ಆರ್ಥಿಕ ಸಂಕಷ್ಟ ನೆಪ; ಟ್ರೀ ಪಾರ್ಕ್‌ಗೆ ಕೊಟ್ಟಿದ್ದ 1 ಕೋಟಿ ಹಿಂಪಡೆದ ಸರ್ಕಾರ

ಬೆಂಗಳೂರು; ಕೋವಿಡ್ ಲಾಕ್ ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದನ್ನು ನೆಪವಾಗಿರಿಸಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ಒಂದು ಕೋಟಿ ಅನುದಾನವನ್ನೂ ವಾಪಸ್‌ ಪಡೆದುಕೊಂಡಿದೆ.

ಹಾಸನ ಜಿಲ್ಲೆ ಬೇಲೂರಿನಲ್ಲಿ ಸಾಲುಮರದ ತಿಮ್ಮಕ್ಕನವರಿಗೆ ಬಂದಿರುವ ಪ್ರಶಸ್ತಿಗಳನ್ನಿಡಲು ಮ್ಯೂಸಿಯಂ ಹಾಗೂ ಅವರ ಹೆಸರಿನಲ್ಲಿ ಟ್ರೀ ಪಾರ್ಕ್ ನಿರ್ಮಾಣ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಿತ್ತು. ಆದರೀಗ ಕೋವಿಡ್‌ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟವನ್ನು ಮುಂದೊಡ್ಡಿ ಬಿಡುಗಡೆ ಮಾಡಿದ್ದ ಅನುದಾನವನ್ನೂ ವಾಪಸ್‌ ಪಡೆದಿದೆ. ಈ ಕುರಿತು 2021ರ ಜುಲೈ 24ರಂದು ಶಾಸಕ ಕೆ ಎಸ್‌ ಲಿಂಗೇಶ್‌ ಅವರು ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಕಲ್ಲಹಳ್ಳಿ ಕಾವಲು ಅರಣ್ಯ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ವೃಕ್ಷೋದ್ಯಾನ (ಟ್ರೀ ಪಾರ್ಕ್‌) ನಿರ್ಮಿಸಲು ಸರ್ಕಾರ ಮುಂದಾಗಿತ್ತು.

ಬೇಲೂರು ವಿಧಾನಸಭೆ ಕ್ಷೇತ್ರದ ಶಾಸಕ ಕೆ ಎಸ್‌ ಲಿಂಗೇಶ್‌ ಅವರ ಒತ್ತಾಸೆ ಮೇರೆಗೆ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ವೃಕ್ಷೋದ್ಯಾನ ಯೋಜನೆ ಘೋಷಿಸಿದ್ದ ಸರ್ಕಾರವು 1 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಕಾಮಗಾರಿಗಳೂ ನಡೆದಿರಲಿಲ್ಲ. ಈ ಬಗ್ಗೆ 2021ರ ಜುಲೈ 24ರಂದು ಶಾಸಕ ಕೆ ಎಸ್‌ ಲಿಂಗೇಶ್‌ ಅವರು ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಸಕಾರ್ಶರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಗಮನ ಸೆಳೆದಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

‘ರಾಜ್ಯದ ನಾನಾ ಭಾಗಗಳಲ್ಲಿ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ ತಿಮ್ಮಕ್ಕ ಅವರು ನೆಲೆಸಿರುವ ಬೇಲೂರು ತಾಲೂಕಿನ ಅವರ ಹೆಸರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿಲ್ಲ. ವಿಧಾನಸಭೆ ಕಾರ್ಯಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ನಂತರ ರಾಜ್ಯ ಸರ್ಕಾರವು ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿತ್ತು. ಆದರೆ ಇದುವರೆಗೂ ಈ ಸಂಬಂಧ ಯಾವುದೇ ಅಭಿವೃದ್ಧಿ ಕಾರ್ಯಚಟುವಟಿಕೆಗಳು ಆರಂಭವಾಗಿಲ್ಲ.

ವೃಕದ್ಯೋದ್ಯಾನ ನಿರ್ಮಿಸಲು ಈಗಾಗಲೇ ಅನುಮೋದನೆ ದೊರೆತಿರುವುದರಿಂದ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ 100.00 ಲಕ್ಷ ರು.ಗಳ ಅನುದಾನವನ್ನು ಕೋವಿಡ್‌ 19 ಪ್ರಯುಕ್ತ ಮರಳಿ ಸೆಳೆದಿರುವುದು ಅಷ್ಟೊಂದು ಸಮಂಜಸವಾಗಿರುವುದಿಲ್ಲ,’ ಎಂದು ಶಾಸಕ ಕೆ ಎಸ್‌ ಲಿಂಗೇಶ್‌ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ದೇವಿವನ, ಹಳೆಬೀಡು ಪಕ್ಕ ಕಲ್ಲಳ್ಳಿಯಲ್ಲೂ ಜಾಗದಲ್ಲಿ ವೃಕ್ಷೋದ್ಯಾನ ನಿರ್ಮಾಣ ಮಾಡಬೇಕು ಎಂದು ಲಿಂಗೇಶ್‌ ಅವರು ಸದನದಲ್ಲೂ ಪ್ರಸ್ತಾಪಿಸಿದ್ದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಉತ್ತರಿಸಿದ ಜಗದೀಶ್ ಶೆಟ್ಟರ್, ಬೇಲೂರಿನಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡುವ ಸಂಬಂಧ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿದ ನಂತರ ನಿರ್ಮಾಣ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

ಟ್ರೀ ಪಾರ್ಕ್ ಮತ್ತು ದೈವಿವನ ನಿರ್ಮಾಣ ಮಾಡಲು 2020, ಅಕ್ಟೋಬರ್ 30 ರ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಹಣಕಾಸಿನ ಲಭ್ಯತೆ ಆಧಾರದ ಮೇಲೆ ಯೋಜನೆ ಪ್ರಾರಂಭಿಸಲಾಗುವುದು ಎಂದೂ ಹೇಳಿಕೆ ನೀಡಿದ್ದರು.

the fil favicon

SUPPORT THE FILE

Latest News

Related Posts