Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಸ್ಯಾನಿಟೈಸರ್‌ ಖರೀದಿ ಅಕ್ರಮ; ‘ದಿ ಫೈಲ್‌’ ವರದಿ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಬೆಂಗಳೂರು; ಕೋವಿಡ್‌ 2ನೇ ಅಲೆ ತಡೆಗಟ್ಟಲು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ ಖರೀದಿಸಿರುವ ಸಂಬಂಧ ‘ದಿ ಫೈಲ್‌’ ಹೊರಗೆಡವಿದ್ದ ಪ್ರಕರಣವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೋವಿಡ್‌ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಸರಬರಾಜು ಮಾಡಿದ್ದ ಸ್ಯಾನಿಟೈಸರ್ ಗುಣಮಟ್ಟದಿಂದ ಕೂಡಿಲ್ಲ ಎಂದು ಸ್ಯಾನಿಟೈಸರ್‌ ಬಾಟಲ್‌ಗಳನ್ನು ಪ್ರದರ್ಶಿಸಿದರು. ಅಲ್ಲದೆ ಈ ಕುರಿತು ‘ದಿ ಫೈಲ್‌’ ಸರಣಿ ವರದಿ ಪ್ರಕಟಿಸಿದೆ ಎಂದು ಹೇಳಿದರು.

‘ಕೋವಿಡ್ ಪರಿಕರ‌ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಐಯೋಡಿನ್ ಇಂಡಿಯಾ ಫಾರ್ಮಾಸಿಟಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಯಾನಿಟೈಸರ್‌ಗೆ ಹೆಚ್ಚು ಬೆಲೆ ನೀಡಿ ಖರೀದಿಸಲಾಗಿದೆ.‌ ಒಟ್ಟು 9.66 ಕೋಟಿ ಮೌಲ್ಯದ ಸ್ಯಾನಿಟೈಸರ್ ಖರೀದಿ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಸ್ಯಾನಿಟೈಸರ್ ಕೊಳಚೆ ನೀರಿನಂತೆ ಕಾಣುತ್ತದೆ,’ ಎಂದು ಆಪಾದಿಸಿದರು.

ಅಲ್ಲದೆ ‘ಡ್ರಗ್ಸ್ ಕಂಟ್ರೋಲ್ ಈ ಸ್ಯಾನಿಟೈಸರ್ ತಿರಸ್ಕರಿಸಿದೆ.‌ ಈಗಾಗಲೇ ಕಳಪೆ‌ ಸ್ಯಾನಿಟೈಸರ್‌ಗೆ 2 ಕೋಟಿ ಹಣ ನೀಡಲಾಗಿದೆ. ಒಂದು ಕಡೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ. ಇನ್ನೊಂದು ಕಡೆ ಇಂತಹ ಸ್ಯಾನಿಟೈಸರ್ ಖರೀದಿ ಮಾಡುತ್ತಾರೆ ಎಂದ ಅವರು, ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಬೇಕು.‌ ಸಚಿವ ಅಥವಾ ಅಧಿಕಾರಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು,’ ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಅಯೋಡಿನ್‌ ಕಂಪನಿ ಪ್ರಕರಣದ ಹಿನ್ನೆಲೆ

500 ಎಂ ಎಲ್‌ ಸಾಮರ್ಥ್ಯದ 31,500 ಬಾಟಲ್‌ ಸ್ಯಾನಿಟೈಸರ್‌ ಖರೀದಿ ಸಂಬಂಧ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಏಪ್ರಿಲ್‌ 24ರಂದು ದರಪಟ್ಟಿ ಆಹ್ವಾನಿಸಿತ್ತು. ಇದಾದ ಎರಡೇ ದಿನದಲ್ಲಿ ಅಂದರೆ 2021ರ ಏಪ್ರಿಲ್‌ 28ರಂದು ಖರೀದಿ ಪ್ರಮಾಣವನ್ನು 5.00 ಲಕ್ಷಕ್ಕೇರಿಸಿ ದರಪಟ್ಟಿಯಲ್ಲಿ ಒಟ್ಟು 5,31 ಲಕ್ಷ ಪ್ರಮಾಣ ಎಂದು ತಿದ್ದುಪಡಿ ಮಾಡಲಾಗಿತ್ತು.

ಈ ದರಪಟ್ಟಿಯಲ್ಲಿ ಒಟ್ಟು 22 ಮಂದಿ ಬಿಡ್‌ದಾರರು ಭಾಗವಹಿಸಿದ್ದರು. ಇದರಲ್ಲಿ 11 ಮಂದಿ ಬಿಡ್‌ದಾರರು ಷರತ್ತುಗಳನ್ನು ಪೂರೈಸಿರಲಿಲ್ಲ. ಅರ್ಹ ಬಿಡ್‌ದಾರರ ಪೈಕಿ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌, ದಿನೇಶ್‌ ಫಾರ್ಮಾ ಮತ್ತು ರಮನ್‌ ಅಂಡ್‌ ವೇಲ್‌ ಕಂಪನಿಯು ಕ್ರಮವಾಗಿ ಎಲ್‌ 1, ಎಲ್‌ 2 ಮತ್ತು ಎಲ್‌ 3 ಆಗಿ ಅರ್ಹತೆ ಪಡೆದಿದ್ದವು.

ಈ ಪೈಕಿ ಎಲ್‌ 1 ಆಗಿದ್ದ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಮತ್ತು ಎಲ್ 2 ದಿನೇಶ್‌ ಫಾರ್ಮಾಗೆ 5.31 ಲಕ್ಷ ಪೈಕಿ ತಲಾ 2.33 ಕೋಟಿ ಮೌಲ್ಯದ 2.50 ಲಕ್ಷ ಪ್ರಮಾಣದಲ್ಲಿ ಸ್ಯಾನಿಟೈಸರ್‌ ಪೂರೈಸಲು ಸರಬರಾಜು ಆದೇಶ ನೀಡಿತ್ತು. ಅಲ್ಲದೆ 8 ಕೋಟಿ ರು. ಮೌಲ್ಯದ 5 ಲೀಟರ್‌ ಸಾಮರ್ಥ್ಯದ ಸ್ಯಾನಿಟೈಸರ್‌ ಸರಬರಾಜಿಗೆ 2021ರ ಮೇ 4ರಂದು ಖರೀದಿ ಆದೇಶ ನೀಡಿತ್ತು ಎಂದು ತಿಳಿದು ಬಂದಿದೆ.

ಗುಣಮಟ್ಟದಿಂದ ಕೂಡಿರದ ಸ್ಯಾನಿಟೈಸರ್‌

ಎಲ್‌ 1 ಬಿಡ್‌ದಾರ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಯೋಡಿನ್‌ ಕಂಪನಿಯು ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಬ್ರಿಲಿಯಂಟ್‌ ಬ್ಲೂ ಬಣ್ಣದಿಂದ ಕೂಡಿದೆ ಎಂದು ಹೇಳಿತ್ತಾದರೂ ಉಗ್ರಾಣಗಳಿಗೆ ಪೂರೈಸಿದ್ದ ಸ್ಯಾನಿಟೈಸರ್‌ ಬಿಳಿ ಬಣ್ಣಕ್ಕೆ ತಿರುಗಿತ್ತು.

ಈ ಸಂಬಂಧ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದ ಔ‍ಷಧ ನಿಯಂತ್ರಕರು ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ನ ಕೆಲ ಬ್ಯಾಚ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂದು 2021ರ ಆಗಸ್ಟ್‌ 27ರಂದು ವರದಿ ಪ್ರಕಟಿಸಿತ್ತು. ಈ ವರದಿ ನಿಗಮದ ಕೈ ಸೇರುವ ಹೊತ್ತಿಗೆ ರಾಜ್ಯದ ಎಲ್ಲಾ ಉಗ್ರಾಣಗಳಿಗೆ ಸ್ಯಾನಿಟೈಸರ್‌ ಪೂರೈಕೆಯಾಗಿತ್ತು ಎಂದು ಗೊತ್ತಾಗಿದೆ.

ಕಳಪೆ ಸ್ಯಾನಿಟೈಸರ್‌ ಖರೀದಿ; ಔಷಧ ನಿಯಂತ್ರಕರ ಪರೀಕ್ಷೆಯಲ್ಲಿ ಸಾಬೀತಾದರೂ ಲಕ್ಷಾಂತರ ರು ಪಾವತಿ

 

ಅಂದಾಜು 8 ಕೋಟಿ ರು. ಮೌಲ್ಯದ ಸ್ಯಾನಿಟೈಸರ್‌ ಖರೀದಿ ಆದೇಶ ಪಡೆದಿರುವ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್ ಟೆಂಡರ್‌ನಲ್ಲಿ ಬಿಡ್‌ ಮಾಡುವಾಗ ಸಲ್ಲಿಸಿದ್ದ ವಾರ್ಷಿಕ ವಹಿವಾಟಿನ ದಾಖಲೆಗಳು ನೈಜವಾಗಿರಲಿಲ್ಲ. ಆದರೂ ಈ ಕಂಪನಿಯು ದರಪಟ್ಟಿಯಲ್ಲಿ ಯಶಸ್ವಿ ಬಿಡ್‌ದಾರರಾಗುವ ಮೂಲಕ ಸ್ಯಾನಿಟೈಸರ್‌ ಸರಬರಾಜು ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೇ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರು ಒಂದೇ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ ದೃಢೀಕರಿಸಿರುವ ದಾಖಲಾತಿಗಳಲ್ಲಿ ನಮೂದಿಸಿರುವ ವಾರ್ಷಿಕ ವಹಿವಾಟಿನ ಮೊತ್ತವು ಏಕರೂಪದಿಂದ ಕೂಡಿರಲಿಲ್ಲ.

ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ 2018-19ನೇ ಸಾಲಿನ ಮಾರ್ಚ್‌ 2019ರ ಅಂತ್ಯಕ್ಕೆ ಈ ಕಂಪನಿಯ ವಾರ್ಷಿಕ ವಹಿವಾಟು 8,13,869 ರು. ಎಂದು ಶಾಸನಸಬದ್ಧ ಲೆಕ್ಕಪರಿಶೋಧಕರು ದೃಢೀಕರಿಸಿದ್ದರು.

ಸ್ಯಾನಿಟೈಸರ್‌ ಖರೀದಿ ಟೆಂಡರ್‌ನಲ್ಲೇ ಗೋಲ್ಮಾಲ್‌; ವಾರ್ಷಿಕ ವಹಿವಾಟಿನ ದಾಖಲೆಗಳಲ್ಲೇ ಅಕ್ರಮ!

 

ಇದೇ ಲೆಕ್ಕಪರಿಶೋಧಕರು 2018-19ನೇ ಸಾಲಿಗೆ ವಾರ್ಷಿಕ ವಹಿವಾಟು 1,68,13,869 ರು. ಎಂದು ದೃಢೀಕರಿಸಿರುವುದು ದಾಖಲೆಯಿಂದ ಗೊತ್ತಾಗಿದೆ. ಒಂದೇ ಕಂಪನಿಯು ಒಂದೇ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ ಎರಡು ರೀತಿಯ ದಾಖಲೆಗಳನ್ನು ಸಲ್ಲಿಸಿದ್ದರೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಮತ್ತು ಟೆಂಡರ್‌ ಅನುಮೋದಿಸುವ ಸಕ್ಷಮ ಪ್ರಾಧಿಕಾರವು ಪರಿಶೀಲಿಸಿರಲಿಲ್ಲ! ಇದು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಟೆಂಡರ್‌ ರದ್ದುಗೊಳಿಸಿದ್ದರ ಹಿಂದಿನ ಗುಟ್ಟೇನಿದೆ?

ಅಂದಾಜು 8 ಕೋಟಿ ರು. ಮೊತ್ತದಲ್ಲಿ 1.15 ಲಕ್ಷ ಸ್ಯಾನಿಟೈಸರ್‌ ಬಾಟಲ್‌ (500 ಎಂ ಎಲ್‌) ಖರೀದಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಏಪ್ರಿಲ್‌ 7ರಂದು ಟೆಂಡರ್‌ ಕರೆದಿತ್ತು. ಟೆಂಡರ್‌ನಲ್ಲಿ ಭಾಗವಹಿಸಲು ಏಪ್ರಿಲ್‌ 24 ಕಡೆ ದಿನವಾಗಿತ್ತು. ಈ ಟೆಂಡರ್‌ನಲ್ಲಿ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಕೂಡ ಭಾಗವಹಿಸಿ ವಾರ್ಷಿಕ ವಹಿವಾಟಿನ ದಾಖಲೆಗಳನ್ನು ಲಗತ್ತಿಸಿತ್ತು ಎಂದು ತಿಳಿದು ಬಂದಿದೆ. ಆದರೆ ಟೆಂಡರ್‌ನಲ್ಲಿ ಭಾಗವಹಿಸಲು ನಿಗದಿಪಡಿಸಿದ್ದ ಕೊನೆ ದಿನಾಂಕದಂದೇ ಟೆಂಡರ್‌ ರದ್ದುಗೊಂಡಿತ್ತು.

ಗುತ್ತಿಗೆ ಮೊತ್ತವು 50 ಲಕ್ಷ ರು. ಮೇಲ್ಪಟ್ಟಿದ್ದರೆ ಕಂಪನಿಯ ವಾರ್ಷಿಕ ವಹಿವಾಟು 10 ಕೋಟಿ ಇರಬೇಕು. ಅಲ್ಲದೆ ಇದೇ ವಹಿವಾಟನ್ನು 3 ವರ್ಷಗಳ ತನಕ ನಿರ್ವಹಿಸಿರಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇದ್ದರೆ ವಾರ್ಷಿಕ 5 ಕೋಟಿ ಮೊತ್ತದಲ್ಲಿ ವಹಿವಾಟು ನಡೆಸಿರಬೇಕು ಎಂಬ ಷರತ್ತು ಪೂರೈಸಲು ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿಫಲವಾಗಿದ್ದೇ ಟೆಂಡರ್‌ನ್ನು ದಿಢೀರ್‌ ಎಂದು ರದ್ದುಗೊಳಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಟೆಂಡರ್‌ ರದ್ದುಗೊಳಿಸಿದ್ದ ನಿಗಮವು ಏಪ್ರಿಲ್‌ 24 ಮತ್ತು 26ರಂದು ದರ ಪಟ್ಟಿಯನ್ನು ಆಹ್ವಾನಿಸಿತ್ತು. ಈ ದರಪಟ್ಟಿಯಲ್ಲಿಯೂ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಭಾಗವಹಿಸಿತ್ತು. ‘ದರ ಪಟ್ಟಿಯಲ್ಲಿ ವಾರ್ಷಿಕ ವಹಿವಾಟು ಇಂತಿಷ್ಟೇ ಇರಬೇಕು ಎಂಬ ಬಗ್ಗೆ ಯಾವುದೇ ಷರತ್ತು ವಿಧಿಸಲ್ಲ ಮತ್ತು ದಾಖಲಾತಿಗಳು ಅಷ್ಟಾಗಿ ಬೇಕಾಗಿಲ್ಲ. ಹೀಗಾಗಿಯೇ ನಿಗಮದ ಕೆಲ ಭ್ರಷ್ಟ ಅಧಿಕಾರಿಗಳು ಕಂಪನಿಗೆ ಅನುಕೂಲ ಮಾಡಿಕೊಡಲು ದರಪಟ್ಟಿ ದಾರಿ ಹುಡುಕಿಕೊಟ್ಟಿದ್ದಾರೆ,’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದರು.


Leave a Reply

Your email address will not be published.