ಕೋವಿಡ್‌ ಲಸಿಕೆ ಹಂಚಿಕೆ ಪಟ್ಟಿ ಮುಚ್ಚಿಟ್ಟಿತೇ ಒಕ್ಕೂಟ ಸರ್ಕಾರ;ತಾರತಮ್ಯ ಬಹಿರಂಗವಾಗುವ ಭೀತಿಯೇ?

ಬೆಂಗಳೂರು; ಆಮ್ಲಜನಕ, ರೆಮ್‌ಡಿಸಿವಿರ್‌, ಆಂಪೋಟೆರಿಸಿಯನ್‌ ಬಿ, ಸೇರಿದಂತೆ ಇನ್ನಿತರೆ ಔಷಧಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ ಆ ಪಟ್ಟಿಯನ್ನು ಬಹಿರಂಗಗೊಳಿಸುವ ಕೇಂದ್ರ ಸರ್ಕಾರವು ಕೋವಿಡ್‌ ಲಸಿಕೆಗಳನ್ನು ಯಾವ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಿದೆ ಎಂಬುದನ್ನು ಈವರೆವಿಗೂ ಸಾರ್ವಜನಿಕವಾಗಿ ಪಟ್ಟಿಯನ್ನು ಬಹಿರಂಗಗೊಳಿಸದೆ ಮುಚ್ಚಿಡುತ್ತಿದೆ.!

ಕೋವಿಡ್‌ ಲಸಿಕೆಗಳನ್ನು ಉಚಿತವಾಗಿ ನೀಡಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ನೆರವು ನೀಡುವ ಭಾಗವಾಗಿ ಲಸಿಕೆಗಳು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡುವುದನ್ನು ಮುಂದುವರಿಸಿದೆ ಎಂದು ಪ್ರಚಾರ ಗಿಟ್ಟಿಸಿಕೊಂಡಿರುವ ಕೇಂದ್ರ ಸರ್ಕಾರವು ಈವರೆವಿಗೂ ರಾಜ್ಯಗಳಿಗೆ ಹಂಚಿಕೆಯಾಗಿರುವ ಡೋಸ್‌ಗಳ ಪ್ರಮಾಣವನ್ನು ಪಾರದರ್ಶಕವಾಗಿ ತೆರೆದಿಡುತ್ತಿಲ್ಲ. ಹೀಗಾಗಿ ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳು ಹಂಚಿಕೆಯಾಗಿವೆ ಎಂದು ತಿಳಿದು ಬಂದಿಲ್ಲ.

ಜೂನ್‌ 20ರ ಅಂತ್ಯಕ್ಕೆ ರಾಜ್ಯದಲ್ಲಿ 1,52,66,172 ಮಂದಿ ಮೊದಲ ಡೋಸ್‌ ಪಡೆದಿದ್ದರೆ, 32,29,114 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಅದೇ ರೀತಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 29.10 ಕೋಟಿಗೂ ಅಧಿಕ ಲಸಿಕಾ ಡೋಸ್‌ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅಲ್ಲದೆ ಲಸಿಕೆ ನೀಡುವಿಕೆಗೆ ಇನ್ನೂ 3.06 ಕೋಟಿಗೂ ಅಧಿಕ ಡೋಸ್ ಗಳು ಲಭ್ಯವಿದೆ ಎಂದು ಕೇಂದ್ರ ಸರ್ಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಲಸಿಕಾ ಆಂದೋಲನದ ಅಂಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಒದಗಿಸಿ ಬೆಂಬಲ ನೀಡುತ್ತಿದೆ. ಕೋವಿಡ್-19 ಲಸಿಕಾ ಕಾರ್ಯಕ್ರಮದ ಮುಕ್ತ ಮತ್ತು ತ್ವರಿತಗತಿಯ ಹಂತ -3 ನ್ನು 2021 ರ ಮೇ 1 ರಿಂದ ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿರುವ ಕೇಂದ್ರವು ಈ ತಂತ್ರದಡಿಯಲ್ಲಿ, ಪ್ರತೀ ತಿಂಗಳೂ ಕೇಂದ್ರೀಯ ಔಷಧಿ ಪ್ರಯೋಗಾಲಯ (ಸಿ.ಡಿ.ಎಲ್.) ಅನುಮತಿಸುವ ಒಟ್ಟು ಲಸಿಕಾ ಡೋಸ್ ಗಳಲ್ಲಿ, ಅದರ ಉತ್ಪಾದಕರು ಯಾರೇ ಇರಲಿ ಶೇ. 50ರಷ್ಟನ್ನು ಭಾರತ ಸರಕಾರ ಖರೀದಿಸುತ್ತದೆ. ಮತ್ತು ಆ ಡೋಸ್‌ಗಳನ್ನು ಈ ಮೊದಲಿನಂತೆ ರಾಜ್ಯ ಸರಕಾರಗಳಿಗೆ ಉಚಿತವಾಗಿ ಒದಗಿಸುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

ಇದುವರೆಗೆ ಉಚಿತ ವಿಭಾಗದಲ್ಲಿ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ 29.10 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳನ್ನು (29,10,54,050) ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ. ಇದರಲ್ಲಿ ಪೋಲಾದ/ವ್ಯರ್ಥವಾದ ಡೋಸ್ ಸಹಿತ ಒಟ್ಟು ಬಳಕೆ 26,04,19,412 ಡೋಸ್ ಗಳು (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಾದ ದತ್ತಾಂಶಗಳ ಅನ್ವಯ) 3.06 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್ (3,06,34,638) ಗಳು ಈಗಲೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಿಕೆಗೆ ಲಭ್ಯ ಇವೆ ಎಂದು ತಿಳಿಸಿದೆ.

ಇದಲ್ಲದೆ, 24,53,080 ಲಕ್ಷಕ್ಕೂ ಅಧಿಕ ಲಸಿಕಾ ಡೋಸ್ ಗಳು ರವಾನೆಯಾಗುತ್ತಿದ್ದು ಅವುಗಳನ್ನು ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಡೆದುಕೊಳ್ಳಲಿವೆ ಎಂದು ಹೇಳಿದೆ. ಈ ಪೈಕಿ ಕಳೆದ 3 ದಿನದ ಹಿಂದೆ 3.8 ಲಕ್ಷ ಡೋಸ್‌ ಕೋವಿಶಿಲ್ಡ್‌ ಮತ್ತು 63,860 ಡೋಸ್‌ ಕೊವಾಕ್ಸಿನ್‌ ರಾಜ್ಯ ಸ್ವೀಕರಿಸಿದೆ. ಇನ್ನೂ 1.68 ಲಕ್ಷ ಡೋಸ್‌ ಕೋವಿಶೀಲ್ಡ್‌ ಕೂಡ ರಾಜ್ಯಕ್ಕೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್‌ ಅವರು ಟ್ವೀಟ್‌ ಮಾಡಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯವು ಉಳಿದ ರಾಜ್ಯಗಳಿಗೆ ಎಷ್ಟೆಷ್ಟು ಕೋವಿಶೀಲ್ಡ್‌ ಮತ್ತು ಕೋವಾಕ್ಸಿನ್‌ ಡೋಸ್‌ಗಳನ್ನು ಹಂಚಿಕೆ ಮಾಡಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ.

ರೆಮ್‌ಡಿಸಿವಿರ್‌, ಆಂಪೋಟೆರಿಸಿಯನ್‌ ಬಿ ಸೇರಿದಂತೆ ಇನ್ನಿತರೆ ಔಷಧಗಳ ಹಂಚಿಕೆ ಪಟ್ಟಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಪ್ರಹ್ಲಾದ್‌ ಜೋಷಿ, ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿಯ ಯಾವೊಬ್ಬ ಸಂಸದರು ಕೋವಿಡ್ ಲಸಿಕೆ ರಾಜ್ಯಗಳಿಗೆ ಹಂಚಿಕೆಯಾಗಿರುವ ಪಟ್ಟಿ ಅಥವಾ ಅಂಕಿ ಅಂಶಗಳನ್ನು ಬಹಿರಂಗಗೊಳಿಸಿಲ್ಲ, ಈ ಬಗ್ಗೆ ತುಟಿಯನ್ನೂ ಬಿಚ್ಚಿಲ್ಲ. ಕೇಂದ್ರ ಸರ್ಕಾರದ ಈ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ದೇಶವ್ಯಾಪಿ ತಡೆಮದ್ದು ವಿತರಣೆ ಕುರಿತು ಯಾವುದೇ ನಿರ್ದಿಷ್ಟ ನೀತಿಯನ್ನು ಒಕ್ಕೂಟ ಸರ್ಕಾರವು ಹೊಂದಿಲ್ಲ. ತಡೆಮದ್ದು ವಿತರಣೆಯನ್ನು ಯಾವ ಮಾನದಂಡಗಳನ್ನು ಅನುಸರಿಸಿ ರಾಜ್ಯಗಳಿಗೆ ಹಂಚಲಾಗುತ್ತದೆ ಎಂಬುದರ ಕುರಿತು ಅಪಾರ ಗೊಂದಲವಿದೆ. ಅಲ್ಲದೆ ಉತ್ತರ ಪ್ರದೇಶ, ಗುಜರಾತ್‌ ಮತ್ತಿತರ ಉತ್ತರ ಪ್ರದೇಶ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ತಡೆಮದ್ದು ಒದಗಿಸಲಾಗಿದೆ ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ. ಕರ್ನಾಟಕದಲ್ಲಿ ತಡೆಮದ್ದು ಕೊರತೆಯನ್ನು ನೀಗಿಸುವುದಕ್ಕೆ ಯಾವ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎಂಬುದರ ಕುರಿತು ರಾಜ್ಯದ ಸಂಸದರು ಸಭೆಯನ್ನೂ ನಡೆಸಿಲ್ಲ. ಸೋಂಕಿನ ಪ್ರಮಾಣದ ಅಧಾರದ ಮೇಲೆ ತಡೆಮದ್ದು ವಿತರಣೆಯನ್ನು ಮಾಡುವುದಾದರೆ ಕರ್ನಾಟಕಕ್ಕೆ ಉತ್ತರ ಪ್ರದೇಶದಷ್ಟೇ ಆದ್ಯತೆ ಸಿಗಬೇಕು.

ಕೆಬಿಕೆ ಸ್ವಾಮಿ, ವಕೀಲರು

ಜೂನ್‌ 21ರಿಂದ ರಾಜ್ಯದಲ್ಲಿಯೂ ಕೋವಿಡ್‌ ಲಸಿಕೆ ಮೇಳ ನಡೆಯಲಿದೆ. 18-44 ವರ್ಷದವರಿಗೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಿರುವ ರಾಜ್ಯದಲ್ಲೀಗ 14 ಲಕ್ಷ ಕೋವಿಶೀಲ್ಡ್‌ ದಾಸ್ತಾನು ಇದೆ ಎಂದು ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಈವರೆವಿಗೆ 1.80 ಕೋಟಿ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೋವಿಡ್‌ ಲಸಿಕೆಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರವು ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಈವರೆವಿಗೆ ಅಂದಾಜು 55.78 ಕೋಟಿ ರು. ಹೊರೆಬಿದ್ದಿತ್ತು. ರಾಜ್ಯಕ್ಕೆ 2021ರ ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಖರೀದಿಸಿರುವ ಒಟ್ಟು 30.71 ಲಕ್ಷ ಡೋಸ್‌ (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಗಳಿಗೆ 101.84 ಕೋಟಿ ರು. ವೆಚ್ಚವಾಗಲಿದೆ. ಈ ಪೈಕಿ 87 ಕೋಟಿ ರು.ಗಳನ್ನು ಸಿರಮ್‌ ಇನ್ಸಿಟಿಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗೆ ಈಗಾಗಲೇ ಪಾವತಿ ಮಾಡಿತ್ತು.

ಒಂದೊಮ್ಮೆ ಲಸಿಕೆಗಳನ್ನು ಕೇಂದ್ರ ಸರ್ಕಾರವೇ 150 ರು. ದರದಲ್ಲಿಯೇ ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡಿದ್ದರೆ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಹೊರೆ ಬೀಳುತ್ತಿರಲಿಲ್ಲ. ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಕಂಪನಿಗಳಿಂದ ನೇರವಾಗಿ 30.71 ಲಕ್ಷ ಡೋಸ್‌ಗಳನ್ನು ಖರೀದಿಗೆ ಆದೇಶ ನೀಡಿದೆ. 150 ರು. ದರದಲ್ಲಿ ಕೇಂದ್ರ ಸರ್ಕಾರವೇ 30.71 ಲಕ್ಷ ಡೋಸ್‌ಗಳನ್ನು ಖರೀದಿಸಿದಿದ್ದರೆ ಕೇವಲ 46.06 ಕೋಟಿ ರು. ಮಾತ್ರ ಖರ್ಚಾಗುತ್ತಿತ್ತು. ಆದರೆ ಕೇಂದ್ರದ ಲಸಿಕೆ ಖರೀದಿ ನೀತಿಯಿಂದಾಗಿ ರಾಜ್ಯ ಸರ್ಕಾರವು ಕೋವಿಶೀಲ್ಡ್‌ಗೆ 300 ರು. ಮತ್ತು ಕೊವಾಕ್ಸಿನ್‌ಗೆ 400 ರು. ದರದಲ್ಲಿ ಖರೀದಿಸಿರುವುದರಿಂದ ರಾಜ್ಯ ಸರ್ಕಾರವೊಂದರ ಮೇಲೆ ಈವರೆಗೆ 55.78 ಕೋಟಿ ರು. ಹೊರೆ ಬಿದ್ದಿರುವುದು ನಿಚ್ಚಳವಾಗಿ ಕಂಡು ಬಂದಿತ್ತು.

ರಾಜ್ಯ ಸರ್ಕಾರವು ಮೇ 20ರ ಪೂರ್ವದಲ್ಲಿಯೇ ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌ ಸೇರಿ ಸರಿಸುಮಾರು 8.94 ಲಕ್ಷ ಲಸಿಕೆಗಳನ್ನು ಖರೀದಿಸಿತ್ತು. ಕೇಂದ್ರ ಸರ್ಕಾರವು ಈ ಮೊದಲು ಮೊದಲ ಡೋಸ್‌ಗಳನ್ನು ಸರಬರಾಜು ಮಾಡಿತ್ತಾದರೂ ಎರಡನೇ ಡೋಸ್‌ನ್ನು ರಾಜ್ಯಕ್ಕೆ ನೀಡದ ಕಾರಣ ಕೇಂದ್ರ ಸರ್ಕಾರದ ಗೌರವದ ವರ್ಚಸ್ಸು ಕಾಪಾಡಲು ಹೋಗಿ ರಾಜ್ಯ ಸರ್ಕಾರವು ಅಂದಾಜು 28 ಕೋಟಿ ರು. ಹೊರೆಯನ್ನು ಮೈಮೇಲೆ ಎಳೆದುಕೊಂಡಿದ್ದನ್ನು ಸ್ಮರಿಸಬಹುದು.

ಮೇ 20ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರವು 22.50 ಕೋಟಿ ರು. ವೆಚ್ಚದಲ್ಲಿ ಕೋವಿಶೀಲ್ಡ್‌ ಮತ್ತು 6 ಕೋಟಿ ಕೋಟಿ ವೆಚ್ಚದಲ್ಲಿ ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು. ಮೇ 20ರ ಪೂರ್ವದಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋವಿಶೀಲ್ಡ್‌ ಮತ್ತು 1,44,170 ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು.

8.94 ಲಕ್ಷ ಲಸಿಕೆಗಳನ್ನು ರಾಜ್ಯ ಸರ್ಕಾರವು ಬಳಸಲು ಮುಂದಾಗಿತ್ತು. ಆದರೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವು 2ನೇ ಡೋಸ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ 8.94 ಲಕ್ಷ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ಗೆ ಬಳಸಿಕೊಂಡಿತು. ಇದನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿತ್ತು.

ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೋರೇಟ್‌ ಆಸ್ಪತ್ರೆಗಳು ಖರೀದಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ವಿಶೇಷವೆಂದರೆ ಕರ್ನಾಟಕದಲ್ಲಿ ಕೋವಿಡ್‌ 3ನೇ ಅಲೆಯನ್ನು ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು. ಶಿವಮೊಗ್ಗ ನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದು 6,000 ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿ ದಾಸ್ತಾನು ಮಾಡಿದ್ದನ್ನು ಸ್ಮರಿಸಬಹುದು.

ಕೋವಿಡ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ಮರುಗಳಿಗೆಯಲ್ಲಿಯೇ ಫೋರ್ಟಿಸ್‌ ಸೇರಿದಂತೆ ಕಾರ್ಪೋರೇಟ್‌ ಆಸ್ಪತ್ರೆಗಳು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿದ್ದವು.

the fil favicon

SUPPORT THE FILE

Latest News

Related Posts