ಬೆಂಗಳೂರು; ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎಂಬ ಕುರಿತು ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರ ಮತ್ತು ತೆರೆಮರೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ಪ್ರಮುಖ ಮಠಾಧೀಶರು ಸೇರಿದಂತೆ ನಾಡಿನ ವಿವಿಧ ಭಾಗದ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸುವ ಮೂಲಕ ನಿರ್ಲಜ್ಜತನವನ್ನು ಪ್ರದರ್ಶಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ಪತನಗೊಳಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಯಡಿಯೂರಪ್ಪ ಅವರ 2 ವರ್ಷದ ಅವಧಿಯಲ್ಲಿ ಇಡೀ ಆಡಳಿತವೇ ನಿಷ್ಕ್ರೀಯವಾಗಿದೆ. ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರುವುದಕ್ಕಿಂತಲೂ ಭ್ರಷ್ಟಾಚಾರ, ಲಂಚಗುಳಿತನ ಪ್ರಕರಣಗಳೇ ಬೆಳಕಿಗೆ ಬಂದಿದ್ದವು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ನಿಯಂತ್ರಿಸುವುದರಲ್ಲಿ ಸಂಪೂರ್ಣ ವಿಫಲವಾಗಿತ್ತು.
2 ವರ್ಷವಾದರೂ ಆಡಳಿತ ಹಳಿಗೆ ಬರದಿದ್ದರೂ ಪ್ರತಿಕ್ರಿಯಿಸದ ಸ್ವಾಮೀಜಿಗಳು ಈಗ ಯಡಿಯೂರಪ್ಪ ಅವರ ಸರ್ಕಾರವನ್ನು ಹೊಗಳುತ್ತಿರುವುದಕ್ಕೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ. ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಯಡಿಯೂರಪ್ಪ ಬದಲಾವಣೆಗೆ ಭ್ರಷ್ಟಾಚಾರ ಮುಖ್ಯ ಕಾರಣವಾಗಿದ್ದರೂ ಸ್ವಾಮೀಜಿಗಳು ಜಾತಿಯ ನೆಲೆಗಟ್ಟಿನಲ್ಲಿ ನೋಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.
ಇನ್ನು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿತ್ತಲ್ಲದೆ ಸರ್ಕಾರಕ್ಕೆ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟ ಉಂಟು ಮಾಡಿದ್ದ ಪ್ರಕರಣಗಳೂ ಬಹಿರಂಗವಾಗಿದ್ದವು. ಸ್ವತಃ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದರೂ ಮಠಾಧೀಶರ್ಯಾರು ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಿರಲಿಲ್ಲ.
ಅಲ್ಲದೆ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದಾಗ ಪ್ರತಿಕ್ರಿಯಿಸದ ಕೆಲ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ನವರು ಜಾತಿವಾದಿಗಳು ಎಂದು ಟೀಕಿಸಲಾರಂಭಿಸಿದ್ದಾರೆ.
ಕಳೆದ 2 ವರ್ಷಗಳಿಂದಲೂ ಆಡಳಿತವೇ ಹಳಿಗೆ ಬರದಿದ್ದರೂ ಯಡಿಯೂರಪ್ಪನವರು ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್ ಎಂದೂ ಅವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟಿಲ್ಲ ಎಂದು ಕೆಲ ಸ್ವಾಮೀಜಿಗಳು ಪ್ರತಿಪಾದಿಸಲಾರಂಭಿಸಿರುವುದು ಹಾಸ್ಯಾಸ್ಪದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಲ್ಲದೆ ಸಚಿವ ಗೋಪಾಲಯ್ಯ, ಬಿ ಸಿ ಪಾಟೀಲ್ ಅವರು ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಪುಷ್ಠೀಕರಿಸುವ ರೀತಿಯಲ್ಲಿ ಬಾಧಿತ ಅಧಿಕಾರಿಗಳೇ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ್ದರು. ಅದರಲ್ಲೂ ಗೋಪಾಲಯ್ಯ ಅವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಕುರಿತು ಅಬಕಾರಿ ಅಧಿಕಾರಿಗಳಿಬ್ಬರ ನಡುವೆ ನಡೆದಿದ್ದ ಸಂಭಾಷಣೆಯ ಧ್ವನಿ ಮುದ್ರಿಕೆಯು ಬಹಿರಂಗವಾಗಿತ್ತು.
ಹೀಗೆ ಒಂದರ ಹಿಂದೆ ಬಹಿರಂಗಗೊಂಡ ಭ್ರಷ್ಟಾಚಾರದ ಪ್ರಕರಣಗಳಿಂದಾಗಿ ಬಿಜೆಪಿ ರಾಷ್ಟ್ರೀಯ ವರಿಷ್ಠರು ತೀವ್ರ ಮುಜುಗರಕ್ಕೆ ಸಿಲುಕಿದ್ದರು. ಅಲ್ಲದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸೇರಿದಂತೆ ಹಲವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧವೇ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ಕಳೆದ 2 ವರ್ಷದ ಅವಧಿಯಲ್ಲಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿಯಲ್ಲಿನ ಆಡಳಿತವೇ ವೈಫಲ್ಯವಾಗಿದ್ದರೂ ಪ್ರಮುಖ ಮಠಾಧೀಶರು ಅವರನ್ನು ಬದಲಿಸದಂತೆ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡುವ ಮೂಲಕ ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಾಣೆಹಳ್ಳಿ ಶ್ರೀಗಳು ಹೇಳಿರುವುದೇನು?
ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುವುದು ಸರಿಯಲ್ಲ. ಯಡಿಯೂರಪ್ಪ ಅವರು ಅವಧಿ ಪೂರ್ಣಗೊಳಿಸಲು ಬಿಡಬೇಕು. ಯಾವುದೇ ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯವಿದ್ದಾಗ ಉತ್ತಮ ಆಡಳಿತ ನೀಡಲು ಸಾಧ್ಯ. ಕೇಂದ್ರ ಸರ್ಕಾರ ಹತೋಟಿ ಸಾಧಿಸುವ ಸಂಚು ಮಾಡಿದಂತೆ ಕಾಣುತ್ತಿದೆ. ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.
ಅಲ್ಲದೆ ಉತ್ತಮ ಆಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ. ಯಾವುದೇ ಪಕ್ಷದ ವ್ಯಕ್ತಿ ಕನಿಷ್ಠ ಐದು ವರ್ಷ ಮುಂದುವರಿದರೆ ಒಳ್ಳೆಯ ಆಡಳಿತ ನಡೆಸಲು ಸಾಧ್ಯ. ಕೇಂದ್ರ, ರಾಜ್ಯದ ಪ್ರತಿನಿಧಿಗಳು ಸಿಎಂಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಒಳ್ಳೆಯ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು. ಆಡಳಿತದಲ್ಲಿ ದೋಷ ಕಂಡರೆ ಆಗ ಕ್ರಮ ಕೈಗೊಳ್ಳಬೇಕು. ವರ್ಷ, ಎರಡು ವರ್ಷಕ್ಕೆ ಮುಖ್ಯಮಂತ್ರಿ ಬದಲಿಸಬಾರದು. ಸಿಎಂ ಬದಲಾವಣೆಯಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಯಡಿಯೂರಪ್ಪ ಅವರಿಗೆ ಪೂರ್ಣಾವಧಿ ಕೆಲಸ ಮಾಡಲು ಬಿಡಬೇಕು ಎಂದು ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
2018ರಿಂದೀಚೆಗೆ ರಾಜ್ಯದಲ್ಲಿ ಆಡಳಿತವೇ ಇಲ್ಲ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಜೆಡಿಎಸ್ ಗೊಂದಲದಿಂದ ಆಡಳಿತ ಹಳಿಯ ಮೇಲಿರಲಿಲ್ಲ. ಆಪರೇಷನ್ ಕಮಲ ಮತ್ತು ದೂರವಾಣಿ ಕದ್ದಾಲಿಕೆ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರ ಸರ್ಕಾರವೂ 2 ವರ್ಷಗಳಾದರೂ ಹಳಿಯ ಮೇಲೆ ಬಂದಿಲ್ಲ. ಸಚಿವರಿಲ್ಲದೆಯೇ ಸುಮಾರು ಒಂದೂವರೆ ತಿಂಗಳು ಆಡಳಿತ ನಡೆಸಿದ ಕೀರ್ತಿ ಮತ್ತು ಅಪಕೀರ್ತಿ ಯಡಿಯೂರಪ್ಪನವರದ್ದು.
ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ ಕರ್ನಾಟಕ ರಾಷ್ಟ್ರಸಮಿತಿ
ಸಿದ್ದಗಂಗಾ ಮಠಾಧೀಶರ ಜತೆ ಇತರ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಜಕೀಯದ ಬಗ್ಗೆ ಚರ್ಚಿಸಿ, ಅವರಿಗೆ ಬೆಂಬಲ ಸೂಚಿಸಿದರು. ಬಿಜೆಪಿ ವರಿಷ್ಠರು ಮಧ್ಯದಲ್ಲೇ ಯಡಿಯೂರಪ್ಪ ಅವರನ್ನು ಕೈ ಬಿಡುವುದು ಸರಿಯಲ್ಲ. ಪ್ರವಾಹ ಕೊರೊನ ಮಧ್ಯೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು ಎಂದು ಸಿದ್ದಗಂಗಾ ಶ್ರೀಗಳು ಹೇಳಿದ್ದಾರೆ.
ಯಡಿಯೂರಪ್ಪ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಪೂರ್ಣಾವಧಿ ಸಿಎಂ ಆಗಿರಬೇಕೆಂಬುದು ಎಲ್ಲ ಮಠಾಧೀಶರ ಆಶಯವಾಗಿದೆ. ಸಿಎಂ ಯಡಿಯೂರಪ್ಪ ನಮ್ಮ ಜತೆ ಚರ್ಚಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದರು.
ಬಿಜೆಪಿಯಲ್ಲಿ 75 ವರ್ಷ ಮೀರಿದ ಯಾವುದೇ ವ್ಯಕ್ತಿಗೆ ಅಧಿಕಾರ ನೀಡಿಲ್ಲ. ಇಡೀ ದೇಶದಲ್ಲಿ ನನಗೆ ಮಾತ್ರ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಇಚ್ಚೆ ಏನೆಂದರೆ ಅವಧಿ ಪೂರೈಸುವವರೆಗೆ ಯಡಿಯೂರಪ್ಪ ಮುಂದುವರೆಸಬೇಕೆಂಬುದಷ್ಟೇ ನಮ್ಮ ಆಶಯ ಎಂದು ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್‌ನವರು ಜಾತಿವಾದಿಗಳೆಂದ ಸಂಗನಬಸವ ಸ್ವಾಮೀಜಿ
‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್‌ಎಸ್‌ಎಸ್) ಜಾತಿವಾದಿಗಳು. ಅವರು ಉದಾರ ಮನಸ್ಸಿನವರಲ್ಲ. ತಮ್ಮದೇ ಹಠ ಸಾಧಿಸಬೇಕೆಂದು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬದಲಿಸಲು ಹೊರಟಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರ ಮಾತು ನಡೆಯೊಲ್ಲ’ ಎಂದು ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.
ಆಧ್ಯಾತ್ಮದ ಪ್ರತೀಕವಾಗಿ ಇರುವುದು ಮಠಾಧಿಪತಿಗಳ ಹೆಗ್ಗುರುತು. ಅದರೊಂದಿಗೆ ಪ್ರಾಪಂಚಿಕ ಸಮಾಜದಲ್ಲಿ ಏರುಪೇರುಗಳು ಆದಲ್ಲಿ ಅದನ್ನು ಗಮನಿಸಿ ಸೂಕ್ತ ಸಲಹೆ ನೀಡುವುದು ಸಹ ಮಠಾಧಿಪತಿಗಳ ಸಹಜ ನಡವಳಿಕೆ. ಯಡಿಯೂರಪ್ಪನವರ ಸರ್ಕಾರದ ವಿಷಯದಲ್ಲಿ ಮಾತ್ರ ಮಠಾಧಿಪತಿಗಳ ನಡವಳಿಕೆ ಬಹಳ ತದ್ವಿರುದ್ಧವಾಗಿದೆ. ಬಿಎಸ್‌ವೈ ಸರ್ಕಾರದ ಯಾವುದೇ ಭ್ರಷ್ಟಾಚಾರವಾಗಲಿ, ಕೊರೊನಾ ಪಿಡುಗಿನ ಸಮಸ್ಯೆಯಲ್ಲಿನ ವಿಫಲತೆ, ಕೊರೊನಾ ವಿಷಯದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಆಮ್ಲಜನಕದ ಕೊರತೆಯಿಂದ ಚಾಮರಾಜ ನಗರದ ಹಲವಾರು ರೋಗಿಗಳ ದಾರುಣ ಮರಣ, ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಕೋಟಾದ ಅಕ್ರಮ ವ್ಯಾಕ್ಸಿನ್ ಮಾರಾಟ, ಕೊರೊನಾ ಔಷಧಿ ಮಾರಾಟದಲ್ಲಿ 3-4 ಪಟ್ಟು ಲಾಭ ಪಡೆದ ದುರಾಸೆಯ ಕಾರ್ಪೊರೇಟ್‌ಗಳು ಅವುಗಳಿಗೆ ಸಾಥ್ ನೀಡಿದ ಭ್ರಷ್ಟ ಅಧಿಕಾರಿಗಳು ಇತ್ಯಾದಿ ಹಗರಣಗಳು ಮಠಾಧಿಪತಿಗಳ ಕಣ್ಣಿಗೆ ಬಿದ್ದಿಲ್ಲವೇ?
ಆದರ್ಶ ಐಯ್ಯರ್, ಜನಾಧಿಕಾರ ಸಂಘರ್ಷ ಪರಿಷತ್
‘ಆರ್‌ಎಸ್‌ಎಸ್‌ನವರ ಮಾತು ಕೇಳಿಕೊಂಡೇ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿದ್ದರು. ಆದರೆ, ಅದು ಸರಿಯಾಗಿ ನಡೆಯಲಿಲ್ಲ. ಬೇರೆ ಕಡೆ ಆರ್‌ಎಸ್‌ಎಸ್‌ನವರ ಮಾತು ನಡೆಯಬಹುದು. ಆದರೆ, ಕರ್ನಾಟಕದಲ್ಲಿ ನಡೆಯುವುದಿಲ್ಲ. ಅವರ ಮಾತು ಕೇಳಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸಿದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸಂಗನಬಸವ ಸ್ವಾಮೀಜಿ ಎಚ್ಚರಿಸಿದ್ದಾರೆ.
‘ವೀರಶೈವ ಲಿಂಗಾಯತರು ಆರ್‌ಎಸ್ಎಸ್ ಜೊತೆಗೆ ಹೋಗುತ್ತಿಲ್ಲ. ಯಡಿಯೂರಪ್ಪನವರ ಜತೆಗೆ ಹೋಗುತ್ತಿದ್ದೇವೆ. ಲಿಂಗಾಯತರು ಯಾವುದೇ ಆತ್ಮವಂಚನೆ ಮಾಡಿಕೊಳ್ಳುತ್ತಿಲ್ಲ. ಪ್ರಲ್ಹಾದ್ ಜೋಶಿ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಆರ್‌ಎಸ್‌ಎಸ್‌ನವರ ಚಿತಾವಣೆಯೇ ಮುಖ್ಯ ಕಾರಣ. ನಾಯಕತ್ವ ಬದಲಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಹೇಳಬೇಕು. ಅವರು ಏನನ್ನೂ ಹೇಳದ ಕಾರಣ ರಾಜ್ಯದಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಿದೆ’ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪನವರು ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್ ಎಂದೂ ಅವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟಿಲ್ಲ. ಅದರ ಬಗ್ಗೆ ಅನೇಕ ಸಲ ಮಠಾಧೀಶರು ತಕರಾರು ತೆಗೆದಿದ್ದಾರೆ. ಯಡಿಯೂರಪ್ಪ ಸಮರ್ಥರಿರುವಾಗ ಜಗದೀಶ ಶೆಟ್ಟರ್ ಸೇರಿದಂತೆ ಲಿಂಗಾಯತ ಸಮುದಾಯದ ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇಲ್ಲ. ಗೋವಿಂದ ಕಾರಜೋಳ ಸೇರಿದಂತೆ ಹಿಂದುಳಿದ ಸಮುದಾಯಕ್ಕೆ ಸೇರಿದವರನ್ನು ಸಿ.ಎಂ. ಮಾಡಬಹುದು. ಆದರೆ, ಕೋವಿಡ್, ಪ್ರವಾಹದ ಗಂಭೀರ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಿಸುವುದು ಸರಿಯಲ್ಲ’ ಎನ್ನುವ ಮೂಲಕ ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಮುಖ್ಯಮಂತ್ರಿ ಬದಲಾವಣೆ ಎಂಬ ಗುಮ್ಮ ಮಂತ್ರಿಗಳು ಮತ್ತು ಅಧಿಕಾರಿಗಳು ಬೇಕಾಬಿಟ್ಟಿ ವರ್ತಿಸಲು ಮತ್ತು ಭ್ರಷ್ಟಾಚಾರಕ್ಕೆ ಹಿಂಜರಿಯದಿರಲು ಕುಮ್ಮಕ್ಕು ನೀಡಿದೆ. ಜನರ ಹಿತಕ್ಕಾಗಿ ನಾವು ಕಾವಿ ಧರಿಸಿದ್ದೇವೆ ಎಂದು ಹೇಳುವ ಕಾವಿಧಾರಿಗಳು ಇಂದು ಯಡಿಯೂರಪ್ಪ ಅವರಿಂದ ಲಕೋಟೆ ತೆಗೆದುಕೊಂಡು ವಕ್ತಾರಿಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಜೀವನದ ಮೌಲ್ಯಗಳ ಅರಿವಿಲ್ಲದ ಈ ಸ್ವಾಮೀಜಿಗಳು ಕಾವಿ ಅವಮಾನ ಮಾಡಿದ್ದಾರೆ. ಇಂತಹ ಪೇಮೆಂಟ್ ಗಿರಾಕಿಗಳ ಮಾತಿಗೆ ಜನಸಾಮಾನ್ಯರು ಬಲಿಯಾಗಬಾರದು. ಮುಖ್ಯಮಂತ್ರಿ ಬದಲಾವಣೆ ಎನ್ನವುದು ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದ್ದು ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿರುವುದಷ್ಟೇ ನಮ್ಮ ಈಗಿನ ಕಾಳಜಿ.
ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಷ್ಟ್ರಸಮಿತಿ
ಸ್ವಾಮೀಜಿಗಳು ಬಹಿರಂಗವಾಗಿ ಯಡಿಯೂರಪ್ಪ ಅವರನ್ನು ಬೆಂಬಲಿಸಲು ಮುಂದಾಗಿರುವುದಕ್ಕೆ ಬಿಜೆಪಿಯ ಹಿರಿಯ ಶಾಸಕ ಎಸ್ ಎ ರವೀಂದ್ರನಾಥ್ ಕೂಡ ಆಕ್ಷೇಪ ಎತ್ತಿದ್ದಾರೆ. ‘ಮಠಾಧೀಶರು ರಾಜಕೀಯ ಮಾಡಬಾರದು. ಒಬ್ಬರ ಪರವಾಗಿ ಎಲ್ಲರೂ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನೂ ವೀರಶೈವ ಲಿಂಗಾಯತನೇ. ಜಗದೀಶ ಶೆಟ್ಟರ್, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಎಲ್ಲರೂ ಲಿಂಗಾಯತ ನಾಯಕರೇ. ಎಲ್ಲರೂ ಮಠಗಳ ಭಕ್ತರೇ. ಹೀಗಿರುವಾಗ ಒಬ್ಬರ ಪರವಾಗಿ ಮಠಾಧೀಶರು ಮಾತನಾಡುವುದು ಸರಿಯಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳು ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆಯೇ?
ಸ್ವಾಮೀಜಿಗಳ ವರ್ತನೆಯನ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ‘ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪರ ನಿಂತು ರಾಜಕಾರಣದಲ್ಲಿ ತೊಡಗಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧಿಪತಿಗಳು ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ? ಸ್ವಾಮೀಜಿಗಳನ್ನು ಬೀದಿಗೆ ತಂದು ತಮ್ಮ ಪರ ಮಾತಾಡಿ ಎನ್ನುವುದೂ ತಪ್ಪು. ಇದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಆದರೆ, ಅವರು ಜಾತಿವಂತನಾಗಬಾರದು ನೀತಿವಂತನಾಗಬೇಕು’ ಎಂದಿದ್ದಾರೆ.
‘ಸರ್ಕಾರ ಹಾದಿ ತಪ್ಪಿದ ಸಮಯದಲ್ಲಿ ಎಲ್ಲರೂ ಎಚ್ಚರಿಸುತ್ತಾರೆ. ವಿರೋಧ ಪಕ್ಷ, ಸಮಾಜ, ಸಂಘ ಸಂಸ್ಥೆಗಳು, ಮಠಾಧೀಶರು ಬುದ್ಧಿ ಹೇಳುತ್ತಾರೆ. ಆದರೆ, ಎಚ್ಚರಿಸಬೇಕಾದವರೆ. ರಾಜಕಾರಣಿಗಳಿಗಿಂತ ಮೀರಿದ ಪಾತ್ರ ವಹಿಸುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿರುವ ಎಚ್ ವಿಶ್ವನಾಥ್ ‘ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕೇ ಹೊರತೂ ರಾಜಕಾರಣದ, ಅಧಿಕಾರದ ಭಾಗವಾಗಬಾರದು. ನಡೆದಾಡುವ ದೇವರಾಗಬೇಕೇ ಹೊರತೂ ನಡೆದಾಡುವ ರಾಜಕಾರಣಿಗಳಾಗಬಾರದು. ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಎನ್ನುವ ಮೂಲಕ ಸ್ವಾಮೀಜಿಗಳ ನಡೆಯನ್ನು ಖಂಡಿಸಿದ್ದಾರೆ.
‘ತಮಗೆ ಪ್ರಾಪಂಚಿಕ ರಾಜಕಾರಣದಲ್ಲಿ ಆಸಕ್ತಿಯಿಲ್ಲ ಎಂಬ ಕಾರಣದಿಂದ ಯಡಿಯೂರಪ್ಪ ಸರ್ಕಾರದ ಹಗರಣಗಳ ಮೇಲೆ ಟೀಕೆ ಅಥವಾ ಸಲಹೆಗಳನ್ನು ನೀಡದೆಯೇ ಇರುವಾಗ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಸಿದ್ದಲ್ಲಿ ದೊಡ್ಡ ಪ್ರಮಾದವೇ ನಡೆದಂತೆ ಎಂಬ ಹಾಗೆ ವರ್ತಿಸುತ್ತಿರುವ ಈ ಮಠಾಧಿಪತಿಗಳ ವರ್ತನೆ ಅವರುಗಳ ಪೀಠಕ್ಕೆ ಜನಸಾಮಾನ್ಯರು ಕೊಡುವ ಮರ್ಯಾದೆಗೆ, ಪ್ರೀತಿಗೆ ಹಾಗೂ ಅಭಿಮಾನಕ್ಕೆ ಧಕ್ಕೆ ತರುವುದಿಲ್ಲವೇ,’ ಎಂದು ಪ್ರಶ್ನಿಸುತ್ತಾರೆ ಆದರ್ಶ ಐಯ್ಯರ್.