ಬೆಂಗಳೂರು; 2021ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದ ಪಟ್ಟಿಯಲ್ಲಿ ಸಾಹಿತಿ ಕೆ ಎಸ್ ನಿಸಾರ್ ಅಹಮದ್, ದೇವನೂರು ಮಹಾದೇವ, ಎಸ್ ಎಲ್ ಭೈರಪ್ಪ ಸೇರಿದಂತೆ ಸಾಹಿತ್ಯ ಕ್ಷೇತ್ರದ ಹಲವರ ಹೆಸರುಗಳಿದ್ದವು ಎಂಬುದು ಇದೀಗ ಬಹಿರಂಗವಾಗಿದೆ.
2021ನೇ ಸಾಲಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದ ಪಟ್ಟಿಯನ್ನು ‘ದಿ ಫೈಲ್’ ಆರ್‌ಟಿಐ ಮೂಲಕ ಪಡೆದುಕೊಂಡಿದೆ. 2020ರ ಸೆಪ್ಟಂಬರ್ 19ರಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಪಟ್ಟಿಯನ್ನು ಕಳಿಸಿತ್ತು.
ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಾದ ಪಟ್ಟಿಯಲ್ಲಿ ಚಂದ್ರಶೇಖರ್ ಕಂಬಾರ್ ಅವರ ಹೆಸರನ್ನು ಹೊರತುಪಡಿಸಿದರೆ ಮಾತಾ ಬಿ ಮಂಜಮ್ಮ (ಕಲೆ) ಕೆ ವೈ ವೆಂಕಟೇಶ್ (ಕ್ರೀಡೆ), ಡಾ ಬಿ ಎಂ ಹೆಗ್ಡೆ (ವೈದ್ಯಕೀಯ) ಅವರ ಹೆಸರು ಇರಲಿಲ್ಲ. ಚಂದ್ರಶೇಖರ ಕಂಬಾರ ಅವರ ಹೆಸರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
2021ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸಾದ ಪಟ್ಟಿಯಲ್ಲಿ ಹಿರಿಯ ನಟಿ ಬಿ ಸರೋಜಾದೇವಿ (ಕಲೆ), ನಂದನ್ ನಿಲೇಕಣಿ (ವಿಜ್ಞಾನ, ಇಂಜನಿಯರಿಂಗ್), ಡಾ ಎಚ್ ನರಸಿಂಹಯ್ಯ (ಶಿಕ್ಷಣ) ಅವರ ಹೆಸರುಗಳಿದ್ದವು.
ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸಾದ ಪಟ್ಟಿಯಲ್ಲಿ ಸಾಹಿತಿ ದೇವನೂರು ಮಹಾದೇವ, ಬಿ. ಜಯಶ್ರಿ, ಡಾ ಎಸ್ ಎಲ್ ಬೈರಪ್ಪ, ಗಿರೀಶ್ ಕಾಸರವಳ್ಳಿ, ಡಾ ಎಚ್ ಸುದರ್ಶನ್, ಡಾ ಸಿ ಎನ್ ಮಂಜುನಾಥ್, ನಾಡೋಜ ಕೆ ಎಸ್ ನಿಸಾರ್ ಅಹಮದ್ ಅವರ ಹೆಸರಿತ್ತು ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.
ಪದ್ಮಶ್ರೀ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 57 ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು. ಆ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
ಸಾಹಿತ್ಯ ವಿಭಾಗ; ಎಚ್ ಎಸ್ ವೆಂಕಟೇಶ್ ಮೂರ್ತಿ, ಮಲ್ಲೇಫುರಂ ಜಿ ವೆಂಕಟೇಶ್, ಡಾ ವೀಣಾ ಶಾಂತೇಶ್ವರ, ನಾಡೋಜ ಚನ್ನವೀರ ಕಣವಿ, ಡಾ ಹಂಪ ನಾಗರಾಜಯ್ಯ, ಡಾ ವಿಕ್ರಮ್ ಸಂಪತ್, ಡಾ ಶಾಂತ ಇಮ್ರಾಪುರ
ವೈದ್ಯಕೀಯ; ರಾಮಚಂದ್ರ ಸಿ , ಡಾ ಬಿ ಟಿ ರುದ್ರೇಶ್, ಡಾ ವಿ ಜಿ ನಾಡಗೌಡ, ಡಾ ಕೆ ಭುಜಂಗಶೆಟ್ಟಿ
ಕಲೆ; ಶತಾವಾಧಾನಿ ಡಾ ಆರ್ ಗಣೇಶ್, ಹೊಸಹಳ್ಳಿ ಕೇಶವಮೂರ್ತಿ, ಕೆ ಬಿ ಗಣಪತಿ (ಪತ್ರಕರ್ತ), ಹೊಸಹಳ್ಳಿ ಕೇಶವಮೂರ್ತಿ (ಗಮಕ), ಡಾ ಮೋಹನ್ ಆಳ್ವ (ಶಿಕ್ಷಣ) ಡಾ ಜಿ ಜ್ಞಾನಾನಂದ, ಡಾ ಕೃಷ್ಣಪ್ರಸಾದ್ (ವೈದ್ಯಕೀಯ) ಪ್ರಶಾಂತರಾಮ್ ಕೊಠಾರಿ (ಇತರೆ), ಪಂಡಿತ್ ವಿನಾಯಕ ತೊರ್ವಿ (ಹಿಂದೂಸ್ತಾನಿ ಸಂಗೀತ), ಡಾ ಕೆಳದಿ ಗುಂಡಾ ಜೋಯಿಸ್ (ಇತಿಹಾಸ ಸಂಶೋಧನೆ), ಡಾ ಬಿ ಆರ್ ಪೊಲೀಸ್ ಪಾಟೀಲ್ (ಸಾಹಿತ್ಯ ಜನಪದ), ಡಾ ಅಪ್ಪಗೆರೆ ತಿಮ್ಮರಾಜು (ಜಾನಪದ), ಎಡನೂರು ವೆಂಕಟರಾಮ್ ಶಾಸ್ತ್ರಿ (ಸಂಗೀತ), ಡಾ ಕೈಲಾಶ್ ಎ ಜೈನ್ ( ವೈದ್ಯಕೀಯ), ಎ ಎನ್ ಚನ್ನಬಸವಯ್ಯ (ಯಕ್ಷಗಾನ), ಡಾ ಎಸ್ ಚಂದ್ರಶೇಖರ ಶೆಟ್ಟಿ ( ವೈದ್ಯಕೀಯ), ಡಾ ಪಂಚಮಲ್ ದೀನನಾಥ್ ಶೆಣೈ (ನಾಗರಿಕ ಸೇವೆ), ಜ್ಯೋತಿ ಸಣ್ಣಕ್ಕಿ (ಕ್ರೀಡೆ), ಚಿಂದೋಡಿ ಶ್ರೀಕಂಠೇಶ್( ಕಲೆ), ಎನ್ ಆರ್ ಜ್ಞಾನಮೂರ್ತಿ (ಹರಿಕಥಾ ವಿದ್ವಾನ್), ಲಕ್ಷ್ಮಣದಾಸ್ (ಸಂಗೀತ), ಬಾಳಿಪ ನಾರಾಯಣ ಭಾಗವತರು (ಯಕ್ಷಗಾನ), ಗೋವಿಂದ ಭಟ್ ಕೆ ಸೂರಿಕುಮೇರಿ (ಯಕ್ಷಗಾನ), ಬಿ ಸಂಜೀವ ಸುವರ್ಣ (ಯಕ್ಷಗಾನ), ಮುನಿವೆಂಕಟಪ್ಪ (ಸಂಗೀತ), ಜಿ ವಿ ಕೊಟ್ರೇಶಪ್ಪ (ಕಲೆ), ಕಾರಮಂಚಪ್ಪ (ಕಲೆ), ಜಿ ಎಲ್ ಎನ್ ಸಿಂಹ (ಕಲೆ), ಬಿ ಕೆ ಎಸ್ ವರ್ಮಾ (ಕಲೆ), ಜಿ ಬಿ ಹಂಸಾನಂದ ಆಚಾರ್ಯ, ವೆಂಕಟಾಚಲಪತಿ (ಶಿಲ್ಪಕಲೆ), ಕನಕಮೂರ್ತಿ (ಶಿಲ್ಪಕಲೆ), ಲಕ್ಷ್ಮಿನಾರಾಯಣ ಆಚಾರ್ಯ (ಶಿಲ್ಪಕಲೆ), ಎಂ ರಾಮಮೂರ್ತಿ (ಶಿಲ್ಪಕಲೆ), ಎಂ ಎಸ್ ಶೀಲಾ (ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ), ಎ ವಿ ಆನಂದ (ಹಿಂದೂಸ್ತಾನಿ ಶಾಸ್ತ್ರೀಯ), ಇಂದೂದರ ನಿರೋಡಿ (ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ), ಬಿ ಭಾನುಮತಿ ( ಭರತನಾಟ್ಯ), ಲಲಿತಾ ಶ್ರೀನಿವಾಸನ್ (ಭರತನಾಟ್ಯ), ಎಚ್ ಆರ್ ಲೀಲಾವತಿ (ಸಂಗೀತ), ರಘುನಾಥ್ ನಾಕೋಡ (ಸಂಗೀತ) ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು.
2020ರ ಆಗಸ್ಟ್ 22ರಂದು ಸರ್ಕಾರದ ಹೆಚ್ಚುವರಿ ಮುಖ್ಯಕಾಯದರ್ಶಿಗಳಾಗಿದ್ದ ಪಿ ರವಿಕುಮಾರ್ (ಹಾಲಿ ಮುಖ್ಯ ಕಾರ್ಯದರ್ಶಿ) ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ಶಿಫಾರಸ್ಸು ಪಟ್ಟಿಯನ್ನು ತಯಾರಿಸಲಾಗಿತ್ತು. ಇದನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಮೋದಿಸಿದ್ದರು. ‘ಪ್ರಸಕ್ತ ಸಾಲಿನ ಪಟ್ಟಿ ಸಿದ್ಧಪಡಿಸುವಾಗ ಗುಣಾತ್ಮಕ ಪರಿಶೀಲನೆ, ಅವರು ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಪಡೆದಿರುವ ಕುರಿತು ಈ ಹಿಂದಿನ ವರ್ಷಗಳ ಅನುಭವಗಳನ್ನು ಗಮನದಲ್ಲಿರಿಸಿಕೊಂಡು ಸಾಧಕರ ವಿವರಗಳನ್ನು ಶಿಫಾರಸ್ಸು ಮಾಡಲು ನಿರ್ಧರಿಸಲಾಯಿತು,’ ಎಂಬ ಅಂಶ ನಡವಳಿಯಲ್ಲಿ ಉಲ್ಲೇಖವಾಗಿದೆ.