ಉತ್ತರ ಪತ್ರಿಕೆಗಳ ಅದಲುಬದಲು; 6 ವರ್ಷಗಳಾದರೂ ಕ್ರಮವಿಲ್ಲ, ಆರೋಪಿಗಳ ರಕ್ಷಣೆಗಿಳಿದ ಸರ್ಕಾರ

ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಅದಲು ಬದಲು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯೇ ರಕ್ಷಣೆಗಿಳಿದಿದೆ. ಹೀಗೆಂದು ಶಾಸಕ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು ಸಂಶಯಿಸಿದೆ.

ಹೀಗೆಂದು ಕರ್ನಾಟಕ ವಿಧಾನಸಭೆಯ ಸರ್ಕಾರ ಭರವಸೆಗಳ ಸಮಿತಿ (2020-21)ಯೇ ಪ್ರತಿಪಾದಿಸಿದೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶಿವಾನಂದ ಎಸ್‌ ಪಾಟೀಲ್‌ ಮತ್ತು ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ (ಹಾಲಿ ಸಚಿವರು) ಅವರು 2015ರ ನವೆಂಬರ್‌ 26ರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಅಂದಿನ ವೈದ್ಯಕೀಯ ಶಿಕ್ಷಣ ಸಚಿವರು ನೀಡಿದ್ದ ಭರವಸೆ 6 ವರ್ಷಗಳಾದರೂ ಈಡೇರಿಲ್ಲ ಎಂಬ ಸಂಗತಿ ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಪ್ರಕರಣದ ಕುರಿತು 2018-19ನೇ ಸಾಲಿನಲ್ಲಿದ್ದ ಸಮಿತಿಯು ಭರವಸೆಯನ್ನು ಕಾಯ್ದಿರಿಸಿತ್ತು. ಇದೀಗ 11ನೇ ವರದಿಯಲ್ಲಿಯೂ ಇದೇ ಭರವಸೆಯನ್ನು ಕಾಯ್ದಿರಿಸಿದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಅದಲು ಬದಲು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ವಿಚಾರಣೆ ನಡೆಸಿ ಸಿವಿಲ್‌ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಸದ್ಯ ವಿಚಾರಣೆ ಪ್ರಗತಿಯಲ್ಲಿದೆ ಎಂದು ಸಮಿತಿಗೆ ಮಾಹಿತಿ ಒದಗಿಸಿರುವ ಇಲಾಖೆಯು ಈ ಸಂಬಂಧ ಸಮಾನಂತರವಾಗಿ ಇಲಾಖೆ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಹೇಳಿದೆ.

2020ರ ನವೆಂಬರ್‌ 8 ಮತ್ತು 9 ರಂದು ವಿಚಾರಣೆ ನಡಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ವಿಚಾರಣೆ ಮುಕ್ತಾಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು ನೀಡಿದ್ದ ಉತ್ತರಕ್ಕೆ ಸಮಿತಿಯು ಅಸಮಾಧಾನಗೊಂಡಿದೆ. ಅಲ್ಲದೆ ‘ ಈ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇಲಾಖೆ ವತಿಯಿಂದಲೇ ಆರೋಪಿತರನ್ನು ರಕ್ಷಣೆ ಮಾಡಲಾಗುತ್ತಿದೆ,’ ಎಂಬ ಅನುಮಾನವನ್ನೂ ಸಮಿತಿಯು ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಉತ್ತರ ಪತ್ರಿಕೆ ಬದಲಾವಣೆಯು ಗಂಭೀರ ವಿಷಯವಾಗಿದ್ದು ಆದ್ಯತೆ ಮೇರೆಗೆ ಇಲಾಖೆ ವಿಚಾರಣೆಯನ್ನು 2 ತಿಂಗಳೊಳಗೆ ಮುಕ್ತಾಯಗೊಳಿಸಿ ಸಮಿತಿಗೆ ಮಾಹಿತಿ ನೀಡಬೇಕು ಎಂದು ಸಮಿತಿಯು ಸೂಚಿಸಿದೆ.

ಪ್ರಕರಣದ ಹಿನ್ನಲೆ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ­ಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಯ ಉತ್ತರಪತ್ರಿಕೆ ಅದಲು ಬದಲು ಮಾಡಿದ್ದ ಪ್ರಕರಣದಲ್ಲಿ ರಾಜ್ಯದ ವಿವಿಧ ಭಾಗದ 7 ವೈದ್ಯಕೀಯ ಕಾಲೇಜುಗಳಿಗೆ ಸೇರಿದ ಹತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ 19 ಉತ್ತರ ಪತ್ರಿಕೆಗಳು ಅಕ್ರಮವಾಗಿ ಬದಲಾಗಿದ್ದವು. ಇದು ಆಂತರಿಕ ತನಿಖೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಿಂದಲೂ ಖಾತ್ರಿಯಾಗಿತ್ತು. ಆರೋಪಕ್ಕೆ ಗುರಿಯಾಗಿದ್ದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡದಿರಲು ವಿಶ್ವವಿದ್ಯಾಲಯವು ತೀರ್ಮಾನಿಸಿತ್ತು.

2014ರ ವೈದ್ಯಕೀಯ ಸ್ನಾತಕೋತ್ತರ ಮತ್ತು ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತರಪತ್ರಿಕೆಗಳು ಅದಲು ಬದಲಾಗಿವೆ ಎಂದು ಜಯಪ್ರಕಾಶ್‌ ಉಲ್ಲಾಸ್‌ ಎಂಬುವರು 2014ರ ಜುಲೈ 21ರಂದು ಮುಖ್ಯಮಂತ್ರಿಗೆ ದೂರು ಸಲ್ಲಿಕೆಯಾಗಿತ್ತು.

ಸಿಂಡಿಕೇಟ್‌ ಸದಸ್ಯರಾಗಿದ್ದ ಡಾ.ರಾಜೇಶ್‌ ಶೆಣೈ ಅವರ ಅಧ್ಯಕ್ಷತೆಯಲ್ಲಿ ಸೆನೆಟ್‌ ಸದಸ್ಯರಾದ ಡಾ ಕಿರಣ್‌ ಅವರನ್ನು ಒಳಗೊಂಡ ಆಂತರಿಕ ತನಿಖಾ ಸಮಿತಿ ರಚನೆಯಾಗಿತ್ತು. 2014ರಲ್ಲಿ ನಡೆದಿದ್ದ ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌, ಔಷಧ ವಿಜ್ಞಾನ ಮತ್ತು ಇತರೆ ಆರೋಗ್ಯ ಸೇವೆಗಳ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಆಂತರಿಕ ತನಿಖಾ ಸಮಿತಿಯು ಪರಿಶೀಲಿಸಿತ್ತು.

ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದ 1,630 ಹಾಗೂ ದಂತವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದ 635 ವಿದ್ಯಾರ್ಥಿಗಳ ವಿವಿಧ ವಿಷಯಗಳ 9,060 ಉತ್ತರ ಪತ್ರಿಕೆಗಳನ್ನು ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿತ್ತು. ಈ ಪೈಕಿ ಹತ್ತು ವಿದ್ಯಾರ್ಥಿಗಳ 19 ಪತ್ರಿಕೆಗಳನ್ನು ಅಕ್ರಮವಾಗಿ ಬದಲಿಸಲಾಗಿತ್ತು ಎಂದು ಸಮಿತಿ ವರದಿ ನೀಡಿತ್ತು.

ಆಂತರಿಕ ತನಿಖಾ ಸಮಿತಿಯು ನೀಡಿದ್ದ ವರದಿಯು 2014ರ ಆಗಸ್ಟ್‌ 27ರಂದು ನಡೆದಿದ್ದ ವಿಶೇಷ ಸಿಂಡಿಕೇಟ್‌ ಸಭೆಯ ಮುಂದೆ ಮಂಡಿಸಲಾಗಿತ್ತು. ಅದಲು ಬದಲಾಗಿವೆ ಎಂದು ಹೇಳಲಾಗಿದ್ದ ಉತ್ತರ ಪತ್ರಿಕೆಗಳನ್ನು ಖಚಿತಪಡಿಸಿಕೊಳ್ಳಳು ಟ್ರೂತ್‌ ಲ್ಯಾಬ್‌ ಪ್ರಯೋಗಾಲಯಕ್ಕೂ ಕಳಿಸಲಾಗಿತ್ತು. ಉತ್ತರಪತ್ರಿಕೆಗಳು ಅದಲು ಬದಲಾಗಿವೆ ಎಂದು ಟ್ರೂತ್‌ ಲ್ಯಾಬ್‌ ಕೂಡ ದೃಢಪಡಿಸಿತ್ತು.

ವಿಶ್ವವಿದ್ಯಾಲಯವು ನೀಡಿದ್ದ ಉತ್ತರ ಪತ್ರಿಕೆಗಳಲ್ಲಿ ಐದು ರೀತಿಯ ವಿಶಿಷ್ಟ ಗುರುತುಗಳಿದ್ದವು. ಪತ್ರಿಕೆಯನ್ನು ಎರಡು ರೀತಿಯ ದಾರದಿಂದ ಹೊಲೆಯಲಾಗಿತ್ತು. ಪ್ರತಿ ಹೊಲಿಗೆಯ ಅಂತರ ಮೂರು ಮಿ.ಮೀ. ಹೊಲೆ­ಯಲು ವಿಶಿಷ್ಟ ದಾರವನ್ನು ಬಳಸಲಾಗಿತ್ತು. ಪತ್ರಿಕೆಯ ಮೇಲ್ಭಾಗ­ದಲ್ಲಿ ತ್ರಿಕೋನಾಕಾರದಲ್ಲಿ ಪಂಚ್‌ ಮಾಡಲಾಗಿತ್ತು. ಹಾಗೆಯೇ ಹೊಲಿಗೆಯನ್ನು ಸೇರಿಸಿ ಹಾಲೋಗ್ರಾಮ್‌ ಹಾಕಲಾಗಿತ್ತು. ಈ ಗುರುತುಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

the fil favicon

SUPPORT THE FILE

Latest News

Related Posts