ಬಾಬರಿ ಮಸೀದಿ ಚಿತ್ರ; ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಚಾರ್ಜ್‌ಶೀಟ್‌ಗೆ ಪೂರ್ವಾನುಮತಿ

ಬೆಂಗಳೂರು; 6 ಡಿಸೆಂಬರ್‌ 1992 ಮಸ್ಜಿದ್‌ ಧ್ವಂಸಗೊಳಿಸಲಾಯಿತು, 9 ನವೆಂಬರ್‌ 2019 ನ್ಯಾಯ ನಿರಾಕರಿಸಲಾಯಿತು, ನೆನಪು ಮೊದಲ ಪ್ರತಿರೋಧ ಎಂದು ಮಸೀದಿ ಗೋಡೆ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಬರೆದು ಕೋಮು ಭಾವನೆ ಕೆರಳಿಸಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಅಪರಾಧ ಕೃತ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪಿಎಫ್‌ಐ ಸಂಘಟನೆಯ ನೌಷಾದ್‌ ಸೇರಿದಂತೆ ಒಟ್ಟು 8 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ರಾಜ್ಯ ಬಿಜೆಪಿ ಸರ್ಕಾರ ಪೂರ್ವಾನುಮತಿ ನೀಡಿದೆ.

ಕರ್ನಾಟಕ ಮುಕ್ತ ಸ್ಥಳಗಳು (ವಿರೂಪಗೊಳಿಸುವಿಕೆ ತಡೆ) ಕಾಯಿದೆ 1951 ಮತ್ತು 1981 ಕಾಯ್ದೆಯ ಕಲಂ 3 ರ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಕಲಂ 153(ಎ) 120(ಬಿ), 505 (2), 295(ಎ) ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು 2021ರ ಸೆಪ್ಟಂಬರ್‌ 7ರಂದು ಪೂರ್ವಾನುಮತಿ ನೀಡಿ ಆದೇಶಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ಪೊಲೀಸ್‌ ಮಹಾನಿರ್ದೇಶಕರು ಪೂರ್ವಾನುಮತಿ ಕೋರಿ 2021ರ ಏಪ್ರಿಲ್‌ 7ರಂದು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನಾಧರಿಸಿ ಗೃಹ ಇಲಾಖೆಯು ಪೂರ್ವಾನುಮತಿ ನೀಡಿ ಆದೇಶಿಸಿದೆ. ಅಮಾಯಕರನ್ನು ರೌಡಿ ಪಟ್ಟಿಯಿಂದ ತೆಗೆಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆ ಬೆನ್ನಲ್ಲೇ ಪಿಎಫ್‌ಐ ಕಾರ್ಯಕರ್ತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ಪೂರ್ವಾನುಮತಿ ನೀಡಿರುವ ಆದೇಶ ಮುನ್ನೆಲೆಗೆ ಬಂದಿದೆ.

ಈ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿರುವ ಮಂಗಳೂರು ನಗರದ ಶಾಂತಿನಗರದ ನೌಷಾದ್‌ ಮೊದಲ ಆರೋಪಿಯನ್ನಾಗಿಸಲಾಗಿತ್ತು. ಉಳಿದಂತೆ ಮೂಡುಶೆಡ್ಡೆ ಗ್ರಾಮದ ಮೊಹಮ್ಮದ್‌ ಇಕ್ಬಾಲ್‌, ಎದರುಪದವು ರಜಾಕ್, ಸೈಫುಲ್ಲಾ, ರಫೀಕ್‌, ಮೊಹಮ್ಮದ್‌ ಹನೀಫ್‌, ಮುಸ್ತಾಫ, ಅಬ್ದುಲ್‌ ರಫೀಕ್‌ ಸೇರಿ ಒಟ್ಟು 8 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ಪೂರ್ವಾನುಮತಿ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ನಗರದ ಮೂಡುಶೆಡ್ಡೆಯ ಮಸೀದಿ ಗೋಡೆ, ಕಾವೂರ ಜಂಕ್ಷನ್‌ ಬಳಿ ಇರುವ ಭಂಡಾರಿ ಬಿಲ್ಡಿಂಗ್‌ ಗೋಡೆ, ಶಾಂತಿನಗರ ಬಸ್‌ ಸ್ಟ್ಯಾಂಡ್‌ ಗೋಡೆ ಪಿಲ್ಲರ್‌, ಕೊಳೂರು ಫ್ಲೈಓವರ್‌ ಪಿಲ್ಲರ್‌ ಮತ್ತು ಸಾರ್ವಜನಿಕ ಸ್ಥಳದ ಗೋಡೆ ಮೆಲೆ ಅಯೋಧ್ಯೆ ಬಾಬರಿ ಮಸೀದಿ ವಿಚಾರದಲ್ಲಿ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಆದೇಶವನ್ನು ಪ್ರಶ್ನಿಸಿದ್ದರು ಎಂಬ ಆರೋಪಕ್ಕೆ ಆರೋಪಿಗಳು ಗುರಿಯಾಗಿದ್ದರು.

‘ಮಸೀದಿ ಗೋಡೆ ಸೇರಿದಂತೆ ಇನ್ನಿತರೆ ಸ್ಥಳಗಳ ಮೇಲೆ ಮೂರು ಗುಂಬಜ್‌ (ಗೋಪುರ)ಗಳನ್ನು ಹೊಂದಿರುವ ಬಾಬರಿ ಮಸೀದಿ ಚಿತ್ರವಿದ್ದು, ನಾವು ಮರೆಯದಿರೋಣ 6 ಡಿಸೆಂಬರ್‌ 1992 ಮಸ್ಜಿದ್‌ ಧ್ವಂಸಗೊಳಿಸಲಾಯಿತು, 9 ನವೆಂಬರ್‌ 2019 ನ್ಯಾಯ ನಿರಾಕರಿಸಲಾಯಿತು, ನೆನಪು ಮೊದಲ ಪ್ರತಿರೋಧ ಎಂದು ಬರೆಯಲಾಗಿತ್ತು. ಈ ಪೋಸ್ಟರ್‌ನ ಕೊನೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಎಂದು ಬರೆಯಲಾಗಿತ್ತು,’ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಅದೇ ರೀತಿ LEST WE FORGET, 6 DECEMBER 1992 Masjid was Demolished , 9 November2019 Justice is Denied, MEMORY IS THE FIRST DEFENCE ಎಂದು ಪ್ರಿಂಟ್‌ ಮಾಡಿತ್ತು. ಇದು ಬೇರೆ ಬೇರೆ ಧರ್ಮಗಳ ನಡುವೆ ಕೋಮು ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಅಪರಾಧ ಕೃತ್ಯ ನಡೆಸುವ ಉದ್ದೇಶವಿತ್ತು. ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗೆ ಅವಮಾನ ಮಾಡುವ ಸಂಚು ರೂಪಿಸಲಾಗಿತ್ತು.

ಇದರ ಭಾಗವಾಗಿ 2019ರ ಡಿಸೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಅಯೋಧ್ಯೆ ಬಾಬರಿ ಮಸೀದಿ ವಿಚಾರದಲ್ಲಿ ನೀಡಿದ್ದ ತೀರ್ಪಿನ ಆದೇಶವನ್ನು ಪ್ರಶ್ನಿಸುವ ಬಗ್ಗೆ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ಇದನ್ನು ಪ್ರಿಂಟ್‌ ಮಾಡಿಸಿ ಅಂಟಿಸಿರುವ ಆರೋಪಗಳಿಗೆ ತನಿಖೆಯಿಂದ ಹಾಗೂ ಸಾಕ್ಷ್ಯಾಧಾರಗಳು ಸಂಗ್ರಹವಾಗಿವೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.

ಅಲ್ಲದೆ ಬಾಬರಿ ಮಸೀದಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಿರೋಧಿಸಿ ಹಿಂದೂ ಧರ್ಮೀಯರನ್ನು ಕೆರಳಿಸುವಂತೆ ವಿವಾದಾಸ್ಪದ ಹೇಳಿಕೆಗಳನ್ನು ಕರಪತ್ರಗಳ ಮೇಲೆ ಮುದ್ರಿಸಲಾಗಿತ್ತು. ಇದು ಸಾರ್ವಜನಿಕರ ಗಮನಕ್ಕೆ ಬರುವಂತೆ ಸಾರ್ವಜನಿಕ ಸ್ಥಳವಾದ ಮಸೀದಿ ಕಾಂಪೌಂಡ್‌ ಗೋಡೆ ಹೊರಭಾಗಕ್ಕೆ ಅಂಟಿಸಿ ಧರ್ಮ ಧರ್ಮಗಳ ನಡುವೆ ಸಂಘರ್ಷಕ್ಕೆಡೆ ಮಾಡುವಂತೆ ಕೃತ್ಯವೆಸಗಿರುವ ಆರೋಪವು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಿರುವುದು ನಡವಳಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts