ಬಿಜೆಪಿ ಸರ್ಕಾರದ ಅವಧಿಯಲ್ಲೇ ಇ-ಕ್ಯಾಂಪಸ್‌ ಗುತ್ತಿಗೆ ಹಗರಣ; ಏಳು ವರ್ಷವಾದರೂ ಕ್ರಮವಿಲ್ಲ

ಬೆಂಗಳೂರು; ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಕ್ಯಾಂಪಸ್‌ನ ಸಂಪನ್ಮೂಲ ನಿರ್ವಹಣೆಯ ತಂತ್ರಾಂಶ ಮತ್ತು ಹೈಎಂಡ್‌ ತಂತ್ರಜ್ಞಾನ ರೂಪಿಸುವ ಸಂಬಂಧ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪದೋಷ ಮತ್ತು ತಾಂತ್ರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತಪಾಸಣೆ ಸಮಿತಿ ರಚನೆಯಾಗಿ ಎರಡೂವರೆ ವರ್ಷಗಳು ಕಳೆದರೂ ತನಿಖೆಯೇ ಆರಂಭವಾಗಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಹೊರಗೆಡವಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಮಿತಿಯು ಹದಿನೈದನೆ ವಿಧಾನಸಭೆಯ ಐದನೇ ವರದಿಯನ್ನು ಮಂಡಿಸಿದೆ. ಈ ವರದಿಯು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿನ ಹಲವು ಲೋಪದೋಷಗಳನ್ನು ಬಹಿರಂಗಗೊಳಿಸಿದೆ. ಈ ಪ್ರಕರಣವು ಯಡಿಯೂರಪ್ಪ ಅವರು 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿತ್ತು. ಈ ಕುರಿತು 2014-15ರಲ್ಲಿಯೇ ಸಿಎಜಿ ವರದಿ ಸಲ್ಲಿಸಿದ್ದರೂ ಹಾಲಿ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಾಗಿರುವ 2.68 ಕೋಟಿ ಅನುತ್ಪಾದಕ ಹೂಡಿಕೆ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಶಿಫಾರಸ್ಸು ಮಾಡಿರುವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು, ಈ ಸಂಬಂಧ ಮಾಡಿರುವ ಶಿಫಾರಸ್ಸುಗಳನ್ನು 6 ತಿಂಗಳುಗಳ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಇಲಾಖೆಗೆ ನಿರ್ದೇಶಿಸಿದೆ.

ಟೆಂಡರ್‌ಗಳನ್ನು ಆಹ್ವಾನಿಸುವ ಪೂರ್ವದಲ್ಲಿ ವೈದ್ಯಕೀಯ ಸಂಸ್ಥೆಯಲ್ಲಿರುವ ವ್ಯವಹಾರ ಪದ್ಧತಿಗಳನ್ನು ಅಧ್ಯಯನ ಮಾಡಿರಲಿಲ್ಲ ಹಾಗೂ ಬಳಕೆದಾರರ ಅವಶ್ಯಕತೆಗಳನ್ನು ಅಂತಿಮಗೊಳಿಸಿರಲಿಲ್ಲ ಎಂಬುದು ಸೇರಿದಂತೆ ಮಹಾಲೇಖಪಾಲರು ಹಲವು ಆಕ್ಷೇಪಣೆಗಳನ್ನು ಎತ್ತಿದ್ದರು. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಮಗ್ರ ವರದಿ ನೀಡಲು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಭಾಗದಲ್ಲಿ ಕಾಲೇಜುಗಳ ತಪಾಸಣೆ ಸಮಿತಿಯನ್ನು 2019ರ ಮೇ 16ರಂದು ರಚಿಸಲಾಗಿತ್ತು. ಆದರೆ ಈ ಸಮಿತಿಯು ರಚನೆಯಾಗಿ ಎರಡೂವರೆ ವರ್ಷಗಳಾದರೂ ತನಿಖೆಯನ್ನೇ ಆರಂಭಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ದಂತ ವೈದ್ಯಕೀಯ, ಮೈಸೂರು ವೈದ್ಯಕೀಯ, ರಾಯಚೂರು, ಬೆಳಗಾವಿ ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟಾರೆ 2.68 ಕೋಟಿ ರು. ಹೂಡಿಕೆಯು ಅನುತ್ಪಾದಕವಾಗಿತ್ತು ಎಂದು ಸಿಎಜಿಯು 2014-15ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಕ್ಯಾಂಪಸ್‌ನ ಸಂಪನ್ಮೂಲ ನಿರ್ವಹಣೆ ಮೇಲಿನ ತಂತ್ರಾಂಶ ಮತ್ತು ಹೈಎಂಡ್‌ ತಂತ್ರಜ್ಞಾನವನ್ನು ನಿರೂಪಿಸಲು ವ್ಯಾಪ್ಸ್‌ ಟೆಕ್ನೋ ಸಾಫ್ಟ್‌ ಪ್ರೈವೈಟ್‌ ಲಿಮಿಟೆಡ್‌ ಸಂಸ್ಥೆಗೆ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರ ಶಿಫಾರಸ್ಸಿನಂತೆ ಆಗಸ್ಟ್‌ 2008ರಲ್ಲಿ ಅವಕಾಶ ನೀಡಲಾಗಿತ್ತು ಎಂಬುದು ಪಿಎಸಿ ವರದಿಯಿಂದ ತಿಳಿದು ಬಂದಿದೆ.

ಈ ಕಂಪನಿಯು ತನ್ನ ಎಲ್ಲಾ ಮಾಡಲ್‌ಗಳಿಗೆ ದರಗಳನ್ನು ತಿಳಿಸಿತ್ತು. ಮೈಸೂರು ಮತ್ತು ಬೆಳಗಾವಿ ವಿಜ್ಞಾನ ಸಂಸ್ಥೆಗಳಲ್ಲಿ ಆ ಸಂಸ್ಥೆಯ ಅಂತಹ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದನ್ನು ತಿಳಿಸಿತ್ತು. ಅಲ್ಲದೆ ಸಂಸ್ಥೆಯ ಪ್ರಸ್ತಾವನೆಯನ್ನು ತಾಂತ್ರಿಕ ತಜ್ಞರು ಶಿಫಾರಸ್ಸು ಮಾಡಿದ್ದರು. ಟೆಂಡರ್‌ ಪರಿಶೀಲನಾ ಸಮಿತಿಯ ಅನುಮೋದನೆ ಮೇರೆಗೆ ವ್ಯಾಪ್ಸ್‌ ಟೆಕ್ನೋ ಸಾಫ್ಟ್‌ ಪ್ರೈವೈಟ್‌ ಲಿಮಿಟೆಡ್‌ಗೆ ಒಟ್ಟು 70.18 ಲಕ್ಷ ವೆಚ್ಚಕ್ಕೆ ಗುತ್ತಿಗೆ ನೀಡಿತ್ತು.

ಟೆಂಡರ್‌ಗಳನ್ನು ಆಹ್ವಾನಿಸುವ ಪೂರ್ವದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿನ ವ್ಯವಹಾರ ಪದ್ಧತಿಯನ್ನು ಅಧ್ಯಯನ ಮಾಡದಿರುವ ಕುರಿತು ಮಹಾಲೇಖಪಾಲರ ವರದಿಯಲ್ಲಿ ಆಕ್ಷೇಪಿಸಿದ್ದರೂ ಇಲಾಖೆಯು ಅಂತಹ ಪ್ರಮುಖ ಲೋಪದೋಷಗಳಿಗೆ ಯಾವುದೇ ಉತ್ತರವನ್ನು ಸಲ್ಲಿಸಿರಲಿಲ್ಲ ಎಂದು ಪಿಎಸಿ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

‘ವ್ಯಾಪ್ಸ್‌ ಸಂಸ್ಥೆಯು ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ ಸಂಸ್ಥೆಯಾಗಿದ್ದು ಆ ಸಂಸ್ಥೆಯಿಂದ ಯೋಜನೆಯ ಅನುಷ್ಠಾನವು ಕಾರ್ಯಸಾಧುವಾಗುವುದಿಲ್ಲ ಎಂದು ಇಲಾಖೆಯ ಹಣಕಾಸು ಸಮಿತಿಯು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೂ ಯೋಜನೆಯನ್ನು ಇದೇ ಸಂಸ್ಥೆಯ ಮೂಲಕವೇ ಅನುಷ್ಠಾನಗೊಳಿಸಿದ್ದು ಸರಿಯಾದ ಕ್ರಮವಾಗಿರಲಿಲ್ಲ,’ ಎಂದು ಪಿಎಸಿಯು ವಿಶ್ಲೇಷಿಸಿದೆ.

ಅದೇ ರೀತಿ ಮೈಸೂರು ವೈದ್ಯಕೀಯ ಸಂಸ್ಥೆ ಮತ್ತು ಬೆಳಗಾವಿ ವಿಜ್ಞಾನ ಸಂಸ್ಥೆಯಲ್ಲಿ ಯೋಜನೆ ಅನುಷ್ಠಾನವು 2010ರ ಏಪ್ರಿಲ್‌ನಲ್ಲಿ ಪ್ರಾರಂಭವಾಗಿದ್ದರೂ 2010ರ ಮೇನಲ್ಲಿ ನೀಡಿದ್ದ ತಾಂತ್ರಿಕ ಮೌಲ್ಯಮಾಪನ ವರದಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಪ್ಪಾಗಿ ನಮೂದಿಸಿರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ತಪ್ಪಾಗಿ ಮಾಹಿತಿ ಒದಗಿಸಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

2012ರ ಜನವರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಯೋಜನೆಯ ತೃಪ್ತಿದಾಯಕ ಅನುಷ್ಠಾನಕ್ಕಾಗಿ ಮೂರನೇ ಖಾಸಗಿ ಸಂಸ್ಥೆಯಿಂದ ತಪಾಸಣೆ ನಡೆಸಲು ನಿರ್ದೇಶಿಸಿದ್ದರೂ ಇಲಾಖೆಯು ಆ ಕುರಿತು ಗಮನ ಹರಿಸಿರಲಿಲ್ಲ. ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಜಿ ಆಕ್ಷೇಪಣೆಗಳೇನು?

ಈ ಯೋಜನೆಗೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಆಕ್ಷೇಪಣೆ ವ್ಯಕ್ತವಾಗಿದ್ದವು. ಟೆಂಡರ್‌ಗಳನ್ನು ಆಹ್ವಾನಿಸುವ ಪೂರ್ವದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿರುವ ವ್ಯವಹಾರ ಪದ್ಧತಿಗಳನ್ನು ಅಧ್ಯಯನ ಮಾಡಿರಲಿಲ್ಲ. ಬಳಕೆದಾರರ ಅವಶ್ಯಕತೆಗಳನ್ನು ಅಂತಿಮಗೊಳಿಸಿರಲಿಲ್ಲ ಎಂಬುದು ಸಿಎಜಿ ಆಕ್ಷೇಪಣೆಯಿಂದ ತಿಳಿದು ಬಂದಿದೆ.

ಬೆಂಗಳೂರು ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಹೊರಡಿಸಿದ್ದ ಟೆಂಡರ್‌ ದಾಖಲೆಗಳ ತಾಂತ್ರಿಕ ವಿಶಿಷ್ಟತೆಗಳು ವ್ಯಾಪ್ಸ್‌ ಟೆಕ್ನೋ ಸಾಫ್ಟ್‌ ಪ್ರೈವೈಟ್‌ ಲಿಮಿಟೆಡ್‌ ಸಂಸ್ಥೆಯ ಎಲ್ಲಾ ಮಾಡಲ್‌ಗಳನ್ನು ಒಳಗೊಂಡಿತ್ತು. ಹಾಗಾಗಿ ಆ ಸಂಸ್ಥೆಯ ಬಿಡ್‌ ಮಾತ್ರ ಅಂಗೀಕಾರವಾಗಿ ಉಳಿದ ಸಂಸ್ಥೆಯ ಬಿಡ್‌ನ್ನು ತಿರಸ್ಕರಿಸಿತ್ತು.

ಇಲಾಖೆಯ ಹಣಕಾಸು ಸಮಿತಿಯು 2009ರ ಜೂನ್‌ನಲ್ಲಿ ವ್ಯಾಪ್ಸ್‌ ಸಂಸ್ಥೆಯು ಸಣ್ಣ ಸಂಸ್ಥೆಯಾಗಿದ್ದು ಯೋಜನೆಯ ಅನುಷ್ಠಾನವು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ಕಾರಣಕ್ಕಾಗಿ ಯೋಜನೆಯನ್ನು ಕೈ ಬಿಡುವ ಬಗ್ಗೆ ಯೋಚಿಸಿತ್ತು. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ 2009ರ ಆಗಸ್ಟ್‌ನಲ್ಲಿ ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯವನ್ನು ಪರಿಷ್ಕರಿಸಲಾಗಿತ್ತು.

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ತಂತ್ರಾಂಶದ ಅನುಷ್ಠಾನವು ಪ್ರಗತಿಯಲ್ಲಿತ್ತು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾದೇಶವನ್ನು ಏಪ್ರಿಲ್‌ 2010ರಲ್ಲಿ ನೀಡಲಾಗಿತ್ತು. ಈ ಸಂಸ್ಥೆಗಳಲ್ಲಿ ಅಂತಹ ತಂತ್ರಾಂಶಗಳನ್ನು ಈ ಮೊದಲೇ ಅನುಷ್ಟಾನಗೊಳಿಸಲಾಗಿದೆಯೆಂದು 2010ರ ಮೇನಲ್ಲಿ ನೀಡಿದ್ದ ತಾಂತ್ರಿಕ ಮೌಲ್ಯಮಾಪನ ವರದಿಯಲ್ಲಿ ತಪ್ಪಾಗಿ ತಿಳಿಸಲಾಗಿತ್ತು ಎಂಬ ಅಂಶವು ಸಿಎಜಿ ಪರಿಶೀಲನೆಯಿಂದ ಬಹಿರಂಗವಾಗಿತ್ತು.

ಅದೇ ರೀತಿ ಯೋಜನೆಗೆ ಬೆಂಗಳೂರು ದಂತ ವೈದ್ಯಕೀಯ ಸಂಸ್ಥೆಯು 52.50 ಲಕ್ಷ ರು. ಪಾವತಿ ಮಾಡಿದ್ದರೂ ಅನುಷ್ಠಾನಗೊಳಿಸಿದ ತಂತ್ರಾಂಶವು ಕಾರ್ಯನಿರ್ವಹಿಸದ ಕಾರಣ ಯೋಜನೆಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಯೋಜನೆಯ ತೃಪ್ತಿದಾಯಕ ಅನುಷ್ಟಾನಕ್ಕಾಗಿ ಮೂರನೇ ಖಾಸಗಿ ವ್ಯಕ್ತಿ, ಸಂಸ್ಥೆಯಿಂದ ತಪಾಸಣೆ ನಡೆಸಬೇಕು ಎಂದು 2012ರಲ್ಲಿ ಅಂದಿನ ವೈದ್ಯಕೀಯ ಶಿಕ್ಷಣ ಇಲಖೆಯ ಸಚಿವರು ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶಿಸಿದ್ದರು.

ಈ ಸಂಬಂಧ ಹೊರಡಿಸಿದ್ದ ಆದೇಶದ ವಿರುದ್ಧ ವ್ಯಾಪ್ಸ್‌ ಸಂಸ್ಥೆಯು ರಿಟ್‌ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್‌ ಇಬ್ಬರು ಪ್ರತಿವಾದಿಗಳು ಇಚ್ಚಿಸಿದಲ್ಲಿ ಜಂಟಿ ತಪಾಸಣೆ ನಡೆಸಬಹುದು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಇಲಾಖೆಯು ಆ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದೇ ಯೋಜನೆಯನ್ನು ಮೈಸೂರು ವೈದ್ಯಕೀಯ ಸಂಸ್ಥೆ ( 52.71 ಲಕ್ಷ ), ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ( 47.00 ಲಕ್ಷ), ಬೆಳಗಾವಿ ವೈದ್ಯಕೀಯ ವಿಜ್ಞಾನ ಕಾಲೇಜು (49.25 ಲಕ್ಷ), ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (66.75 ಲಕ್ಷ)ಗೂ ವ್ಯಾಪ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.

ಬೆಂಗಳೂರು ಸರ್ಕಾರಿ ದಂತ ವೈದ್ಯಕೀಯ ಸಂಸ್ಥೆ ಮತ್ತು ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿಯೂ ಯೋಜನೆಯು ಕಾರ್ಯಶೀಲವಾಗಿರಲಿಲ್ಲ. ಹೀಗಾಗಿ ಪರೀಕ್ಷಾ ತನಿಖೆ ನಡೆಸಿದ್ದ ಐದು ವೈದ್ಯಕೀಯ ಸಂಸ್ಥೆಗಳಲ್ಲಿ ಯೋಜನೆಗಾಗಿ ವೆಚ್ಚ ಮಾಡಿದ್ದ ಒಟ್ಟು 2.68 ಕೋಟಿ ರು. ಪಾವತಿಯು ಅನುತ್ಪಾದಕವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

the fil favicon

SUPPORT THE FILE

Latest News

Related Posts