ಅರ್ಚಕರ ವೃತ್ತಿಗೆ ಪರಿಶಿಷ್ಟರ ನೇಮಕ; ಬಿಜೆಪಿ ಸರ್ಕಾರದಲ್ಲಿ ಸ್ವೀಕೃತವಾಗದ ಪ್ರಸ್ತಾವನೆ

ಬೆಂಗಳೂರು; ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅರ್ಚಕರನ್ನು ನೇಮಿಸುವ ಕುರಿತಂತೆ ಯಾವುದೇ ಪ್ರಸ್ತಾವನೆಯೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸ್ವೀಕೃತವಾಗಿಲ್ಲ.

ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿರುವ 36,000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮಹಿಳೆಯರು ಮತ್ತು ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿರುವುದು ಮತ್ತು ಕೇರಳದ ದೇವಾಲಯಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡುವ ಮೂಲಕ ಹೊಸದೊಂದು ಅಲೆ ಸೃಷ್ಟಿಯಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಇಂತಹ ಯಾವುದೇ ಬೆಳವಣಿಗೆ ನಡೆಯದಿರುವುದು ಮುನ್ನೆಲೆಗೆ ಬಂದಿದೆ.

‘ಧಾರ್ಮಿಕ ದತ್ತಿ ಇಲಾಖೆಯಲ್ಲಿ ಪ್ರಸಕ್ತ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅರ್ಚಕರನ್ನು ನೇಮಿಸುವ ಕುರಿತಂತೆ ಪ್ರಸ್ತಾವನೆ ಸ್ವೀಕೃತವಾಗಿಲ್ಲ,’ ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ಹಿಂದುಳಿದ ವರ್ಗದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಳೆದ 2 ತಿಂಗಳ ಹಿಂದೆಯಷ್ಟೇ ಲಿಖಿತ ಉತ್ತರ ನೀಡಿದ್ದರು.

ವಿಧಾನಪರಿಷತ್‌ ಸದಸ್ಯ ಆರ್‌ ಬಿ ತಿಮ್ಮಾಪುರ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಶ್ರೀನಿವಾಸ ಪೂಜಾರಿ 2021ರ ಮಾರ್ಚ್‌ 24ರಂದು ಲಿಖಿತ ಉತ್ತರ ನೀಡಿದ್ದರು.

‘ಕೇರಳ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅರ್ಚಕರನ್ನು ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ನೇಮಕಗೊಳಿಸುವುದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಜಾರಿಯಲ್ಲಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 12(1)ರ ಅನ್ವಯ ಇಲಾಖಾ ವ್ಯಾಪ್ತಿಗೆ ಬರುವ ಅಧಿಸೂಚಿತ ಸಂಸ್ಥೆಗಳಲ್ಲಿ ವಂಶ ಪಾರಂಪರ್ಯವಲ್ಲದ ಅರ್ಚಕರ ಮತ್ತು ವಂಶ ಪಾರಂಪರ್ಯವಲ್ಲದ ದೇವಾಲಯದ ನೌಕರರ ನೇಮಕಾತಿಯನ್ನು 58ನೇ ಪ್ರಕರಣ (ದೇವಾಲಯದ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಪಾಲಿಸುವುದು)ಗಳಿಗೆ ಒಳಪಟ್ಟು ಸರ್ಕಾರದ ಮೀಸಲಾತಿ ನಿಯಮಗಳ ಅನುಸಾರ ಮಾಡತಕ್ಕದ್ದು ಎಂದು ಸ್ಪಷ್ಟಪಡಿಸಿರುತ್ತದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತದೆ,’ ಎಂದು ಸರ್ಕಾರ ಉತ್ತರಿಸಿದೆ.

ತಮಿಳುನಾಡಿನ ಡಿಎಂಕೆ ಸರ್ಕಾರವು ಅಲ್ಲಿನ ದೇವಾಲಯಗಳಿಗೆ ಬ್ರಾಹ್ಮಣೇತರರನ್ನು ಅರ್ಚಕರ ವೃತ್ತಿಗೆ ನೇಮಿಸಲು ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಕೇರಳ ಸರ್ಕಾರವು ಕೇರಳದ ದೇವಾಲಯಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಿರುವುದು ಹೊಸದೊಂದು ಅಲೆ ಸೃಷ್ಟಿಸಿದ ಬೆನ್ನಲ್ಲೇ, ಎಲ್ಲ ದೇವಸ್ಥಾನಗಳಿಗೂ ಜಾತಿಯನ್ನು ಮೀರಿ ಅರ್ಹ ಅರ್ಚಕರ ನೇಮಕ ಮಾಡುವುದಕ್ಕೆ ತನ್ನ ಬೆಂಬಲವಿದೆ ಎಂದು ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಹೇಳಿತ್ತು.

ಟಿಡಿಬಿ ಅಧೀನದ ದೇವಾಲಯಗಳಿಗೆ ಆರು ದಲಿತರನ್ನೂ ಒಳಗೊಂಡು ಒಟ್ಟು 36 ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲಾಗಿದೆ. ಅದಾದ ನಂತರ, ಹಿಂದೂಯೇತರ ವ್ಯಕ್ತಿಗಳಿಗೂ ದೇವಾಲಯಗಳಿಗೆ ಪ್ರವೇಶ ನೀಡುವುದರ ಪರವಾಗಿ ತ್ರಿಶೂರಿನ ಗುರುವಾಯೂರು ದೇವಾಲಯದ ಮುಖ್ಯ ಅರ್ಚಕರು ನೀಡಿದ ಹೇಳಿಕೆಯು ಚರ್ಚೆಯನ್ನು ಹುಟ್ಟುಹಾಕಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts