ಬೆಂಗಳೂರು; ಮೀನಾಕ್ಷಿ ದೇವಸ್ಥಾನದ ಮುಂಭಾಗದಲ್ಲಿ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾದ ಇಸ್ಲಾಮಿಯಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜನ್ನು ತೆರವುಗೊಳಿಸಬೇಕು ಎಂಬ ಹಠಕ್ಕೆ ಬಿದ್ದು ಒಟ್ಟು 8 ಎಕರೆ ವಿಸ್ತೀರ್ಣದ ಜಮೀನನಲ್ಲಿರುವ ಇಂಜಿನಿಯರಿಂಗ್ ಕಾಲೇಜನ್ನು ಒತ್ತುವರಿ ಆರೋಪದಲ್ಲಿ ಸಿಲುಕಿಸಿ ವಶಪಡಿಸಿಕೊಳ್ಳಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
ಬಿಜೆಪಿಯ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸಮದ್ ಖಾನ್ ಅವರು ಪ್ರಧಾನ ಕಾರ್ಯದರ್ಶಿಯಾಗಿರುವ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆಯು ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ನಡೆಸುತ್ತಿದೆ.
ಈ ಕಾಲೇಜು ದೇವಸ್ಥಾನದ ಎದುರು ಇರುವುದನ್ನೇ ಮುಖ್ಯವಾಗಿರಿಸಿಕೊಂಡ ಸಂಘಪರಿವಾರದ ಹಲವು ಮುಖಂಡರು ಅದನ್ನು ತೆರವುಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು ಎಂದು ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾದ ಆಡಳಿತ ಮಂಡಳಿಯ ಸದಸ್ಯರೊಬ್ಬರು ‘ದಿ ಫೈಲ್’ಗೆ ಈ ಮಾಹಿತಿಯನ್ನು ಒದಗಿಸಿದ್ದಾರೆ.
ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರೊಬ್ಬರು ಆರ್‌ಎಸ್‌ಎಸ್‌ನ ಕಿಶನ್ ಲಾಲ್, ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಇಂದ್ರೇಶ್, ರಾಮ್‌ಲಾಲ್ ಅವರನ್ನು ಸಂಪರ್ಕಿಸಿಸಿದ್ದರಲ್ಲದೆ ಈ ಕುರಿತು ಪತ್ರವೊಂದನ್ನು ಬರೆದಿದ್ದಾರೆ ಎಂದು ಗೊತ್ತಾಗಿದೆ.
ಜಮೀನು ಒತ್ತುವರಿ ಆರೋಪಕ್ಕೆ ಒಳಗಾಗಿದ್ದ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆಯು ಹಲವು ವರ್ಷಗಳ ಹಿಂದೆಯೇ ಆರೋಪಮುಕ್ತಗೊಂಡಿತ್ತು. ಈ ಸಂಸ್ಥೆಯು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ ಎಂದು 10 ವರ್ಷಗಳ ಹಿಂದೆಯೇ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಹೀಗಿದ್ದರೂ ಜಮೀನನ್ನು ವಶಪಡಿಸಿಕೊಂಡಿರುವ ಬಿಜೆಪಿ ಸರ್ಕಾರವು ಇದೇ ಜಾಗವನ್ನು ಸಂಘ ಪರಿವಾರದ ಬೆಂಬಲ ಇರುವ ಸಂಸ್ಥೆಯೊಂದಕ್ಕೆ ಮಂಜೂರು ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಇದೇ ಪ್ರಕರಣದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಒಬ್ಬರ ಹೆಸರು ಕೂಡ ತಳಕು ಹಾಕಿಕೊಂಡಿದೆ.
ಆಡಳಿತ ಮಂಡಳಿಯಲ್ಲಿನ ಒಡಕು ಮತ್ತು ನೆನೆಗುದಿಗೆ ಬಿದ್ದಿದ್ದ ಖಾತೆ ಪ್ರಕ್ರಿಯೆ ಮತ್ತು ನ್ಯಾಯಾಲಯದಲ್ಲಿ ಇನ್ನೂ ವ್ಯಾಜ್ಯಗಳು ಇತ್ಯರ್ಥಗೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆಯಾದರೂ ಇದನ್ನೇ ತಕ್ಷಣದ ನೆಪವಾಗಿರಿಸಿಕೊಂಡು ಮೀನಾಕ್ಷಿ ದೇವಸ್ಥಾನದ ಎದುರು ಕಾಲೇಜು ಇದೆ ಎಂಬ ಒಂದೇ ಕಾರಣಕ್ಕೆ ಅದನ್ನು ತೆರವುಗೊಳಿಸಲು ಒತ್ತುವರಿ ಆರೋಪದಲ್ಲಿ ಸಿಲುಕಿಸಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ವಿಶೇಷವೆಂದರೆ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿರುವ ಸಮದ್ ಖಾನ್ ಎಂಬುವರಿಗೆ ಸಂಘಪರಿವಾರದ ಹಿನ್ನೆಲೆ ಇದೆ. ಅಲ್ಲದೆ ಬಿಜೆಪಿಯ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರೂ ಜಮೀನನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು ಎಂಬ ಮಾತು ಕೇಳಿ ಬರುತ್ತಿದೆ.
ಒತ್ತುವರಿ ಇಲ್ಲವೆಂದಿದ್ದ ತನಿಖಾ ಸಮಿತಿ
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿನ 5 ಎಕರೆ ವಿಸ್ತೀರ್ಣದ ಜಾಗದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಇಂಜಿನಿಯರಿಂಗ್ ಕಾಲೇಜಿಗೆ ಸಂಯೋಜನೆ ನೀಡುವ ಸಲುವಾಗಿ ಪ್ರೊ.ಕೆ ಬಸವರಾಜು ನೇತೃತ್ವದ ತನಿಖಾ ತಂಡ ಸ್ಥಳ ಪರಿಶೀಲನೆ ನಡೆಸಿತ್ತು. ಈ ಸಂಸ್ಥೆ ಯಾವುದೇ ಭೂ ಒತ್ತುವರಿ ಮಾಡಿರುವ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು. ಆದರೂ ಈ ಕಾಲೇಜು ಒತ್ತುವರಿ ಮಾಡಿಕೊಂಡಿದೆ ಎಂದು ವಿಧಾನಪರಿಷತ್‌ನ ಸದಸ್ಯ ಎನ್ ರವಿಕುಮಾರ್ ಅವರು ಪ್ರತಿಪಾದಿಸಿದ್ದರಲ್ಲದೆ ಈ ಸಂಬಂಧ ಅಧಿವೇಶನದಲ್ಲಿ ಹಲವು ಬಾರಿ ಪ್ರಶ್ನೆಯನ್ನೂ ಕೇಳಿದ್ದರು.
‘ಈ ಸಂಸ್ಥೆಯು ಒತ್ತುವರಿ ಮಾಡಿರುವ ಜಾಗದಲ್ಲಿ ಕಾಲೇಜನ್ನು ಆರಂಭಿಸಿರುವ ಬಗ್ಗೆ ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ದೂರು ಸ್ವೀಕೃತವಾದಲ್ಲಿ ಸರ್ಕಾರವು ಅನುಮತಿ ಹಿಂಪಡೆಯಲು ಕ್ರಮ ವಹಿಸಲಾಗುವುದು,’ ಎಂದು ಡಾ ಸಿ ಅಶ್ವಥ್‌ನಾರಾಯಣ್ ಅವರು ಉತ್ತರಿಸಿದ್ದರು. ಇದು ಮತ್ತೊಮ್ಮೆ ದೂರು ನೀಡಲು ಪ್ರೇರೇಪಿಸುವಂತಿತ್ತು. ಕಾಕತಾಳೀಯ ಎಂಬಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ 8 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿ ಆರೋಪದ ಮೇರೆಗೆ ವಶಕ್ಕೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಸಹ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿತ್ತು.
ಇಡೀ ಪ್ರಕರಣವನ್ನು ‘ದಿ ಫೈಲ್’ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಪ್ರಕರಣದ ಹಿನ್ನೆಲೆ
ಬನ್ನೇರುಘಟ್ಟ ಮುಖ್ಯ ರಸ್ತೆಯ ಹುಳಿಮಾವು ಗ್ರಾಮ ವ್ಯಾಪ್ತಿಯಲ್ಲಿನ ಸರ್ವೆ ನಂಬರ್ 63ರಲ್ಲಿನ ಗೋಮಾಳದಲ್ಲಿದ್ದ 8 ಎಕರೆ ವಿಸ್ತೀರ್ಣದ ಜಾಗವನ್ನು ಖರೀದಿ ಮಾಡಲು ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾವು ಮುಂದಾಗಿತ್ತು. 1979ರಲ್ಲಿದ್ದ ಸರ್ಕಾರವು ಇದಕ್ಕೆ ಒಪ್ಪಿಗೆ ಸೂಚಿಸಿತ್ತಲ್ಲದೆ ಹುಳಿಮಾವು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ಎನ್‌ಒಸಿ ಕೂಡ ದೊರಕಿತ್ತು.
ಈ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದ 12 ಮಂದಿಗೆ ತಲಾ 10,000 ರು.ನಂತೆ ಒಟ್ಟು 1.20 ಲಕ್ಷ ರು.ಗಳನ್ನು ಪರಿಹಾರವನ್ನು ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆಯು ನೀಡಿತ್ತು. ಇದಾದ ನಂತರ 1980ರ ಜೂನ್ 17ರಂದು (ಪತ್ರ ಸಂಖ್ಯೆ ಆರ್‌ಡಿ730/ಎಲ್‌ಜಿಡಿ/79) ಸರ್ವೆ ನಂಬರ್ 63ರಲ್ಲಿ 8 ಎಕರೆ ಜಮೀನನ್ನು ಮಂಜೂರು ಮಾಡುವುದಾಗಿ ಕಂದಾಯ ಇಲಾಖೆಯು ಇಸ್ಲಾಮಿಕ್ ಮಿಷನ್‌ಗೆ ಪತ್ರ ಬರೆದಿತ್ತು.
ಕಂದಾಯ ಇಲಾಖೆಗೆ 5 ಲಕ್ಷ ಪಾವತಿಸಿದ್ದ ಸಂಸ್ಥೆ
1980ರ ಜೂನ್ 25ರಂದು ಪತ್ರ ಬರೆದಿದ್ದ ಇಸ್ಲಾಮಿಕ್ ಮಿಷನ್ ಅಫ್ ಇಂಡಿಯಾವು 8 ಎಕರೆ ಜಮೀನು ಪಡೆಯಲು ಒಪ್ಪಿಗೆ ಸೂಚಿಸಿತ್ತು. ಅದರಂತೆ ಹಣವನ್ನು ಪಾವತಿಸಬೇಕು ಎಂದು ಕಂದಾಯ ಆಯುಕ್ತರು 1981ರ ಜೂನ್ 9ರಂದು ಪತ್ರ ಬರೆದಿದ್ದರು. ಸಂಸ್ಥೆಯು 1986ರ ಏಪ್ರಿಲ್ 24ರಂದು ಚೆಕ್ ಮೂಲಕ (ಚೆಕ್ ನಂಬರ್ 462472) 5,85,920 ರು.ಗಳನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಿತ್ತ ಎಂಬುದು ತಿಳಿದು ಬಂದಿದೆ.
ರಾಜ್ಯಪತ್ರದಲ್ಲಿಯೂ ಪ್ರಕಟ
ಸಂಸ್ಥೆಯು 5 ಲಕ್ಷ ರು. ಪಾವತಿಸಿದ ನಂತರ ಸರ್ಕಾರವು (ಎಲ್‌ಎಕ್ಯೂ (2)ಎಸ್‌ಆರ್1681/1988) ಜಮೀನು ಮಂಜೂರಾತಿ ಕುರಿತು 1988ರ ಜನವರಿ 27ರಂದು ಕರ್ನಾಟಕ ರಾಜ್ಯಪತ್ರದಲ್ಲಿಯೂ ಪ್ರಕಟಿಸಿತ್ತು. ಈ ಪ್ರಕ್ರಿಯೆ ನಂತರವಷ್ಠೇ ಸರ್ಕಾರವು ಜಮೀನನ್ನು ಖರೀದಿಸಲು ಒಪ್ಪಿಗೆ ನೀಡಿತ್ತು ಮತ್ತು ಗ್ರಾಮ ಪಂಚಾಯ್ತಿಯೂ ಸಹ ಗೋಮಾಳ ಖರೀದಿ ಅಥವಾ ಮಂಜೂರು ಮಾಡಲು ಯಾವುದೇ ಆಕ್ಷೇಪನೆ ಇಲ್ಲ ಎಂದು 1979ರ ಅಕ್ಟೋಬರ್ 6ರಂದು ಎನ್‌ಒಸಿಯನ್ನೂ ನೀಡಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.
ಎನ್‌ಒಸಿ ಬಳಿಕ ಕಾಲೇಜು ಕಟ್ಟಡ ನಿರ್ಮಾಣ
ಗ್ರಾಮ ಪಂಚಾಯ್ತಿಯಿಂದ ಎನ್‌ಒಸಿ ದೊರೆಯುತ್ತಿದ್ದಂತೆ ಆಡಳಿತ ಮಂಡಳಿಯು 1978ರಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ನಿರ್ಮಿಸಿತ್ತು. 1979ರಲ್ಲಿ ಅಂದಿನ ತಾಂತ್ರಿಕ ಶಿಕ್ಷಣ ಇಲಾಖೆಯು ಇಂಜಿನಿಯರಿಂಗ್ ಕಾಲೇಜಿಗೆ ಮಾನ್ಯತೆ ನೀಡಿತ್ತು. ಅದೇ ರೀತಿ 1982ರಲ್ಲಿ ಇಸ್ಲಾಮಿಯಾ ಕಾನೂನು ಕಾಲೇಜುನ್ನು ಅದೇ 8 ಎಕರೆಯಲ್ಲಿ ಕಟ್ಟಡ ನಿರ್ಮಾಣವಾಗಿತ್ತು. ಈ ಎರಡೂ ಕಟ್ಟಡಗಳು 3.50 ಎಕರೆಯಲ್ಲಿ ನಿರ್ಮಾಣವಾಗಿದೆ. ಆರಂಭದಲ್ಲಿ 35 ವಿಭಾಗಗಳು 3,800 ವಿದ್ಯಾರ್ಥಿಗಳಿದ್ದ ಈ ಇಂಜಿನಿಯರಿಂಗ್ ಕಾಲೇಜು ದಕ್ಷಿಣ ಭಾರತದ ಅತ್ಯುತ್ತಮ ಸಂಸ್ಥೆ ಎಂದು ಹೇಳಿ ಅಂದಿನ ಸರ್ಕಾರವು ಘೋಷಿಸಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.
ಆಡಳಿತ ಮಂಡಳಿಯಲ್ಲಿ ಒಡಕು
ಗ್ರಾಮ ಪಂಚಾಯ್ತಿಯು ನೀಡಿದ್ದ ಎನ್‌ಒಸಿ ಮತ್ತು ಕಂದಾಯ ಇಲಾಖೆ ಸೂಚನೆ ಮೇರೆಗೆ 5 ಲಕ್ಷ ರು. ಪಾವತಿಸಿದ ನಂತರ ಜಮೀನು ಮಂಜೂರಾತಿ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾದ ನಂತರ ಆಡಳಿತ ಮಂಡಳಿಯಲ್ಲಿ ಒಡುಕು ಶುರುವಾಯಿತು. ಹೀಗಾಗಿ ಸಂಸ್ಥೆ ಹೆಸರಿಗೆ ಖಾತೆ ಮಾಡಿಸಿಕೊಳ್ಳುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಅಲ್ಲದೆ ಆಡಳಿತ ಮಂಡಳಿಯಲ್ಲಿ ಒಡಕು ಶುರುವಾದ ಕಾರಣ ಅಂದಿನ ಸರ್ಕಾರವು (1990) ಇದ್ದಕ್ಕಿದ್ದಂತೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆಡಳಿತಾಧಿಕಾರಿಗಳು ಕೂಡ ಖಾತೆ ಪ್ರಕ್ರಿಯೆಯನ್ನು ಮುಂದುವರೆಸಲಿಲ್ಲ ಮತ್ತು ಈ ಬಗ್ಗೆ ಆಸ್ಥೆ ವಹಿಸಲಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಆಡಳಿತ ಮಂಡಳಿಯ ಒಂದು ಬಣಕ್ಕೆ ಮನ್ನಣೆ ದೊರೆತಿತ್ತು. ಹೀಗಾಗಿ 1998ರಲ್ಲಿ ಸರ್ಕಾರವು ಆಡಳಿತಾಧಿಕಾರಿ ನೇಮಕವನ್ನು ರದ್ದುಗೊಳಿಸಿತ್ತು. ಹಾಜಿ ಇಮ್ತಿಯಾಜ್ ಅಹ್ಮದ್ ಖಾನ್ ಬಣಕ್ಕೆ ಆಡಳಿತ ಹಸ್ತಾಂತರವಾದರೂ ಆಡಳಿತಾಧಿಕಾರಿಯು ತನ್ನ ಅವಧಿಯಲ್ಲಿನ ಯಾವ ದಾಖಲೆಗಳನ್ನೂ ಸಂಸ್ಥೆಗೆ ನೀಡಿರಲಿಲ್ಲ. ಆದರೂ ಹಾಜಿ ಇಮ್ತಿಯಾಜ್ ಅಹ್ಮದ್ ಕಾನ್ ಬಣವು ಸಂಸ್ಥೆಯನ್ನು ಮುನ್ನೆಡೆಸಿತು. ಈ ಬೆಳವಣಿಗೆ ಮಧ್ಯೆಯೇ ಕಾಲೇಜಿನಲ್ಲಿ ಮೂಲಸೌಕರ್ಯಗಳಿಲ್ಲ ಎಂಬ ಕಾರಣವನ್ನು ಮುಂದೊಡ್ಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮಾನ್ಯ5ತೆಯನ್ನು 2002ರಲ್ಲಿ ರದ್ದುಗೊಳಿಸಿತ್ತು.
ಮತ್ತೆ ಆಡಳಿತಾಧಿಕಾರಿ ನೇಮಕ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮಾನ್ಯತೆ ರದ್ದುಗೊಳಿಸುತ್ತಿದ್ದಂತೆ 2003ರಲ್ಲಿ ಅಂದಿನ ಸರ್ಕಾರವು ಸಂಸ್ಥೆಗೆ ಪುನಃ ಆಡಳಿತಾಧಿಕಾರಿಯನ್ನಾಗಿ ಎ ಆರ್ ಇನ್‌ಫೆಂಟ್ ಅವರನ್ನು ನೇಮಿಸಿತ್ತು. ಮಿಷನ್‌ನ ಆಡಳಿತಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಹಸ್ತಾಂತರಿಸಲಾಗಿತ್ತು. ಆದರೆ ಇವರು ಕೂಡ 8 ಎಕರೆ ಜಮೀನನ್ನು ಖಾತೆ ಮಾಡಿಸಲು ಯಾವುದೇ ಆಸ್ಥೆ ವಹಿಸಲಿಲ್ಲ. ಇವರ ಕಾರ್ಯವೈಖರಿ ಕುರಿತು ಆಡಳಿತಾಧಿಕಾರಿ ನೇಮಕಾತಿಯನ್ನು ರದ್ದುಗೊಳಿಸುವಂತೆ ಸಂಸ್ಥೆಯ ಆಡಳಿತ ಮಂಡಳಿಯು 2003ರಲ್ಲಿ ರಿಟ್ ಪಿಟಿಷನ್ ದಾಖಲಿಸಿತ್ತು.
2005ರಲ್ಲಿ ಇತ್ಯರ್ಥಗೊಂಡಿದ್ದ ಅರ್ಜಿ
2003ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ 2005ರಲ್ಲಿ ಇತ್ಯರ್ಥಗೊಳಿಸಿತ್ತು. ಆಡಳಿತಾಧಿಕಾರಿ ನೇಮಕ ತಪ್ಪು ಎಂದು ಹೇಳಿದ್ದ ಹೈಕೋರ್ಟ್ ಆ ನೇಮಕಾತಿಯನ್ನು ರದ್ದುಗೊಳಿಸಿ ಆಡಳಿತ ಮಂಡಳಿಯ ಮನವಿಯನ್ನು ಪುರಸ್ಕರಿಸಿತ್ತು. ಆದರೆ ಅಂದಿನ ಸರ್ಕಾರವು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಬೆಳವಣಿಗೆ ಮಧ್ಯೆ ಆಡಳಿತ ಮಂಡಳಿಯಲ್ಲಿನ 12 ಮಂದಿ ಸದಸ್ಯರನ್ನು 2002ರ ಏಪ್ರಿಲ್ 23ರಂದು ನಡೆದಿದ್ದ ಕಾರ್ಯಕಾರಿ ಸಮಿತಿಯಲ್ಲಿ ಸಭೆಯಲ್ಲಿ ವಜಾಗೊಳಿಸಲಾಗಿತ್ತು. ಇವರಲ್ಲಿ ವಿಧಾನಪರಿಷತ್‌ನ ಹಾಲಿ ಸದಸ್ಯ ನಸೀರ್ ಅಹ್ಮದ್ ಮತ್ತು ಐಎಎಸ್ ಅಧಿಕಾರಿಯಾಗಿದ್ದ ಮೊಹ್ಮದ್ ಸನಾವುಲ್ಲಾ ಕೂಡ ಇದ್ದರು ಎಂದು ಹೇಳಲಾಗಿದೆ.
ಈ ಸದಸ್ಯರು ಸಂಸ್ಥೆಯ ವಿರುದ್ಧ ಅಸಲು ದಾವೆಯನ್ನು . (ಒಎಸ್ 15744/2001) ಹೂಡಿದ್ದರು ಎಂಬ ಕಾರಣಕ್ಕೆ ವಜಾಗೊಳಿಸಲಾಗಿತ್ತು. ಇದರ ವಿರುದ್ಧ ಸದಸ್ಯರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು (ಎಂಎಫ್‌ಎ 4996/2002). ಅದು ಕೂಡ ವಜಾಗೊಂಡಿತ್ತು. ಹೀಗಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ 12 ಮಂದಿಯನ್ನು ಸದಸ್ಯತ್ವದಿಂದ ರದ್ದುಗೊಳಿಸಲಾಗಿತ್ತು. ಹಾಗೂ ಹೊಸ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಗಿತ್ತು ಎಂಬುದು ಗೊತ್ತಾಗಿದೆ.
ಸಂಸ್ಥೆಯ ಹಿಂದಿನ ಆಡಳಿತಾಧಿಕಾರಿ ಇನ್‌ಫೆಂಟ್ ಅವರು ವಜಾಗೊಂಡಿದ್ದ ಸದಸ್ಯರನ್ನು ಒಟ್ಟುಗೂಡಿಸಿ ಅಡ್‌ಹಾಕ್ ಕಮಿಟಿಯನ್ನು ರಚಿಸಿದ್ದರು. ಆದರೆ ಈ ಕಮಿಟಿಯೂ ಸಂಸ್ಥೆಯ ವಶದಲ್ಲಿದ್ದ ಜಮೀನನ್ನು ಖಾತೆ ಮಾಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿಲ್ಲ. ಹೀಗಾಗಿ ಇಮ್ತಿಯಾಜ್ ಅಹ್ಮದ್ ಖಾನ್ ಬಣವು 2006ರ ಜನವರಿ 18ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಸಿತ್ತು. ಆದರೆ ನಿಬಂಧಕರು ಇವರ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ನಡುವೆ ಇಸ್ಲಾಮಿಕ್ ಮಿಷನ್ ಅಫ್ ಇಂಡಿಯಾವು ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದ ಅಂದಿನ ಬಿಜೆಪಿ ಸರ್ಕಾರವು ಒತ್ತುವರಿಯಾಗಿರುವ ಜಾಗವನ್ನು ವಶಪಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿತ್ತು. ಬೆಂಗಳೂರು ದಕ್ಷಿಣ ತಹಶೀಲ್ದಾರ್ 2009ರ ಸೆಪ್ಟಂಬರ್ 25ರಂದು ಆದೇಶ ಹೊರಡಿಸಿದ್ದರು ಎಂಬುದು ದಾಖಲೆಯಿಂದ ಗೊತ್ತಾಗಿದೆ. ಆದರೆ ಈ ಕ್ರಮದ ವಿರುದ್ಧ ಅಡ್‌ಹಾಕ್ ಕಮಿಟಿಯು ಪ್ರಶ್ನಿಸಲಿಲ್ಲ ಮತ್ತು ನ್ಯಾಯಾಲಯದಲ್ಲಿ ಯಾವುದೇ ದಾವೆಯನ್ನೂ ಹೂಡಲಿಲ್ಲ. ಮತ್ತು 11 ವರ್ಷಗಳವರೆಗೂ ಯಾವುದೇ ಕಾನೂನು ಪ್ರಕ್ರಿಯೆಯನ್ನು ಜರುಗಿಸಿರಲಿಲ್ಲ.
ಹೀಗಾಗಿ ಇಮ್ತಿಯಾಜ್ ಬಣವು ಜಿಲ್ಲಾ ನಿಬಂಧಕರ ಮುಂದೆ ಮತ್ತೊಂದು ದೂರು ದಾಖಲಿಸಿತ್ತು. (ಪಿಪಿಎನ್ 43) ಇದನ್ನಾಧರಿಸಿ ವಿಚಾರಣೆ ನಡೆದಿತ್ತಾದರೂ ಅಡ್ ಹಾಕ್ ಕಮಿಟಿಯು ವಿವರಣೆಯನ್ನು ನೀಡಲಿಲ್ಲ. ಇದರಿಂದ ಇಮ್ತಿಯಾಜ್ ಬಣವು ಹೈಕೋರ್ಟ್‌ನಲ್ಲಿ 2011ರಲ್ಲಿ ರಿಟ್ (29576/577/2011) ಅರ್ಜಿ ದಾಖಲಿಸಿತ್ತು. ಈ ಅರ್ಜಿಯನ್ನುವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರ ಪೀಠ 2011 ಅಗಸ್ಟ್ 12ರಂದು ವಿಚಾರಣೆ ನಡೆಸಿತ್ತು. ಅಡ್‌ಹಾಕ್ ಕಮಿಟಿಯು ಉತ್ತರ ನೀಡದಿದ್ದ ಮೇಲೆ ಕಾನೂನು ಕ್ರಮ ಜರುಗಿಸಿ ಅರ್ಜಿದಾರರಿಗೆ ನ್ಯಾಯ ಒದಗಿಸಿ ಎಂದು ಅರ್ಜಿಯನ್ನು ವಿಲೇವಾರಿ ಮಾಡಿತ್ತು.
ಅಡ್‌ಹಾಕ್ ಕಮಿಟಿಯ ಸದಸ್ಯರೂ ಆಗಿದ್ದ ಮೊಹ್ಮದ್ ಸನಾವುಲ್ಲಾ ಅವರು ಐಜಿಆರ್ ಆಗಿದ್ದರಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸಲಿಲ್ಲ. ಕ್ರಮೇಣ ಅರ್ಜಿದಾರರು ನ್ಯಾಯಂಗ ನಿಂದನೆಯನ್ನೂ ಹೈಕೋರ್ಟ್‌ನಲ್ಲಿ ದಾಖಲಿಸಿದ್ದರು. ಪ್ರತಿವಾದಿಗಳಿಗೆ ನೋಟೀಸ್ ಜಾರಿಗೊಳಿಸಿ ಇತ್ಯರ್ಥ ಮಾಡುವುದಾಗಿ ಸಹಕಾರ ಇಲಾಖೆಯು ಹೇಳಿದ್ದರಿಂದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಲೇ ಮಾಡಿತ್ತು.
ಸಹಕಾರ ಇಲಾಖೆಗೆ ಲೆಕ್ಕ ಕೊಡದ ಅಡ್‌ಹಾಕ್ ಕಮಿಟಿ
ಅಡ್‌ಹಾಕ್ ಕಮಿಟಿಯು ಸಂಸ್ಥೆಯು ಶುಲ್ಕ ಸೇರಿದಂತೆ ಲೆಕ್ಕವನ್ನೂ ಸಹಕಾರ ಇಲಾಖೆಗೆ ಕೊಟ್ಟಿರಲಿಲ್ಲ. ಅಲ್ಲದೆ ಅಡ್‌ಹಾಕ್ ಕಮಿಟಿಯನ್ನೂ ನೋಂದಣಿ ಮಾಡಿರಲಿಲ್ಲ. ಅಡ್‌ಹಾಕ್ ಕಮಿಟಿಯವರು ಸಂಸ್ಥೆಯ ಯಾವುದೇ ಸದಸ್ಯರುಗಳಲ್ಲವೆಂದು ತೀರ್ಮಾನಿಸಿತ್ತು. ಸಹಕಾರ ನಿಬಂಧಕರ ಸುತ್ತೋಲೆಯಂತೆ ಅರ್ಜಿದಾರರು ಸಲ್ಲಿಸಿದ್ದ 1979ರಿಂದ 2020ರವರೆಗಿನ 40 ವರ್ಷಗಳ ಸುದೀರ್ಘ ಲೆಕ್ಕಪತ್ರಗಳು ಹಾಗೂ ಅಧ್ಯಕ್ಷ ಸಯ್ಯದ್ ಅಸಾದುಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸಮದ್ ಖಾನ್ ಒಳಗೊಂಡ ಸಮಿತಿಯ 9 ಮಂದಿಯ ಕಾರ್ಯಕಾರಿ ಸಮಿತಿ ಪಟ್ಟಿಯನ್ನುಅನುಮೋದಿಸಿ ಆದೇಶಿಸಿತ್ತು. ಈ ಸಂಬಂಧ 2020ರ ಡಿಸೆಂಬರ್ 22ರಂದು ಆದೇಶ ಹೊರಡಿಸಿತ್ತು. ಈ ಕಾರ್ಯಕಾರಿ ಸಮಿತಿಯು ಮಿಷನ್‌ನ ಆಡಳಿತಾತ್ಮಕ ಕಾರ್ಯನಿರ್ವಹಣೆ ಮಾಡಲು ಅಧಿಕಾರ ಪಡೆದು ನಿರ್ವಹಿಸತಕ್ಕದ್ದು ಎಂದು ಆದೇಶದಲ್ಲಿ ಹೇಳಿತ್ತು.
ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ (438/2021) ಅಡ್‌ಹಾಕ್ ಕಮಿಟಿಯು ರಿಟ್‌ಅರ್ಜಿ ಸಲ್ಲಿಸಿದೆ. ಆದರೆ ಕಮಿಟಿಗೆ ತಡೆಯಾಜ್ಞೆ ದೊರೆಯಲಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆಗಲೂ ತಡೆಯಾಜ್ಞೆ ದೊರೆಯಲಿಲ್ಲ ಹೀಗಾಗಿ ಇದು ಇತ್ಯರ್ಥಕ್ಕೆ ಬಾಕಿ ಇದೆ ಎಂದು ತಿಳಿದು ಬಂದಿದೆ.
ಇದೇ ಅಡ್‌ಹಾಕ್ ಕಮಿಟಿಯು 2009ರ ಆದೇಶವನ್ನು ಪ್ರಶ್ನಿಸಿ (3.50ಎಕರೆ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ) 2020ರಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿತ್ತು. ಇದಕ್ಕೆ ತಡೆಯಾಜ್ಞೆ ದೊರೆಯಿತು. ಇದನ್ನು ಪ್ರಶ್ನಿಸಿ ಸರ್ಕಾರವು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದೆ. ಈ ಅರ್ಜಿ ಕೂಡ ಇತ್ಯರ್ಥಕೆ ಬಾಕಿ ಇದೆ.
ಆದರೂ ಸರ್ಕಾರ ಅಪೀಲು ಸಲ್ಲಿಸಿ ಇತ್ಯರ್ಥ ಮಾಡಿಕೊಂಡಿದೆ. ಇದು ಅನಧಿಕೃತ ಎಂದು ತೀರ್ಮಾನಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶವನ್ನೂ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಅಡ್‌ಹಾಕ್ ಕಮಿಟಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿಯೂ ಸಹ ತಡೆಯಾಜ್ಞೆ ಪಡೆದುಕೊಂಡಿದೆಯೇ ವಿನಃ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. ಹೀಗಾಗಿ ಸುಪ್ರೀಂ ನಲ್ಲಿದ್ದ ಅರ್ಜಿ ವಜಾಗೊಂಡಿದ್ದನ್ನು ಸ್ಮರಿಸಬಹುದು.