15ನೇ ಹಣಕಾಸು ಆಯೋಗ; 1,503.70 ಕೋಟಿ ಬಾಕಿ ಉಳಿಸಿಕೊಂಡರೂ ತುಟಿಬಿಚ್ಚದ ಈಶ್ವರಪ್ಪ

ಬೆಂಗಳೂರು; ಜಿಲ್ಲಾ ಪಂಚಾಯ್ತಿ ಸೇರಿದಂತೆ ಗ್ರಾಮೀಣ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ ಸೇರಿದಂತೆ ಇನ್ನಿತರೆ ವಲಯಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ 15ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸಿನ ಒಟ್ಟು ಮೊತ್ತದ ಮೊದಲನೇ ಕಂತಿನ ಅನುದಾನ ಪೈಕಿ 1,503.70 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.

15ನೇ ಹಣಕಾಸು ಆಯೋಗದ ಅನುದಾನಕ್ಕೆ 2021-22ನೇ ಸಾಲಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ಬೆನ್ನಲ್ಲೇ 1,503.70 ಕೋಟಿ ರು.ಗಳನ್ನು ಒಕ್ಕೂಟ ಸರ್ಕಾರವು ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ಬಾಕಿ ಉಳಿಸಿಕೊಂಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ, ಸಚಿವ ಕೆ ಎಸ್‌ ಈಶ್ವರಪ್ಪ ಅವರಾಗಲೀ ತುಟಿ ಬಿಚ್ಚಿಲ್ಲ.

ರಾಜ್ಯಕ್ಕೆ 4,891.00 ಕೋಟಿ ರು. ಅನುದಾನ ಒದಗಿಸಲು ಶಿಫಾರಸ್ಸು ಮಾಡಿತ್ತು. ಇದರಲ್ಲಿ ಮೊದಲನೇ ಕಂತಿನಲ್ಲಿ 2,445.50 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ 2021ರ ಜೂನ್‌ ಅಂತ್ಯಕ್ಕೆ ರಾಜ್ಯ ಸರ್ಕಾರಕ್ಕೆ ಕೇವಲ 941.80 ಕೋಟಿ ರು. ಬಿಡುಗಡೆ ಮಾಡಿ ಇನ್ನೂ 1,503.70 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಕುರಿತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಸರ್ಕಾರದ ಗಮನಕ್ಕೆ ತಂದಿರುವುದು ದಾಖಲೆಯಿಂದ ಗೊತ್ತಾಗಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

’15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2021-22ನೇ ಸಾಲಿನ ಮೊದಲ ಕಂತಿನಲ್ಲಿ ಬಾಕಿ ಉಳಿದಿರುವ 1,503.70 ಕೋಟಿ ರು. ಬಿಡುಗಡೆಗೆ ಗಮನಹರಿಸಬೇಕು,’ ಎಂದು ಕೋರಿರುವುದು ಕೌರ್‌ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ 2,377 ಕೋಟಿ, ನಗರಾಡಳಿತ ಸಂಸ್ಥೆಗಳಿಗೆ 421 ಕೋಟಿ, ವಾಯುಗುಣಮಟ್ಟ ಮತ್ತು ನೈರ್ಮಲ್ಯೀಕರಣ ಸೇವೆ ಉತ್ತಮಪಡಿಸಲು 750 ಕೋಟಿ, ಆರೋಗ್ಯ ವಲಯಕ್ಕೆ 552 ಕೋಟಿ, ವಿಪತ್ತು ನಿರ್ವಹಣೆ ಸೇರಿದಂತೆ ಒಟ್ಟು 4,891 ಕೋಟಿ ರು.ಗಳನ್ನು ಒದಗಿಸಲು 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು. ಈ ಪೈಕಿ ಮೊದಲ ಕಂತಿನಲ್ಲಿ 2,445.50 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 2021ರ ಜೂನ್‌ ಅಂತ್ಯಕ್ಕೆ 945 ಕೋಟಿ ರು.ಮಾತ್ರ ಸರ್ಕಾರ ಸ್ವೀಕರಿಸಿತ್ತು ಎಂದು ಗೊತ್ತಾಗಿದೆ.

ಗ್ರಾಮೀಣ ನೈರ್ಮಲ್ಯೀಕರಣ ಮತ್ತು ವಾಯುಗುಣಮಟ್ಟ ವೃದ್ಧಿಸಲು ಬಿಡುಗಡೆ ಮಾಡಿದ್ದ 210 ಕೋಟಿ ರು.ನಲ್ಲಿ ಜೂನ್‌ವರೆಗೆ ಸರ್ಕಾರವು ನಯಾಪೈಸೆಯನ್ನು ಸ್ವೀಕರಿಸಿಲ್ಲ. ಅದೇ ರೀತಿ ಆರೋಗ್ಯ ವಲಯಕ್ಕೆ ನಿಗದಿಪಡಿಸಿದ್ದ 552 ಕೋಟಿ ಪೈಕಿ 276 ಕೋಟಿ ಬಾಕಿ ಉಳಿಸಿರುವ ಒಕ್ಕೂಟ ಸರ್ಕಾರವು ವಿಪತ್ತು ನಿರ್ವಹಣೆಗೆ 395.5 ಕೋಟಿ ಪೈಕಿ 79.10 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

1,503.70 ಕೋಟಿ ಬಾಕಿ ಇದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 15ನೇ ಹಣಕಾಸು ಆಯೋಗದ ಅನುದಾನಕ್ಕೆ 2021-22ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಲು 2021ರ ಜುಲೈ 6ರಂದು ಸುತ್ತೋಲೆ ಹೊರಡಿಸಿದೆ. ’15ನೇ ಹಣಕಾಸು ಆಯೋಗದ ಅನುದಾನದಲ್ಲಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 2,377.00 ಕೋಟಿ ನಿಗದಿಪಡಿಸಿದೆ. ಈ ಅನುದಾನದಲ್ಲಿ ರಾಜ್ಯ ಸರ್ಕಾರವು ಶೇ.85ರಷ್ಟು ಅನುದಾನವನ್ನು ಗ್ರಾಮ ಪಂಚಾಯ್ತಿಗಳಿಗೆ ಶೇ.10ರಷ್ಟು ಅನುದಾನವನ್ನು ತಾಲೂಕು ಪಂಚಾಯ್ತಿಗಳಿಗೆ ಮತ್ತು ಶೇ.5ರಷ್ಟು ಅನುದಾನವನ್ನು ಜಿಲ್ಲಾ ಪಂಚಾಯ್ತಿಗಳಿಗೆ ನಿಗದಿಪಡಿಸಬೇಕಿದೆ,’ ಎಂದು ಸುತ್ತೋಲೆ ಹೊರಡಿಸಿದೆ.

ಒಟ್ಟು ಅನುದಾನದಲ್ಲಿ ಗ್ರಾಮಾಂತರ ಪ್ರದೇ#ಶದ ನೈರ್ಮಲ್ಯೀಕರಣ ಸೇವೆ ಉತ್ತಮಪಡಿಸುವುದು, ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳುವುದು, ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರು ಮರು ಬಳಕೆಗೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಸೂಚಿಸಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

ಕೇಂದ್ರ ಸರ್ಕಾರದ ಪತ್ರದ ಪ್ರಕಾರ ಶೇ.,60ರಷ್ಟು ಅನುದಾನದಲ್ಲಿ ಶೇ.50ರಷ್ಟನ್ನು ಕಡ್ಡಾಯವಾಗಿ ಕುಡಿಯುವ ನೀರಿಗೆ ಮತ್ತು ಶೇ. 50ರಷ್ಟನ್ನು ಕಡ್ಡಾಯವಾಗಿ ನೈರ್ಮಲ್ಯ ಕಾಪಾಡಲು ಬಳಸಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳು ತಮ್ಮ ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು ಒಗ್ಗೂಡಿಸುವ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು ಎಂದೂ ತಿಳಿಸಿದೆ.

the fil favicon

SUPPORT THE FILE

Latest News

Related Posts