ಸಿಎಂ ಇಲಾಖೆಯಲ್ಲೇ ವಿಲೇವಾರಿಗೆ 3,351 ಕಡತ ಬಾಕಿ; ನೂರು ದಿನ ಪೂರೈಸಿದ್ದರೂ ಚುರುಕಿಲ್ಲ

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುವ ಹಣಕಾಸು ಇಲಾಖೆಯಲ್ಲಿ 2021ರ ಅಕ್ಟೋಬರ್‌ 27ರ ಅಂತ್ಯಕ್ಕೆ 3,351 ಕಡತಗಳು ಬಾಕಿ ಉಳಿದಿರುವುದು ಇದೀಗ ಬಹಿರಂಗವಾಗಿದೆ. ಅವರದೇ ಇಲಾಖೆಯು ಕಡತ ವಿಲೇವಾರಿಯಲ್ಲಿ ಹಿಂದೆ ಬಿದ್ದಿರುವುದು ನೂರು ದಿನದ ಸಂಭ್ರಮವನ್ನು ಅಣಕಿಸಿದಂತಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಕಡತ ವಿಲೇವಾರಿಗೆ ಸೂಚಿಸಿದ್ದರಲ್ಲದೆ 15 ದಿನದಲ್ಲಿ ಕಡತಗಳು ವಿಲೇವಾರಿಯಾಗಿರಬೇಕು ಎಂದೂ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು. ಹಣಕಾಸು ಇಲಾಖೆಯಲ್ಲಿಯೇ 3,351 ಕಡತಗಳು ವಿಲೇವಾರಿಯಾಗದಿರುವುದು ಮುಖ್ಯಮಂತ್ರಿ ನೀಡಿದ್ದ ಎಚ್ಚರಿಕೆ ಸಂದೇಶವನ್ನು ಕಸದ ಬುಟ್ಟಿಗೆ ಎಸೆದಂತಾಗಿದೆ.

ಆರ್ಥಿಕ ಇಲಾಖೆಯ 69 ಶಾಖೆಗಳಲ್ಲಿ 7 ದಿನದವರೆಗೆ 8 ರಿಂದ 15 ದಿನ, 16ರಿಂದ 30 ದಿನ, 31ರಿಂದ 60 ದಿನ ಮತ್ತು 60 ದಿನಗಳ ನಂತರ ದಿನಗಳಲ್ಲಿ ಸೃಜಿಸಲಾದ ಕಡತಗಳು ಕೊಳೆಯುತ್ತಿವೆ. 0-7 ದಿನಗಳವರೆಗೆ ವಿಲೇವಾರಿಯಾಗದಿರುವ ಕಡತಗಳ ಸಂಖ್ಯೆ 1,484ರಷ್ಟಿದೆ. 8-15 ದಿನದವರೆಗೆ 329, 16-30 ದಿನದವರೆಗೆ 292, 31-60 ದಿನದವರೆಗೆ 348, 60 ದಿನಗಳ ನಂತರ ಒಟ್ಟು 898 ಕಡತಗಳು ವಿಲೇವಾರಿಯಾಗದೆ ಬಾಕಿ ಇರುವುದು ತಿಳಿದು ಬಂದಿದೆ.

ಕಡತ ವಿಲೇವಾರಿಯಾಗದೇ ಇರುವ ಇಲಾಖೆಗಳಲ್ಲಿ ಕಡತ ವಿಲೇವಾರಿಗೆ ರಾಜ್ಯ ಸರ್ಕಾರ ಅಧೀನ ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿಗಳನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿದ್ದರೂ ಆರ್ಥಿಕ ಇಲಾಖೆಯಲ್ಲಿ 3,351 ಕಡತಗಳು ಬಾಕಿ ಉಳಿದಿವೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೂರು ದಿನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಒಟ್ಟು 98 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಒಟ್ಟು 2,950 ದೂರು ದಾಖಲಾಗಿರುವುದನ್ನು ಸ್ಮರಿಸಬಹುದು.

ಜುಲೈ 28ರಿಂದ ಅಕ್ಟೋಬರ್‌ 25ರವರೆಗೆ 63 ಟ್ರ್ಯಾಪ್‌, 10 ಶೋಧನಾ ಹಾಗೂ ಇತರೆ 25 ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳವು ದಾಖಲು ಮಾಡಿಕೊಂಡಿದೆ. ಈ ಎಲ್ಲಾ ಪ್ರಕರಣಗಳಲ್ಲಿ 101 ಆರೋಪಿ ಸಾರ್ವಜನಿಕ ನೌಕರರನ್ನು ದಸ್ತಗಿರಿ ಮಾಡಿರುವುದು ಇಲಾಖೆಯು ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ದಾಖಲಾಗಿರುವ ಪ್ರಕರಣಗಳ ಪೈಕಿ 57 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ. 1,425 ದೂರು ಅರ್ಜಿಗಳು ಸಲ್ಲಿಕೆಯಾಗಿವೆ. ಬಾಕಿ ಇದ್ದ ಅರ್ಜಿಗಳ ಪೈಕಿ 1,084 ದೂರು ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ಗೊತ್ತಾಗಿದೆ.

ಲೋಕಾಯುಕ್ತದಲ್ಲಿಯೂ ಜುಲೈ 28ರಿಂದ ಅಕ್ಟೋಬರ್‌ 26ರವರೆಗೆ 1,525 ದೂರು ಪ್ರಕರಣಗಳು ದಾಖಲಾಗಿವೆ. 2,865 ಇಲಾಖೆ ವಿಚಾರಣೆಗಳು ಬಾಕಿ ಇವೆಯಲ್ಲದೇ ಈ ಅವಧಿಯಲ್ಲಿ 294 ಪ್ರಕರಣಗಳಲ್ಲಿ ವಿಚಾರಣೆ ವರದಿಗಳನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ 12(3) ಅಡಿ 26 ಪ್ರಕರಣಗಳಲ್ಲಿ ವರದಿ ಸಲ್ಲಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಗಳಲ್ಲಿ 2021ರ ಸೆಪ್ಟಂಬರ್‌ 30ರ ಅಂತ್ಯಕ್ಕೆ 834 ಪ್ರಕರಣಗಳು ಬಾಕಿ ಇವೆ. ಜುಲೈ 28ರಿಂದ ಅಕ್ಟೋಬರ್‌ 26ರವರೆಗೆ 14 ಪ್ರಕರಣಗಳಲ್ಲಷ್ಟೇ ತೀರ್ಪು ಬಂದಿದೆ. ಈ ಪೈಕಿ 03 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಹಲವು ದಿನಗಳ ಕಾಲ ದೆಹಲಿ ಯಾತ್ರೆ ಕೈಗೊಂಡಿದ್ದರು. ಈ ಮಧ್ಯೆಯೇ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟಿನಲ್ಲಿ ಮುಳುಗಿದ್ದರು. ಪ್ರಮುಖವಾಗಿ ಆನಂದ್‌ಸಿಂಗ್‌ ಅವರ ಭಿನ್ನಮತವನ್ನು ಉಪಶಮನಗೊಳಿಸಿದ್ದರು.

ವಿಜಯನಗರ ಜಿಲ್ಲೆಯನ್ನು ಉದ್ಘಾಟಿಸಿದರು. ಸುದ್ದಿವಾಹಿನಿಗಳು ನಡೆಸಿದ್ದ ಸಂದರ್ಶನದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಹಾನಗಲ್‌, ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಎರಡು ಬಾರಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗಳಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts