ಹೊರಟ್ಟಿ ವರದಿಗೆ 3 ವರ್ಷ, ಶಿಕ್ಷಕರಿಗಿಲ್ಲ ಹರ್ಷ; ನಿಲುವು ತಳೆಯುವಲ್ಲಿ ಸರ್ಕಾರ ವಿಫಲ

ಬೆಂಗಳೂರು; ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅನುದಾನರಹಿತ ಸೇವೆ ಪರಿಗಣಿಸಿ ವೇತನ ಬಡ್ತಿ ಮತ್ತು ಪಿಂಚಣಿ ಸೇವಾ ಸೌಲಭ್ಯ (ಕಾಲ್ಪನಿಕ ವೇತನ)ನೀಡುವ ಸಂಬಂಧ ವಿಧಾನಪರಿಷತ್‌ನ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿದ್ದ ಸದನ ಸಮಿತಿ ವರದಿ ಸಲ್ಲಿಕೆಯಾಗಿ 3 ವರ್ಷಗಳಾದರೂ ಈವರೆಗೂ ರಾಜ್ಯ ಸರ್ಕಾರವು ನಿರ್ದಿಷ್ಟ ನಿಲುವು ತಳೆಯುವಲ್ಲಿ ವಿಫಲವಾಗಿದೆ.

ಪದವೀಧರ ಕ್ಷೇತ್ರದ ಸದಸ್ಯ ಡಾ ಚಂದ್ರಶೇಖರ್ ಬಿ ಪಾಟೀಲ್‌ ಅವರ ಪ್ರಶ್ನೆಗೆ ಉತ್ತರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು 2021ರ ಸೆ.13ರಂದು ನೀಡಿರುವ ಉತ್ತರವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನಿರಾಶೆಯಲ್ಲಿ ಮುಳುಗಿಸಿದೆ. ಕಾಲ್ಪನಿಕ ವೇತನ ಮಂಜೂರಾತಿ ಕುರಿತ ಬಸವರಾಜ ಹೊರಟ್ಟಿ ವರದಿ ಕುರಿತು ಸ್ಪಷ್ಟ ನಿಲುವು ಪ್ರಕಟಿಸದ ಕಾರಣ ವರದಿ ಜಾರಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನವೂ ನಿಗದಿಯಾಗಿಲ್ಲ.

ಸಮಿತಿಯ ವರದಿ ಮತ್ತು ಇಲಾಖೆಗಳಲ್ಲಿನ ವಾಸ್ತವ ಅಂಕಿ ಅಂಶಗಳನ್ನು ಪರಿಶೀಲಿಸಲಾಗಿ ಹಾಲಿ ನೀಡಲಾಗುತ್ತಿರುವ ವೇತನಕ್ಕೆ ಅನುದಾನ ರಹಿತ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು ವೇತನವನ್ನು ಪರಿಷ್ಕರಿಸಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕವಾಗಿ 359.87 ಕೋಟಿ ರು. ಅನುದಾನ ಬೇಕಾಗಲಿದೆ. ಆದರೆ ಅವರಿಗೆ ಹಿಂಬಾಕಿ ಮತ್ತು ಪಿಂಚಣಿಗಾಗಿ ತಗುಲುವ ಅಂದಾಜು ವೆಚ್ಚವು ಪ್ರಸ್ತಾಪಿತ 359.87 ಕೋಟಿ ರು.ನಲ್ಲಿ ಒಳಗೊಂಡಿಲ್ಲ ಎಂದು ಸರ್ಕಾರವು ತಿಳಿಸಿದೆ.

ಅಲ್ಲದೆ 359.87 ಕೋಟಿ ರು. ಒಂದು ವರ್ಷಕ್ಕೆ ಬೇಕಾದ ಹೆಚ್ಚುವರಿ ಮೊತ್ತವಾಗುತ್ತದೆ. ಈ ಅನುಕೂಲ ಪಡೆಯುವ ಸಿಬ್ಬಂದಿ ಪೂರ್ಣ ಸೇವಾವಧಿಯಲ್ಲಿ ಪಡೆಯುವ ಮೊತ್ತದ ಒಟ್ಟು ಮೊತ್ತದ ಲೆಕ್ಕಾಚಾರ ಇಲಾಖೆಗಳಲ್ಲಿ ಇನ್ನೂ ಆಗಿಲ್ಲ. ಹಾಗೆಯೇ ನಿವೃತ್ತಿ , ಸೌಲಭ್ಯಗಳ ಒಟ್ಟಾರೆ ಆರ್ಥಿಕ ಹೊರೆ ಸಹ ಲೆಕ್ಕ ಹಾಕಿರುವುದಿಲ್ಲ. ಈ ಎರಡೂ ಮೊತ್ತಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅನುದಾನರಹಿತ ಸೇವಾವಧಿ ಸಂಬಂಧ ನೀಡಬೇಕಾದ ವೇತನ ಬಾಕಿ ಮೊತ್ತ 3083.54 ಕೋಟಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ‘ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವಲ್ಲಿ ನಿರ್ದಿಷ್ಟ ನಿಲುವನ್ನು ತಳೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ,’ ಎಂದು ಬಿ ಸಿ ನಾಗೇಶ್‌ ಅವರು ಉತ್ತರದಲ್ಲಿ ತಿಳಿಸಿದ್ದಾರೆ.

ಹೊರಟ್ಟಿ ವರದಿ ಶಿಫಾರಸ್ಸುಗಳೇನು?

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುದಾನಿತ ಸಿಬ್ಬಂದಿಯವರಿಗೆ ಕಾಲ್ಪನಿಕ ವೇತನ ನಿಗದಿ ಮಾಡಿ ವೇತನವನ್ನು ಪುನರ್‌ ನಿಗದಿಪಡಿಸಿ ವೇತನ ಸೌಲಭ್ಯವನ್ನು ಹಾಗೂ ಪಿಂಚಣಿ, ಗ್ರಾಚ್ಯುಟಿ ಸೌಲಭ್ಯ ನೀಡುವುದು. ಅನುದಾನಿತ ರಹಿತ ಅವಧಿಯನ್ನು ಪರಿಗಣಿಸಿ ಪದನ್ನೋತಿ ಕಾಲಮಿತಿ ಹಾಗೂ ಪ್ಲೇಸ್‌ಮೆಂಟ್‌ ಸೌಲಭ್ಯ ನೀಡುವುದು. ಕಾಲ್ಪನಿ ವೇತನ ನಿಗದಿಪಡಿಸಿದ ನಂತರ ಯಾವುದೇ ನೌಕರರು ಹಿಂದಿನ ಯಾವುದೇ ಬಾಕಿಯನ್ನು ಕೇಳುವಂತಿಲ್ಲ.

ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆ ಹೂಡಿರುವವರು ತಮ್ಮ ಪ್ರಕರಣಗಳನ್ನು ವಾಪಸ್‌ ಪಡೆದಲ್ಲಿ ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ ಎಂಬ ಅಂಶವನ್ನು ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸುವುದು. ಈಗಾಗಲೇ ಈ ಸೌಲಭ್ಯವನ್ನು ಪಡೆಯುತ್ತಿರುವವರಿಗೆ ಯಥಾವತ್ತಾಗಿ ಮುಂದುವರೆಸುವುದು ಹಾಗೂ ಈಗಾಗಲೇ ಆರ್ಥಿಕ ಸೌಲಭ್ಯಗಳನ್ನು ಪಡೆದು ನಿವೃತ್ತಿ ಆಗಿರುವ ಮತ್ತು ಆಗಲಿರುವ ನೌಕರರಿಗೆ ಯಾವುದೇ ರೀತಿಯಿ ಆರ್ಥಿಕ ಕಡಿತವನ್ನು ಮಾಡಬಾರದು.

ನಿವೃತ್ತಿ ವೇತನ ನಿಗದಿಪಡಿಸುವಾಗ ಅನುದಾನ ರಹಿತ ಅವಧಿಯನ್ನು ಕಡಿತಗೊಳಿಸಿ ಪುನರ್‌ ನಿಗದಿಪಡಿಸಬಾರದು. ನಿವೃತ್ತರಾಗುತ್ತಿರುವವರಿಗೆ ನಿವೃತ್ತಿ ಉಪಧನವನ್ನು ಕಡಿತಗೊಳಸದಂತೆ ಸರ್ಕಾರಿ ಆದೇಶ ಹೊರಡಿಸುವುದು.

ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು 395ಕೋಟಿ ರು. ಅವಶ್ಯಕತೆ ಇದೆ ಎಂದು ವಿಧಾನಪರಿಷತ್‌ನ ವಿಶೇಷ ಸದನ ಸಮಿತಿ 2018ರಂದು ಶಿಫಾರಸ್ಸು ಮಾಡಿತ್ತು. ವಾಸ್ತವ ಅಂಶಗಳನ್ನು ಪರಾಮರ್ಶಿಸಿ ವರದಿ ನೀಡಲಾಗಿದ್ದು 395 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಇದರಿಂದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25 ಸಾವಿರ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಹೊರಟ್ಟಿ ಅವರು ಹೇಳಿದ್ದರು.

ಕಾಲ್ಪನಿಕ ವೇತನ ಮಂಜೂರಾತಿ ಕುರಿತ ಬಸವರಾಜ ಹೊರಟ್ಟಿ ವರದಿ ಜಾರಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನ ನಿಗದಿ ಮಾಡುವಂತೆ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts