ಐಎಂಎ ಹೂಡಿಕೆ; ಸರ್ಕಾರದಿಂದಲೇ 12.82 ಕೋಟಿ ವಸೂಲಿಗೆ ಮುಂದಾದ ಪ್ರಾಧಿಕಾರ

ಬೆಂಗಳೂರು; ಸಾವಿರಾರು ಕೋಟಿ ರು. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಎಂಎ ಕಂಪನಿಯು ವಿವಿಧೆಡೆ ಮಾಡಿರುವ ಹೂಡಿಕೆ ಮೊತ್ತವನ್ನು ವಸೂಲು ಮಾಡಿ ಠೇವಣಿದಾರರಿಗೆ ಮರಳಿಸುತ್ತಿರುವ ಸಕ್ಷಮ ಪ್ರಾಧಿಕಾರವು ವಿ ಕೆ ಓಬೆದುಲ್ಲಾ ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕಾಗಿ ಇದೇ ಕಂಪನಿಯು ಮಾಡಿರುವ ವೆಚ್ಚವನ್ನೂ ಸರ್ಕಾರದಿಂದಲೇ ವಸೂಲು ಮಾಡಲು ಮುಂದಾಗಿದೆ.

ಸರ್ಕಾರಿ ವಿ ಕೆ ಓಬೆದುಲ್ಲಾ ಶಾಲೆಯ ಮೂಲಸೌಕರ್ಯಕ್ಕಾಗಿ ಐ ಎಂ ಎ ಕಂಪನಿಯು 12.82 ಕೋಟಿ ರು. ವೆಚ್ಚ ಮಾಡಿತ್ತು. ಈ ಹಣವನ್ನು ವಸೂಲು (ರಿಕವರಿ) ಮಾಡಿದಲ್ಲಿ ಹೂಡಿಕೆದಾರರಿಗೆ ಕ್ಲೈಮ್‌ಗಳನ್ನು ಹಿಂದಿರುಗಿಸಲು ಅನುಕೂಲವಾಗುತ್ತದೆ ಎಂದು ಕಂದಾಯ ಇಲಾಖೆಯು ಪ್ರತಿಪಾದಿಸಿದೆ. ಈ ಸಂಬಂಧ 2021ರ ಜುಲೈ 31ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘2017-18 ಮತ್ತು 2018-19ನೇ ಸಾಲಿಗೆ ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕೆ 10 ಕೋಟಿ ಹೂಡಿಕೆ ಮಾಡಿರುತ್ತದೆ. ಶಾಲೆಯ ವಾರ್ಷಿಕ ಕಾರ್ಯನಿರ್ವಹಣೆ ವೆಚ್ಚವಾಗಿ 2.82 ಕೋಟಿ ಪಾವತಿ ಮಾಡಿರುವುದರಿಂದ ಒಟ್ಟು 12.82 ಕೋಟಿ ಮೊತ್ತವನ್ನು ಚೇತರಿಕೆ ಮಾಡಿದಲ್ಲಿ ಹೂಡಿಕೆದಾರರಿಗೆ ಕ್ಲೈಮ್‌ಗಳನ್ನು ಹಿಂದಿರುಗಿಸಲು ಅನುಕೂಲವಾಗುತ್ತದೆ,’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ‘ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಗೆ ಐಎಂಎ ಸಂಸ್ಥೆ ಮಾಡಿರುವ ವೆಚ್ಚವನ್ನು ಪರಿಶೀಲಿಸಲಾಗಿದೆ. ರಾಜ್ಯದಲ್ಲಿ ಸಾವಿರಾರು ಶಾಲೆಗಳಿಗೆ ಅನೇಕ ಕಂಪನಿಗಳು, ಉದ್ಯಮಗಳು, ದಾನಿಗಳು ಮೂಲಭೂತ ಸೌಲಭ್ಯಗಳಿಗೆ ವೆಚ್ಚ ಮಾಡಿದ್ದು ಸಾರ್ವಜನಿಕ ಉದ್ದೇಶಕ್ಕೆ ಬಳಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡಿದಲ್ಲಿ ಸಾವಿರಾರು ಪ್ರಕರಣಗಳಲ್ಲಿ ಈ ರೀತಿಯ ಬೇಡಿಕೆ ಬರುವ ಸಾಧ್ಯತೆ ಇದೆ. ಆದ್ದರಿಂದ ಈ ಶಾಲೆಯ ಮೂಲಭೂತ ಸೌಕರ್ಯಕ್ಕೆ ವ್ಯಯಿಸಲಾಗಿರುವ ಮೊತ್ತವನ್ನು ಸರ್ಕಾರದಿಂದ ನೀಡಲು ಸಾಧ್ಯವಿಲ್ಲ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾನೂನು ಸಲಹೆಗಾರರು ಅಭಿಪ್ರಾಯಿಸಿದ್ದಾರೆ.

ಅಲ್ಲದೆ ಶಾಲಾ ಕಟ್ಟಡಗಳು, ತರಗತಿಗಳು ಮೂಲಭೂತ ಸೌಲಭ್ಯಗಳನ್ನು ಎಲ್ಲಾ ರೀತಿಯ ದಾನಿಗಳಿಂದ ಪಡೆಯಲಾಗಿದೆ. ಈ ಸಂಬಂಧ ಯಾವುದೇ ಹಕ್ಕುಗಳನ್ನು ದಾನಿಗಳಿಗೆ ನೀಡಿಲ್ಲ. ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಯ ಪ್ರಕರಣದಲ್ಲಿಯೂ ಇದೇ ರೀತಿಯ ದಾನ ಪಡೆಯಲಾಗಿದೆ. ಈ ರೀತಿಯ ದಾನ ಸ್ವ ಇಚ್ಛೆಯಿಂದ ಪಡೆಯಲಾಗಿದೆ. ಹೀಗಾಗಿ ಸರ್ಕಾರದಿಂದ ಯಾವುದೇ ಪರಿಹಾರ ವೆಚ್ಚವನ್ನು ಹಿಂಪಾವತಿ ಕೇಳಲು ಸಾಧ್ಯವಿಲ್ಲ ಎಂದೂ ಶಿಕ್ಷಣ ಇಲಾಖೆಯು ಅಭಿಪ್ರಾಯಿಸಿದೆ.

ಮುಟ್ಟುಗೋಲಿಗೆ ಅವಕಾಶವಿದೆಯೇ?

ಸರ್ಕಾರಿ ವಿ ಕೆ ಓಬೆದುಲ್ಲಾ ಶಾಲಾ ಕಟ್ಟಡವು ಐಎಂಎ ಸಂಸ್ಥೆಯ ಅಧೀನದಲ್ಲಿರುವುದೇ, ಹಾಗಿದ್ದಲ್ಲಿ ಪಿಪಿಐಡಿ ಕಾಯ್ದೆ 3(2)ರ ಪ್ರಕಾರ ಮುಟ್ಟುಗೋಲು ಹಾಕಬಹುದು ಎಂದಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಶಾಲಾ ಜಮೀನು ಹಾಗೂ ಕಟ್ಟಡವು ಸರ್ಕಾರದ ವಶದಲ್ಲಿದ್ದು ಸರ್ಕಾರದ ಸ್ವತ್ತು ಆಗಿರುವುದರಿಂದ ಕಟ್ಟಡವನ್ನು ಕೆಪಿಐಡಿ ಸೆಕ್ಷನ್‌ 3(2)ರ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ 2021ರ ಏಪ್ರಿಲ್‌ 17ರಂದು ಪ್ರಶ್ನೆ ಎತ್ತಿತ್ತು.

ಇದರ ಜತೆಗೆ ಇನ್ನೂ ಒಂದು ಪ್ರಶ್ನೆ ಎತ್ತಿತ್ತು. ‘ಶಾಲೆಯು ಸರ್ಕಾರದ ವಶದಲ್ಲಿದ್ದ ಪಕ್ಷದಲ್ಲಿ ಹೂಡಿಕೆದಾರರ ಹಣವನ್ನು ಕಟ್ಟಡದ ಪುನರ್‌ ನಿರ್ಮಾಣಕ್ಕಾಗಿ ಬಳಸಲಾಗಿದೆಯೇ, ಹಾಗಿದ್ದಲ್ಲಿ ಸರ್ಕಾರವು ಸಕ್ಷಮ ಪ್ರಾಧಿಕಾರದ ಕೋರಿಕೆಯನ್ನು ಪರಿಗಣಿಸುವ ಬಗ್ಗೆ ಅಂದರೆ ಕಟ್ಟಡಕ್ಕಾಗಿ ಹಾಗೂ ಇತರೆ ಕಾಮಗಾರಿಗಳಿಗಾಗಿ 12.82 ಕೋಟಿಯನ್ನು ಸರ್ಕಾರವು 2 ತಿಂಗಳೊಳಗಾಗಿ ಮರುಪಾವತಿಸುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಬೇಕು,’ ಎಂದೂ ನ್ಯಾಯಾಲಯವು ಹೇಳಿತ್ತು.

ಸರ್ಕಾರಿ ಶಾಲೆಗೆ ಸೌಲಭ್ಯವನ್ನು ಒದಗಿಸುವ ಸಂಬಂಧ ಐಎಂಎ ಸಂಸ್ಥೆಯನ್ನು ಒಂದು ದಾನ ನೀಡುವ ಸಂಸ್ಥೆಯನ್ನಾಗಿ ಪರಿಗಣಿಸಿದೆ. ಶಿಕ್ಷಣ, ವಿಜ್ಞಾನ, ಸಾಹಿತ್ಯ ಹಾಗೂ ಕಲೆಯ ಪ್ರಗತಿಗಾಗಿ ಶ್ರಮ ವಹಿಸುತ್ತಿದ್ದ ಕಾರಣ ಈ ಶಾಲೆಯನ್ನು ನಿರ್ವಹಿಸುವ ಹಾಗೂ ಅದರ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಸರ್ಕಾರದೊಂದಿಗೆ 2016ರ ಏಪ್ರಿಲ್‌ 12ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಒಡಂಬಡಿಕೆಯ ಕ್ಲಾಸ್‌ 11ರಲ್ಲಿ ‘ಎಂಒಯು ಅವಧಿ ನಂತರ ದಾನಿಯಿಂದ ಹಾಗೂ ಇಲಾಖೆಯಿಂದ ನೀಡಲ್ಪಟ್ಟ ಎಲ್ಲಾ ಸ್ವತ್ತು ಸಹಾಯಗಳು ಶಾಲೆಯ ಸ್ವತ್ತಾಗಿ ಮುಂದುವರೆತಕ್ಕದ್ದು ಎಂದು ಹೇಳಲಾಗಿದೆ.

ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಐಎಂಎ ಮಧ್ಯೆ ಆಗಿರುವ ಒಡಂಬಡಿಕೆ ಪ್ರಕಾರ ಸರ್ಕಾರಿ ವಿ ಕೆ ಒಬೆದುಲ್ಲಾ ಉರ್ದು ಮಾದರಿ ಪ್ರಾಥಮಿಕ ಶಾಲೆಗೆ ಮಹಮದ್‌ ಮನ್ಸೂರ್‌ ಅಧ್ಯಕ್ಷರಾಗಿರುವ ಐಎಂಎ ಚಾರಿಟಬಲ್‌ ಟ್ರಸ್ಟ್‌ ಮಾಲೀಕತ್ವದಲ್ಲಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

28 ಕೊಠಡಿಗಳು, 2 ಊಟದ ಮನೆ, ಒಂದು ಸಭಾಂಗಣ, ಶಿಕ್ಷಕರ 4 ಕೊಠಡಿ, 3 ಪ್ರಯೋಗಾಲಯ, ಗ್ರಂಥಾಲಯ, ಒಟ್ಟು ಕಟ್ಟಡದಲ್ಲಿರುವ 28 ತರಹದ ಪರಿಕರಗಳು, ಪೀಠೋಪಕರಣಗಳು ಈ ಶಾಲೆಯಲ್ಲಿವೆ. 2017-18ನೇ ಸಾಲಿನಿಂದ ಮರು ಆರಂಭಗೊಂಡಿದ್ದ ಈ ಶಾಲೆ ಮೇಲೆ ಐಎಂಎ ಸಂಸ್ಥೆಯು ಒಟ್ಟು 10 ಕೋಟಿ ರು.ಗಳನ್ನು ಹೂಡಿಕೆ ಮಾಡಿತ್ತು ಎಂಬುದು ಐಎಂಎ ಮತ್ತು ಇತರೆ ವಂಚನೆ ಪ್ರಕರಣಗಳ ಸಕ್ಷಯ ಪ್ರಾಧಿಕಾರದ ಸಹಾಯಕ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts