ಬೆಂಗಳೂರು; ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಕಳೆದ 7 ವರ್ಷಗಳಲ್ಲಿ ಮಾಜಿ ಪ್ರಧಾನಿ ಜವಹರ್ಲಾಲ್ ನೆಹರೂ ವಿರುದ್ಧ ಅನೇಕ ವಾಗ್ದಾಳಿಗಳು ನಡೆದಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಸಂಸತ್ನಲ್ಲಿ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಜವಹರ್ಲಾಲ್ ನೆಹರೂ ಅವರೇ ಕಾರಣ ಎಂದು ಹೇಳಿಕೆ ನೀಡಿದ್ದು ಸಹ ಸಾಕಷ್ಟು ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ‘ಯಾರೇ ಪ್ರಧಾನಿ ಹುದ್ದೆಗೇರಿದರೂ ನೆಹರು ಎಂಬ ಮಹಾಪುರುಷನ ನೆರಳಿನಲ್ಲಿ ಕೆಲಸ ಮಾಡಬೇಕಾಗುತ್ತದೆ,’ ಎಂದು ಮಾಜಿ ಪ್ರಧಾನಿ ದೇವೇಗೌಡರು ಬಣ್ಣಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಜವಹರ್ ಲಾಲ್ ನೆಹರೂ ಅವರ ಕುರಿತು ನೀಡಿರುವ ಅಭಿಪ್ರಾಯವು ಲೇಖಕ ಸುಗತ ಶ್ರೀನಿವಾಸರಾಜು ಅವರು ರಚಿಸಿರುವ ‘ಫರೋಸ್ ಇನ್ ಎ ಫೀಲ್ಡ್’ ನ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಫರೋಸ್ ಇನ್ ಎ ಫೀಲ್ಡ್’ ನಲ್ಲಿ ನೆಹರು ಗಾಂಧಿ ಪರಿವಾರದ ಕುರಿತಾಗಿ ದೊಡ್ಡ ಅಧ್ಯಾಯದಲ್ಲಿ ಇದು ವಿಸ್ತೃತವಾಗಿ ಮೂಡಿಬಂದಿದೆ. ನೆಹರು ಕುರಿತು ಗೌಡರು ವ್ಯಕ್ತಪಡಿಸಿರುವ ಅಭಿಪ್ರಾಯ ಇರುವ ಕೃತಿಯ ಅಧ್ಯಾಯವೊಂದರ ತುಣಕೊಂದನ್ನು ಲೇಖಕ ಸುಗತ ಶ್ರೀನಿವಾಸರಾಜು ಅವರು ಟ್ವೀಟ್ ಮಾಡಿದ್ದಾರೆ.
‘ಪಂಡಿತ್ ನೆಹರು ಅವರು ಒಂದು ದೊಡ್ಡ ಮನೆತನದಿಂದ ಬಂದವರು. ಪ್ರಕಾಂಡ ಪಂಡಿತರು. ಆದರೆ ನಾನು ಸಾಧಾರಣ ವ್ಯಕ್ತಿ. ಅವರ ಹೆಸರಿರುವ ಕುರ್ಚಿಯ ಮುಂದೆ ನಿಂತಾಗ ನಾನು ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರಬೇಕು ಎಂದು ನನ್ನ ತಲೆಯಲ್ಲಿ ಹರಿದು ಹೋಯಿತು. ಯಾರೇ ನೆಹರು ಅವರ ಕುರ್ಚಿಯಲ್ಲಿ ಕೂತಾಗ ಆ ದೊಡ್ಡ ಮನುಷ್ಯನ ನೆರಳಿನಲ್ಲಿಯೇ ಕೆಲಸ ಮಾಡಬೇಕಾಗಿ ಬರುತ್ತದೆ. ಅವರದ್ದು ಅಷ್ಟು ದೊಡ್ಡ ವ್ಯಕ್ತಿತ್ವ. ಅವರ ದೊಡ್ಡತನವನ್ನು ನಾವು ಒಪ್ಪಿಕೊಂಡರೆ ಮುಂದುವರೆದು ನಾವು ಒಳ್ಳೆಯ ಕೆಲಸವನ್ನು ಮಾಡಬಹುದು. ಅದನ್ನು ಬಿಟ್ಟು ಅವರ ವ್ಯಕ್ತಿತ್ವವನ್ನು, ಚರಿತ್ರೆಯಲ್ಲಿ ಅವರ ಸ್ಥಾನವನ್ನು ನಾವು ಪ್ರಶ್ನಿಸುತ್ತ ಹೋದರೆ ಜೀವನ ಪರ್ಯಂತ ಬರೀ ಅದನ್ನೇ ಮಾಡಬೇಕಾಗುತ್ತದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ನೆಹರೂ ತರಹದ ದಿಗ್ಗಜನನ್ನು ನಡೆಸಿಕೊಂಡ ರೀತಿ, ಹೀಯಾಳಿಸಿದ ರೀತಿ ಬಿಂಬಿಸಿದ ರೀತಿ ನನಗೆ ತುಂಬಾ ಬೇಸರ ಮತ್ತು ಸಿಟ್ಟನ್ನು ಉಂಟು ಮಾಡಿದೆ.’ ಎಂದು ಎಂದು ಮಾಜಿ ಪ್ರಧಾನಿ ದೇವೇಗೌಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನೆಹರು ಕುರಿತಾಗಿ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಅಭಿಪ್ರಾಯವು ನೆಹರೂ ಅವರನ್ನು ದ್ವೇಷಿಸುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಿದಂತಾಗಿದೆ.
ವಿಭಜಿತ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವ ಮೂಲಕ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ದೊಡ್ಡ ತಪ್ಪು ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು. ಲೋಕಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ಕಾಶ್ಮೀರದ ಇಂದಿನ ಬಿಕ್ಕಟ್ಟು ಮತ್ತು ಸಮಸ್ಯೆಗಳಿಗೆ ನೆಹರೂ ಅವರ ನೀತಿಗಳೇ ಕಾರಣ ಎಂದು ದೂರಿದ್ದರು.
ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ್ದು ಐತಿಹಾಸಿಕ ತಪ್ಪು ಎಂದ ಶಾ, ದೇಶದ ಮೊದಲ ಪ್ರಧಾನಿಯ ತಪ್ಪು ನೀತಿಗಳಿಂದಾಗಿ ದೇಶ ಇಂದಿಗೂ ಬೆಲೆ ತೆರುತ್ತಿದೆ ಎಂದು ಹರಿಹಾಯ್ದಿದ್ದರು. ಇನ್ನು ನೆಹರೂ ಹೆಸರು ಪ್ರಸ್ತಾಪವಾಗುತ್ತಿದ್ದಂತೇ ಕೆರಳಿದ ಕಾಂಗ್ರೆಸ್ ಸದಸ್ಯರು, ದೇಶ ಕಟ್ಟಿದ ಮಹಾನ್ ನಾಯಕನಿಗೆ ಗೃಹ ಸಚಿವರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಧುರೀಣರು ದ್ವೇಷಕಾರಕ ಭಾಷಣಗಳನ್ನು ಮಾಡಿದ್ದರು. ಶಿಕ್ಷಣ ಸಚಿವಾಲಯದ ಮಂಡಳಿ ಹೊರತಂದಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೋಸ್ಟರ್‌ನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿದ್ದನ್ನು ಸ್ಮರಿಸಬಹುದು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ, ತಮಿಳುನಾಡಿನ ಜೆ ಜಯಲಲಿತಾ, ಮಹಾರಾಷ್ಟ್ರದ ಶರದ್ ಪವಾರ್, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಮಾಜಿ ಪ್ರಧಾನಿ ನರಸಿಂಹರಾವ್ ಅವರು ತಮ್ಮ ಬಳಿ ಇರಿಸಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುರಿತಾದ ಪುಸ್ತಕವು ಈಗಾಗಲೇ ಬಹಿರಂಗಗೊಳಿಸಿದೆ.
ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಎಚ್ ಡಿ ದೇವೇಗೌಡ ಅವರ ಕುರಿತು ಇಂಗ್ಲಿಷ್‌ನಲ್ಲಿ ರಚಿಸಿರುವ ಫರೋಸ್ ಇನ್ ಎ ಫೀಲ್ಡ್ ಕೃತಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳಿವೆ. ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿರುವ ಈ ಕೃತಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.