ಪಿಎಂ ಕೇರ್ಸ್‌; ಲಸಿಕೆ ಅಭಿವೃದ್ಧಿಗೆ 100 ಕೋಟಿ ಬಿಡುಗಡೆಯ ಮಾಹಿತಿ ಮುಚ್ಚಿಟ್ಟ ಕೇಂದ್ರ

ಬೆಂಗಳೂರು; ವಿವಾದಕ್ಕೊಳಗಾಗಿರುವ ಪಿಎಂ ಕೇರ್ಸ್‌ ಫಂಡ್‌ನಿಂದ 100 ಕೋಟಿ ರು.ಗಳನ್ನು ಪಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕೇಂದ್ರ ಸರ್ಕಾರವು ಆರ್‌ಟಿಐ ಅಡಿಯಲ್ಲಿ ಕೇಳಿರುವ ಅರ್ಜಿಗೆ ಉತ್ತರ ನೀಡದೇ ನುಣುಚಿಕೊಳ್ಳುತ್ತಿರುವುದು ಇದೀಗ ಬಹಿರಂಗವಾಗಿದೆ.

ಕೋವಿಡ್‌-19 ಲಸಿಕೆ ತಯಾರಕ ಕಂಪನಿಗೆ ಹಣ ನೀಡಲು ಪಿಎಂ ಕೇರ್ಸ್‌ನಿಂದ 100 ಕೋಟಿ ರು.ಮಂಜೂರು ಮಾಡಿರುವುದಾಗಿ ಕೇಂದ್ರ ಸರ್ಕಾರವು ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಿತ್ತು. ನಿಜಕ್ಕೂ ಪಿ ಎಂ ಕೇರ್ಸ್‌ ಫಂಡ್‌ನಿಂದ ಕೇಂದ್ರ ಸರ್ಕಾರಕ್ಕೆ 100 ಕೋಟಿ ರು. ಬಿಡುಗಡೆಯಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡದೇ ಮುಚ್ಚಿಡುತ್ತಿದೆ.

ನಿವೃತ್ತ ಕಮಾಂಡರ್‌ ಲೋಕೇಶ್‌ ಬಾತ್ರಾ ಅವರು 2021ರ ಜುಲೈ 16ರಂದು ಈ ಬಗ್ಗೆ ಆರ್‌ಟಿಐ ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಯಲಕ್ಕೆ ಅರ್ಜಿ ಸಲ್ಲಿಸಿದ್ದರು. ಪಿಎಂ ಕೇರ್ಸ್‌ನಿಂದ ಮಂಜೂರು ಮಾಡಿದ ಮತ್ತು ಕೇಂದ್ರ ಸರ್ಕಾರವು ಕೋವಿಡ್‌ ಲಸಿಕೆ ಅಭಿವೃದ್ಧಿಗೆ ಖರ್ಚು ಮಾಡಿದ ನಿಧಿಯ ಬಗ್ಗೆ ಮಾಹಿತಿಯನ್ನು ಕೋರಿದ್ದರು. ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಕೇಂದ್ರ ಸರ್ಕಾರವು ಯಾವ ಮಾಹಿತಿಯನ್ನೂ ನೀಡಿಲ್ಲ.

ಬಾತ್ರಾ ಅವರು ಸಲ್ಲಿಸಿರುವ ಆರ್‌ಟಿಐ ಅರ್ಜಿಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಜೈವಿಕ ತಂತ್ರಜ್ಞಾನ ಇಲಾಖೆ, ಪಿಎಂಒ, ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ನೀತಿ ಆಯೋಗ) ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಐಸಿಎಂಆರ್) ನಂತಹ ವಿವಿಧ ಸಾರ್ವಜನಿಕ ಪ್ರಾಧಿಕಾರಗಳಿಗೆ ಕಳಿಸಿದೆ.

ಆದರೆ ಈ ಯಾವ ಪ್ರಾಧಿಕಾರಗಳಿಂದಲೂ ಮಾಹಿತಿ ಮತ್ತು ಪ್ರತಿಕ್ರಿಯೆ ಬಾರದ ಕಾರಣ 2021ರ ಆಗಸ್ಟ್ 18ರಂದು ಬಾತ್ರಾ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿಂದಲೂ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ತಿಳಿದು ಬಂದಿದೆ.

ಕೋವಿಡ್‌ 19ರ ವಿರುದ್ಧ ಸೆಣೆಸಲು ಲಸಿಕೆ ಅತ್ಯಂತ ತುರ್ತು ಮತ್ತು ಅಗತ್ಯವಾಗಿದೆ. ಅತ್ಯಾಧುನಿಕ ಲಸಿಕೆ ತಯಾರಿಕೆಯಲ್ಲಿ ಹಲವು ಕಂಪನಿಗಳು ಶ್ರಮಿಸುತ್ತಿವೆ. ಇದನ್ನು ಬೆಂಬಲಿಸಲು ಮತ್ತು ಲಸಿಕೆ ತಯಾರಿಕೆಗಾಗಿ ಪಿಎಂ ಕೇರ್ಸ್‌ ನಿಧಿಯಿಂದ 100 ಕೋಟಿ ರು.ಗಳನ್ನು ನೆರವು ನೀಡುತ್ತಿದೆ ಎಂದು ಪ್ರಧಾನಿ ಕಚೇರಿ 2020ರ ಮೇ 13ರಂದೇ ಹೇಳಿಕೆ ಬಿಡುಗಡೆ ಮಾಡಿತ್ತು.

ಬಾತ್ರಾ ಅವರ 2019-20, 2020-21 ಮತ್ತು 2021-22ರವರೆಗೂ ಮಾಹಿತಿಯನ್ನು ಕೇಳಿದ್ದರು. ಈ ಅರ್ಜಿಯನ್ನು 2021ರ ಜುಲೈ 29ರಂದು ವಿವಿಧ ಸಾರ್ವಜನಿಕ ಪ್ರಾಧಿಕಾರಗಳಿಗೆ ರವಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO) ಸತ್ಯೇಂದ್ರ ಸಿಂಗ್ ಅವರು ತಿಳಿಸಿದ್ದರು.

‘ಕೋವಿಡ್‌ ಲಸಿಕೆ ಕುರಿತಾದ ಮಾಹಿತಿಯು ಆಡಳಿತ ವಿಭಾಗಕ್ಕೆ ಸಂಬಂಧಿಸಿದೆ. ಅದು ಯಾವುದೇ ನಿಧಿಯನ್ನು ಹೊಂದಿಲ್ಲ.ಪಿಎಂ ಕೇರ್ಸ್‌ನಿಂದ ನಿಧಿ ಸ್ವೀಕರಿಸಲಾಗಿದೆ. ಆಧರೂ ನಿಮ್ಮ ಆರ್ಜಿಯನ್ನು ಪ್ರಧಾನಿ ಕಚೇರಿ, ಐಸಿಎಂಆರ್‌, ಜೈವಿಕ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲಾಗಿದೆ,’ ಎಂದು ಉತ್ತರಿಸಿದ್ದರು.

ಐಸಿಎಂಆರ್‌ಗೆ 2021ರ 9 ಆಗಸ್ಟ್ 2021ರಂದು ರವಾನಿಸಲಾಗಿತ್ತು. ಅದಕ್ಕೆ ಉತ್ತರಿಸಿರುವ “ಐಸಿಎಂಆರ್ ಪಿಎಂ ಕೇರ್ಸ್ ಫಂಡ್ ಮೂಲಕ ಕೋವಿಡ್‌ ಲಸಿಕೆ ಅಭಿವೃದ್ಧಿಗೆ ಯಾವುದೇ ಹಣವನ್ನು ಸ್ವೀಕರಿಸಿಲ್ಲ” ಎಂದು ಮಾಹಿತಿ ಒದಗಿಸಿತು. ಅಲ್ಲದೆ ಆರ್‌ಟಿಐ ಅರ್ಜಿಯನ್ನು ಜೈವಿಕ ತಂತ್ರಜ್ಞಾನ ವಿಭಾಗವು ನೀತಿ ಆಯೋಗಕ್ಕೆ ರವಾನಿಸಿತ್ತು.

ಮತ್ತೊಂದೆಡೆ ಬಾತ್ರಾ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಯನ್ನು ಪ್ರಧಾನಿ ಕಚೇರಿಯು 2021ರ ಸೆಪ್ಟಂಬರ್‌ 10 ರಂದು ವಿಲೇವಾರಿ ಮಾಡಿತ್ತ. ‘ಆರ್‌ಟಿಐ ಕಾಯಿದೆಯ ಸೆಕ್ಷನ್ 2(ಎಚ್) ಅಡಿಯಲ್ಲಿ ಪಿಎಂ ಕೇರ್ಸ್ ಫಂಡ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ಹೇಳಲಾಗಿದೆ. . ಆದಾಗ್ಯೂ, PM ಕೇರ್ಸ್ ಫಂಡ್‌ಗೆ ಸಂಬಂಧಿಸಿದಂತೆ ಸಂಬಂಧಿಸಿದ ಮಾಹಿತಿಯನ್ನು pmcares.gov.in ವೆಬ್‌ಸೈಟ್‌ನಲ್ಲಿ ನೋಡಬಹುದು,’ ಎಂದು ಮಾಹಿತಿ ರವಾನಿಸಿತ್ತು.

ಈ ಸಂಬಂಧ ಬಾತ್ರಾ ಅವರು ಮೊದಲ ಮೇಲ್ಮನವಿಯನ್ನೂ ಸಲ್ಲಿಸಿದ್ದರು. ಪಿಎಂ ಕೇರ್ಸ್‌ ಫಂಡ್‌ ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿದೆ ಎಂದು ಪುನರುಚ್ಛರಿಸಿತ್ತು. ಪಿಎಂ ಕೇರ್ಸ್‌ ಫಂಡ್‌ ಸಾರ್ವಜನಿಕ ಪ್ರಾಧಿಕಾರವಲ್ಲದ ಕಾರಣ ಆರ್‌ಟಿಐ ಕಾಯ್ದೆಯ ಸೆಕ್ಷನ್‌ 2(ಎಚ್‌) ಅಡಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ,’ ಎಂದು ಉತ್ತರಿಸಿದೆ.

ಅದೇ ರೀತಿ ಕೇಂದ್ರ ಔಷಧ ಗುಣಮಟ್ಟ ಮತ್ತು ನಿಯಂತ್ರಣ ಪ್ರಾಧಿಕಾರವು ‘ ಇದೊಂದು ನಿಯಂತ್ರಕ ಸಂಸ್ಥೆಯಾಗಿದೆ. ಮತ್ತು ಡ್ರಗ್ಸ್‌ ಮತ್ತು ಕಾಸ್ಮೆಟಿಕ್ಸ್‌ ಆಕ್ಟ್‌ ಅಡಿಯಲ್ಲಿ ಹೊಸ ಔಷಧಗಳು ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮಗಳ ಪ್ರಕಾರ ಲಸಿಕೆಗಳು ಸೇರಿದಂತೆ ಔಷಧಗಳ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿಯಂತ್ರಿಸುತ್ತದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಾತ್ರವನ್ನೂ ಹೊಂದಿಲ್ಲ,’ ಎಂದು ಉತ್ತರವನ್ನು ರವಾನಿಸಿತ್ತು.

the fil favicon

SUPPORT THE FILE

Latest News

Related Posts