ವಿಲಾಸಿ ಔತಣಕೂಟಗಳಲ್ಲಿ ಶ್ರೀಕಿ ಭಾಗಿ; ಆರ್ಕಾ ಸೈಲಿಂಗ್‌ ಬೋಟ್ಸ್‌ಗೆ 10 ಲಕ್ಷ ಪಾವತಿ

ಬೆಂಗಳೂರು; ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿ ಸಮುದ್ರದಲ್ಲಿ ತೇಲುವ ಹಡಗು ಮತ್ತು  ದೋಣಿಗಳಲ್ಲಿ ನಡೆಯುತ್ತಿದ್ದ ಮೋಜು ಮಸ್ತಿ, ವಿಲಾಸಿ ಔತಣ ಕೂಟಗಳಲ್ಲಿ ಭಾಗಿಯಾಗಿದ್ದ. ಇದಕ್ಕಾಗಿ ಅರ್ಕಾ ಸೈಲಿಂಗ್‌ ಬೋಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 10 ಲಕ್ಷ ರು.ಗಳನ್ನು ಈತನ ಸೂಚನೆಯಂತೆ ಪಾವತಿಯಾಗಿತ್ತು ಎಂಬುದನ್ನು ದೋಷಾರೋಪಣೆ ಪಟ್ಟಿಯು ಬಹಿರಂಗಗೊಳಿಸಿದೆ.

ವಿಐಪಿ, ವಿವಿಐಪಿ, ಸಿನಿಮಾ ತಾರೆಯರು, ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳು ಭಾಗವಹಿಸುವ ಇಂತಹ ವಿಲಾಸಿ ಔತಣಕೂಟಗಳಲ್ಲಿ ಶ್ರೀಕಿಯು ಭಾಗವಹಿಸುತ್ತಿದ್ದ ಎಂಬುದಕ್ಕೆ ಅರ್ಕಾ ಸೈಲಿಂಗ್‌ ಬೋಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 10 ಲಕ್ಷ ರು.ಪಾವತಿಯಾಗಿರುವುದೇ ನಿದರ್ಶನ.

2017ರಿಂದ ಇಲ್ಲಿಯವರೆಗೆ ಶ್ರೀಕೃಷ್ಣ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. 2017ರಿಂದ ಇಲ್ಲಿಯವರೆಗೆ ಶ್ರೀ ಕೃಷ್ಣನ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದ ಆತನ ಸಹಚರ ಆರ್ಕಾ ಸೈಲಿಂಗ್‌ ಬೋಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 10 ಲಕ್ಷ ರು. ಸೇರಿದಂತೆ ಹಲವು ಐಷಾರಾಮಿ ಹೋಟೆಲ್‌, ವ್ಯಕ್ತಿಗಳಿಗೆ ಲಕ್ಷಾಂತರ ರುಪಾಯಿಗಳನ್ನು ಪಾವತಿಸಿದ್ದ ಎಂಬ ಸಂಗತಿಯು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಐಟಿಸಿ ಲಿಮಿಟೆಡ್‌ಗೆ 325,000.00 ರು., ಐಟಿಸಿ ಹೋಟೆಲ್‌ ವಿಭಾಗಕ್ಕೆ 119,057.00 ರು., ಮ್ಯಾಗ್ನಸ್‌ ವೆಕೇಷನ್‌ಗೆ 350,000.00 ರು., ಆರ್ಕಾ ಸೈಲ್‌ ಬೋಟ್‌ ಪ್ರೈವೈಟ್‌ ಲಿಮಿಟೆಡ್‌ಗೆ 1,000,000.00 ರು., ಪ್ಯಾರಾಡೈಸ್‌ ಪ್ರಾಪರ್ಟಿಸ್‌ ವೆಸ್ಟಿನ್‌ಗೆ 250,000.00 ರು, ರೇಮಂಡ್ಸ್‌ ಲಿಮಿಟೆಡ್‌ಗೆ 191,950.00 ರು., ವಿಜ್ಞೇಶ್‌ ಕೆ ಮೂರ್ತಿಗೆ 104,000.00 ರು., ಮೊದಡಗು ಸುಪ್ರಿಯಾ ಎಂಬುವರಿಗೆ 303,000.00 ರು., ಸೆರೇಸ್‌ ಹೋಟೆಲ್‌ಗೆ 1,000,000.00 ರು., ಇಂಪೀರಿಯಲ್‌ ಹೋಟೆಲ್‌ಗೆ 74,000, ಇಂಡಿಯನ್‌ ಹೋಟೆಲ್‌ಗೆ 485,000.00 ರು., ಐಟಿಸಿ ಲಿಮಿಟೆಡ್‌ಗೆ 559,979.00 ರು., ಸೇರಿದಂತೆ ಒಟ್ಟು 50 ಮಂದಿಯ ಖಾತೆಗಳಿಗೆ 3,48,62,590 ರು.ಗಳನ್ನು ಬ್ಯಾಂಕ್‌ ಮೂಲಕ ಕಳಿಸಲಾಗಿತ್ತು ಎಂದು ಶ್ರೀಕಿಯ ಸಹಚರ ಪೊಲೀಸರ ಮುಂದೆ ಒಪ್ಪಿಕೊಂಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

ಶ್ರೀಕಿ ಹೇಳಿರುವ ಖಾತೆಗಳಿಗೆ ಲಕ್ಷಾಂತರ ರುಪಾಯಿಗಳನ್ನು ಪಾವತಿಸಲಾಗಿದೆ ಎಂದು ಈತನ ಸಹಚರರು ಹೇಳಿಕೆ ನೀಡಿದ್ದಾರೆ. ಈ ಪೈಕಿ ಹಲವು ಮೋಜು ಮಸ್ತಿ, ವಿಲಾಸ ಜೀವನ ನಡೆಸಿದ್ದ ಹೋಟೆಲ್‌, ರೆಸಾರ್ಟ್‌ ಸೇರಿದಂತೆ ಇನ್ನಿತರರಿಗೆ ಪಾವತಿಸಲಾಗಿದೆ. ದಿನವೊಂದಕ್ಕೆ ಸರಾಸರಿ 2 ಲಕ್ಷ ರು.ಗಳನ್ನು ಖರ್ಚು ಮಾಡುತ್ತಿದ್ದೇನೆ ಎಂದು ಶ್ರೀಕಿ ನೀಡಿದ್ದ ಹೇಳಿಕೆ ಮತ್ತು ಆತ ಹೇಳಿದ್ದ ಹೋಟೆಲ್‌ ಮತ್ತು ವ್ಯಕ್ತಿಗಳ ಖಾತೆಗಳಿಗೆ ಲಕ್ಷಾಂತರ ರು.ಪಾವತಿ ಮಾಡಲಾಗಿದೆ ಎಂಬ ಸಹಚರರ ಹೇಳಿಕೆ ಆಧರಿಸಿ ಆದಾಯ ತೆರಿಗೆ ಇಲಾಖೆಯ ನೆರವು ಪಡೆದು ಪತ್ತೆದಾರಿಕೆ ನಡೆಸುವಂತಹ ಕನಿಷ್ಠ ಜಾಣ್ಮೆಯನ್ನೂ ತನಿಖಾ ತಂಡ ಪ್ರದರ್ಶಿಸಿಲ್ಲ.

ದಿನವೊಂದಕ್ಕೆ ಸರಾಸರಿ 2 ಲಕ್ಷ ರು. ಗಳನ್ನು ಶ್ರೀಕಿ ಖರ್ಚು ಮಾಡುತ್ತಿದ್ದ ಎಂದಾದರೆ ತಿಂಗಳಿಗೆ 60 ಲಕ್ಷ ಖರ್ಚು ಮಾಡಿದ್ದಾನೆ ಎಂದೇ ಅರ್ಥ.ಇದೇ ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ 7.20 ಕೋಟಿ ಖರ್ಚು ಮಾಡಿದಂತಾಗುತ್ತದೆ. ಇದರ ಪ್ರಕಾರ ಕಳೆದ ಮೂರು ವರ್ಷದಲ್ಲಿ ಸರಾಸರಿ 20 ಕೋಟಿ ಖರ್ಚಾದಂತೆ. ದಿನವೊಂದಕ್ಕೆ 2 ಲಕ್ಷ ರು.ಗಳನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಿದ್ದಾನೆಯೇ ಅಥವಾ ಡಿಜಿಟಲ್‌ನ ಬೇರೊಂದು ಮಾರ್ಗದಲ್ಲಿ ಪಾವತಿಸಲಾಗಿದೆಯೇ ಎಂಬುದರತ್ತ ತನಿಖೆಯೇ ನಡೆದಿಲ್ಲ ಎಂದು ತಿಳಿದು ಬಂದಿದೆ.

ತನಿಖೆಯ ಆಳವನ್ನು ನಿಜಕ್ಕೂ ವಿಸ್ತರಣೆ ಮಾಡಬೇಕೆಂದಾಗಿದ್ದರೆ ಈ ಎಲ್ಲ ಮಗ್ಗುಲುಗಳಿಂದಲೂ ಪೊಲೀಸರು ತನಿಖೆ ನಡೆಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts