ಪರಿಹಾರಾತ್ಮಕ ಅರಣ್ಯೀಕರಣ; ಕಾಂಗ್ರೆಸ್‌ ಸರ್ಕಾರದ ನಿರ್ಣಯ ಉಲ್ಲಂಘಿಸಿದ ಸಚಿವ ಕತ್ತಿ

ಬೆಂಗಳೂರು; ಡೀಮ್ಡ್‌ ಅರಣ್ಯ ವ್ಯಾಪ್ತಿಗೆ 1,73,023.19 ಹೆಕ್ಟೇರ್‌ ಪ್ರದೇಶವು ಒಳಪಡುವುದಿಲ್ಲ ಎಂದು ಈ ಹಿಂದೆಯೇ ನಮೂದಿಸಿದ್ದ ಅಂಶವನ್ನು ಬದಿಗೆ ಸರಿಸಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರವು 1,73,023.19 ಹೆಕ್ಟೇರ್‌ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಪರಿಹಾರಾತ್ಮಕ ಅರಣ್ಯೀಕರಣ ಉದ್ಧೇಶಕ್ಕೆ ಮೀಸಲಿಡಲು ಪ್ರಸ್ತಾಪಿಸಿದೆ. ಈ ಮೂಲಕ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ (2015) ಸಚಿವ ಸಂಪುಟ ಕೈಗೊಂಡಿದ್ದ ನಿರ್ಣಯದ ಆಶಯವನ್ನು ಉಲ್ಲಂಘಿಸಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.

ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮುನ್ನೆಲೆಗೆ ಬರುವ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರು ಇದೀಗ ಡೀಮ್ಡ್‌ ಅರಣ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಹಿಂದಿನ ಕಾಂಗ್ರೆಸ್‌ ಸರ್ಕಾರ ಕೈಗೊಂಡಿದ್ದ ನಿರ್ಣಯದ ಆಶಯಕ್ಕೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸಲು ಅನುಮೋದನೆ ನೀಡಿರುವುದು ಮಹತ್ವಪಡೆದುಕೊಂಡಿದೆ.

ಅಲ್ಲದೆ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ರಾಜ್ಯದ ಡೀಮ್ಡ್‌ ಫಾರೆಸ್ಟ್‌ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಪರಿಷ್ಕೃತ ಪ್ರಮಾಣಪತ್ರದಲ್ಲಿ ಅನಾವಶ್ಯಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿಯೂ ಗೊತ್ತಾಗಿದೆ. ಈ ಕುರಿತಂತೆ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಡೀಮ್ಡ್‌ ಅರಣ್ಯಗಳಿಗಷ್ಟೇ ಸೀಮಿತಗೊಳಿಸಿ ಪ್ರಮಾಣಪತ್ರ ಸಲ್ಲಿಸುವುದು ಸೂಕ್ತ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಈಗಾಗಲೇ ಅಭಿಪ್ರಾಯಿಸಿದ್ದಾರೆ. ಈಗಾಗಲೇ ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಬೇಕು ಮತ್ತು ಈ ಹಂತದಲ್ಲಿ ಯಾವುದೇ ಅಂಶಗಳು ಕೈಬಿಟ್ಟು ಹೋಗದಂತೆ ಗಮನದಲ್ಲಿರಿಸಿಕೊಳ್ಳಬೇಕು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಡೀಮ್ಡ್‌ ಫಾರೆಸ್ಟ್‌ ಕುರಿತಂತೆ ತಯಾರಿಸಲಾದ ಪರಿಷ್ಕೃತ ಅಫಿಡವಿಟ್‌ನಲ್ಲಿ ಅನಾವಶ್ಯಕ ವಿಷಯಗಳನ್ನು ಪ್ರಸ್ತಾಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದಾಗಿ 2015ರ ಸಚಿವ ಸಂಪುಟದ ನಿರ್ಣಯದ ಆಶಯವನ್ನು ಉಲ್ಲಂಘಿಸಿದಂತಾಗುತ್ತದೆ. ಅಫಿಡವಿಟ್‌ನ ಕಂಡಿಕೆ 19ರಲ್ಲಿ 1,73,023.19 ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್‌ ಫಾರೆಸ್ಟ್‌ ವ್ಯಾಪ್ತಿಗೆ ಬರುವುದಿಲ್ಲವೆಂದು ನಮೂದಿಸಿದ ಹೊರತಾಗಿಯೂ ವಿಸ್ತೀರ್ಣವನ್ನು ಪರಿಹಾರತ್ಮಕ ಅರಣ್ಯೀಕರಣ ಉದ್ದೇಶಕ್ಕೆ ಮೀಸಲಿಡಲು ಉದ್ದೇಶಿಸಿರುವುದಾಗಿ ಪ್ರಸ್ತಾಪಿಸಲಾಗಿದೆ. ಈ ವಿಷಯವು ಸೇರಿದಂತೆ ಇನ್ನೂ ಕೆಲವು ವಿಷಯಗಳು ಅನಾವಶ್ಯಕವಾಗಿ ಅಫಿಡವಿಟ್‌ನಲ್ಲಿ ಸೇರಿರುವುದು ಕಂಡು ಬರುತ್ತದೆ,’ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಅವರು ಪ್ರಸ್ತಾಪಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

ಪುನರ್ಘಟಿತ ತಜ್ಞರ ಸಮಿತಿಯು 994881.11 ಹೆಕ್ಟೇರ್‌ ಪರಿಭಾವಿತ ಅರಣ್ಯ ವಿಸ್ತೀರ್ಣವನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಹಿಂದೆಯೇ ಸಮಾಲೋಚಿಸಲಾಗಿತ್ತು. ಅಲ್ಲದೆ ಜಿಲ್ಲಾ ಸಮಿತಿಗಳು ಅಂತಿಮಗೊಳಿಸಿದ್ದ 394941.31 ಹೆಕ್ಟೇರ್‌ಗಳಿಗೆ ಇಳಿಸಲಾಗಿತ್ತು. ಪರಿಭಾವಿತ ಅರಣ್ಯ ವಿಸ್ತೀರ್ಣವನ್ನು ಪುನರ್ಘಟಿತ ತಜ್ಞರ ಸಮಿತಿ ಗುರುತಿಸಿದ್ದ 994881.11 ಹೆಕ್ಟೇರ್‌ ಎಂದು ನಿರ್ದಿಷ್ಟಪಡಿಸಿ ಸರ್ವೋಚ್ಛ ನ್ಯಾಯಾಲಯವು ಹಾಗೂ ಕೇಂದ್ರೀಯ ಅಧಿಕಾರಸ್ಥ ಸಮಿತಿಯ ಮುಂದೆ ಪ್ರಮಾಣಪತ್ರ ಸಲ್ಲಿಸಲಾಗಿತ್ತು.

ಜಿಲ್ಲಾ ಮಟ್ಟದ ಸಮಿತಿಗಳು ಪರಿಭಾವಿತ ಅರಣ್ಯದ ವ್ಯಾಪ್ತಿಯಿಂದ ಕೈಬಿಟ್ಟಿರುವ ಒಟ್ಟಾರೆ 173022.00 ಹೆಕ್ಟೇರ್‌ ಪ್ರದೇಶವನ್ನು ಭವಿಷ್ಯದಲ್ಲಿ ಸರ್ಕಾರದ ಯೋಜನೆಗಳ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಮಂಜೂರು ಮಾಡದೇ ಕೇವಲ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ನೀರಾವರಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ಇಲಾಖೆಗಳ ಸಾರ್ವಜನಿಕ ಯೋಜನೆಗಳಿಗಾಗಿ ಉಪಯೋಗಿಸಬೇಕು. ಅಥವಾ ಅಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ಬಿಡುಗಡೆ ಮಾಡಲಾಗಿರುವ ಅರಣ್ಯ ಭೂಮಿಯ ಬದಲಿಗೆ ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕಾಗಿ ಬಿಡುಗಡೆ ಮಾಡಲು 2017ರ ಜೂನ್‌ 22ರಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿತ್ತು ಎಂಬುದು ಗೊತ್ತಾಗಿದೆ.

ಅಲ್ಲದೆ ‘ ಡೀಮ್ಡ್‌ ಫಾರೆಸ್ಟ್‌ ಒಟ್ಟು ವಿಸ್ತೀರ್ಣವನ್ನು 326177.27 ಹೆಕ್ಟೇರ್‌ನಲ್ಲಿ ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೋರಿಕೆಯಂತೆ 617.887 ಹೆಕ್ಟೇರ್‌ ವಿಸ್ತೀರ್ಣವನ್ನು ಕಡಿತಗೊಳಿಸಲು ಹಾಗೂ ಬೆಳಗಾವಿ ಜಿಲ್ಲೆಯ ಕೋರಿಕೆಯಂತೆ 4627.555 ಹೆಕ್ಟೇರ್‌ಗಳನ್ನು ಹೆಚ್ಚಿಸಲು ಹಾಗೂ ಅಂತಿಮವಾಗಿ ಡೀಮ್ಡ್‌ ಫಾರೆಸ್ಟ್‌ ವಿಸ್ತೀರ್ಣವು 330186.938 ಹೆಕ್ಟೇರ್‌ ಎಂದು ಘೋಷಿಸುವ ಮಾರ್ಪಾಡಿನೊಂದಿಗೆ,’ ಸಚಿವ ಸಂಪುಟವು ಅನುಮೋದಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts