಮಾರುತೇಶ್ವರ, ಮುಚಖಂಡಿಯ ವೀರಭದ್ರೇಶ್ವರ, ಮೂಡಿಗೆರೆಯ ಚನ್ನಕೇಶವಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ಲೆಕ್ಕ ಪರಿಶೋಧನೆ ನಡೆಸಲು ಕ್ರಮ ಕೈಗೊಂಡಿಲ್ಲ.

ಮಂಗಳೂರು ತಾಲೂಕಿನ ಸೂರಿಂಜೆಯ ಪೊನ್ನಗಿರಿ ಮಹಾಲಿಂಗೇಶ್ವರ, ಸುರತ್ಕಲ್‌ನ ಸದಾಶಿವ, ಎಕ್ಕಾರು ಕೋಡಮಂತಾಯ, ಅತ್ತಾವರ ಚಕ್ರಪಾಣಿ ಗೋಪಾಲಕೃಷ್ಣ,ಬೆಳ್ತಂಗಡಿಯ ಆರಂಬೋಡಿಯ ಪಂಚದುರ್ಗಾಪರಮೇಶ್ವರಿ, ಪುತ್ತೂರು ಬಲ್ನಾಡು ದಂಡನಾಯಕ ಉಳ್ಳಾಲ್ತಿ, ದಾವಣಗೆರೆಯ ಶಾಮನೂರಿನ ಆಂಜನೇಯಸ್ವಾಮಿ , ಶಿವಾಜಿ ವೃತ್ತದಲ್ಲಿನ ಆಂಜನೇಯಸ್ವಾಮಿ, ಚನ್ನರಾಯಪಟ್ಟಣದ ಬೂನಕನಬೆಟ್ಟದ ರಂಗನಾಥಸ್ವಾಮಿ, ಬೇಲೂರಿನ ಸಿದ್ದಾಪುರದ ಮಲ್ಲಿಕಾರ್ಜುನ, ಸಕಲೇಶಪುರದ ಶಿರಾಡಿಗಡಿಯ ಚೌಡೇಶ್ವರಿ, ರಾಣೆಬೆನ್ನೂರಿನ ಮಾಲತೇಶ, ಕೆಜಿಎಫ್‌ನ ಬಂಗಾರಪೇಟೆಯ ಪ್ರಸನ್ನ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆದಿಲ್ಲ.

ಕುಂದಾಪುರದ ಕಾಳಾವರದ ಮಹಾಲಿಂಗೇಶ್ವರ, ಮರವಂತೆಯ ಮಹಾರಾಜಸ್ವಾಮಿ, ಎಲ್ಳಾರೆಯ ಕಾರ್ಕಳ ತಾಲೂಕಿನ ಲಕ್ಷ್ಮಿಜನಾರ್ಧನ, ಕಾರ್ಕಳದ ಸೋಮೇಶ್ವರದ ನಾಡ್ವಾಲ್‌ ಮಹಾಗಣಪತಿ, ಮಿಯ್ಯಾರು ಮಹಾಲಿಂಗೇಶ್ವರ, ಕೆಮ್ಮಣ್ಣು ದುರ್ಗಾಪರಮೇಶ್ವರಿ, ಕಾಪು ಮೂರನೇ ಮಾರಿಯಮ್ಮ, ಕುಂಜೂರು ಪಣಿಯಾರು ದುರ್ಗಾಪರಮೇಶ್ವರಿ, ಆರೂರು ವಿಷ್ಣುಮೂರ್ತಿ, ಕಾರ್ಕಳದ ಮಾರಿಯಮ್ಮ, ಕುಂದಾಪುರದ ನಂದಿಕೂರು ದುರ್ಗಾಪರಮೇಶ್ವರಿ, ಕನ್ನರ್ಪಾಡಿಯ ಜಯ ದುರ್ಗಾಪರಮೇಶ್ವರಿ, ಶಂಕರನಾರಾಯಣ, ಕುಂದೇಶ್ವರಸ್ವಾಮಿ, ಬನ್ನಂಜೆಯ ಮಹಾಲಿಂಗೇಶ್ವರ, ಗೋಕರ್ಣದ ಮಹಾಗಣಪತಿ ದೇವಸ್ಥಾನ ದಲ್ಲಿ ಕಳೆದ ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆ ಅಗಿಲ್ಲ.

ಶೃಂಗೇರಿ ತಾಲೂಕಿನ ಋಷ್ಯಶೃಂಗಸ್ವಾಮಿ ದೇವಸ್ಥಾನದಲ್ಲಿ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ಆಗಿಲ್ಲ. ಬೆಂಗಳೂರಿನ ಸೋಮೇಶ್ವರ ದೇವಾಲಯ (ಹಲಸೂರು), ಸುಬ್ರಹ್ಮಣ್ಯ ಸ್ವಾಮಿ ದೇಗುಲ, ಬಾಣಸವಾಡಿಯ ಆಂಜನೇಯ ಸ್ವಾಮಿ ದೇಗುಲ, ಮಲ್ಲೇಶ್ವರಂನ ಲಕ್ಷ್ಮಿ ನರಸಿಂಹಸ್ವಾಮಿ, ಬಳೇಪಟೆಯ ಲಕ್ಷ್ಮಿನರಸಿಂಹಸ್ವಾಮಿ, ಕಾಡು ಮಲ್ಲೇಶ್ವರ, ಆನೇಕಲ್‌ನ ಚಂಪಕಧಾಮಸ್ವಾಮಿ ದೇಗುಲ, ಹೊಸಪೇಟೆಯ ವಿರೂಪಾಕ್ಷೇಶ್ವರ ದೇವಾಲಯ, ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ, ಅದೇ ರೀತಿ ಬಳ್ಳಾರಿ ತಾಲೂಕಿನ ಕುರುಗೋಡು ತಾಲೂಕಿನ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿಯೂ ಲೆಕ್ಕ ಪರಿಶೋಧನೆ ನಡೆದಿಲ್ಲ.

ಕೊಟ್ಟೂರಿನ ಗುರು ಬಸವೇಶ್ವರ ದೇಗುಲ ಮತ್ತು ಬಳ್ಳಾರಿಯ ಕನಕದುರ್ಗಮ್ಮ, ಸವದತ್ತಿ ತಾಲೂಖಿನ ರೇಣುಕಾ ಯಲ್ಲಮ್ಮ ದೇಗುಲವು 2019-20 ಮತ್ತು 2020-21ನೇ ಸಾಲಿನ ಲೆಕ್ಕ ಪರಿಶೋಧನೆ ಆಗಿಲ್ಲ. ಉಜ್ಜಯನಿಯ ಮರುಳಸಿದ್ದೇಶ್ವರ ದೇವಸ್ಥಾನವು 2018-19, 2019-20, 2020-21ನೇ ಸಾಲಿನ ಮೂರೂ ವರ್ಷಗಳಲ್ಲೂ ಲೆಕ್ಕ ಪರಿಶೋಧನೆ ಆಗಿಲ್ಲ. ಲೆಕ್ಕಪರಿಶೋಧನಾ ನಡೆಸಬೇಕು ಎಂದು ಬಳ್ಳಾರಿ ವಲಯದ ಲೆಕ್ಕಪರಿಶೋಧಕರು ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ.

ರಾಮದುರ್ಗ ತಾಲೂಕಿನ ವೀರಭದ್ರ ದೇವಸ್ಥಾನ, ರಾಯಭಾಗದ ಮಾಯಕ್ಕಾ( ಮಹಾಕಾಳಿ) ವು 2018-19, 2019-20, 2020-21ನೇ ಸಾಲಿನ ಲೆಕ್ಕ ಪರಿಶೋಧನೆ ಕೈಗೊಂಡಿಲ್ಲ. ಲೆಕ್ಕ ಪರಿಶೋಧನೆ ನಡೆಸುವಂತೆ ದೇವಾಲಯಗಳ ಅಧ್ಯಕ್ಷರು, ಟ್ರಸ್ಟಿಗಗಳಿಗೆ ಹಲವು ಬಾರಿ ನೋಟೀಸ್‌ ನೀಡಲಾಗಿದೆ. ವರದಿ ಸಲ್ಲಿಸಬೇಕು ಎಂದು ಮೌಖಿಕವಾಗಿ ಅಧಿಕಾರಿಗಳು ಹೇಳಿದ್ದರೂ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂಬುದು ಲಭ್ಯವಿರುವ ಮಾಹಿತಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts