ಬ್ಯಾಂಕ್‌ ಹಗರಣ;1,480 ಕೋಟಿ ದುರುಪಯೋಗ, ಸಿದ್ದು ಸರ್ಕಾರದಲ್ಲೂ 807 ಕೋಟಿ ಅವ್ಯವಹಾರ

ಬೆಂಗಳೂರು; ಸಾವಿರಾರು ಕೋಟಿ ರು. ಮೊತ್ತದ ಅವ್ಯವಹಾರ ನಡೆಸಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ 2020ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 1,923 ಕೋಟಿ ರು. ನಷ್ಟ ಹೊಂದಿದೆ. ಅಲ್ಲದೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ 2014-15ರ ವರ್ಷವೊಂದರಲ್ಲೇ ಇದೇ ಬ್ಯಾಂಕ್‌ನಲ್ಲಿ 807 ಕೋಟಿ ರು. ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯು ಹೊರಗೆಡವಿದೆ.

ಅಲ್ಲದೆ ಈ ಬ್ಯಾಂಕ್‌ 2021ರ ಜುಲೈ 9ರ ಅಂತ್ಯಕ್ಕೆ 38,848 ಗ್ರಾಹಕರಿಗೆ 2,073.91 ಕೋಟಿ ರು. ಹಾಗೂ 994 ಸಾಂಸ್ಥಿಕ ಗ್ರಾಹಕರಿಗೆ 375 ಕೋಟಿ ರು. ಠೇವಣಿ ಹಣವನ್ನು ಪಾವತಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತು ನಿಯಮ 73ರ ಅಡಿಯಲ್ಲಿ ಶಾಸಕ ಎಲ್‌ ಎ ರವಿ ಸುಬ್ರಮಣ್ಯ ಪ್ರಸ್ತಾಪಿಸಿರುವ ಗಮನ ಸೆಳೆಯುವ ಸೂಚನೆಗೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ನೀಡಿರುವ ಟಿಪ್ಪಣಿಯು ಬ್ಯಾಂಕ್‌ನ ಅಕ್ರಮವನ್ನು ಇನ್ನಷ್ಟು ವಿಸ್ತರಿಸಿದೆ. ಟಿಪ್ಪಣಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬ್ಯಾಂಕ್‌ ಹೊಂದಿರುವ 1,923 ಕೋಟಿ ರು. ನಷ್ಟದಲ್ಲಿ 1,480 ಕೋಟಿ ರು. ದುರುಪಯೋಗವಾಗಿದೆ ಎಂದು 2019-20ರ ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ. ಅಲ್ಲದೆ 2014-15ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸಿದೆ. ಈ ಪೈಕಿ 2014-15ನೇ ಸಾಲಿಗೆ 871 ಕೋಟಿ ರು. ನಷ್ಟ ಮತ್ತು 807 ಕೋಟಿ ರು. ಹಣ ದುರುಪಯೋಗವಾಗಿದೆ. ಒಂದೇ ವರ್ಷದಲ್ಲಿ 807 ಕೋಟಿ ರು ದುರುಪಯೋಗವಾಗಿದೆಯಾದರೂ ಇನ್ನು 2015-16, 2016-17, 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನೆ ಬಹಿರಂಗವಾದಲ್ಲಿ ದುರುಪಯೋಗವಾಗಿರುವ ಮೊತ್ತವು ನಾಲ್ಕೈದು ಪಟ್ಟು ಹೆಚ್ಚಲಿದೆ.

ಬ್ಯಾಂಕ್‌ ನೀಡಿರುವ ಸಾಲದಲ್ಲಿ ಶೇ.95ರಷ್ಟು ಅನುತ್ಪಾದಕ ಆಸ್ತಿಗಳಾಗಿದೆ. 1,594 ಕೋಟಿಗಳಷ್ಟು ಸಾಲವನ್ನು ಮೋಸ, ವಂಚನೆ ಎಂದು ಆರ್‌ಬಿಐ ತನ್ನ ಪರಿವೀಕ್ಷಣಾ ವರದಿಯಲ್ಲಿ ಪರಿಗಣಿಸಿದೆ. 2020ರ ಆಗಸ್ಟ್‌ 31ರ ಅಂತ್ಯಕ್ಕೆ 1,405 ಕೋಟಿ ರು. (ಬಡ್ಡಿ ಸೇರಿ) ವಸೂಲಾತಿಗೆ ಬಾಕಿ ಇದೆ. ಅಲ್ಲದೇ 2020ರ ಜನವರಿ 10ರ ಅಂತ್ಯಕ್ಕೆ ಒಟ್ಟು 1,567 ಕೋಟಿ ಸಾಲ ಮ್ತು ಮುಂಗಡಗಳ ಬಾಕಿ ಇರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೂ 9 ತನಿಖಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ 923 ಕೋಟಿ ರು. ಹಣಕಾಸಿನ ಅವ್ಯವಹಾರವಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಆರೋಪಿಗಳಿಂದ 17,88,110 ರು.ಗಳನ್ನು ಹಾಗೂ ಆರೋಪಿಗಳು ಮತ್ತು ಅವರ ಅವಲಂಬಿತ ಸದಸ್ಯರ ಹೆಸರಿನಲ್ಲಿ 9,548 ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ಗೂ ಹೆಚ್ಚಿನ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಸುಮಾರು 1,115 ಕೋಟಿಗಿಂತ ಹೆಚ್ಚಿನ ಬೆಲೆಬಾಳುವ ಸ್ಥಿರಾಸ್ತಿಗಳನ್ನು ಗುರುತಿಸಿ ಹಣ ವರ್ಗಾವಣೆ ನಿಷೇಧ ಅಧಿನಿಯಮ 2002ರ ಅಡಿಯಲ್ಲಿ ಕ್ರಮಜರುಗಿಸಲು ಜಾರಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ.

ಅದೇ ರೀತಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲೂ 90 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು ತನ್ನ ಠೇವಣಿದಾರರ ಹಣದಲ್ಲಿ 90 ಕೋಟಿಗಳನ್ನು ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ತೊಡಗಿಸಿ ಜಮಾ ಮಾಡಿ ಅವ್ಯವಹಾರ ಎಸಗಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಅದೇ ರೀತಿ ಇದೇ ಸೌಹಾರ್ದ ಪತ್ತಿನ ಸಂಘವು ಕಾನೂನುಬಾಹಿರವಾಗಿ 163.43 ಕೋಟಿ ರು. ಸಾಲ ನೀಡಿದೆ. ಅಲ್ಲದೆ 228.71 ಕೋಟಿಗಳಷ್ಟು ಠೇವಣಿ ಸಂಗ್ರಹಿಸಿ ಅದನ್ನು ಸಕಾಲದಲ್ಲಿ ಸದಸ್ಯರಿಗೆ ಮರು ಪಾವತಿಸದೇ ನಂಬಿಕೆ ದ್ರೋಹ, ಮೋಸ ಮತ್ತು ವಂಚನೆ ಮಾಡಿದೆ. ಹಾಗೆಯೇ ಸೂಕ್ತ ಭದ್ರತೆ ಪಡೆಯದೆಯೇ 174 ಪ್ರಕರಣಗಳಲ್ಲಿ 149.33 ಕೋಟಿ ರು. ಬೇನಾಮಿ ಸಾಲ ನೀಡಿದೆಯಲ್ಲದೆ 4.48 ಕೋಟಿ ರು.ಗಳ ನಕಲಿ ಸಾಲಗಳನ್ನು ಸೃಷ್ಟಿಸಿದೆ ಎಂಬುದು ಟಿಪ್ಪಣಿಯಿಂದ ತಿಳಿದು ಬಂದಿದೆ.

2019-20ನೇ ಸಾಲಿನ ಲೆಕ್ಕಪರಿಶೋಧನೆ ವರದಿ ಪ್ರಕಾರ ಸೊಸೈಟಿಯಲ್ಲಿ 4.90 ಕೋಟಿ ಷೇರು ಬಂಡವಾಳ ಪಾವತಿಯಾಗಿತ್ತು. ಆಪದ್ಧನ ಮತ್ತು ಇತರೆ ನಿಧಿಗಳ ರೂಪದಲ್ಲಿ 0.16 ಕೋಟಿ ರು., 228.71 ಕೋಟಿ ಠೇವಣಿ , 233.78 ಕೋಟಿ ದುಡಿಯುವ ಬಂಡವಾಳ, 66.80 ಕೋಟಿ ಹೂಡಿಕೆಗಳಿದ್ದರೆ, ಸಾಲ ಮತ್ತುಮುಂಗಡಗಳ ರೂಪದಲ್ಲಿ 163.43 ಕೋಟಿ ರು ಇದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಈ ಸೊಸೈಟಿಯು ಕಾರ್ಯನಿರ್ವಹಿಸುತ್ತಿತ್ತು.

SUPPORT THE FILE

Latest News

Related Posts