ದೋಷಮುಕ್ತ ಪ್ರಕರಣ ಮಾಹಿತಿ ಬಹಿರಂಗಕ್ಕೆ ನಿರಾಕರಣೆ; ವೈಯಕ್ತಿಕ ಮಾಹಿತಿ ಅಸ್ತ್ರ ಬಳಕೆ ಸರಿಯೇ?

ಬೆಂಗಳೂರು; ಅಹಮದಾಬಾದ್ ಮೂಲದ ಅದಾನಿ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಅಧಿಕಾರಿಗಳನ್ನು ದೋಷಮುಕ್ತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವು ದಾಖಲೆಗಳನ್ನು ಆರ್‌ಟಿಐ ಮೂಲಕ ನೀಡಲು ನಿರಾಕರಿಸಿದೆ. ಆರೋಪದಿಂದ ದೋಷಮುಕ್ತಗೊಂಡ ಪ್ರಕರಣಕ್ಕೆ ವೈಯಕ್ತಿಕ ಮಾಹಿತಿ ಎಂಬ ರಕ್ಷಾ ಕವಚ ಹೊದಿಸಿರುವ ಬಿಜೆಪಿ ಸರ್ಕಾರವು ಇಡೀ ಪ್ರಕರಣದ ಕಡತವನ್ನು ಮುಚ್ಚಿಡಲು ಯತ್ನಿಸಿದೆ. ಸರ್ಕಾರದ ಈ ನಡೆ ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಬಿಡುಗಡೆಗೊಳ್ಳುವ 18 ದಿನದ ಮೊದಲೇ ಅಂದರೆ 2021ರ ಜುಲೈ 8ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 24 ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಹೊರಡಿಸುವುದಕ್ಕೆ ಸಂಬಂಧಿಸಿದಂತೆ ತೆರೆದಿದ್ದ ಸಮಗ್ರ ಕಡತವನ್ನು ಒದಗಿಸಲು ‘ದಿ ಫೈಲ್‌’ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

ಆದರೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಗಿರೀಶ್‌ ರಾಮಚಂದ್ರ ದೇಶಪಾಂಡೆ ವಿರುದ್ಧ ಕೇಂದ್ರೀಯ ಮಾಹಿತಿ ಆಯೋಗ ಮತ್ತು ಇತರರು ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ವೈಯಕ್ತಿಕ ಮಾಹಿತಿಯನ್ನು ಒದಗಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿರುವ ತೀರ್ಪನ್ನು ಉದಾಹರಿಸಿ ಮಾಹಿತಿ ನೀಡಲು ನಿರಾಕರಿಸಿದೆ.

 

ಅಲ್ಲದೆ ಕೇಂದ್ರೀಯ ಮಾಹಿತಿ ಆಯೋಗವು ಸಂಖ್ಯೆ ಸಿಐಸಿ/ಎಸ್‌ಎಂ/ಎ/2013/000058ರ ಪ್ರಕರಣದಲ್ಲಿ 2013ರರ ಜೂನ್‌ 26ರಂದು ನೀಡಿದ್ದ ಆದೇಶದಲ್ಲಿಯೂ ಸಹ ಇಂತಹದೇ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಡಿಪಿಎಆರ್‌, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)ಜೆ ಅಡಿಯಲ್ಲಿ ಅಧಿಕಾರಿಯವರ ವೈಯಕ್ತಿಕ ಮಾಹಿತಿಯನ್ನು ಒದಗಿಸಲು ಅವಕಾಶವಿರುವುದಿಲ್ಲ ಎಂದು ಹೇಳಿ ಮಾಹಿತಿ ಒದಗಿಸಿಲ್ಲ.

ಇದು ವೈಯಕ್ತಿಕ ಮಾಹಿತಿಯೇ?

ಅಹ್ಮದಾಬಾದ್‌ನ ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮವಾಗಿ ಹಣ ಪಡೆದಿದ್ದರು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಆರೋಪದಡಿಯಲ್ಲಿ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಮಂದಿ ಅಧಿಕಾರಿ ನೌಕರರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆದಿತ್ತು. ಇಲಾಖೆ ವಿಚಾರಣೆಯಲ್ಲಿ ಆರೋಪ ಸಾಬೀತಾಗಿಲ್ಲ ಎಂದು 24 ಅಧಿಕಾರಿ ನೌಕರರನ್ನು ದೋಷಮುಕ್ತಗೊಳಿಸಿತ್ತು. ಆದರೆ ಈ ಸಂಬಂಧಿತ ಕಡತವನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಲು ಸರ್ಕಾರವು ವೈಯಕ್ತಿಕ ಮಾಹಿತಿ ಎಂದು ಹೇಳಿ ನುಣುಚಿಕೊಂಡಿದೆ. ಆದರೆ ಇದು ವೈಯಕ್ತಿಕ ಮಾಹಿತಿಯೇ ಅಲ್ಲ ಮತ್ತು ಮಾಹಿತಿ ಹಕ್ಕು ಅಧಿನಿಯಮದ 8(1) ಜೆ ವ್ಯಾಪ್ತಿಗೂ ಒಳಪಡುವುದಿಲ್ಲ.

ವೈಯಕ್ತಿಕ ಮಾಹಿತಿಯಲ್ಲಿ ಏನಿರುತ್ತೆ?

ವೈಯಕ್ತಿಕ ಮಾಹಿತಿ ರಕ್ಷಣಾ ವಿಧೇಯಕ 2018ಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ ಎನ್‌ ಕೃಷ್ಣ ಅವರ ನೇತೃತ್ವದ ಶಿಫಾರಸ್ಸಿನಂತೆ ಪಾಸ್‌ವರ್ಡ್‌, ಹಣಕಾಸಿನ ದತ್ತಾಂಶ, ಆರೋಗ್ಯ ಡೇಟಾ, ಲೈಂಗಿಕ ಜೀವನ, ಬಯೋಮೆಟ್ರಿಕ್‌, ಜೆನಿಟಿಕ್‌ ಡೇಟಾ, ಇಂಟರ್‌ ಸೆಕ್ಸ್‌ ಸ್ಟೇಟಸ್‌, ಜಾತಿ, ಪಂಗಡ, ಧಾರ್ಮಿಕ ಅಥವಾ ರಾಜಕೀಯ ನಂಬಿಕೆಗಳೆಲ್ಲವೂ ವೈಯಕ್ತಿಕ ಮಾಹಿತಿ ಪರಿಧಿಯಲ್ಲಿ ಬರುತ್ತವೆ ಎಂದು ಹೇಳಿದೆ.

8(1)ಜೆ ಪ್ರಕಾರ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಕ್ಕೆ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ ಹೊರತು ಯಾವ ಮಾಹಿತಿಯು ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ ಅತಿಕ್ರಮಿಸಿದಂತಾಗುತ್ತದೆಯೋ ಅಂತಹ ವೈಯುಕ್ತಿಕ ವಾಹಿತಿಗೆ ಸಂಬಂಧಿಸಿದ ಮಾಹಿತಿ ಎಂದು ವ್ಯಾಖ್ಯಾನಿಸಿದೆ.

ಈ ಎರಡೂ ಅಂಶಗಳ ಪ್ರಕಾರ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿರುವ ಪ್ರಕರಣದ ಮಾಹಿತಿಯು ವೈಯಕ್ತಿಕ ಮಾಹಿತಿಯಾಗಿರುವುದಿಲ್ಲ . ಆದರೂ ಈ ಮಾಹಿತಿಯನ್ನು ಮುಚ್ಚಿ ಹಾಕಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಕರಣದ ವಿವರ

ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆ ಕುರಿತು ಹಿಂದಿನ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ಸರ್ಕಾರಕ್ಕೆ ನೀಡಿದ್ದ ತನಿಖಾ ವರದಿಯನ್ನು ಬಿಜೆಪಿ ಸರ್ಕಾರವೂ ಕಸದ ಬುಟ್ಟಿಗೆ ತಳ್ಳಿದಂತಾಗಿದೆ. ದೋಷಮುಕ್ತಗೊಳಿಸುವ ಆದೇಶ ಹೊರಡಿಸುವ ಮುನ್ನ ಲೋಕಾಯುಕ್ತ ವಿಶೇಷ ತನಿಖಾ ತಂಡದ ಅಭಿಪ್ರಾಯ ಕೋರಿದ್ದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಎಸ್‌ಐಟಿಯು 24 ಅಧಿಕಾರಿ ನೌಕರರ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ ಎಂದು ನೀಡಿದ್ದ ಮಾಹಿತಿಯನ್ನೇ ಮುಂದಿರಿಸಿಕೊಂಡು ಅವರನ್ನು ದೋಷಮುಕ್ತಗೊಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಆರೋಪಿತ ಅಧಿಕಾರಿ, ನೌಕರರ ವಿರುದ್ಧ ದುರ್ನಡತೆಗಾಗಿ ಜಂಟಿ ಇಲಾಖೆ ವಿಚಾರಣೆ ನಡೆಸಿದ್ದ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಂ ಎನ್‌ ಗದಗ್‌ ಮತ್ತು ಪಿಡಬ್ಲ್ಯೂಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌ ಎಸ್‌ ವಿರಕ್ತ ಮಠ ಅವರ ಜಂಟಿ ವಿಚಾರಣೆ ತಂಡದ ಶಿಫಾರಸ್ಸಿನ ಮೇರೆಗೆ 24 ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಲಾಗಿದೆ.

ಆರೋಪ ಸಾಬೀತಾಗಲಿಲ್ಲವೇ?

‘ಬೇಲೇಕೇರಿ ಬಂದರಿನಲ್ಲಿ ಕಬ್ಬಿಣದ ಅದರಿನ್ನು ಅನಧಿಕೃತವಾಗಿ ರಫ್ತು ಮಾಡಲು ಅವಕಾಶ ಕಲ್ಪಿಸಲು ಬಂದರು ಬಳಕೆದಾರ ಸಂಸ್ಥೆಯಾದ ಅಹ್ಮದಾಬಾದ್‌ನ ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮ ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಈ ಕೆಳಕಂಡ ಅಧಿಕಾರಿ ನೌಕರರ ಮೇಲೆ ನಡೆಸಿದ ಜಂಟಿ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವುದಿಲ್ಲವೆಂದು ವಿಚಾರಣಾ ವರದಿಯಲ್ಲಿ ನಿರ್ಣಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣಾ ವರದಿಯನ್ನು ಅಂಗೀಕರಿಸಿ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಮಂದಿ ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್‌ ಕೆ ಶಾಂತರಾಜು ಅವರು 2021ರ ಜುಲೈ 8ರಂದು ಆದೇಶ ಹೊರಡಿಸಿದ್ದಾರೆ.

ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಒಳಗೊಂಡಂತೆ ಇತರೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಸಿವಿಲ್‌ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 13ರ ಅನ್ವಯ ಜಂಟಿ ಇಲಾಖೆ ವಿಚಾರಣೆ ನಡೆಸಲಾಗಿತ್ತು.

ದಂಡನೆ ವಿಧಿಸಲು ಆದೇಶಿಸಿ ಕಡೆಗೆ ದೋಷಮುಕ್ತಗೊಳಿಸಿದ್ದೇಕೆ?

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ್ದ ವರದಿಯಲ್ಲಿ ಬೇಲೇಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಅಕ್ರಮ ಸಾಗಾಣಿಕೆಯಲ್ಲಿ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿ ಅವ್ಯವಹಾರ ನಡೆಸುವ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದರು ಎಂಬ ಆರೋಪಿಸಲಾಗಿತ್ತು.

ಈ ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪಿಡಬ್ಲ್ಯುಡಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನು ಶಿಸ್ತು ಪ್ರಾಧಿಕಾರಿಯನ್ನಾಗಿ ನೇಮಿಸಿತ್ತು. ಅಲ್ಲದೆ ನಿವೃತ್ತ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಅವರಿಗೆ ದಂಡನೆ ವಿಧಿಸಲು ಉದ್ದೇಶಿಸಿದ್ದಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಅನುಮೋದನೆಯೊಡನೆ ಯಾವುದೇ ದಂಡನೆ ವಿಧಿಸಬಹುದು ಎಂದು ಹೇಳಿತ್ತು. ಆದರೆ ಅದೇ ಇಲಾಖೆಯು ಜಂಟಿ ಇಲಾಖೆ ವಿಚಾರಣೆ ವರದಿ ಆಧರಿಸಿ ಆರೋಪಿತ ಎಲ್ಲಾ ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ದೋಷಮುಕ್ತಗೊಂಡ ಅಧಿಕಾರಿ ನೌಕರರ ಪಟ್ಟಿ

ಕ್ಯಾಪ್ಟನ್‌ ಆರ್‌ ಮೋಹನ್‌ (ನಿರ್ದೇಶಕರು)

ಕ್ಯಾಪ್ಟನ್‌ ಸಿ ಸ್ವಾಮಿ (ಬಂದರು ಅಧಿಕಾರಿ)

ಟಿ ಎಸ್‌ ರಾಠೋಡ್‌ (ಕಾರ್ಯನಿರ್ವಾಹಕ ಇಂಜಿನಿಯರ್‌)

ಯಜ್ಞಕುಮಾರ್‌ (ಜಲ ಮೋಜಣಿದಾರರು)

ಮಹೇಶ್‌ ಜೆ ಬಿಲಿಯೆ (ಉಪ ಬಂದರು ಸಂರಕ್ಷಣಾಧಿಕಾರಿ)

ಟಿ ಆರ್‌ ನಾಯ್ಕ (ನಿವೃತ್ತ ಬಂದರು ಸಂರಕ್ಷಣಾಧಿಕಾರಿ)

ಯೋಗೇಶ್‌ ಎ ಶೆಟ್ಟಿ (ಉಪ ಬಂದರು ಸಂರಕ್ಷಣಾಧಿಕಾರಿ)

ಡಿ ಸಿ ಪರುಳೇಕರ ( ಉಪ ಬಂದರು ಸಂರಕ್ಷಣಾಧಿಕಾರಿ)

ಗೌಸ್‌ ಅಲಿ (ಸಹಾಯಕ ಬಂದರು ಸಂರಕ್ಷಣಾಧಿಕಾರಿ)

ಸಾಯಿನಾಥ ವಿ ಥಾಮಸೆ (ಸಹಾಯಕ ಬಂದರು ಸಂರಕ್ಷಣಾಧಿಕಾರಿ)

ರಾಮಚಂದ್ರನಾಯಕ, ಸಹಾಯಕ ದೀಪಪಾಲಕ

ಎಂ ಯು ಆಚಾರಿ, ಲಾಸ್ಕರ

ಎನ್‌ ಎಂ ಗಾಂವಕರ , ಲಾಸ್ಕರ

ಎಂ ಆರ್‌ ಹರಿಕಂತ್ರ, ನಾವಿಕ

ಜೆ ಅವರಸೇಕರ, ನಾವಿಕ

ರಾಜು ಕೆ ಕುಂದರ, ಲಾಸ್ಕರ

ಆರ್‌ ಎಂ ನಾಯ್ಕ, ಲಾಸ್ಕರ

ಕೆ ವಿ ನಾಯ್ಕ ಲಾಸ್ಕರ

ಪಿ ಎಸ್‌ ನಾಯ್ಕ ಲಾಸ್ಕರ

ಗಣು ಎನ್‌ ಅಗೇರ, ನಾವಿಕ

ಸಾಯಿನಾಥ್‌ ಕೇರಕರ, ಸಾರಂಗ-3

ಮಹೇಶ್‌ ಎಲ್‌ ಹರಿಕಂತ್ರ ಸಾರಂಗ-3

ಈ ಎಲ್ಲಾ ಅಧಿಕಾರಿಗಳು ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮ ಹಣ ಪಡೆದಿದ್ದರು ಎಂದು ಹಿಂದಿನ ಲೋಕಾಯುಕ್ತರು ತನಿಖೆಯಲ್ಲಿ ಸಾಬೀತುಪಡಿಸಿದ್ದರು. ಆದರೆ ಜಂಟಿ ಇಲಾಖೆ ವಿಚಾರಣೆಯಲ್ಲಿ ಈ ಯಾವ ಆರೋಪಗಳೂ ಸಾಬೀತಾಗಿರಲಿಲ್ಲ. ಆರೋಪಿತ ಅಧಿಕಾರಿ, ನೌಕರರು ನೀಡಿದ್ದ ರಕ್ಷಣಾತ್ಮಕ ಹೇಳಿಕೆ, ಪ್ರಶ್ನಾವಳಿ ವಿವರಣೆ ಮತ್ತು ಮೌಖಿಕ ಪ್ರತಿ ವಾದಗಳನ್ನಾಧರಿಸಿ ಜಂಟಿ ಇಲಾಖೆ ವಿಚಾರಣಾಧಿಕಾರಿಗಳು ಅಧಿಕಾರಿ ನೌಕರರ ವಿರುದ್ಧ ಆರೋಪಗಳು ರುಜುವಾತಾಗಿಲ್ಲ ಎಂದು ವರದಿ ಸಲ್ಲಿಸಿದ್ದರು.

ಕರ್ನಾಟಕ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ತಾವು ಸ್ವಂತದ ಕಬ್ಬಿಣದ ಅದಿರು ಕಂಪೆನಿ ಹೊಂದಿಲ್ಲ ಅಥವಾ ಅದಿರು ಕಂಪೆನಿ ಸಂಚಾಲನೆ ನಡೆಸುತ್ತಿಲ್ಲ ಎಂದು ಅದಾನಿ ಎಂಟರ್‌ ಪ್ರೈಸಸ್ ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು.

ಕರ್ನಾಟಕದ ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿಯನ್ನು ಆರೋಪಿಯನ್ನಾಗಿಸಿ ಸಿಇಸಿ ಸುಪ್ರೀಂಕೋರ್ಟೀಗೆ ವರದಿ ಸಲ್ಲಿಸಿತ್ತು.

ಧಾರವಾಡ ಮೂಲದ ಎನ್‌ಜಿಒ ಸಮಾಜ ಪರಿವರ್ತನಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತನಿಖೆಗೆ ಸುಪ್ರೀಂ ಕೋರ್ಟು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ರಚಿಸಿತ್ತು. ಈ ಸಮಿತಿ ತನ್ನ ವರದಿಯಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಅದಾನಿ ಎಂಟರ್‌ಪ್ರೈಸೆಸ್ ಸಹಿತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಒಟ್ಟು ನಾಲ್ಕು ಕಂಪೆನಿಗಳ ಮೇಲೆ ತನಿಖೆಗೆ ಸೂಚಿಸಲಾಗಿತ್ತು.

ಒಟ್ಟು 850,000 ಮಟ್ರಿಕ್ ಟನ್ ನಷ್ಟು ಕಬ್ಬಿಣ ಅದಿರು ಅಕ್ರಮವಾಗಿ ರಫ್ತಾಗಿದೆ ಎಂಬ ಆರೋಪವನ್ನು ಅದಾನಿ ಸೇರಿದಂತೆ ನಾಲ್ಕು ಕಂಪನಿಗಳ ಮೇಲೆ ಹೊರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts