ವಿದ್ಯಾರ್ಥಿ ನಿಲಯಗಳಲ್ಲಿ ಮುಸ್ಲಿಮ್‌ ಯುವಕರಿಗಿಲ್ಲ ಪ್ರಾತಿನಿಧ್ಯ; ಶೇ.90ರಷ್ಟು ಹಿಂದೂಗಳಿಗೆ ಆದ್ಯತೆ

ಬೆಂಗಳೂರು; ರಾಜ್ಯದ ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ಸಾಮಾಜಿಕ ಸಮಗ್ರತೆಯ ಅಸಮಾನತೆ, ಸಾಮಾಜಿಕ ಮತ್ತು ಜನಾಂಗೀಯ ಹಿನ್ನೆಲೆಗಳನ್ನು ನೋಡಲಾಗುತ್ತಿದೆ. ಅಲ್ಲದೆ ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಿಂದೂಗಳಾಗಿದ್ದರೆ ಶೇ. 4ರಷ್ಟು ಮಾತ್ರ ಮುಸ್ಲಿಮ್‌ರಿದ್ದಾರೆ. ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ಮುಸ್ಲಿಮ್‌ ಯುವಕರ ಪ್ರಾತಿನಿಧ್ಯ ತೃಪ್ತಿಕರವಾಗಿಲ್ಲ ಎಂಬ ಸಂಗತಿಯನ್ನು ಪ್ಯಾನ್‌ ಇಂಡಿಯಾ ನೆಟ್‌ವರ್ಕ್‌ನ ಅಧ್ಯಯನ ಸಮೀಕ್ಷೆಯು ಹೊರಗೆಡವಿದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಡಾ ಸುದೇಶ್ನಾ ಮುಖರ್ಜಿ ಅವರ ಪ್ರಧಾನ ಸಂಶೋಧಕತ್ವದಲ್ಲಿ ಪ್ಯಾನ್‌ ಇಂಡಿಯಾ ನೆಟ್‌ವರ್ಕ್ ಸಂಸ್ಥೆಯು ಕರ್ನಾಟಕದಲ್ಲಿ ಆಯ್ದ ಕ್ರೀಡೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಮಧ್ಯಸ್ಥಿಕೆಗಳ ಪರಿಣಾಮದ ಮೌಲ್ಯಮಾಪನ (2011-12ರಿಂದ 2016-17) ಕುರಿತು ನಡೆಸಿರುವ ಅಧ್ಯಯನ ಸಮೀಕ್ಷೆಯು ರಾಜ್ಯದ ಕ್ರೀಡಾ ವಿದ್ಯಾರ್ಥಿ ನಿಲಯಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆ, ವಿದ್ಯಾರ್ಥಿ ನಿಲಯಗಳಲ್ಲಿನ ಮೂಲ ಸೌಕರ್ಯ, ಲಿಂಗ ತಾರತಮ್ಯವೂ ಸೇರಿದಂತೆ ಸಾಮಾಜಿಕ ಮಾನ್ಯತೆ ಮತ್ತು ಎಲ್ಲಾ ಸಮುದಾಯಗಳ ಒಳಗೊಳ್ಳುವಿಕೆಯನ್ನು ವಿಶ್ಲೇಷಿಸಿದೆ. ಪ್ಯಾನ್‌ ಇಂಡಿಯಾ ನೆಟ್‌ವರ್ಕ್ ನಡೆಸಿರುವ ಅಧ್ಯಯನ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಮತ್ತು ಪ್ಯಾರಾಒಲಂಪಿಕ್ಸ್‌ ಸ್ಪರ್ಧೆ ಪಂದ್ಯಾವಳಿಗಳಲ್ಲಿ ರಾಜ್ಯದ ಪ್ರಾತಿನಿಧ್ಯವಿಲ್ಲದ್ದರ ಕುರಿತು ಚರ್ಚೆಗಳು ನಡೆದಿದ್ದರ ಬೆನ್ನಲ್ಲೇ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿರುವ ಅಧ್ಯಯನ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿ ಸಲ್ಲಿಕೆಯಾಗಿ 8 ತಿಂಗಳಾದರೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ನಾರಾಯಣಗೌಡ ಅವರು ವರದಿಯತ್ತ ತಿರುಗಿಯೂ ನೋಡಿಲ್ಲ!

ಕ್ರೀಡಾ ವಿದ್ಯಾರ್ಥಿ ನಿಲಯಗಳಿಗೆ ಬರುತ್ತಿರುವ ಹಿಂದೂ ವಿದ್ಯಾರ್ಥಿಗಳ ಪೈಕಿ ಶೇ.25.08ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಉಳಿದಂತೆ ಕ್ರಿಶ್ಚಿಯನ್ನರು ಶೇ. 1.3ರಷ್ಟಿದ್ದಾರೆ. ಮುಸ್ಲಿಂ ಯುವಕರಲ್ಲಿ ಕ್ರೀಡೆ ಕುರಿತು ಜಾಗೃತಿ ಮೂಡಿಸುವುದು, ಅರ್ಥಿಕ ಸುಧಾರಣೆ, ಸಾಮಾಜಿಕ ಮಾನ್ಯತೆ ಮತ್ತು ಚಲನಶೀಲತೆಯ ಸಾಧನವಾಗಿ ಕ್ರೀಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪರಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧ್ಯಯನ ವರದಿಯು ಶಿಫಾರಸ್ಸು ಮಾಡಿದೆ.

ಇದಲ್ಲದೆ ಧಾರ್ಮಿಕ ಹಿನ್ನೆಲೆಯ ವಿದ್ಯಾರ್ಥಿ ನಿಲಯಗಳು ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳು ಫಲಾನುಭವಿಗಳಲ್ಲಿ ಪ್ರಾತಿನಿಧ್ಯ ಸಮಾನತೆಯಿಂದ ಕೂಡಿಲ್ಲ. ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿನ ಅಸಮರ್ಪಕ ಸೌಲಭ್ಯಗಳು ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು ಇತರೆ ಧಾರ್ಮಿಕ ಅಲ್ಪಸಂಖ್ಯಾತರ ಕ್ರೀಡಾ ವ್ಯಕ್ತಿಗಳನ್ನು ಆಕರ್ಷಿಸಲು ಸಾಧ್ಯವಾಗಿಲ್ಲ ಎಂದು ಅಧ್ಯಯನ ವರದಿಯು ಅಭಿಪ್ರಾಯಪಟ್ಟಿದೆ.

ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ನಡುವೆ ಕ್ರೀಡಾ ವಿಭಾಗಗಳ ಎಲ್ಲಾ ಶಾಖೆಗಳಲ್ಲಿ ಸಾಮಾಜಿಕ ಸಮಗ್ರತೆಯ ಅಸಮಾನತೆಯು ಎದ್ದು ಕಾಣುತ್ತಿದೆ. ಹಾಗೆಯೇ ಸಾಮಾಜಿಕ ಮತ್ತು ಜನಾಂಗೀಯ ಹಿನ್ನೆಲೆಗಳನ್ನು ಹೆಚ್ಚು ವಿಸ್ತಾರವಾಗಿ ಪ್ರತಿನಿಧಿಸುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. ಇವರಲ್ಲಿ ಹೆಚ್ಚಿನವರು ಕಡಿಮೆ-ಆದಾಯದ ಕುಟುಂಬಗಳಿಂದ ಬಂದವರು. ಶ್ರೀಮಂತರು ಖಾಸಗಿ ಕ್ರೀಡಾ ತರಬೇತಿ ಅಕಾಡೆಮಿಗಳು ಅಥವಾ ಸಂಸ್ಥೆಗಳಲ್ಲಿ ತಮ್ಮನ್ನು ಸೇರಿಸಲು ಒಲವು ತೋರಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಿಂಗ ತಾರತಮ್ಯ – ಕಿರುಕುಳ

ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ಲಿಂಗ ಆಧರಿತ ತಾರತಮ್ಯವಿದೆ. ಮಹಿಳಾ ಕ್ರೀಡಾಪಟುಗಳಿಗೆ ಕಿರುಕುಳ ನೀಡಿದ ಉದಾಹರಣೆಗಳೂ ಇವೆ. ಅಂತಹ ಪ್ರಕರಣಗಳ ಯಾವುದೇ ಬಹಿರಂಗಪಡಿಸುವಿಕೆಯ ಪ್ರತಿಕೂಲ ಪರಿಣಾಮಗಳ ಭಯವು ಅನೇಕರು ಯಾವುದೇ ಔಪಚಾರಿಕ ದೂರು ನೀಡುವುದನ್ನು ತಡೆದಿದಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಸ್ಟೆಲ್‌ಗಳಲ್ಲಿದೆ ಲೈಂಗಿಕ ಕಿರುಕುಳ

ಮಹಿಳಾ ಕ್ರೀಡಾ ವಿದ್ಯಾರ್ಥಿ ನಿಲಯಗಳನ್ನು ತೊರೆದ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ತಂಡವು ಸಮಾಲೋಚನೆ, ಸಂದರ್ಶನಗಳನ್ನು ನಡೆಸಿದೆ. ಕ್ರೀಡಾ ತರಬೇತುದಾರರು ಮತ್ತು ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳಿಂದ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆಯೂ ಅಧ್ಯಯನ ತಂಡಕ್ಕೆ ಸುಳಿವು ನೀಡಿರುವುದು ಗೊತ್ತಾಗಿದೆ. ಲೈಂಗಿಕ ಕಿರುಕುಳ, ದೌರ್ಜನ್ಯ, ಶೋಷಣೆಗೆ ಒಳಗಾಗಿದ್ದರೂ ಸಹ ಸಾಮಾಜಿಕವಾಗಿ ಕಳಂಕಿತರಾಗಬಹುದೆಂಬ ಭಯದಿಂದ ಅವರು ವಿವರವಾಗಿ ಎಲ್ಲವನ್ನೂ ಅಧ್ಯಯನ ತಂಡಕ್ಕೆ ವಿವರಿಸಿಲ್ಲ. ಹೀಗಾಗಿ ಲಿಂಗ ಆಧರಿತ ತಾರತಮ್ಯವು ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಅಧ್ಯಯನ ತಂಡವು ವರದಿಯಲ್ಲಿ ವಿವರಿಸಿದೆ.

ಮೈಸೂರು, ಬಾಗಲಕೋಟೆ, ದಾವಣಗೆರೆ, ವಿಜಯಪುರ ಜಿಲ್ಲೆಗಳಲ್ಲಿನ ಕ್ರೀಡ ವಿದ್ಯಾರ್ಥಿ ನಿಲಯಗಳಲ್ಲಿನ ಎಲ್ಲಾ ಹುಡುಗಿಯರಿಗೂ ಸ್ವಚ್ಛತೆಯ ಸಮಸ್ಯೆ ಎದುರಾಗಿದೆ. ಪ್ರತ್ಯೇಕ ಹುಡುಗಿಯರ ವಿದ್ಯಾರ್ಥಿ ನಿಲಯ ಇಲ್ಲದ ಕಾರಣ ಹುಡುಗಿಯರು ಮತ್ತು ಮಹಿಳೆಯರು ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿನ ಪ್ರವೇಶಕ್ಕೆ ಮತ್ತೊಂದು ತೊಡಕಾಗಿದೆ.

ಅಲ್ಲದೆ ಬೆಂಗಳೂರು, ವಿಜಯಪುರ, ಗದಗ ಜಿಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಸಂಬಂಧಿತ ಸಮಸ್ಯೆಗಳು ಕಂಡು ಬಂದಿವೆ. ಹೆಚ್ಚಿನ ಸಂದರ್ಭಗಳಲ್ಲಿ ಆಹಾರಗಳ ಪ್ರಮಾಣ ಅಥವಾ ಗುಣಮಟ್ಟದಲ್ಲಿ ಅಸಮರ್ಪಕವಾಗಿವೆ. ಪ್ರೋಟೀನ್‌ ಭರಿತ ಆಹಾರದ ಬದಲು ಆಹಾರ ಯೋಜನೆಗಳು ಕಾರ್ಬೋಹೈಡ್ರೈಟ್‌ ಮೇಲೆ ಅವಲಂಬಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ರೂಪಿಸಲು ಕರ್ನಾಟಕ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದರೂ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಯುವ ಕ್ರೀಡಾಪಟುಗಳ ಸಾಮರ್ಥ್ಯದಲ್ಲಿ ವೃದ್ಧಿಯಾಗಿಲ್ಲ. ಇನ್ನು ಕ್ರೀಡೆಗಾಗಿ ಸಮಂಜಸವಾದ ಆಯವ್ಯಯ ಹಂಚಿಕೆಯನ್ನು ಮಾಡಿದ್ದರೂ ಹಲವು ವರ್ಷಗಳಿಂದ ಆಯವ್ಯಯ ಹೆಚ್ಚಳವಾಗಿದೆಯಾದರೂ ಅದು ಎಂದಿಗೂ ಸಾಕಾಗುವುದಿಲ್ಲ. ಮತ್ತು ತೃಪ್ತಿಕರವೆಂದು ಹೇಳಲಾಗುವುದಿಲ್ಲ. 2013-14 ಮತ್ತು 2015-16ರ ರಲ್ಲಿನ ಎರಡು ವರ್ಷಗಳಲ್ಲಿನ ಆಯವ್ಯಯದಲ್ಲಿ ಕ್ರೀಡೆಗಾಗಿ ಹಂಚಿಕೆ ಮಾಡಿದ್ದ ಅನುದಾನದಲ್ಲಿ ಇಳಿಕೆಯಾಗಿತ್ತು ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದ ಕ್ರೀಡಾಪಟುಗಳು ಹಲವು ಪ್ರಶಸ್ತಿಗಳು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ಪ್ರಭಾವಶಾಲೆ ಪ್ರದರ್ಶನ ನೀಡಿದ್ದರೂ ಈ ಯಶಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕರೂಪವಾಗಿಲ್ಲ ಎಂದು ರದಿಯಲ್ಲಿ ಪ್ರಸ್ತಾಪಿಸಿದೆ.

the fil favicon

SUPPORT THE FILE

Latest News

Related Posts