ಸಚಿವ ನಿರಾಣಿಗೂ ಸಿ.ಡಿ ಭಯವೇ?; ಮಾನಹಾನಿಕರ ಸುದ್ದಿ ಪ್ರಕಟಣೆಗೆ ಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಅವರಿಗೂ ಸಿ ಡಿ ಭಯ ಕಾಡುತ್ತಿದೆಯೇ…?

ಇಂತಹುದೊಂದು ಗಂಭೀರ ಪ್ರಶ್ನೆ ಸದ್ಯ ರಾಜಕೀಯ ಪಕ್ಷಗಳ ಪಡಸಾಲೆಗಳಲ್ಲಿ ಬಿಸಿ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕಾರಣ, ಮುರುಗೇಶ್ ಆರ್. ನಿರಾಣಿ ಅವರು ಕಳೆದ ವರ್ಷ ಅಂದರೆ 2020ರಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಗೆ ಒಂದರ ಹಿಂದೆ ಇನ್ನೊಂದರಂತೆ ಎರಡು ಅಸಲು ದಾವೆಗಳನ್ನು ಸಲ್ಲಿಸಿ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆ ಆದೇಶ ಪಡೆದಿರುವುದು ಈಗ ಮುನ್ನೆಲೆಗೆ ಬಂದಿದೆ.

ಸದರಿ ಅಸಲು ದಾವೆಗಳಲ್ಲಿ ಫಿರ್ಯಾದುದಾರರಾದ ನಿರಾಣಿ ಅವರು, “ನನ್ನ ವಿರುದ್ಧ ಅಥವಾ ನನ್ನ ಕುಟುಂಬದ ಸದಸ್ಯರ ವಿರುದ್ಧ ಅಥವಾ ನನಗೆ ಸಂಬಂಧಿಸಿದ ಆಪ್ತರ ವಿರುದ್ಧವಾಗಿ ಯಾವುದೇ ಸುದ್ದಿಗಳನ್ನು ಪ್ರಕಟಿಸುವ, ಹರಿಬಿಡುವ ಮುನ್ನ ಸತ್ಯಶೋಧನೆ ಮಾಡಬೇಕು. ಚಾರಿತ್ರ್ಯವಧೆ ಮಾಡುವಂತಹ ಅಥವಾ ಮಾನಹಾನಿ ಉಂಟಾಗಬಹುದಾದ ಇಲ್ಲವೇ ನಕಾರಾತ್ಮಕ ರೀತಿಯಲ್ಲಿ ಅಥವಾ ಕಟುವಾದ ಅಥವಾ ಪೂರ್ವ ಕಲ್ಪಿತ ಭಾವನೆಗಳಲ್ಲಿ ಬರೆದ ಸುದ್ದಿಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಇಲ್ಲವೇ ಹಬ್ಬಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕು” ಎಂದು ನ್ಯಾಯಾಲಯಕ್ಕೆ ಕೋರಿದ್ದರು.

ಈ ಕುರಿತಂತೆ 2020 ರ ಡಿಸೆಂಬರ್ 1ರಂದು ಸಲ್ಲಿಸಲಾಗಿರುವ ಅಸಲು ದಾವೆಗಳ ಸಂಖ್ಯೆ 6056/2020 ಮತ್ತು 3783/2020ರಲ್ಲಿ ಮಾಡಲಾಗಿರುವ ಮಧ್ಯಂತರ ಮನವಿಗಳನ್ನು ಸಿಟಿ ಸಿವಿಲ್ ಕೋರ್ಟ್ ಸೆಷನ್ಸ್ ನ್ಯಾಯಾಧೀಶ ರಾಜೇಶ್ವರ ಅವರು ಮಾನ್ಯ ಮಾಡಿದ್ದಾರೆ.

ಸುದ್ದಿ ಮಾಧ್ಯಮಗಳು ನಿರಾಣಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸಿದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಈ ಸಂಬಂಧ 2020ರ ಡಿಸೆಂಬರ್ 4ರಂದು ನೀಡಲಾಗಿರುವ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದಲ್ಲಿ “ಟೈಂಸ್ ನೌ, ಸಿ ಎನ್ ಎನ್ – ಐ ಬಿ ಎನ್, ಎ ಎನ್ ಐ, ಸ್ಟಾರ್ ನ್ಯೂಸ್, ಟುಡೇ, ಆಜ್ ತಕ್, ರಿಪಬ್ಲಿಕ್ ಟಿ.ವಿ ಸೇರಿದಂತೆ ನಾಡಿನ ಪ್ರಜಾವಾಣಿ, ಕನ್ನಡಪ್ರಭ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಹಿಂದೂಸ್ಥಾನ್ ಟೈಂಸ್ ನಂತಹ ಪ್ರಮುಖ ದೈನಿಕಗಳನ್ನು ಒಳಗೊಂಡಂತೆ ಒಟ್ಟು 39 ಪ್ರತಿವಾದಿಗಳು ನಿರಾಣಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸಿದಂತೆ, ಇಲ್ಲವೇ ಬಿತ್ತರಿಸದಂತೆ ತಾತ್ಕಾಲಿಕ ತಡೆ ಆದೇಶ ನೀಡಲಾಗಿದೆ. ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಲು ಅದೇಶಿಸಲಾಗಿದೆ.

ಅಸಲು ದಾವೆ ಸಂಖ್ಯೆ 6056/2020 ಬಿಜಾಪುರ ಜಿಲ್ಲೆಯ, “ಶ್ರೀ ಮುರುಗೇಶ್ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಗೆ ಸಂಬಂಧಿಸಿದ್ದಾದರೆ ಮತ್ತೊಂದು ಅಸಲು ದಾವೆ ಸಂಖ್ಯೆ 3783/2020, ಹಿಂದೂ ದೇವತೆಗಳನ್ನು ತುಚ್ಛವಾಗಿ ನಿ‌ಂದಿಸಿದ ಸಂದೇಶವು, “ಮುರುಗೇಶ್ ನಿರಾಣಿ ಗ್ರೂಪ್” ಸದಸ್ಯರಿಗೆ ಫಾರ್ವರ್ಡ್ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.

“ಅಸಲಿಗೆ ಈ ಎರಡೂ ದಾವೆಗಳಲ್ಲಿ ವಿವರಿಸಲಾದ ಅಂಶಗಳು ಅತ್ಯಂತ ಸಾಮಾನ್ಯ ಸಂಗತಿಗಳು ಎನಿಸಿದರೂ ಈ ಕಾರಣಗಳನ್ನೇ ಮುಂದು ಮಾಡಿಕೊಂಡಿರುವ ನಿರಾಣಿ ತಮ್ಮ ತೇಜೋವಧೆ ಆಗಬಹುದಾದ ಯಾವುದೇ ಸುದ್ದಿ ಇಲ್ಲವೇ ಸಿ.ಡಿಗಳು ಬಹಿರಂಗವಾಗದಂತೆ ನೋಡಿಕೊಳ್ಳುವ ಕಳ್ಳ ದಾರಿ ತುಳಿದಿದ್ದಾರೆ” ಎಂದು ಅಂದಾಜಿಸಲಾಗಿದೆ.

“ಬದಲಾಗುತ್ತಿರುವ ರಾಜ್ಯ ರಾಜಕೀಯ ಬೆಳವಣಿಗೆಗಳ ನಡುವೆ ತಮ್ಮ ರಾಜಕೀಯ ಭವಿಷ್ಯದ ಉಳಿವಿಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಮುಖ ಸುದ್ದಿ ಮಾಧ್ಯಮಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ” ಎಂದು ಹೇಳಲಾಗಿದೆ.

“ಮಾಧ್ಯಮಗಳು ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ಜಾಣತನದಲ್ಲಿ ತಡೆ ಆದೇಶ ಪಡೆದುಕೊಂಡಿರುವ ನಿರಾಣಿ, ತಾವು ನ್ಯಾಯಾಲಯದ ಮೆಟ್ಟಿಲೇರಿರುವ ಈ ಸುದ್ದಿ ಹೆಚ್ಚು ಬಹಿರಂಗವಾಗದಂತೆಯೂ ನೋಡಿಕೊಂಡಿದ್ದಾರೆ” ಎಂದೇ ಈಗ ವಿಶ್ಲೇಷಿಸಲಾಗುತ್ತಿದೆ.

ಅಷ್ಟಕ್ಕೂ ನಿರಾಣಿ ಅವರು ಈ ಸಾಧಾರಣ ಪ್ರಕರಣಗಳಲ್ಲಿ ರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಟಿ.ವಿ ಚಾನೆಲ್ ಗಳು ಹಾಗೂ ಪ್ರಮುಖ ಇಂಗ್ಲಿಷ್ ದೈನಿಕಗಳನ್ನು ಪ್ರತಿವಾದಿಗಳನ್ನಾಗಿ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈಗಾಗಲೇ ಮಾನ್ಯ ಮಾಡಿರುವ ಬೆನ್ನಲ್ಲೇ ಇದೀಗ ನಿರಾಣಿ ಅವರ ನಡೆ ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿ.ಡಿ ಪ್ರಕರಣಗಳ ಸರಮಾಲೆ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿ.ಡಿ ಬಿಡುಗಡೆ ನಂತರ, ಯಡಿಯೂರಪ್ಪ ಸಂಪುಟದ ಆರು ಸಚಿವರು ತಮಗೆ ಸಂಬಂಧಿಸಿದ ಮಾನಹಾನಿಕರ ಸುದ್ದಿ ಪ್ರಸಾರವಾಗುವ ಭೀತಿಯಿಂದ, ಅಂತಹ ಸುದ್ದಿ ಪ್ರಸಾರವಾಗುವ ಮೊದಲೇ ನಿರ್ಬಂಧ ವಿಧಿಸುವಂತೆ ಕೋರಿ ಅರ್ಜಿ ಸಲ್ಲಿಸಿ ತಡೆ ಆದೇಶ ಪಡೆದುಕೊಂಡಿರುವುದು ಗಮನಾರ್ಹ.

ಅಂತೆಯೇ ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ಅವರೂ ಮಾಧ್ಯಮಗಳು ತಮ್ಮ ವಿರುದ್ಧ ಯಾವುದೇ‌ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆ ಅದೇಶ ಪಡೆದದ್ದೂ ಮತ್ತು ಅದರ ಸುತ್ತ ಹಬ್ಬಿದ ಹಲವು ಅನುಮಾನಗಳ ಬೆನ್ನಲ್ಲೇ ಸಚಿವ ಸ್ಥಾನದಿಂದ ಕೆಳಗಿಳಿದಿರುವುದೂ ಈಗ ಇತಿಹಾಸ.

the fil favicon

SUPPORT THE FILE

Latest News

Related Posts