ವಿಶ್ವನಾಥ್‌ ಹಿರೇಮಠ್‌ಗೆ ಜೇಷ್ಠತೆ ನಿಗದಿ; ವಿವಾದಕ್ಕೆ ತುಪ್ಪ ಸುರಿದ ಬಸವರಾಜ ಬೊಮ್ಮಾಯಿ

ಬೆಂಗಳೂರು; ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್‌ ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆ ಕರುಣಿಸಿದ್ದ ಬಿಜೆಪಿ ಸರ್ಕಾರ ಇದೀಗ ಅವರಿಗೆ ಜೇಷ್ಠತೆಯನ್ನೂ ನಿಗದಿಗೊಳಿಸಿ ಹೊರಡಿಸಿರುವ ಅಧಿಸೂಚನೆಯು ವಿವಾದಕ್ಕೆ ಕಾರಣವಾಗಿದೆ.

1998, 99 ಮತ್ತು 2004ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್‌ ನಡುವೆಯೇ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ 2020ರ ಜುಲೈ 13ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿದ್ದರು.

ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಗೆ ಬಡ್ತಿ ನೀಡಲು ಹಿಂದಿನ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಲಿಖಿತ ರೂಪದಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಆದರೂ ಅದನ್ನು ಬದಿಗೆ ಸರಿಸಿದ್ದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಎಎಸ್‌ ಹುದ್ದೆಯನ್ನು ಅನುಗ್ರಹಿಸಿದ್ದರು.

ಇದೀಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಎರಡೇ ತಿಂಗಳಲ್ಲಿ ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗೆ ಜೇಷ್ಠತೆಯನ್ನೂ ನಿಗದಿಗೊಳಿಸಿ ಅಧಿಸೂಚನೆಯೂ ಹೊರಬಿದ್ದಿರುವುದು ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಜೇಷ್ಠತೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದರಿಂದ ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗೆ ಐಎಎಸ್‌ಗೆ ಬಡ್ತಿ ನೀಡುವ ಹಾದಿಯನ್ನೂ ಸುಗಮಗೊಳಿಸಿದಂತಾಗಿದೆ.

ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಈ ಮಧ್ಯೆ ವಿಶ್ವನಾಥ್‌ ಹಿರೇಮಠ್‌ ಅವರು ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯಲ್ಲಿಯೂ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಯಾವ ಅರ್ಜಿಗಳೂ ಇದುವರೆಗೂ ಇತ್ಯರ್ಥಗೊಳ್ಳದಿದ್ದರೂ ಜೇಷ್ಠತೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದು ವಿವಾದಕ್ಕೆ ದಾರಿಮಾಡಿಕೊಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ವಿಶ್ವನಾಥ್‌ ಪಿ ಹಿರೇಮಠ್‌ ಮತ್ತು ಪ್ರತಿಭ ಕೆ ಇವರುಗಳ ಜೇಷ್ಠತೆಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು1957ರ ನಿಯಮಗಳ ಅನ್ವಯ ಈ ಇಬ್ಬರು ಅಧಿಕಾರಿಗಳ ಜೇಷ್ಠತೆಯನ್ನು ನಿಗದಿಪಡಿಸಲಾಗಿರುತ್ತದೆ ಎಂದು 2021ರ ಸೆಪ್ಟಂಬರ್‌16ರಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶ್ವನಾಥ್‌ ಪಿ ಹಿರೇಮಠ್‌ ಅವರ ಪ್ರಕರಣದಲ್ಲಿ ಅಡ್ವೋಕೇಟ್‌ ಜನರಲ್‌ ಅವರು ನೀಡಿದ್ದ ಅಭಿಪ್ರಾಯಕ್ಕೂ ಮುಖ್ಯ ಕಾರ್ಯದರ್ಶಿ ಸಮ್ಮತಿ ವ್ಯಕ್ತಪಡಿಸಿರಲಿಲ್ಲ. ಒಂದು ವೇಳೆ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯದ ಪ್ರಕಾರ ಕೆಎಟಿ ಆದೇಶವನ್ನು ಅನುಷ್ಠಾನಗೊಳಿಸಿದರೆ ಉಳಿದ ಅಭ್ಯರ್ಥಿಗಳು ಮತ್ತು 1998,99 ಮತ್ತು 2004ನೇ ಬ್ಯಾಚ್‌ನ ಕೆಎಎಸ್‌ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿರುತ್ತವೆ ಎಂದು ಎಚ್ಚರಿಸಿದ್ದರು. ಆದರೆ ಅದನ್ನೂ ಬದಿಗಿರಿಸಿ ಕೆಎಟಿ ಆದೇಶವನ್ನು ಅನುಷ್ಠಾನಗೊಳಿಸಿದ್ದರಿಂದಾಗಿ ಈ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಮುಖ್ಯ ಕಾರ್ಯದರ್ಶಿ ಅಭಿಪ್ರಾಯದಲ್ಲೇನಿದೆ?

‘ಅಡ್ವೋಕೇಟ್‌ ಜನರಲ್‌ ಅಭಿಪ್ರಾಯದಂತೆ ಕೆಎಟಿ ಆದೇಶವನ್ನು ಯಥಾವತ್ತಾಗಿ ಅನುಷ್ಠಾನ ಮಾಡಿದರೆ ನಿಂದನಾ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಅದಲ್ಲದಲೆ ಜೊತೆಗೆ ಮತ್ತೊಬ್ಬ ಅರ್ಜಿದಾರರು ಹಾಗೂ ಮೂಲ ಕೆಎಟಿ ಆದೇಶ ಸಂಖ್ಯೆ (3428/2005, ದಿನಾಂಕ 14/07/2006) ಆದೇಶದಂತೆ ನೇಮಕಾತಿಯಾದ ಉಳಿದ 4 ಅಭ್ಯರ್ಥಿಗಳು ಸಹ ನ್ಯಾಯಾಲಯದ ಮೊರೆ ಹೋಗಿ ಇದೇ ರೀತಿ ಕೆಎಎಸ್‌ಗೆ ನೇಮಕಾತಿ ಕೋರಬಹುದು. ಅಲ್ಲದೆ ಒಬ್ಬರಿಗೆ/ಇವರಿಬ್ಬರಿಗೆ/ಆರು ಜನರಿಗೆ ಕೆಎಎಸ್‌ಗೆ ನೇಮಿಸುವುದರಿಂದ 1998,1999, 2004ರ ಮೂರು ಬ್ಯಾಚ್‌ನ ಕೆಎಎಸ್‌ ಅಧಿಕಾರಿಗಳ ಜೇಷ್ಠತೆಗೂ ಧಕ್ಕೆ ಆಗುವುದರಿಂದ ಅವರೂ ನ್ಯಾಯಾಲಯದ ಮೊರೆ ಹೋಗಿ ದೀರ್ಘ ನ್ಯಾಯಾಲಯದ ಹೋರಾಟವಾಗಬಹುದು.

ಮೇಲಾಗಿ ನಿಂದನಾ ಅರ್ಜಿದಾರರು ಉಳಿದ ಕೆಎಟಿ ಪ್ರಕರಣದ ಅರ್ಜಿದಾರರುಗಳು 2015 ಹಾಗೂ 2016ರ ಕೆಎಎಸ್‌ಯಿಂದ ಐಎಎಸ್‌ ಆಯ್ಕೆಪಟ್ಟಿಯಲ್ಲೂ ಸೇರಿಸಲು ಪ್ರತಿಪಾದಿಸಬಹುದು. ಇದರಿಂದ 2015,2016 ಹಾಗೂ ತದನಂತರದ ಕೆಎಎಸ್‌ಯಿಂದ ಐಎಎಸ್‌ ಬಡ್ತಿಗಳೂ ಸಹ ತಡವಾಗಬಹುದು,’ ಎಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಮುಖ್ಯಮಂತ್ರಿಗೆ 2020ರ ಜೂನ್‌ 9ರಂದು ಟಿಪ್ಪಣಿ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ

1998, 99 ಮತ್ತು 2004ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್‌ ನಡುವೆಯೇ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ 2020ರ ಜುಲೈ 13ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿತ್ತು.

ವಿಶ್ವನಾಥ ಪಿ ಹಿರೇಮಠ ಅವರು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳನ್ನು 2009ರ ಮಾರ್ಚ್‌ 19ರಂದು ಶಾಖಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ನಂತರದಲ್ಲಿ ಇವರು ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿ( ಸಂಖ್ಯೆ 2121/2010)ಗೆ ಸಂಬಂಧಿಸಿದಂತೆ 2017ರ ಡಿಸೆಂಬರ್‌ 15ರಂದು ತೀರ್ಪು ನೀಡಿತ್ತು. ವಿಶೇಷವೆಂದರೆ ಕೆಎಟಿಯಲ್ಲಿ ಈ ಅರ್ಜಿ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸಿರಲಿಲ್ಲ.

ಅಲ್ಲದೆ ಪ್ರಕರಣವು ಕೆಎಟಿಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಎಟಿಯ ಆಡಳಿತಾತ್ಮಕ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ್ದರು. ಹಾಗೆಯೇ ಅವರು ರಜೆ ಮೇಲೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಂದಿನ ನ್ಯಾಯಾಂಗ ಸದಸ್ಯರೋರ್ವರು ಸರ್ಕಾರ ಆಕ್ಷೇಪಣೆ ಸಲ್ಲಿಸದೇ ಇದ್ದರೂ ಈ ಪ್ರಕರಣದಲ್ಲಿ ವಿಶ್ವನಾಥ ಪಿ ಹಿರೇಮಠ ಅವರಿಗೆ ಗ್ರೂಪ್‌ ಎ ಹುದ್ದೆಯನ್ನು ನೀಡಲು ತೀರ್ಪು ನೀಡಿದ್ದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಒಬ್ಬ ಪ್ರತಿವಾದಿಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು ತಿಳಿದು ಬಂದಿದೆ.

2017ರಲ್ಲಿ ಕೆಎಟಿ ನೀಡಿದ್ದ ತೀರ್ಪು 3 ವರ್ಷಗಳಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಲ್ಲದೆ ಸರ್ಕಾರವೂ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಶ್ವನಾಥ ಹಿರೇಮಠ ಅವರು 2019ರಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ(104/2019) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಇವರಿಗೆ ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿದ್ದು ಸಂಶಯಗಳಿಗೆ ಕಾರಣವಾಗಿತ್ತು.

ಅಲ್ಲದೆ ಇದೇ ಪ್ರಕರಣದಲ್ಲಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ರಾಜ್ಯ ಸರ್ಕಾರವೇ ಹೊರಡಿಸಿರುವ ರೋಸ್ಟರ್‌ ಬಿಂದುವಿನ ಆದೇಶ ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನೀಡಿರುವ ಆದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದರು.
ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿರುವ ರಾಜ್ಯ ಸರ್ಕಾರ, ಕೆಪಿಎಸ್‌ಸಿಯ ನೇಮಕಾತಿ ಅಧಿಸೂಚನೆ 2004ರ ನವೆಂಬರ್‌ 4ರ ಪ್ರಕಾರ ಕೆಎಎಸ್‌(ಕಿರಿಯ ಶ್ರೇಣಿ) ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಅನ್ವಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಅನ್ವಯಿಸಿ ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿತ್ತು.

1998, 99 ಹಾಗೂ 2004ನೇ ಸಾಲಿನಲ್ಲಿ ಒಟ್ಟು 60 ಕೆಎಎಸ್‌ ಸಹಾಯಕ ಆಯುಕ್ತರ ಹುದ್ದೆಗಳು ಲಭ್ಯವಿದ್ದವು. ಇದರಲ್ಲಿ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ವಿಶ್ವನಾಥ ಪಿ ಹಿರೇಮಠ ಅವರು ಈ ಹುದ್ದೆಯನ್ನು ಪಡೆಯಲು ರೋಸ್ಟರ್‌ ಬಿಂದುವಾಗಲಿ, ಅರ್ಹತೆಯನ್ನಾಗಲಿ ಹೊಂದಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

the fil favicon

SUPPORT THE FILE

Latest News

Related Posts