ಬೆಂಗಳೂರು; ಬೀದರ್ ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ನೇಮಕ ಮತ್ತು ಉಪಕರಣಗಳ ಖರೀದಿಯಲ್ಲಿನ ಕೋಟ್ಯಂತರ ರು ಅವ್ಯವಹಾರ ನಡೆದಿರುವ ಪ್ರಕರಣದ ಕುರಿತು ವಿಚಾರಣೆಯು 12 ವರ್ಷಗಳಿಂದಲೂ ಕುಂಟುತ್ತಾ ಸಾಗಿದೆ. ಈ ಪ್ರಕರಣ ಕುರಿತು 2008 ಮತ್ತು 2014ರಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸದ ಕಾರಣ ಇದನ್ನೂ 11ನೇ ವರದಿಯಲ್ಲಿ ಕಾಯ್ದಿರಿಸಿದೆ. ಅಲ್ಲದೆ ಅವ್ಯವಹಾರದಲ್ಲಿ ಭಾಗಿ ಆಗಿದ್ದ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಡ್ತಿಯನ್ನೂ ಕರುಣಿಸಿದೆ.
ಸಿಬ್ಬಂದಿಗಳ ನೇಮಕಾತಿ, ಉಪಕರಣ ಮತ್ತು ಔಷಧಗಳ ಖರೀದಿಯಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವ ಸಂಬಂಧ ಡಾ ಎಸ್ ಎಲ್ ಹಿರೇಮಠ್ ಎಂಬುವರು ದೂರು ನೀಡಿದ್ದರು. ಈ ಕುರಿತು ಬೀದರ್ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಲಾಗಿತ್ತು. ಡಾ ಬಿ ಒ ಹನುಮಂತಪ್ಪ ಅವರ ವಿರುದ್ಧ ಆರೋಪಗಳೂ ಮೇಲ್ನೋಟಕ್ಕೆ ಸಾಬೀತಾಗಿತ್ತು. 2015 ಮತ್ತು 2017ರಲ್ಲಿ ನೇಮಿಸಿದ್ದ ವಿಚಾರಣಾಧಿಕಾರಿಗಳು ವಿಚಾರಣೆ ಆರಂಭಿಸದೇ ವಿಳಂಬ ಮಾಡಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.
2008ರಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧದ ವಿಚಾರಣೆಯು ಸುಮಾರು 12 ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಈ ಅವಧಿಯಲ್ಲಿ ಆರೋಪಿತ 8 ಅಧಿಕಾರಿ, ನೌಕರರರಿಂದ ಹೇಳಿಕೆ ಪಡೆಯುವುದರಲ್ಲೇ ಇಲಾಖೆ ಕಾಲಹರಣ ಮಾಡಿರುವುದು ವರದಿಯಿಂದ ಗೊತ್ತಾಗಿದೆ. ಈ ಪ್ರಕರಣದ ಕುರಿತು ವೈದ್ಯಕೀಯ ಶಿಕ್ಷಣ ಹಾಲಿ ಸಚಿವ ಡಾ ಕೆ ಸುಧಾಕರ್ ಅವರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.
ಆರೋಪಿತ ಅಧಿಕಾರಿ, ನೌಕರರ ಪೈಕಿ ಕೆಲವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಯೋಜನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಆರೋಪಿತರ ವಿರುದ್ಧ ವಿಚಾರಣೆ ನಡೆಸಲು ಇಲಾಖೆಯ ಸಚಿವರ ಸಹಮತಿಗೆ ಕಡತ ಸಲ್ಲಿಸಲಾಗಿದೆ. ಆದರೆ ಈವರೆವಿಗೂ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.
‘ಈ ಪ್ರಕರಣದಲ್ಲಿ ಅತಿ ಹೆಚ್ಚಿನ ವಿಳಂಬ ಉಂಟಾಗಿರುವುದರಿಂದ ಆರೋಪಿಗಳು ನಿವೃತ್ತಿ ಹೊಂದಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ,’ ಎಂದು ಸಮಿತಿಯು ಅಭಿಪ್ರಾಯಿಸಿದೆ. ಅಲ್ಲದೆ 6 ತಿಂಗಳ ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸಮಿತಿಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದೆ.
ಪ್ರಕರಣ ನಡೆದಿರುವ ಬೀದರ್ ಜಿಲ್ಲೆಯ ಬ್ರಿಮ್ಸ್ ಸಂಸ್ಥೆಗೆ ಭೇಟಿ ಕೊಟ್ಟಿದ್ದ ಭರವಸೆ ಸಮಿತಿಯೇ ಅಚ್ಚರಿಗೊಳಾಗಿತ್ತು. ಅವ್ಯವಹಾರ ಎಸಗಿರುವ ಆರೋಪಿಗಳು ಯಾವ ಇಲಾಖೆಗೆ ಸೇರಿದವರು ಎಂಬ ಬಗ್ಗೆ ಸಮಿತಿಗೆ ಸರಿಯಾದ ಉತ್ತರವನ್ನೇ ನೀಡಿಲ್ಲ. ‘ ಆರೋಪಿಗಳು ಯಾರೆಂದು ಕೇಳಿದರೆ ವೈದ್ಯಕೀಯ ಶಿಕ್ಷಣದವರು ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್ನುತ್ತಾರೆ, ಆರೋಗ್ಯ ಇಲಾಖೆಯವರು ವೈದ್ಯಕೀಯ ಶಿಕ್ಷಣದವರು ಎನ್ನುತ್ತಾರೆ. ಇಷ್ಟೆಲ್ಲಾ ಅವ್ಯವಹಾರ ಮಾಡಿದ್ದರೂ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಡ್ತಿ ನೀಡಿದೆ,’ ಎಂಬ ಅಂಶವನ್ನು ಸಮಿತಿಯು ಹೊರಗೆಡವಿದೆ.
ಮತ್ತೊಂದು ಸಂಗತಿ ಎಂದರೆ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ದಾಖಲೆಗಳನ್ನೆಲ್ಲಾ ಬೆಂಕಿ ಹಾಕಿ ಸುಟ್ಟು ಶಾಮೀಲಾಗಿದ್ದಾರೆ. ಹೀಗಾಗಿ ಈ ವಿಷಯದ ಗಂಭೀರತೆ ಅರಿತು 3 ತಿಂಗಳೊಳಗಾಗಿ ವಿಚಾರಣೆ ಮುಗಿಸಿ ಕ್ರಮ ಜರುಗಿಸಬೇಕು ಎಂದೂ ಸಮಿತಿ ಸೂಚಿಸಿದೆ.