ಅರಸು ಸಂಶೋಧನಾ ಸಂಸ್ಥೆ ಮುಚ್ಚುವುದಿಲ್ಲವೆಂದ ಸರ್ಕಾರ, ಆಯುಕ್ತರ ನಿರ್ಣಯ ಮರೆಮಾಚಿದ್ದೇಕೆ?

ಬೆಂಗಳೂರು; ಸಾಮಾಜಿಕ ನ್ಯಾಯದ ಹರಿಕಾರ ಡಿ ದೇವರಾಜ ಅರಸು ಅವರ ಹೆಸರಿನಲ್ಲಿ 29 ವರ್ಷಗಳ ಹಿಂದೆಯೇ ಸ್ಥಾಪನೆಯಾಗಿರುವ ದೇವರಾಜ ಅರಸು ಸಂಶೋಧನೆ ಸಂಸ್ಥೆಯನ್ನು ಮುಚ್ಚಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯು ನಿರ್ಣಯ ಕೈಗೊಂಡಿತ್ತು ಎಂಬ ಸಂಗತಿಯನ್ನೇ ಮರೆಮಾಚಲು ಸರ್ಕಾರ ಯತ್ನಿಸಿರುವುದು ಇದೀಗ ಬಹಿರಂಗವಾಗಿದೆ.

ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನಪರಿಷತ್‌ನಲ್ಲಿ ಲಿಖಿತ ಉತ್ತರ ನೀಡಿದೆಯಾದರೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯು ಕೈಗೊಂಡಿದ್ದ ನಿರ್ಣಯವನ್ನು ಉತ್ತರದಲ್ಲಿ ಪ್ರಸ್ತಾಪಿಸಿಲ್ಲ. ಅರಸು ಸಂಶೋಧನೆ ಸಂಸ್ಥೆಯನ್ನು ಮುಚ್ಚಲು ಸಭೆ ನಿರ್ಣಯ ಕೈಗೊಂಡಿತ್ತು ಎಂಬ ಸಂಗತಿಯನ್ನೇ ಮರೆಮಾಚುವ ಮೂಲಕ ಸದನವನ್ನು ದಾರಿತಪ್ಪಿಸಲು ಯತ್ನಿಸಿದೆಯೇ ಎಂಬ ಅನುಮಾನಕ್ಕೂ ದಾರಿಮಾಡಿಕೊಟ್ಟಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಅವರ ಅಧ್ಯಕ್ಷತೆಯಲ್ಲಿ 2021ರ ಅಕ್ಟೋಬರ್‌ 8ರಂದು ನಡೆದಿದ್ದ ಸಭೆಯಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಣಯ ಕೈಗೊಂಡಿದೆ. ಈ ಕುರಿತು ‘ದಿ ಫೈಲ್‌’ 2021ರ ಅಕ್ಟೋಬರ್‌ 29ರಂದು ಪ್ರಕಟಿಸಿದ್ದ ವರದಿಯು ಬಹಿರಂಗಗೊಳಿಸಿತ್ತು.

2021ರ ಸೆಪ್ಟಂಬರ್‌ 29ರಿಂದ ಅಕ್ಟೋಬರ್‌ 12ರವರೆಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆದಿದ್ದ ಸಭೆಯ ಸಭೆ ನಡವಳಿಗಳನ್ನು ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿದೆ.

ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ‘ಡಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ,’ ಎಂದು ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ 2021ರ ಡಿಸೆಂಬರ್‌ 17ರಂದು ಲಿಖಿತ ಉತ್ತರ ಒದಗಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ದೇವರಾಜ ಅರಸು ಸಂಶೋಧನೆ ಸಂಸ್ಥೆ ಮತ್ತು ಆರ್ಯ ವೈಶ್ಯ ನಿಗಮ ಮಂಡಳಿಯನ್ನು ಮುಕ್ತಾಯಗೊಳಿಸುವ ಕುರಿತಾದ ವಿಷಯವು ಮೊದಲನೇ ಕಾರ್ಯಸೂಚಿಯಾಗಿತ್ತು. ದೇವರಾಜ ಅರಸು ಸಂಶೋಧನೆ ಸಂಸ್ಥೆ ಮತ್ತು ಆರ್ಯ ವೈಶ್ಯ ನಿಗಮ ಮಂಡಳಿಯನ್ನು ಯಾವ ಕಾರಣಗಳಿಗಾಗಿ ಮುಕ್ತಾಯಗೊಳಿಸಲಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಸೂಕ್ತ ಸಮರ್ಥನೆ ನೀಡಿರಲಿಲ್ಲ.

2021ರ ಅಕ್ಟೋಬರ್‌ 8ರಂದು ನಡೆದಿದ್ದ ಸಭೆಯಲ್ಲಿಯೇ ಅಭಿವೃದ್ಧಿ ಆಯುಕ್ತರು ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸಲು ಮಾಡಿದ್ದ ಶಿಫಾರಸ್ಸನ್ನು ಮುಚ್ಚಿಡಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿದ್ದ ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರು ಬಿಜೆಪಿ ಮುಖಂಡರನ್ನು ಕುಟುಕಿದ್ದರು. ಮತ್ತೋರ್ವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ‘ದಿ ಫೈಲ್‌’ 2021ರ ನವಂಬರ್‌ 9ರಂದು ವರದಿ ಪ್ರಕಟಿಸಿತ್ತು.

‘ಸಾಮಾಜಿಕ ನ್ಯಾಯಕ್ಕೆ ಪೂರಕವಾದ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಿದರೆ ಆರ್‌ಎಸ್‌ಎಸ್‌ನಲ್ಲಿ ನಿಮಗೆ ಯಾವ ಬಹುಮಾನ ಕೊಡುತ್ತಾರೆ,’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಎಚ್‌ ಸಿ ಮಹದೇವಪ್ಪ ಅವರು ‘ ನಿಮ್ಮ ಕೆಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ನೋಡುತ್ತಿದ್ದರೆ ನಿಮಗೆ ಆಡಳಿತ ನಡೆಸಲು ಬರುವುದಿಲ್ಲ. ನಿಮ್ಮ ಹುಚ್ಚು ನಿರ್ಧಾರದಿಂದ ಹಿಂದುಳಿದ ವರ್ಗದ ಜನರ ಹಿತವನ್ನು ಬಲಿ ಕೊಡುವ ಬದಲು ರಾಜೀನಾಮೆ ನೀಡಿ ಹೊರಟುಬಿಡಿ,’ ಎಂದು ಟ್ವೀಟ್‌ ಮಾಡಿದ್ದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿಶಾ ಶರ್ಮ ಅವರ ಅಧ್ಯಕ್ಷತೆಯಲ್ಲಿ 2021ರ ಅಕ್ಟೋಬರ್‌ 8ರಂದು ನಡೆದಿದ್ದ ಸಭೆಯಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಕುರಿತು ‘ದಿ ಫೈಲ್‌’ 2021ರ ಅಕ್ಟೋಬರ್‌ 29ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಅದೇ ರೀತಿ ‘ಹಿಂದುಳಿದ ವರ್ಗಗಳಲ್ಲಿರುವ ಅಲೆಮಾರಿಗಳು, ಅರೆ ಅಲೆಮಾರಿಗಳು ಹಾಗೂ ಅತೀ ಹಿಂದುಳಿದ ಸಮುದಾಯಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತಹ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಖಂಡನೀಯ,’ ಎಂದೂ ಟ್ವೀಟ್‌ ಮಾಡಿದ್ದರು.

ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು 2021ರ ನವೆಂಬರ್‌ 5ರಂದು ಪತ್ರ ಬರೆದಿದ್ದಾರೆ. ‘ಹಿಂದುಳಿದ ಜನಾಂಗಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಇಂತಹ ಸಂಸ್ಥೆಯನ್ನು ಮುಚ್ಚುವುದರಿಂದ ಅತ್ಯಂತ ಹಿಂದುಳಿದ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಮತ್ತು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಅಧ್ಯಯನದ ಮೇಲೆ ಪರಿಣಾಮ ಬೀರಲಿದೆ. ಸಮುದಾಯಗಳು ಸಬಲೀಕರಣಗೊಳ್ಳದೆ ಹಿಂದುಳಿಯಲು ಸರ್ಕಾರವೇ ನೇರ ಕಾರಣವಾಗಲಿದೆ,’ ಎಂದು ಎಚ್ಚರಿಸಿದ್ದರು.

ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸುವ ನಿರ್ಧಾರವನ್ನು ಕೈಬಿಟ್ಟು ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಸ್ಥೆಯನ್ನು ಬಳಸಿಕೊಂಡು ಹಿಂದುಳಿದ ವರ್ಗದ ಮಹಿಳೆಯರ ಅರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನ, ಶೈಕ್ಷಣಿಕ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದರ ಮೂಲಕ ನೂತನ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.

ಅದೇ ರೀತಿ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಕೂಡ ಸರ್ಕಾರದ ನಿರ್ಣಯವನ್ನು ಖಂಡಿಸಿದ್ದಾರೆ. ಈ ಕುರಿತು 2021ರ ನವೆಂಬರ್‌ 6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.

‘ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡುವ ಮೂಲಕ ತಮ್ಮ ಸರ್ಕಾರ ರಾಜ್ಯದ ಹಿಂದುಳಿದ ವರ್ಗಗಳ ವಿರುದ್ಧವೆಂಬ ಸಂದೇಶವನ್ನು ಕೊಡಲು ಹೊರಟಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವ ಈ ಸಂಸ್ಥೆಯನ್ನು ಮುಚ್ಚುವ ಹುನ್ನಾರದಲ್ಲಿ ಶೋಷಿತ ವರ್ಗಗಳನ್ನು ಮತ್ತಷ್ಟು ಅವನತಿಗೆ ತಳ್ಳುವ ದುರುದ್ಧೇಶವಿದೆ,’ ಎಂದು ಸಂದೇಹ ವ್ಯಕ್ತಪಡಿಸಿದ್ದರು.

ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡಿರುವ ಅಭಿವೃದ್ಧಿ ಆಯುಕ್ತರ ತೀರ್ಮಾನವನ್ನು ಹಿಂದಕ್ಕೆ ಪಡೆದು ಇಂತಹ ತಪ್ಪು ತೀರ್ಮಾನಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಸಂಸ್ಥೆಯನ್ನು ಮುಚ್ಚುವ ಯಾವುದೇ ಕ್ರಮ ರಾಜ್ಯದ ಹಿಂದುಳಿದ ವರ್ಗಗಳ ವಿರೋಧಿ ನೀತಿಯಾಗಿದೆ. ರಾಜಕೀಯ ಕಾರಣಗಳಿಗಾಗಿ ಅಥವಾ ಅಧಿಕಾರಿಗಳ ತಪ್ಪಿಗಾಗಿ ದೇವರಾಜ ಅರಸರ ಹೆಸರಿಗೆ ಕಳಂಕ ತರದೇ ಸಂಶೋಧನಾ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು,’ ಎಂದು ಪತ್ರದಲ್ಲಿ ರಮೇಶ್‌ಬಾಬು ಅವರು ಕೋರಿದ್ದರು.

ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ 2019-20 ಮತ್ತು 2020-21ನೇ ಸಾಲಿನಲ್ಲಿ ಯೋಜನಾ ಕಾರ್ಯಕ್ರಮಗಳಿಗೆ ತಲಾ 25.00 ಲಕ್ಷ ರು ಗಳನ್ನು ಬಿಡುಗಡೆ ಮಾಡಲಾಗಿತ್ತು. ಒಟ್ಟು 23.83 ಲಕ್ಷ ರು.ಗಳ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿದ್ದ ಯೋಜನಾ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸುತ್ತಿರುವ ಹೊಸ್ತಿಲಲ್ಲೇ ದೇವರಾಜ ಅರಸು ಸಂಶೋಧನೆ ಸಂಸ್ಥೆಯನ್ನು ಮುಕ್ತಾಯಗೊಳಿಸಲು ಸಭೆಯು ಕೈಗೊಂಡ ನಿರ್ಣಯವು ಮುನ್ನೆಲೆಗೆ ಬಂದಿತ್ತು. ಅಲ್ಲದೆ ಈ ನಿರ್ಣಯವು ಹಿಂದುಳಿದ ವರ್ಗಗಳಿಂದ ಟೀಕೆಗೆ ಗುರಿಯಾಗಿತ್ತು.

the fil favicon

SUPPORT THE FILE

Latest News

Related Posts