ಶ್ರೀಕಿ ಸ್ವ ಇಚ್ಛಾ ಹೇಳಿಕೆ ವೈಭವಿಕರಣಕಷ್ಟೇ ಸೀಮಿತ; ಅಕ್ರಮ ಸಂಪನ್ಮೂಲ ಪತ್ತೆ ಹಚ್ಚಲಿಲ್ಲವೇಕೆ?

ಬೆಂಗಳೂರು; ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿ ನೀಡಿರುವ ಸ್ವ ಇಚ್ಛಾ ಹೇಳಿಕೆಯು ರಂಜನೀಯ ಮತ್ತು ವೈಭವ ರೂಪ ಪಡೆದುಕೊಂಡಿದೆ. ಈತನ ಸ್ವ ಇಚ್ಛಾ ಹೇಳಿಕೆಯನ್ನು ರಂಜನೀಯವಾಗಿ ವೈಭವೀಕರಿಸುವುದರಲ್ಲಿಯೇ ಮಗ್ನವಾಗಿರುವ ತನಿಖಾ ತಂಡವು, ಆತ ಬಿಟ್‌ ಕಾಯಿನ್‌ ವ್ಯವಹಾರದಲ್ಲಿ ದೋಚಿದ್ದಾನೆ ಎಂದು ಹೇಳಲಾಗುತ್ತಿರುವ ಅಕ್ರಮ ಸಂಪನ್ಮೂಲವನ್ನು ಪತ್ತೆ ಹಚ್ಚುವುದರತ್ತ ಒಂದೇ ಒಂದು ಹೆಜ್ಜೆಯನ್ನಿರಿಸಿಲ್ಲ. ಆತ ನೀಡಿರುವ ಸ್ವ ಇಚ್ಛಾ ಹೇಳಿಕೆಯನ್ನು ಒಂದಿನಿತೂ ಪರಾಮರ್ಶಿಸದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಶ್ರೀಕಿ ಹೇಳಿರುವ ಖಾತೆಗಳಿಗೆ ಲಕ್ಷಾಂತರ ರುಪಾಯಿಗಳನ್ನು ಪಾವತಿಸಲಾಗಿದೆ ಎಂದು ಈತನ ಸಹಚರರು ಹೇಳಿಕೆ ನೀಡಿದ್ದಾರೆ. ಈ ಪೈಕಿ ಹಲವು ಮೋಜು ಮಸ್ತಿ, ವಿಲಾಸ ಜೀವನ ನಡೆಸಿದ್ದ ಹೋಟೆಲ್‌, ರೆಸಾರ್ಟ್‌ ಸೇರಿದಂತೆ ಇನ್ನಿತರರಿಗೆ ಪಾವತಿಸಲಾಗಿದೆ. ದಿನವೊಂದಕ್ಕೆ ಸರಾಸರಿ 2 ಲಕ್ಷ ರು.ಗಳನ್ನು ಖರ್ಚು ಮಾಡುತ್ತಿದ್ದೇನೆ ಎಂದು ಶ್ರೀಕಿ ನೀಡಿದ್ದ ಹೇಳಿಕೆ ಮತ್ತು ಆತ ಹೇಳಿದ್ದ ಹೋಟೆಲ್‌ ಮತ್ತು ವ್ಯಕ್ತಿಗಳ ಖಾತೆಗಳಿಗೆ ಲಕ್ಷಾಂತರ ರು.ಪಾವತಿ ಮಾಡಲಾಗಿದೆ ಎಂಬ ಸಹಚರರ ಹೇಳಿಕೆ ಆಧರಿಸಿ ಆದಾಯ ತೆರಿಗೆ ಇಲಾಖೆಯ ನೆರವು ಪಡೆದು ಪತ್ತೆದಾರಿಕೆ ನಡೆಸುವಂತಹ ಕನಿಷ್ಠ ಜಾಣ್ಮೆಯನ್ನೂ ತನಿಖಾ ತಂಡ ಪ್ರದರ್ಶಿಸದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಹೋಟೆಲ್‌, ರೆಸಾರ್ಟ್‌ಗಳಲ್ಲಿನ ಬ್ಯಾಂಕ್‌ ಖಾತೆಗಳೆಲ್ಲವೂ ಜಿಎಸ್‌ಟಿ ವ್ಯಾಪ್ತಿಯಲ್ಲಿರುತ್ತದೆ. ಜಿಎಸ್‌ಟಿಯಲ್ಲಿಯೂ ಗ್ರಾಹಕರ ಹೆಸರು ನಮೂದಾಗುತ್ತದೆ. ಹೀಗಿರುವಾಗ ಶ್ರೀಕಿ ನಡೆಸಿದ್ದ ಎಂದು ಹೇಳಲಾಗುತ್ತಿರುವ ವಿಲಾಸಿ ಜೀವನದ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳು ಪಾವತಿಯಾಗಿರುವ ಹೋಟೆಲ್‌, ರೆಸಾರ್ಟ್‌ ಸೇರಿದಂತೆ ಇನ್ನಿತರೆ ಖಾತೆಗಳನ್ನು ಜಾಲಾಡಬೇಕಿತ್ತು.

ಮೇಲಾಗಿ ದಿನವೊಂದಕ್ಕೆ ಒಬ್ಬ ಗ್ರಾಹಕ 2 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾನೆ ಎಂಬುದು ಜಿಎಸ್‌ಟಿಯಲ್ಲಿ ಪ್ರತಿಫಲಿಸುತ್ತದೆ.ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಗಲಾದರೂ ಎಚ್ಚೆತ್ತುಕೊಳ್ಳಬೇಕಿತ್ತು.  ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೂ ಮೈಮರೆತಿದ್ದಾರೆ. ಏನನ್ನೋ ಮುಚ್ಚಿಡಲು ತನಿಖಾಧಿಕಾರಿ ಪ್ರಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ದಿನವೊಂದಕ್ಕೆ ಸರಾಸರಿ 2 ಲಕ್ಷ ರು. ಗಳನ್ನು ಶ್ರೀಕಿ ಖರ್ಚು ಮಾಡುತ್ತಿದ್ದ ಎಂದಾದರೆ ತಿಂಗಳಿಗೆ 60 ಲಕ್ಷ ಖರ್ಚು ಮಾಡಿದ್ದಾನೆ ಎಂದೇ ಅರ್ಥ.ಇದೇ ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ 7.20 ಕೋಟಿ ಖರ್ಚು ಮಾಡಿದಂತಾಗುತ್ತದೆ. ಇದರ ಪ್ರಕಾರ ಕಳೆದ ಮೂರು ವರ್ಷದಲ್ಲಿ ಸರಾಸರಿ 20 ಕೋಟಿ ಖರ್ಚಾದಂತೆ. ದಿನವೊಂದಕ್ಕೆ 2 ಲಕ್ಷ ರು.ಗಳನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಿದ್ದಾನೆಯೇ ಅಥವಾ ಡಿಜಿಟಲ್‌ನ ಬೇರೊಂದು ಮಾರ್ಗದಲ್ಲಿ ಪಾವತಿಸಲಾಗಿದೆಯೇ ಎಂಬುದರತ್ತ ತನಿಖೆಯೇ ನಡೆದಿಲ್ಲ ಎಂದು ತಿಳಿದು ಬಂದಿದೆ.ಶ್ರೀಕಿ ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿರುವ ಲೆಕ್ಕಚಾರದ ಕುರಿತು ಕೆಬಿಕೆ ಸ್ವಾಮಿ ಅವರು ಟ್ವೀಟ್‌ ಕೂಡ ಮಾಡಿದ್ದಾರೆ.

ತನಿಖೆಯ ಆಳವನ್ನು ನಿಜಕ್ಕೂ ವಿಸ್ತರಣೆ ಮಾಡಬೇಕೆಂದಾಗಿದ್ದರೆ ಈ ಎಲ್ಲ ಮಗ್ಗುಲುಗಳಿಂದಲೂ ಪೊಲೀಸರು ತನಿಖೆ ನಡೆಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂದು ಗೊತ್ತಾಗಿದೆ.

ಇನ್ನು ಈತ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದ ಎಂದಾದರೆ ದೋಚಿದ್ದ ಹಣವನ್ನು ಎಲ್ಲೋ ಒಂದು ಕಡೆ ಬಚ್ಚಿಟ್ಟಿರಬೇಕು. ಡಿಜಿಟಲ್‌ ಮೂಲಕವೋ ಅಸ್ತಿ ಖರೀದಿ ಮತ್ತೊಂದು ಮೂಲದಲ್ಲಿ ಹೂಡಿಕೆ ಮಾಡಿಯೋ ಅಥವಾ ಗುಪ್ತವಾದ ಡಿಜಿಟಲ್‌ ವ್ಯಾಲೇಟ್‌ನಲ್ಲಿ ಇಟ್ಟಿದ್ದಾನೇಯೇ ಎಂಬುದನ್ನೂ ಪತ್ತೆ ಹಚ್ಚಬೇಕಿತ್ತು. ಈ ನಿಟ್ಟಿನಲ್ಲಿ ತನಿಖಾ ತಂಡ ಏನು ಮಾಡಿದೆ?

‘ಸ್ವ ಇಚ್ಛಾ ಹೇಳಿಕೆಯನ್ನು ಜಾಡನ್ನಿಡಿದು ತನಿಖಾಧಿಕಾರಿ ಒಂದೇ ಒಂದು ಹೆಜ್ಜೆಯನ್ನಿಟ್ಟಿಲ್ಲ. ತನಿಖೆಗೆ ಬೇಕಾದಂತಹ ಹಳಿಯನ್ನೇ ಹಾಕಲಿಲ್ಲ. ಇದನ್ನು ತನಿಖೆ ಎಂದು ಕರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ,’ ವಕೀಲ ಕೆ ಬಿ ಕೆ ಸ್ವಾಮಿ.

ಈತ ನೀಡಿರುವ ಸ್ವ ಇಚ್ಛಾ ಹೇಳಿಕೆಯನ್ನು ನ್ಯಾಯಾಲಯದ ಸ್ವೀಕಾರಕ್ಕೆ ಅರ್ಹವಾಗಿಲ್ಲ. ಅಕ್ರಮ ಚಟುವಟಿಕೆಯಿಂದ ಅಡಗಿಸಿಟ್ಟಿರುವಂತಹ ಪ್ರಕರಣದ ವಸ್ತು ಸಂಗತಿಗಳಿಗೆ ಮೂಲಾಧಾರವಾದಂತಹ ಸಾಕ್ಷ್ಯಗಳು ಅದನ್ನು ಪತ್ತೆ ಹಚ್ಚಲಷ್ಟೇ ಸ್ವೀಕಾರಾರ್ಹ ಎಂದು ಭಾರತ ಸಾಕ್ಷ್ಯ ಅಧಿನಿಯಮದ ಕಲಂ 27ರಲ್ಲಿ ಸ್ಪಷ್ಟವಾಗಿ ಹೇಳಿದೆ.

‘ಉದಾಹರಣೆಗೆ ಮಾರಿಷಸ್‌ನ ಬ್ಯಾಂಕ್‌ನಲ್ಲಿ ಯಾವುದೋ ಒಂದು ಬೇನಾಮಿ ಖಾತೆ, ಸಿಂಗಾಪುರದಲ್ಲಿ ಯಾವುದೋ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರೆ ನಿರ್ದಿಷ್ಟ ಸ್ಥಳದಲ್ಲಿ ಮತ್ತು ಗುಪ್ತವಾಗಿ ಇರಿಸಲಾಗಿರುವ ಅಥವಾ ಡಿಜಿಟಲ್‌ ಕರೆನ್ಸಿ (ಕ್ರಿಪ್ಟೋ ಕರೆನ್ಸಿ)ಯೋ, ಅಥವಾ ನಿರ್ದಿಷ್ಟ ಡಿಜಿಟಲ್‌ ವ್ಯಾಲೆಟ್‌ನಲ್ಲಿ ಅಡಗಿಸಿ ಇಟ್ಟಿದ್ದೇನೆ, ಅದರ ಪಾಸ್‌ವರ್ಡ್ ಮುಖಾಂತರ ತೆಗೆದು ತೋರಿಸುತ್ತೇನೆ ಎಂದು ಹೆಳಿಕೆ ನೀಡಿದರೆ ಮಾತ್ರ ಅದು ನ್ಯಾಯಾಲಯಕ್ಕೆ ಸ್ವೀಕಾರಾರ್ಹ,’ ಎಂದು ವಿವರಿಸುತ್ತಾರೆ ವಕೀಲ ಕೆಬಿಕೆ ಸ್ವಾಮಿ.

ಉಳಿದಂತೆ ಅರೋಪಿಯೇ ಹ್ಯಾಕ್‌ ಮಾಡಿದ್ದಾನೆ, ಬೇರೊಬ್ಬರ ಜತೆಗೂಡಿ ಹ್ಯಾಕ್‌ ಮಾಡಿದ್ದಾನೆ ಎಂಬಂತಹ ತಪ್ಪೊಪ್ಪಿಗೆಯ ಸಂಗತಿಗಳು ಕಾನೂನಿನ ಅಡಿಯಲ್ಲಿ ಸ್ವೀಕಾರಾರ್ಹವಲ್ಲ. ಅಕ್ರಮ ಚಟುವಟಿಕೆಗಳಿಂದ ದೋಚಿದ ಸಂಪನ್ಮೂಲವನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಬೇಕು. ಅದನ್ನು ಮಾಡದೆಯೇ ಈತನ ಹೇಳಿಕೆ ಮತ್ತು ಪ್ರಕರಣದಲ್ಲಿ ರಂಜನೀಯ ಸುದ್ದಿಗಳನ್ನು ಸಿನಿಮೀಯ ರೀತಿಯಲ್ಲಿ ವೈಭವಿಕರಿಸಲಾಗಿದೆ.

ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಸಾಕ್ಷ್ಯವೊಂದರ ಹೇಳಿಕೆ ಪ್ರಕಾರ 2017ರಿಂದ ಇಲ್ಲಿಯವರೆಗೆ ಶ್ರೀ ಕೃಷ್ಣ ವೆಬ್‌ ಸೈಟ್‌ಗಳನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾನೆ. 2017ರಿಂದಲೂ ಇಲ್ಲಿಯವರೆಗೆ ಶ್ರೀಕೃಷ್ಣ ಸುಮಾರು ಖರ್ಚು ವೆಚ್ಚಗಳನ್ನು ನೋಡಿಕೊಂಡಿರುವ ವ್ಯಕ್ತಿಯ ವ್ಯಾಲೆಟ್‌ಗೆ ಸುಮಾರು 130 ಬಿಟ್‌ಕಾಯಿನ್‌ಗಳು ಬಂದಿವೆ.

ಈ ಬಿಟ್‌ ಕಾಯಿನ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಪಾಲನ್ನು ಪಡೆದಿರುವ ವ್ಯಕ್ತಿಯು ಉಳಿದ ಹಣವನ್ನು ಶ್ರೀಕೃಷ್ಣ ಹೇಳಿದ ಬ್ಯಾಂಕ್‌ ಅಕೌಂಟ್‌ಗಳಿಗೆ ಸುಮಾರು 3,48,62,590 ರು.ಗಳನ್ನು ಬ್ಯಾಂಕ್‌ ಮುಖಾಂತರ ಕಳಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಒಂದೊಂದು ಖಾತೆಗೆ 2 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಯಾಗಿದೆ.

ಆರೋಪಿ ದೋಚಿದ್ದಾನೆ ಎಂದು ಹೇಳಲಾಗುತ್ತಿರುವ ಮೊತ್ತಕ್ಕೂ ಮತ್ತು ಖರ್ಚು ಮಾಡಿರುವ ಹಣವನ್ನು ತುಲನೆ ಮಾಡಿದರೆ ವಿಲಾಸಿ ಜೀವನಕ್ಕೆಂದು ಖರ್ಚಾಗಿರುವುದು ಕೇವಲ ಬಿಡಿಗಾಸಷ್ಟೇ.

ಹಾಗಾದರೆ ದೋಚಿದ್ದಾನೆ ಎಂದು ಹೇಳಲಾಗಿರುವ ಇಡುಗಂಟು ಎಲ್ಲಿ ಹೋಯಿತು, ಇದು ಯಾರ್ಯಾರ ಜೇಬಿನೊಳಗೆ ಇಳಿದಿದೆ ಎಂಬುದನ್ನು ತನಿಖಾಧಿಕಾರಿ ಪತ್ತೆ ಹಚ್ಚಬೇಕಿತ್ತು. ತನಿಖೆಗೆ ಪೂರಕವಾಗಿ ಈ ಯಾವ ಅಂಶಗಳತ್ತಲೂ ತನಿಖಾಧಿಕಾರಿ ಸುಳಿದೇ ಇಲ್ಲ ಎಂಬುದು ನಿಚ್ಚಳವಾಗಿ ಗೋಚರಿಸಿದೆ ಎನ್ನುತ್ತಾರೆ ಕಾನೂನು ತಜ್ಞರು.

the fil favicon

SUPPORT THE FILE

Latest News

Related Posts