ಭ್ರಷ್ಟಾಚಾರ ತಡೆ (ತಿದ್ದುಪಡಿ)ಕಾಯ್ದೆ; ಜಸ್ಟೀಸ್‌ ಇಂದ್ರಕಲಾ ಸೇರಿ ಐವರ ವಿರುದ್ಧ ದೂರು ಸಲ್ಲಿಕೆ

ಬೆಂಗಳೂರು; ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜಸ್ವಾಮಿ ವಿರುದ್ಧ ದೂರು ನೀಡಿರುವ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರು ಸೇರಿದಂತೆ ಐವರ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಜನಾಧಿಕಾರ ಸಂಘರ್ಷ ಪರಿಷತ್‌ ದೂರು ಸಲ್ಲಿಸಿದೆ.

ಸಂವಿಧಾನಾತ್ಮಕ ಸಂಸ್ಥೆಗಳಲ್ಲಿನ ಉನ್ನತ ಹುದ್ದೆಗಳನ್ನು ಪಡೆಯುವ ಸಲುವಾಗಿ ಕೋಟ್ಯಂತರ ರುಪಾಯಿ ಹಣವನ್ನು ಲಂಚದ ರೂಪದಲ್ಲಿ ನೀಡಿದ್ದ ಐವರಿಗೆ ಸಂಕಷ್ಟ ಎದುರಾಗಿದೆ.
ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ 2018ರ ಕಲಂ 8ರ ಅನ್ವಯ ಇಂದ್ರಕಲಾ, ಸುಧೀಂದ್ರರೆಡ್ಡಿ, ಎನಿತ್‌ಕುಮಾರ್‌ ಎಂ ಸಿ, ಗೋವಿಂದಯ್ಯ ಮತ್ತು ನರಸಿಂಹಸ್ವಾಮಿ ಎಂಬುವರ ವಿರುದ್ಧ ದೂರು ದಾಖಲಿಸುವ ಮೂಲಕ ಯುವರಾಜಸ್ವಾಮಿ ಪ್ರಕರಣವನ್ನು ಜನಾಧಿಕಾರ ಸಂಘರ್ಷ ಪರಿಷತ್‌ ವಿಸ್ತರಿಸಿದೆ.

ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ ಜಾರಿಯಾದ ನಂತರ ಲಂಚ ಕೊಡುವುದು ಕೂಡ ಘೋರ ಅಪರಾಧ. ಹೀಗಾಗಿ ಈ ಕಾಯ್ದೆಯಡಿಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಸಂಘಟನೆಯು ಐವರ ವಿರುದ್ಧ ದೂರು ದಾಖಲಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ತಿದ್ದುಪಡಿ ಕಾಯ್ದೆ ಪ್ರಕಾರ ಲಂಚ ಕೊಡುವುದು ಕಲಂ 8ರ ಪ್ರಕಾರ ಅಪರಾಧ. ಲಂಚ ಕೊಟ್ಟವರು 7 ದಿನದೊಳಗೆ ಎಸಿಬಿ ಅಥವಾ ನ್ಯಾಯಾಂಗಕ್ಕೆ ದೂರು ನೀಡದೇ ಇದ್ದಲ್ಲಿ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಪ್ರಕರಣ ವಿವರ

ಅಕ್ರಮ ಹಣ ವರ್ಗಾವಣೆ ಪ್ರಕರಣ ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರನ್ನು ರಾಜ್ಯಪಾಲರನ್ನಾಗಿಸುವ ಆಮಿಷ ಒಡ್ಡಿ ಹಣ ಪಡೆದ ಆರೋಪ ಪ್ರಕರಣವೂ ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳಲ್ಲಿ ಬಂಧನಕ್ಕೊಗಳಗಾಗಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಎಂಬಾತ ಒಟ್ಟು 18.32 ಕೋಟಿ ರು. ವಂಚನೆ ಮಾಡಿರುವ ಆರೋಪವಿದೆ.

ಈತನ ವಿರುದ್ಧ ಸೈಬರ್ ಕ್ರೈಂ ಪೊಲೀಸ್‌ ಠಾಣೆ, ವಿಲ್ಸನ್‌ ಗಾರ್ಡನ್‌, ಸದಾಶಿವನಗರ, ಹೈಗ್ರೌಂಡ್ಸ್‌ ಠಾಣೆಯಲ್ಲಿ ಐಪಿಸಿ ವಿವಿಧ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಾಗಿರುವುದು ತಿಳಿದು ಬಂದಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಯುವರಾಜಸ್ವಾಮಿ ವಿರುದ್ಧ ಐಪಿಸಿ 120(ಬಿ), 406, 419, 420, 506, 504 ಮೊಕದ್ದಮೆ ದಾಖಲಾಗಿದೆ.

ಆಮಿಷಕ್ಕೆ ಒಳಗಾಗಿ ಹಣ ನೀಡಿದ್ದ ಇಂದ್ರಕಲಾ

ನಿವೃತ್ತ ಎಸ್‌ ಪಿ ಪಾಪಯ್ಯ ಎಂಬುವರ ಮೂಲಕ 2018ರಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ‘ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುತ್ತೀರಾ,’ ಎಂದು ಭವಿಷ್ಯ ಹೇಳಿದ್ದ. ಆ ಮೂಲಕ ಅವರಲ್ಲಿ ಆಸೆ ಹುಟ್ಟಿಸಿ ಪಾರ್ಟಿ ಫಂಡ್‌ಗಾಗಿ ಹಣ ನೀಡಬೇಕು ಎಂದು ಯುವರಾಜಸ್ವಾಮಿ  ತಿಳಿಸಿದ್ದ ಖಾತೆಗಳಿಗೆ ಹಂತ ಹಂತವಾಗಿ 3,77,50,002 ರು.ಗಳು ಜಮೆ ಆಗಿತ್ತು.

ಈ ಪೈಕಿ ಇಂದ್ರಕಲಾ ಅವರ ಸ್ನೇಹಿತರಾದ ಸುನೀತಾ ಅವರ ಖಾತೆಯಿಂದ 25,00,00 ರು.ಗಳನ್ನು ಪರಿಮಳ ಎಂಬುವರ ಖಾತೆಯಿಂದ 25,00,000 ರು.ಗಳನ್ನು ಯುವರಾಜಸ್ವಾಮಿ ಖಾತೆಗೆ ವರ್ಗಾವಣೆಯಾಗಿತ್ತು ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.

ಅಲ್ಲದೆ ಇಂದ್ರಕಲಾ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಸಹದ್ಯೋಗಿಗಳಿಂದ 4,50,00,000 ರು.ಗಳನ್ನು ನಗದು ರೂಪದಲ್ಲಿ ನೀಡಲಾಗಿತ್ತು. ಅವರ ಸ್ನೇಹಿತರಾಗಿದ್ದ ನಾಗರಬಾವಿಯ ವಿನಯ್‌ ಎಂಬುವರಿಂದಲೂ 30,00,000 ರು.ಗಳನ್ನು ನೀಡಿದ್ದರು ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಸುದೀಂಧ್ರ ರೆಡ್ಡಿ ಎಂಬುವರಿಗೆ (ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಮೊಕದ್ದಮೆ ಸಂಖ್ಯೆ 40/2020) 1 ಕೋಟಿ ವಂಚಿಸಿದ್ದ ಎಂಬ ಆರೋಪ ಕುರಿತು ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಇದಲ್ಲದೆ ಇನ್ನೂ ಹಲವರು ಯುವರಾಜಸ್ವಾಮಿ ಒಡ್ಡಿದ್ದ ಆಮಿಷಕ್ಕೆ ಬಲಿಯಾಗಿ ಕೋಟ್ಯಂತರ ರುಪಾಯಿಗಳನ್ನು ನೀಡಿದ್ದರು.

ಸಿಲ್ಕ್‌ ಬೋರ್ಡ್‌ ಅಧ್ಯಕ್ಷನನ್ನಾಗಿಸುತ್ತೇನೆಂದು 1.5 ಕೋಟಿ ವಂಚನೆ

ಆನಂದ್‌ಕುಮಾರ್‌ ಕೋಲಾ ಎಂಬುವರನ್ನು ಕೇಂದ್ರದ ಸಿಲ್ಕ್‌ ಬೋರ್ಡ್‌ ಚೇರ್‌ಮನ್‌ ಮಾಡಿಸುವುದಾಗಿ ನಂಬಿಸಿದ್ದ ಯುವರಾಜಸ್ವಾಮಿ 2015ರಲ್ಲೇ 1.5 ಕೋಟಿ ರು.ಗಳನ್ನು ನಗದು ಮತ್ತು ಅಕೌಂಟ್‌ ಮೂಲಕ ಪಡೆದುಕೊಂಡಿದ್ದ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

1.5 ಕೋಟಿ ಪಡೆದ ನಂತರ ಕೋಲಾ ಅವರಿಗೆ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ ಮತ್ತು ಹಣವನ್ನೂ ವಾಪಸ್‌ ನೀಡಿರಲಿಲ್ಲ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts