ಅಕ್ಷಯಪಾತ್ರ, ಇತರೆ ಸಂಸ್ಥೆಗಳು ಸರಬರಾಜು ಮಾಡುವ ಆಹಾರ ‘ಬಿಸಿ, ತಾಜಾತನ’ವಿಲ್ಲ!

ಬೆಂಗಳೂರು; ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಪೌಷ್ಠಿಕತೆ ಕೊರತೆ ಇರುವ ಜೈನ ಆಹಾರ ನೀಡುತ್ತಿದೆ ಎಂಬ ಆರೋಪಗಳ ನಡುವೆಯೂ ಬಿಸಿಯೂಟ ಸರಬರಾಜು ಮಾಡುತ್ತಿರುವ ಅಕ್ಷಯ ಪಾತ್ರೆ ಫೌಂಡೇಷನ್‌ ಸೇರಿದಂತೆ ಇನ್ನಿತರೆ ಸರ್ಕಾರೇತರ ಸಂಸ್ಥೆಗಳು ಶಾಲೆಗಳಿಗೆ ಸರಬರಾಜು ಮಾಡುತ್ತಿರುವ ಆಹಾರವು ಬಿಸಿಯಾಗಿರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಕರ್ನಾಟಕದಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯ ಪ್ರಭಾವದ ಕುರಿತು (2016-17) ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಅಧ್ಯಯನ ನಡೆಸಿರುವ ಕಲ್ಬುರ್ಗಿಯಲ್ಲಿರುವ ಹೈದರಾಬಾಧ್‌ ಕರ್ನಾಟಕ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಲರ್ನಿಂಗ್‌ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಅಂಶವನ್ನು ವರದಿಯಲ್ಲಿ ದಾಖಲಿಸಿದೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಕ್ಷಯಪಾತ್ರೆ ಫೌಂಡೇಷನ್‌, (2,072 ಶಾಲೆಗಳು) ಅದಮ್ಯ ಚೇತನಾ (275) ಮತ್ತು ಅನ್ನಪೂರ್ಣ ಟ್ರಸ್ಟ್‌ (111) ಸೇರಿದಂತೆ ಇನ್ನಿತರೆ ಸರ್ಕಾರೇತರ ಸಂಸ್ಥೆಗಳಿಂದ ಶಾಲೆಗಳಿಗೆ ಆಹಾರ ಪೂರೈಕೆ ಮತ್ತು ವಿದ್ಯಾರ್ಥಿಗಳು ಸೇವಿಸುವ ಸಮಯದ ನಡುವಿನ ಅಂತರವು ಬಹಳ ವಿಸ್ತಾರವಾಗಿದೆ. ಹೀಗಾಗಿ ಅನೇಕ ಶಾಲೆಗಳ ಮಕ್ಕಳು ಬಿಸಿ ಮತ್ತು ಬೇಯಿಸಿದ ಊಟದ ಪರಿಕಲ್ಪನೆಯು ಅದರ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಲಾಗಿದೆ.

ಸರ್ಕಾರೇತರ ಸಂಸ್ಥೆಗಳು ಶಾಲಾ ಅಡುಗೆಮನೆ ಹೊಂದಿರುವ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನಿರ್ವಹಿಸುವುದು, ಅಥವಾ 20 ಕಿ ಮೀ ವ್ಯಾಪ್ತಿಯಲ್ಲಿ ನೋಡಲ್‌ ಕೇಂದ್ರ ಅಡುಗೆ ಮನೆ ಸ್ಥಾಪಿಸಬೇಕು. ವಿಕೇಂದ್ರಿಕೃತ ಸಾರಿಗೆ ಮೂಲಕ ಊಟದ ಸಮಯಕ್ಕೆ 15 ನಿಮಿಷಗಳ ಮೊದಲು ಅಹಾರ ಸರಬರಾಜು ಮಾಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ಬಿಸಿಯೂಟವನ್ನು ಸೇವಿಸುವ ಸಮಯದಲ್ಲಿ ಆಹಾರವು ಬಿಸಿಯಾಗಿಲ್ಲ ಎಂದು ಶೇ. 9.3ರಷ್ಟು ಮಕ್ಕಳು ಮೌಲ್ಯಮಾಪನ ತಂಡಕ್ಕೆ ವರದಿ ಮಾಡಿದ್ದಾರೆ. ಶೇ.9.3ರಷ್ಟು ವಿದ್ಯಾರ್ಥಿಗಳು ಬಹುಶಃ ಸರ್ಕಾರೇತರ ಸಂಸ್ಥೆಗಳಿಂದ ಸೇವೆ ಪಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಧ್ಯಾಹ್ನದ ಬಿಸಿಯೂಟ ನೀಡುವ ಹೊತ್ತಿಗೆ ಶೇ. 26.5ರಷ್ಟು ವಿದ್ಯಾರ್ಥಿಗಳು ತಮಗೆ ತುಂಬಾ ಹಸಿವಾಗಿರುತ್ತದೆ ಎಂದು ವರದಿ ಮಾಡಿದ್ದಾರೆ. ಕಲ್ಬುರ್ಗಿ ವಿಭಾಗದ ಜಿಲ್ಲೆಗಳಲ್ಲಿ ಈ ಪ್ರಮಾಣವು ಶೇ. 42.7ರಷ್ಟಿದೆ. ಅನೇಕ ಮನೆಗಳಲ್ಲಿ ಮಕ್ಕಳಿಗೆ ಉಪಹಾರವನ್ನು ನೀಡುವುದಿಲ್ಲ. ಹೀಗಾಗಿ ವಿಶೇಷವಾಗಿ ಬರಪೀಡಿತ ತಾಲೂಕುಗಳಲ್ಲಿ ಶಾಲೆಗಳಲ್ಲಿ ಬೆಳಗಿನ ಉಪಹಾರವನ್ನೂ ನೀಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಂದ್ರ ಅಡುಗೆ ಮನೆಗಳನ್ನು ನಿಷ್ಕ್ರೀಯಗೊಳಿಸಿ ಶಾಲಾ ಆಧಾರಿತ ಅಡುಗೆ ಮನೆಗಳಿಗೆ ಉತ್ತೇಜನ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ.

ಅಕ್ಷಯ ಪಾತ್ರೆ ಫೌಂಡೇಷನ್‌ ಸಂಸ್ಥೆ ಸೇರಿದಂತೆ ಇನ್ನಿತರೆ ಸರ್ಕಾರೇತರ ಸಂಸ್ಥೆಗಳು ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಪೌಷ್ಠಿಕತೆ ಕೊರತೆ ಇರುವ ಜೈನ ಆಹಾರ ನೀಡುತ್ತಿದೆ ಎಂಬ ಆಕ್ಷೇಪ ಕೇಳಿ ಬಂದಿತ್ತು. ಬೆಂಗಳೂರು ನಗರದ 2, 072 ಶಾಲೆಗಳ ಪೈಕಿ 1,199 ಶಾಲೆಗಳಲ್ಲಿ ಶೇ 57.8ರಷ್ಟು ವಿದ್ಯಾರ್ಥಿಗಳ ವ್ಯಾಪ್ತಿ ಹೊಂದಿ ಸೇವೆ ಸಲ್ಲಿಸುತ್ತಿರುವ ಅಕ್ಷಯ ಪಾತ್ರ ಫೌಂಡೇಷನ್‌ ನೀಡುತ್ತಿರುವ ಊಟವನ್ನು ಸ್ಥಗಿತಗೊಳಿಸುವಂತೆ ತೀವ್ರ ಟೀಕೆಗಳು, ಕರೆಗಳು ಬಂದಿದ್ದವು ಎಂಬುದು ವರದಿಯಿಂದ ತಿಳಿದು ಬಂದಿದೆ.

ಅಕ್ಷಯ ಪಾತ್ರ ಫೌಂಡೇಷನ್‌ ತಯಾರಿಸುವ ಮಧ್ಯಾಹ್ನದ ಬಿಸಿಯೂಟ ಮಾದರಿಗಳನ್ನು ಸಿಎಫ್‌ಟಿಆರ್‌ಐ ಮೈಸೂರು ಮತ್ತು ಹೈದರಾಬಾದ್‌ನ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ನ್ಯೂಟ್ರಿಷನ್‌ ಪೌಷ್ಠಿಕಾಂಶ ಮಾನದಂಡಗಳ ಪರೀಕ್ಷೆಗೆ ಕಳಿಸಲಾಗಿತ್ತು. ಅಕ್ಷಯ ಪಾತ್ರ ಫೌಂಡೇಷನ್‌ ಮಧ್ಯಾಹ್ನದ ಬಿಸಿಯೂಟದ ಪೌಷ್ಠಿಕಾಂಶಗಗಳ ಮಾನದಂಡಗಳನ್ನೇ ಅಂಗೀಕರಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಶೇ. 6.2ರಷ್ಟು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯು ದಿನದ ಮೊದಲ ಪ್ರಧಾನ ಆಹಾರವಾಗಿದೆ. (ಪೋಷಕರ ವರದಿಯು ಈ ಅಂಕಿ ಅಂಶವು ಶೇ. 5.0 ಎಂದು ಬಹಿರಂಗಪಡಿಸಿದೆ. ಮಾದರಿಯಲ್ಲಿ 200 ಮಕ್ಕಳು- ಇದನ್ನು ಇಡೀ ರಾಜ್ಯಕ್ಕೆ ಸಾರ್ವತ್ರಿಕವಾಗಿಸಿದರೆ ಈ ಅಂಕಿ ಲಕ್ಷಗಳಾಗುತ್ತದೆ)

ಶೇ. 49.0ರಷ್ಟು ಅಂದರೆ 5,158 ವಿದ್ಯಾರ್ಥಿಗಳಲ್ಲಿ 2,527 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಎರಡನೇ ಊಟವಾಗಿದೆ. ಏಕೆಂದರೆ ಅವರು ದಿನಕ್ಕೆ ಕೇವಲ 2 ಊಟಗಳನ್ನು ಮಾತ್ರ ನೀಡಲು ಸಮರ್ಥರಾಗಿದ್ದಾರೆ. ಮಧ್ಯಾಹ್ನದ ಬಿಸಿಯೂಟ ನಂತರ ಅವರು ಮನೆಯಲ್ಲಿ ರಾತ್ರಿ ಊಟಕ್ಕೆ ಅವರು ಕನಿಷ್ಠ 8 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಶೇ 97.5ರಷ್ಟು ಮನೆಗಳಲ್ಲಿ ರಾತ್ರಿ ಊಟ ನೀಡಲಾಗುತ್ತದೆ. ಶೇ. 2.5ರಷ್ಟು ಮಕ್ಕಳು ರಾತ್ರಿ ಊಟ ಪಡೆಯುವುದಿಲ್ಲ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಶಿರಸಿ, ಬಳ್ಳಾರಿ, ಕೊಪ್ಪಳ, ಹಾಸನ ಜಿಲ್ಲೆಗಳಲ್ಲಿನ ಮಕ್ಕಳಿಗೆ ಬೆಳಗಿನ ಉಪಹಾರವಿಲ್ಲ. ಬೆಂಗಳೂರು ದಕ್ಷಿಣ, ಚಿಕ್ಕೋಡಿ, ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲಾ ಮಕ್ಕಳು ಬೆಳಗಿನ ಉಪಹಾರ ಪಡೆಯುತ್ತಾರೆ ಎಂಬುದು ವರದಿಯಿಂದ ಗೊತ್ತಾಗಿದೆ.

ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಮಗಳೂರು, ರಾಮನಗರ, ಕೊಪ್ಪಳ, ಬಳ್ಳಾರಿ, ಕೋಲಾರ, ಹಾಸನ, ಮಧುಗಿರಿ, ಶಿವಮೊಗ್ಗ, ಮಂಡ್ಯ, ವಿಜಯಪುರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಶಿರಸಿ, ಗದಗ್‌, ಬೀದರ್‌, ಯಾದಗಿರಿ, ಬೆಂಗಳೂರು ಉತ್ತರ, ಚಾಮರಾಜನಗರ, ಮೈಸೂರು, ರಾಯಚೂರು, ಹಾವೇರಿ, ಬೆಳಗಾವಿ, ತುಮಕೂರು, ಧಾರವಾಡ ಸೇರಿ ಒಟ್ಟು 26 ಜಿಲ್ಲೆಗಳಲ್ಲಿ ಒಟ್ಟು 1,070 ವಿದ್ಯಾರ್ಥಿಗಳ ಪೈಕಿ 1,028 ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ವಾಪಾಸ್ಸಾದಾಗ ಸಂಜೆ ಲಘು ಉಪಹಾರ ಪಡೆಯವುದಿಲ್ಲ ಎಂದು ವರದಿಯು ಹೇಳಿದೆ.

the fil favicon

SUPPORT THE FILE

Latest News

Related Posts