ಜಾತಿ ತಾರತಮ್ಯ; ಶೇ.16ರಷ್ಟು ಮಕ್ಕಳು ಸ್ವಜಾತಿಯವರೊಂದಿಗೆ ಬಿಸಿಯೂಟ ಸೇವನೆ

ಬೆಂಗಳೂರು; ಜಾತಿ ತಾರತಮ್ಯವನ್ನು ಹೋಗಲಾಡಿಸಿ ಸಾಮಾಜಿಕವಾಗಿ ಸಮನ್ವಯತೆ ಸಾಧಿಸುವ ಆಶಯ ಹೊಂದಿರುವ ಮಧ್ಯಾಹ್ನ ಬಿಸಿಯೂಟ ಸೇವಿಸುವ ಮಕ್ಕಳ ಪೈಕಿ ಶೇ. 16 ರಷ್ಟು ಮಕ್ಕಳು ತಮ್ಮ ಜಾತಿ ಸಂಬಂಧ ಗುಂಪುಗಳೊಂದಿಗೆ ಕುಳಿತುಕೊಳ್ಳುತ್ತಿದ್ದಾರೆ ಎಂಬ ಸಂಗತಿಯನ್ನು ಅಧ್ಯಯನ ವರದಿಯು ಹೊರಗೆಡವಿದೆ.

ಕರ್ನಾಟಕದಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯ ಪ್ರಭಾವದ ಕುರಿತು (2016-17) ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಅಧ್ಯಯನ ನಡೆಸಿರುವ ಕಲ್ಬುರ್ಗಿಯಲ್ಲಿರುವ ಹೈದರಾಬಾದ್‌ ಕರ್ನಾಟಕ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಲರ್ನಿಂಗ್‌ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಯೋಜನೆ ಅನುಷ್ಠಾನದ ಮೇಲೆ ಬೆಳಕು ಚೆಲ್ಲಿದೆ. ಈ ವರದಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಈ ಸಂಸ್ಥೆಯು ಸ್ಥಳ ಸಮೀಕ್ಷೆ ಮೂಲಕ ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಭಾವದ ಕುರಿತು ಅಧ್ಯಯನ ನಡೆದೆ. ‘ ಶೇ. 75.2ರಷ್ಟು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಕುಳಿತುಕೊಳ್ಳುತ್ತಾರೆ. ಶೇ. 16ರಷ್ಟು ವಿದ್ಯಾರ್ಥಿಗಳು ತಮ್ಮ ಜಾತಿ ಸಂಬಂಧ ಗುಂಪುಗಳೊಂದಿಗೆ ಕುಳಿತುಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳಲ್ಲಿ ಜಾತಿ ತಾರತಮ್ಯವನ್ನು ಗಮನಿಸಲಾಗಿದೆ. ಸರಿಯಾದ ಸಮಾಲೋಚನೆ ಮೂಲಕ ಇದನ್ನು ಪ್ರೋತ್ಸಾಹಿಸದಂತೆ ನೋಡಿಕೊಳ್ಳಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಅವರು ಅದೇ ಪ್ರದೇಶದಿಂದ ಶಾಲೆಗೆ ಪ್ರಯಾಣಿಸಬಹುದು ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬಹುದು. ಯಾವುದೇ ಪ್ರಜ್ಞಾಪೂರ್ವಕ ಜಾತಿ ಆದ್ಯತೆ ಇಲ್ಲದಿರಬಹುದು. ಶೇ. 8.8ರಷ್ಟು ವಿದ್ಯಾರ್ಥಿಗಳು ಸ್ವತಂತ್ರರು. ಅವರು ಯಾರೊಂದಿಗಾದರೂ ಕುಳಿತುಕೊಳ್ಳುತ್ತಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಪ್ರಮಾಣ ಹೆಚ್ಚು ಇರತ್ತದೆ. ಕಲ್ಬುರ್ಗಿ ವಿಭಾಗದ ನಿರ್ದಿಷ್ಟ ವಿದ್ಯಾರ್ಥಿಗಳಲ್ಲಿ ಮತ್ತು ಬೆಂಗಳೂರು, ಬೆಳಗಾವಿ ವಿಭಾಗದ ಶಾಲೆಗಳು ಇದನ್ನು ಗಮನ ಹರಿಸಬೇಕಾಗಿದೆ. ,’ ಎಂದು ಮೌಲ್ಯಮಾಪನ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಸಹಪಾಠಿಗಳೊಂದಿಗೆ ಕುಳಿತುಕೊಳ್ಳುವವರಲ್ಲಿ ಪ್ರತಿ ದಿನ ಒಂದೇ ಸಹಪಾಠಿಗಳೊಂದಿಗೆ ಕುಳಿತುಕೊಳ್ಳುವುದಿಲ್ಲ. ಶೇ. 61.9ರಷ್ಟು ಮಂದಿ ಸ್ಥಳಗಳನ್ನು ಬದಲಾಯಿಸುತ್ತಾರೆ. ಸ್ಥಳಗಳನ್ನು ಬದಲಾಯಿಸುವುದು ಬೆಂಗಳೂರಿನಲ್ಲಿ ಹೆಚ್ಚು ಮತ್ತು ಮೈಸೂರುವಿಭಾಗದಲ್ಲಿ ಕಡಿಮೆ. ರಾಜ್ಯ ಸರಾಸರಿಗಿಂತ ಕಡಿಮೆ ಇದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

34 ಶೈಕ್ಷಣಿಕ ಜಿಲ್ಲೆಗಳ 102 ತಾಲೂಕುಗಳನ್ನು ಒಳಗೊಂಡ 510 ಶಾಲೆಗಳ 5,158 ವಿದ್ಯಾರ್ಥಿಗಳು, 2,621 ಪೋಷಕರು, 76 ಶಿಕ್ಷಣಾಧಿಕಾರಿಗಳ, 10 ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಿರುವ ಸಮಗ್ರ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಶಿಕ್ಷಣ ಇಲಾಖೆಯು ವರದಿಯಲ್ಲಿನ ಪ್ರಮುಖ ಶಿಫಾರಸ್ಸುಗಳನ್ನು ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ ಎಂದು ಗೊತ್ತಾಗಿದೆ. ಅದೇ ರೀತಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಕೂಡ ವರದಿಯತ್ತ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

ವಿಶೇಷವಾಗಿ ಹೆಚ್ಚಿನ ಮಟ್ಟದ ಬಡತನ ಹೊಂದಿರುವಂತಹ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಉಪಹಾರ ಒದಗಿಸಬೇಕು ಮತ್ತು ಗ್ರಾಮ ಪಂಚಾಯ್ತಿಮಟ್ಟದ ಶಾಲೆಗಳೊಂದಿಗೆ ಎಲ್ಲಾ ಅಂಗನವಾಡಿಗಳನ್ನು ಶಿಕ್ಷಣದ ಸಮಗ್ರೀಕರಣಕ್ಕಾಗಿ ಸೇರಿಸಬೇಕು, ಏಕದಳ ಬೆಳೆ ಆಧರಿತ ಆಹಾರ ಒದಗಿಸಬೇಕು, ರಾಗಿ ಮುದ್ದೆ, ಜೋಳದ ರೊಟ್ಟಿ, ನವಣೆ, ಬಿಸಿಬೇಳೆಬಾತ್‌ನ್ನು ವಾರದಲ್ಲಿ 2ರಿಮದ 3 ದಿನಗಳವರೆಗೆ ಒದಗಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಪ್ರಾದೇಶಿಕ ಆಹಾರ ಪದ್ಧತಿಗಳನ್ನು ರೂಢಿಗತ ಮಾಡಬೇಕು ಎಂದು ಅಧ್ಯಯನ ವರದಿಯು ಶಿಫಾರಸ್ಸು ಮಾಡಿದೆಯಲ್ಲದೆ ತಾಲೂಕು ಮಟ್ಟದ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಸ್ಪರ್ಧೆಗಳನ್ನು ಸಂಘಟಿಸಬೇಕು ಎಂದೂ ಶಿಫಾರಸ್ಸು ಮಾಡಿದೆ.

ಅಲ್ಲದೆ ಮಧ್ಯಾಹ್ನ ಬಿಸಿಯೂಟದ ಉಸ್ತುವಾರಿ ಮತ್ತು ಮೌಲ್ಯಮಾಪನ ಅಧಿಕಾರಿಗಳಿಗೆ ತರಬೇತಿಯ ಪ್ರಸ್ತುತ ವಿಷಯಗಳಲ್ಲಿ ಆಹಾರದ ಕ್ಯಾಲೋರಿ ಶಕ್ತಿ, ಪೋಷಣೆಯ ಸಾಮರ್ಥ್ಯ ಮತ್ತು ಖನಿಜಾಂಶಗಳ ಜೊತೆಗೆ ಅವಧಿ ಮುಗಿಯುವುದರೊಳಗೆ ಪದಾರ್ಥಗಳನ್ನು ಮೊದಲಿಗೆ ಬಳಸುವ ಆರೋಗ್ಯ ರಕ್ಷಣೆಯ ವೈವಿಧ್ಯ ಆಹಾರ ಪಟ್ಟಿ ಇವುಗಳ ಕುರಿತು ಸೇರಿಸಬೇಕು ಎಂದಿದೆ.

ರಾಜ್ಯದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೊಳಗೊಂಡಂತೆ 54,839 ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 53.48 ಲಕ್ಷ (2018-19 ಸಾಲಿನ ದತ್ತಾಂಶ) ಮಕ್ಕಳಿಗೆ ಬಿಸಿ ತಾಜಾ ಅಡುಗೆ ಮಾಡಿದ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಈ ಅಂಕಿ ಅಂಶವು ಒಟ್ಟು ದಾಖಲಾತಿಯಲ್ಲಿ ಶೇ. 92ರಷ್ಟಿದೆ. ಈ ಅಧ್ಯಯನದ ವ್ಯಾಪ್ತಿಯಿಂದ ಹೊರಗಿರುವ 64,000 ಅಂಗನವಾಡಿ ಮಕ್ಕಳು ಮತ್ತು ಮದರಸವನ್ನೂ ಒಳಗೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು 60;40ರ ಅನುಪಾತದಲ್ಲಿ ಅನುದಾನ ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರಾಜ್ಯ ಸರ್ಕಾರವು 2018-19ರ ಅವಧಿಯಲ್ಲಿ 1,465 ಕೋಟಿ ರು.ಗಳನ್ನು ಖರ್ಚು ಮಾಡಿದೆ. ರಕ್ತಹೀನತೆ ನಿರ್ಮೂಲನೆ, ಅಪೌಷ್ಠಿಕತೆಯ ನಿರ್ಬಂಧನೆ, ಆರೋಗ್ಯ ಮತ್ತು ಪೌಷ್ಟಿಕಾಂಶವನ್ನು ಉತ್ತೇಜಿಸುವುದು, ದಾಖಲಾತಿ ಹಾಗೂ ಉಳಿಸಿಕೊಳ್ಳುವಿಕೆ, ಅಧ್ಯಯನದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಲು ಪ್ರೋತ್ಸಾಹ ನೀಡುವುದು, ಕಲಿಕೆಯ ಸಾಧನ ಮಟ್ಟವನ್ನು ಉತ್ತೇಜಿಸುವುದು ಹಾಗೂ ಆಹಾರ ಭದ್ರತೆಯನ್ನು ಪೋಷಿಸುವುದು ಸಹ ಯೋಜನೆಯ ಮೂಲ ಉದ್ದೇಶವಾಗಿದೆ.

the fil favicon

SUPPORT THE FILE

Latest News

Related Posts