ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

ಬೆಂಗಳೂರು; ರಾಜ್ಯಪಾಲ ಹುದ್ದೆಯ ಆಮಿಷಕ್ಕೊಳಗಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಬಿ ಎಸ್‌ ಇಂದ್ರಕಲಾ ಅವರಿಗೆ ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಕೂಡ ಒಟ್ಟು 50 ಲಕ್ಷ ರು.ಗಳನ್ನು ನೀಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ಗಣ್ಯರು ಮತ್ತು ಪ್ರಭಾವಿಗಳಿಗೆ ಕೋಟ್ಯಂತರ ರು ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿ ಜೈಲಿನಲ್ಲಿರುವ ಯುವರಾಜಸ್ವಾಮಿ ಅವರ ವಿರುದ್ಧದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ರಾಕ್‌ಲೈನ್‌ ವೆಂಕಟೇಶ್‌ ಅವರಿಂದಲೂ ಸಾಕ್ಷ್ಯ ಹೇಳಿಕೆ ಪಡೆದಿರುವುದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ. ದೋಷಾರೋಪಣೆ ಪಟ್ಟಿಯ ದೃಢೀಕೃತ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಯುವರಾಜ್‌ರವರಿಗೆ ಅತೀ ತುರ್ತಾಗಿ 25,00,000 ಲಕ್ಷ ರು. ಹಣ ಕೊಡಬೇಕಾಗಿರುವುದರಿಂದ 25,00,000 ರು.ಗಳನ್ನು ಕೇಳಿದ ಮೇರೆಗೆ ಉದ್ದೇಶದಿಂದ ಮೇಡಂರವರಿಗೆ ನೀಡಿರುತ್ತೇನೆ,’ ಎಂದು ರಾಕ್‌ಲೈನ್‌ ವೆಂಕಟೇಶ್‌ ಅವರು ಸಾಕ್ಷ್ಯ ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

25 ಲಕ್ಷ ರು.ಗಳನ್ನು ನಗದು ನೀಡುವ ಮುನ್ನ ಜನತಾ ಸೇವಾ ಕೋ ಆಪರೇಟೀವ್‌ ಬ್ಯಾಂಕ್‌ನ ಮಹಾಲಕ್ಷ್ಮಿಪುರಂನಲ್ಲಿನ ಶಾಖೆಯಲ್ಲಿ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್ ಹೆಸರಿನಲ್ಲಿ ಹೊಂದಿದ್ದ ಖಾತೆ (004110100000357) ಮೂಲಕ 2018ರ ಆಗಸ್ಟ್‌ 21ರಂದು ಐಸಿಐಸಿಐ ಬ್ಯಾಂಕ್‌ನಲ್ಲಿದ್ದ (369501500327) ಖಾತೆಗೆ 25 ಲಕ್ಷ ರು.ಗಳನ್ನು ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ.

ರಾಕ್‌ಲೈನ್‌ ವೆಂಕಟೇಶ್‌ ಅವರ ಸೋದರಿ ಪರಿಮಳ ಅವರು ಇಂದ್ರಕಲಾ ಅವರ ಸ್ನೇಹಿತೆ. ಇವರ ಮೂಲಕ ರಾಕ್‌ಲೈನ್‌ ವೆಂಕಟೇಶ್‌ ಅವರು ಹೊಂದಿದ್ದ ಜನತಾ ಸೇವಾ ಕೋ ಆಪರೇಟೀವ್‌ ಬ್ಯಾಂಕ್‌ನಲ್ಲಿದ್ದ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಹೆಸರಿನಲ್ಲಿದ್ದ ಖಾತೆಯಿಂದ 25 ಲಕ್ಷ ರು.ಗಳನ್ನು ಆರೋಪಿ ಯುವರಾಜ್‌ ಹೆಸರಿನಲ್ಲಿದ್ದ ಖಾತೆಗೆ ಇಂದ್ರಕಲಾ ಅವರು ಹಣವನ್ನು ವರ್ಗಾವಣೆ ಮಾಡಿಸಿದ್ದರು ಎಂಬುದು ತಿಳಿದು ಬಂದಿದೆ.

ನಿವೃತ್ತ ಎಸ್‌ ಪಿ ಪಾಪಯ್ಯ ಎಂಬುವರ ಮೂಲಕ 2018ರಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ‘ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುತ್ತೀರಾ,’ ಎಂದು ಭವಿಷ್ಯ ಹೇಳಿದ್ದ. ಆ ಮೂಲಕ ಅವರಲ್ಲಿ ಆಸೆ ಹುಟ್ಟಿಸಿದ್ದ ಯುವರಾಜಸ್ವಾಮಿ ಪಾರ್ಟಿ ಫಂಡ್‌ಗಾಗಿ ಹಣ ನೀಡಬೇಕು ಎಂದು ತಿಳಿಸಿ ಅವರಿಂದ ಹಂತ ಹಂತವಾಗಿ 3,77,50,002 ರು.ಗಳನ್ನು ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ ಪಡೆದುಕೊಂಡಿದ್ದ.

ಈ ಪೈಕಿ ಇಂದ್ರಕಲಾ ಅವರ ಸ್ನೇಹಿತರಾದ ಸುನೀತಾ ಅವರ ಖಾತೆಯಿಂದ 25,00,00 ರು.ಗಳನ್ನು ಪರಿಮಳ ಎಂಬುವರ ಖಾತೆಯಿಂದ 25,00,000 ರು.ಗಳನ್ನು ಯುವರಾಜಸ್ವಾಮಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.

ಅಲ್ಲದೆ ಇಂದ್ರಕಲಾ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಸಹದ್ಯೋಗಿಗಳಿಂದ 4,50,00,000 ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದನಲ್ಲದೆ ಅವರ ಸ್ನೇಹಿತರಾಗಿದ್ದ ನಾಗರಬಾವಿಯ ವಿನಯ್‌ ಎಂಬುವರಿಂದಲೂ 30,00,000 ರು.ಗಳನ್ನು ಪಡೆದಿದ್ದ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts