ಟೆಲಿಸ್ಕೋಪ್‌, ಫೆಸ್‌ ಉಪಕರಣ ಖರೀದಿ; 2.32 ಕೋಟಿ ಹೆಚ್ಚುವರಿ ದರ ನಮೂದಿಸಿದ ಇಲಾಖೆ

ಬೆಂಗಳೂರು; ಕಪ್ಪು ಶಿಲೀಂಧ್ರ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಫೆಸ್‌ ಸೇರಿದಂತೆ ಒಟ್ಟು 11 ಉಪಕರಣಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 128.47 ಕೋಟಿ ರು. ಹೆಚ್ಚಳ ದರದಲ್ಲಿ ಖರೀದಿಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಇಲಾಖೆಗಳಿಂದ ಬಾಕಿ ಇರುವ ಸಾಲ ವಸೂಲು ಮಾಡಲು ಮುಂದಾಗಿರುವ ಸರ್ಕಾರವು ವೈದ್ಯಕೀಯ ಸಲಕರಣೆಗಳನ್ನು ಮಾರುಕಟ್ಟೆಯಲ್ಲಿರುವುದಕ್ಕಿಂತಲೂ ದುಪ್ಪಟ್ಟು ದರದಲ್ಲಿ ಖರೀದಿಸಲು ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ.

ರಾಜ್ಯದ 12 ವೈದ್ಯಕೀಯ ಕಾಲೇಜುಗಳಿಗೆ ಫೆಸ್‌ (ವಯಸ್ಕ ಮತ್ತು ಮಕ್ಕಳಿಗೆ) ಉಪಕರಣ, ಟೆಲಿಸ್ಕೋಪ್‌ (ಜೀರೋ ಡಿಗ್ರಿಯಿಂದ 70 ಡಿಗ್ರಿವರೆಗೆ) ಮಾರುಕಟ್ಟೆಯಲ್ಲಿರುವ ದರದಂತೆ ಒಟ್ಟು 6 ಉಪಕರಣಗಳನ್ನು ಖರೀದಿ ಮಾಡಿದರೆ 34,80,000 ಕೋಟಿ ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರದಂತೆ ಖರೀದಿಸಿದರೆ 2,66,91,792 ರು.ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರಕ್ಕೂ ಮತ್ತು ಮಾರುಕಟ್ಟೆಯಲ್ಲಿರುವ ದರದ ಮಧ್ಯೆ 2,32,11,792 ರು. ಹೆಚ್ಚಳವಿದೆ.

ಫೆಸ್‌ (ವಯಸ್ಕರಿಗೆ) ಉಪಕರಣಕ್ಕೆ ಮಾರುಕಟ್ಟೆಯಲ್ಲಿ 42,000 ರು. ಇದೆ ಎಂದು ತಿಳಿದು ಬಂದಿದೆ. ಈ ದರದಂತೆ ಒಟ್ಟು 12 ವೈದ್ಯಕೀಯ ಕಾಲೇಜುಗಳಿಗೆ 5,04,000 ರು. ವೆಚ್ಚವಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ಕಾಲೇಜಿಗೆ 7,13,160 ರು. ಎಂದು ನಮೂದಿಸಿದೆ. ಇದು ಒಂದು ಉಪಕರಣಕ್ಕೆ 6,71,160 ರು. ಹೆಚ್ಚಳವಾಗಿದೆ. ಇದೇ ದರದಲ್ಲಿ ಒಟ್ಟು 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದಲ್ಲಿ 80,53,920 ರು. ಹೆಚ್ಚುವರಿಯಾಗಿ ವೆಚ್ಚವಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇನ್ನು, ಮಕ್ಕಳನ್ನು ತಪಾಸಣೆ ಮಾಡುವ ಫೆಸ್‌ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 48,000 ರು. ದರವಿದೆ ಎಂದು ಗೊತ್ತಾಗಿದೆ. ಈ ದರದಂತೆ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 5,76,000 ರು. ವೆಚ್ಚವಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಇದೇ ಉಪಕರಣಕ್ಕೆ 7,13,160 ರು. ನಮೂದಿಸಿದೆ. ಈ ದರದ ಪ್ರಕಾರ ಒಂದು ಉಪಕರಣಕ್ಕೆ 6,65,160 ರು. ವೆಚ್ಚವಾಗಲಿದೆ. ಇದೇ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ ಒಟ್ಟು 85,57,920 ರು.ಗಳಾಗಲಿದೆ. ಆದರೆ ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 79,81,920 ರು. ಹೆಚ್ಚಳ ಕಂಡು ಬಂದಿದೆ.

ಟೆಲಿಸ್ಕೋಪ್‌ (ಝೀರೋ ಡಿಗ್ರಿಯಿಂದ 70 ಡಿಗ್ರಿವರೆಗೆ) ಉಪಕರಣಕ್ಕೆ ಮಾರುಕಟ್ಟೆಯಲ್ಲಿ 50,000 ರು. ಇದೆ ಎಂದು ತಿಳಿದು ಬಂದಿದೆ. ಆದರೆ ಇಲಾಖೆಯು ಈ ಉಪಕರಣಕ್ಕೆ 1,97,999 ರು.ನಮೂದಿಸಿದೆ. 50,000 ರು. ದರದಲ್ಲಿ ತಲಾ ಕಾಲೇಜಿಗೆ 6,00,000 ರು. ಗಳಾಗಲಿದೆ. ಇದರಂತೆ 12 ವೈದ್ಯಕೀಯ ಕಾಲೇಜುಗಳಿಗೆ ಒಟ್ಟು 24,00,000 ಲಕ್ಷ ರು.ಗಳಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ 1,97,999 ಮತ್ತು 1,99,999 ರು. ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 95,75,952 ರು. ಗಳಾಗಲಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 71,75,952 ರು. ಹೆಚ್ಚಳವಿದೆ.

ಪಿಐಸಿಯು ವೆಂಟಿಲೇಟರ್ ಸಹಿತ ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ ಮತ್ತು ವೆಂಟಿಲೇಟರ್‌ ಸಹಿತ ಎನ್‌ಐಸಿ ಹಾಸಿಗೆ (ಒಟ್ಟು 1,280 ಹಾಸಿಗೆ)ಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ದರದಲ್ಲಿ ಖರೀದಿಸಲು ಮುಂದಾಗಿದೆ. ವಾಸ್ತವದಲ್ಲಿ 1,280 ಹಾಸಿಗೆಗಳನ್ನು 55,76,00,000 ಕೋಟಿ ರು.ನಲ್ಲಿ ಖರೀದಿಸಬಹುದಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 197.27 ಕೋಟಿ ರು ದರದಲ್ಲಿ ಖರೀದಿಸಲು ಅನುಮೋದನೆ ಪಡೆದಿದೆ.

ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರ ಮಧ್ಯೆ ಅಪಾರ ಹೆಚ್ಚಳ ಇದ್ದರೂ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿರುವುದು ಅಕ್ರಮಕ್ಕೆ ದಾರಿಮಾಡಿಕೊಟ್ಟಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts