ಐವರ್‌ಮೆಕ್ಟಿನ್‌ ಬಳಕೆಗೆ ನಿರ್ಬಂಧ; ಖರೀದಿಯಾದ 1 ಕೋಟಿ ರು. ಮೌಲ್ಯದ ಔ‍ಷಧ ಕತೆಯೇನು?

ಬೆಂಗಳೂರು; ಅನಗತ್ಯ ಔಷಧಗಳ ಬಳಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮ ತಪ್ಪಿಸಲು ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯ(ಡಿಜಿಎಚ್‌ಎಸ್‌)ವು ಐವರ್‌ಮೆಕ್ಟಿನ್‌ ಔಷಧವನ್ನು ಕೈಬಿಟ್ಟು ಸೋಮವಾರ ಪರಿಷ್ಕರಿಸಿರುವ ಬೆನ್ನಲ್ಲೇ ಈಗಾಗಲೇ 1 ಕೋಟಿ ರು. ಮೌಲ್ಯದಲ್ಲಿ ಖರೀದಿಸಿ ದಾಸ್ತಾನಿನಲ್ಲಿಟ್ಟಿರುವ ಐವರ್‌ಮೆಕ್ಟಿನ್‌ ಬಳಸಬೇಕೇ ಬೇಡವೇ ಎಂಬ ಬಗ್ಗೆ ಜಿಜ್ಞಾಸೆಯಲ್ಲಿ ಮುಳುಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಮತ್ತು ಅನಗತ್ಯ ಖರ್ಚಿನೊಂದಿಗೆ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮಗಳೂ ಉಂಟಾಗುತ್ತದೆ ಎಂಬ ವರದಿಗಳಿದ್ದರೂ ಖರೀದಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ ಮಧ್ಯೆಯೂ ಐವರ್ಮೆಕ್ಟಿನ್ ಮಾತ್ರೆ ಸರ್ಕಾರಿ ಅಸ್ಪತ್ರೆಗಳಲ್ಲಿ ಬಳಸುತ್ತಿರುವ ಬಗ್ಗೆ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕಾರವನ್ನು ಎಚ್ಚರಿಸಿದ್ದರೂ ಅದನ್ನು ನಿರ್ಲಕ್ಷ್ಯಿಸಿ ಈ ಔಷಧವನ್ನು ಖರೀದಿಸಿತ್ತು. ರಾಜ್ಯ ಸರ್ಕಾರ ಇದೊಂದೇ ಔಷಧದಲ್ಲಿ 1 ಕೋಟಿ ರು. ಅನಗತ್ಯವಾಗಿ ಖರ್ಚು ಮಾಡಿದಂತಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಲ್ಲಿ ಮಾತ್ರ ಈ ಔಷಧವನ್ನು ನಾಶಪಡಿಸಲೇಬೇಕಾದ ಅನಿವಾರ್ಯತೆ ಬರಲಿದೆ. ಒಂದೊಮ್ಮೆ ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯನ್ನು ಬದಿಗಿರಿಸಿ ಬಳಸಲು ಮುಂದಾಗಬಹುದು. ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಹೊರಬಿದ್ದು 2 ದಿನವಾದರೂ ರಾಜ್ಯ ಸರ್ಕಾರ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಕುರಿತು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ನಿರ್ದೇಶಕರಾದ ಲತಾಕುಮಾರಿ ಅವರನ್ನು ‘ದಿ ಫೈಲ್‌’ ಸಂಪರ್ಕಿಸಲು ಯತ್ನಿಸಿತಾದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯೊಂದರಲ್ಲಿ ಜೂನ್‌ 8ರ ಅಂತ್ಯಕ್ಕೆ 25,000 ಸಂಖ್ಯೆಯ ಐವರ್‌ಮೆಕ್ಟಿನ್‌ ಔಷಧ ದಾಸ್ತಾನಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಬಹುತೇಕ ಇಷ್ಟೇ ಸಂಖ್ಯೆ ಅಥವಾ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಈ ಔಷಧ ದಾಸ್ತಾನು ಇರುವುದು ಗೊತ್ತಾಗಿದೆ.

‘ವಿಶ್ವಾದ್ಯಂತ ಔಷಧ ತಯಾರಿಕ ಕಂಪನಿಗಳ ಮಾಫಿಯಾ ಬಹಳ ಶಕ್ತಿಶಾಲಿಯಾಗಿದೆ. ಕೆಲವು ಜೀವರಕ್ಷಕ ಔಷಧಿಗಳು ಜನಸಾಮಾನ್ಯರ ಕೈಗೆ ಎಟುಕದಿರುವಾಗೆ ಮಾಡುವುದರಿಂದ ಹಿಡಿದು ಅನಗತ್ಯ ಮತ್ತು ಅಡ್ಡ ಪರಿಣಾಮಗಳಿರುವ ಔಷಧಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಈ ಮಾಫಿಯಾ ಮಾಡುತ್ತಲೇ ಬಂದಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

ಒಕ್ಕೂಟ ಸರ್ಕಾರ ಈಗ ಐವರ್ ಮೆಕ್ಟಿನ್ ನಂಥ ಔಷಧಗಳ ಬಳಕೆಯನ್ನು ಕೈಬಿಟ್ಟು ಮಾರ್ಗಸೂಚಿ ಪರಿಷ್ಕೃರಿಸಿದೆ. ಇಷ್ಟು ದಿನಗಳ ಕಾಲ ಈ ಔಷಧಿ ಪಡೆದವರಿಗೆ ಆಗಿರಬಹುದಾದ ನಷ್ಟವೆಷ್ಟು? ಇಂಥ ಔಷಧಿಗಳಿಂದ ಆಗಿರುವ ಅಡ್ಡಪರಿಣಾಮ ಮತ್ತು ಆಗಿರಬಹುದಾದ ಸಾವುಗಳಿಗೆ ಯಾರು ಹೊಣೆ? ಆಧಾರವಿಲ್ಲದ ಔಷಧಿಗಳ ಬಳಕೆಗೆ ಈ ಹಿಂದೆ ಒಕ್ಕೂಟ ಸರ್ಕಾರ ಈ ಹಿಂದೆ ಅನುಮತಿ ಕೊಟ್ಟಿದ್ದೇಕೆ, ಈಗ ಹಿಂದಕ್ಕೆ ಪಡೆದಿದ್ದು ಏಕೆ? ಸರ್ಕಾರ ಖರೀದಿಸಿ ಇಟ್ಟುಕೊಂಡಿರುವ ಕೋಟ್ಯಂತರ ರುಪಾಯಿ ಮೌಲ್ಯದ ಔಷಧಿಗಳನ್ನು ಈಗೇನು ಮಾಡುತ್ತಾರೆ? ಜನರ ತೆರಿಗೆ ಹಣ ನಷ್ಟಕ್ಕೆ ಯಾರು ಹೊಣೆ. ಕೋವಿಡ್ ಕಾಲದ ಉತ್ತರವಿಲ್ಲದ ಪ್ರಶ್ನೆಗಳು ಇವು.

ದಿನೇಶ್‌ಕುಮಾರ್‌, ಮುಖ್ಯಸ್ಥರು

ಕರವೇ ಸಾಮಾಜಿಕ ಜಾಲತಾಣ

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಮೇ 15ರಂದು 50 ಲಕ್ಷ ಪ್ರಮಾಣದ ಐವರ್ಮೆಕ್ಟಿನ್‌ ಔಷಧ ಖರೀದಿಗೆ ದರಪಟ್ಟಿ ಆಹ್ವಾನಿಸಿದೆ. ಅಲ್ಲದೆ 2021ರ ಏಪ್ರಿಲ್‌ 20ರಂದು 10,000, ಏಪ್ರಿಲ್‌ 27ರಂದು 10,00,000, ಮೇ 10ರಂದು 25,00, 000 ಪ್ರಮಾಣದಲ್ಲಿ ಈ ಔಷಧವನ್ನು ಖರೀದಿಸಲು ದರಪಟ್ಟಿ ಆಹ್ವಾನಿಸಿರುವುದು ತಿಳಿದು ಬಂದಿದೆ.

ಐವರ್‌ಮೆಕ್ಟಿನ್‌ ಸೇರಿದಂತೆ ಹಲವು ಔಷಧಗಳನ್ನು ಜುಲೈ 2021ರೊಳಗೆ 2 ಪಟ್ಟು ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ಅಧ್ಯಕ್ಷತೆಯಲ್ಲಿ ಮೇ 4ರಂದು ನಡೆದಿದ್ದ ಸಭೆಯು ನಿರ್ಣಯ ಕೈಗೊಂಡಿತ್ತು. ಅದರಂತೆ ಜುಲೈ 2021ರೊಳಗೆ ಒಟ್ಟು 45 ಲಕ್ಷ ರು ವೆಚ್ಚದಲ್ಲಿ ಒಟ್ಟು 20 ಲಕ್ಷ ಐವರ್‌ಮೆಕ್ಟಿನ್‌ ಖರೀದಿಸಿರುವುದು ತಿಳಿದು ಬಂದಿದೆ.

20,00,000 ಟ್ಯಾಬ್ಲೆಟ್‌ಗಳ ಖರೀದಿ ಸಂಬಂಧ 2021ರ ಮೇ 11ರಂದು ದರಪಟ್ಟಿಯನ್ನು ತೆರೆದಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 1.43 ರು. ನಮೂದಿಸಿರುವ ಸೈನೋ ಫಾರ್ಮಾ ಪ್ರೈವೈಟ್‌ ಲಿಮಿಟೆಡ್‌ಗೆ ಸರಬರಾಜು ಆದೇಶ ನೀಡಿದೆ ಎಂದು ಗೊತ್ತಾಗಿದೆ. ಹಾಗೆಯೇ 10.00,000 ಪ್ರಮಾಣದ ಟ್ಯಾಬ್ಲೆಟ್‌ಗಳನ್ನು ತಲಾ 1.24 ರು.ದರದಲ್ಲಿ ಸರಬರಾಜು ಮಾಡಲು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.

ಐವರ್‌ಮೆಕ್ಟಿನ್‌ ವಿಚಾರದಲ್ಲಿಯೂ ಮೇಲಿನ ಎರಡರಲ್ಲಿ ಒಂದು ಬಹಳ ಜೋರಾಗಿ ಕೆಲಸ ಮಾಡಿದೆ. ಈಗ ಕೇಂದ್ರ ಸರ್ಕಾರ ತನ್ನ ಪರಿಷ್ಕೃತ ಮಾರ್ಗಸೂಚಿಯಲ್ಲಿ ಈ ಔಷಧವನ್ನು ಕೈಬಿಟ್ಟಿರುವುದರಿಂದ ಔಷಧ ತಯಾರಿಕೆ ಕಂಪನಿ ಇನ್ನೂ ಬಳಸದೇ ಉಳಿಸಿರುವ ಔಷಧಗಳನ್ನು ವಾಪಸ್‌ ಪಡೆದು (RECALL) ಹಣವನ್ನು ಪೂರ್ತಿಯಾಗಿ ಸರ್ಕಾರಕ್ಕೆ ಮರಳಿಸಬೇಕು. ಹಾಗೂ ಕಳೆದ ಒಂದೂವರೆ ವರ್ಷದಲ್ಲಿ ಸರ್ಕಾರ ಖರೀದಿಸಿರುವ ಎಲ್ಲಾ ಔಷಧಗಳ ಅಗತ್ಯತೆ ಮತ್ತು ದರದ ಕುರಿತು ಸ್ವತಂತ್ರ ಲೆಕ್ಕ ಪರಿಶೋಧನೆ ನಡೆಸಬೇಕು.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಷ್ಟ್ರ ಸಮಿತಿ

ವಿಶೇಷವೆಂದರೆ ಇದೇ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು 20,00,000 ಪ್ರಮಾಣದ ಟ್ಯಾಬ್ಲೆಟ್‌ಗಳ ಖರೀದಿ ಸಂಬಂಧ ಸಲ್ಲಿಸಿದ್ದ ದರಪಟ್ಟಿಯಲ್ಲಿ 2.13 ರು. ದರ ನಮೂದಿಸಿತ್ತು. 1.43 ರು. ದರ ನಮೂದಿಸಿದ್ದ ಸೈನೋ ಫಾರ್ಮಾ ಪ್ರೈವೈಟ್‌ ಲಿಮಿಟೆಡ್‌ಗೆ ಸರಬರಾಜು ಆದೇಶ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಕುರಿತು  ‘ದಿ ಫೈಲ್‌’ ಮೇ 17ರಂದು  ವರದಿ ಪ್ರಕಟಿಸಿತ್ತು.

ಕೋವಿಡ್‌; ಡಬ್ಲ್ಯೂಎಚ್‌ಒ ಎಚ್ಚರಿಕೆ ಮಧ್ಯೆಯೂ 1 ಕೋಟಿ ಮೌಲ್ಯದ ಐವರ್‌ಮೆಕ್ಟಿನ್‌ ಖರೀದಿ

ಕೋವಿಡ್‌ ಸೋಂಕು ಚಿಕಿತ್ಸೆಯ ಔಷಧ ಪಟ್ಟಿಯಿಂದ ಐವರ್‌ಮೆಕ್ಟಿನ್‌, ಹೈಡ್ರೊಕ್ಲೊರೊಕ್ವಿನ್‌, ಫೆವಿಪಿರವಿರ್‌, ಡಾಕ್ಸಿಸೈಕ್ಲಿನ್‌, ಜಿಂಕ್‌, ಮಲ್ಟಿ ವಿಟಮಿನ್‌ನಂತಹ ಹಲವು ಮಾತ್ರೆಗಳನ್ನು ಕೈಬಿಟ್ಟು ಕೇಂದ್ರ ಸರಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಜ್ವರ ನಿಯಂತ್ರಣಕ್ಕೆ ನೀಡುವ ಆ್ಯಂಟಿಪೈರೆಟಿಕ್‌ ಮತ್ತು ಶೀತ ತಡೆಗೆ ಬಳಸುವ ಆ್ಯಂಟಿಟ್ಯೂಸಿವ್‌ ಔಷಧಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಕೈಬಿಡಲಾಗಿದೆ.

ದೇಶದಲ್ಲಿ ಸೋಂಕಿನ ಆರ್ಭಟ ತಗ್ಗಿರುವುದರ ಜತೆಗೆ ಅನಗತ್ಯ ಔಷಧಗಳ ಬಳಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮ ತಪ್ಪಿಸಲು ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್‌) ಔಷಧ ಪಟ್ಟಿಯನ್ನು ಸೋಮವಾರ ಪರಿಷ್ಕರಿಸಿದೆ.

‘ವೈಜ್ಞಾನಿಕವಾದ ಆಧಾರವಿಲ್ಲದೆ ಕೋವಿಡ್ ರೋಗಿಗಳಿಗೆ ಆಂಟಿಬಯಾಟಿಕ್‌ಗಳನ್ನು ಬಳಸಬಾರದು, ಸ್ಟೀರಾಯ್ಡ್‌ಗಳ ಬಳಕೆ ನಿರ್ದಿಷ್ಟ ಮಾನದಂಡವಿರಬೇಕು ಎಂದು ಡಾ.ಶ್ರೀನಿವಾಸ ಕಕ್ಕಿಲಾಯರೂ ಸೇರಿದಂತೆ ದೇಶದ ತಜ್ಞ ವೈದ್ಯರು ಕಳೆದ ವರ್ಷದಿಂದಲೂ ಹೇಳುತ್ತ ಬಂದಿದ್ದರು. ಆದರೆ ಒಂದು ಕೋವಿಡ್ ರೋಗಕ್ಕೆ ಒಂದು ಏಕರೂಪದ ಚಿಕಿತ್ಸೆಯ ಸಂಹಿತೆಯನ್ನು ಇದುವರೆಗೆ ನೀಡಲಾಗಿರಲಿಲ್ಲ,’ ಎನ್ನುತ್ತಾರೆ ದಿನೇಶ್‌ಕುಮಾರ್‌.

ಸೋಂಕು ತೀವ್ರಗೊಂಡಿದ್ದ ಸಂದರ್ಭ ತ್ವರಿತ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹಲವು ಔಷಧಗಳ ಪಟ್ಟಿ ಸಿದ್ಧಪಡಿಸಿ, ಸೋಂಕಿತರ ಚಿಕಿತ್ಸೆಗೆ ಶಿಫಾರಸು ಮಾಡಿತ್ತು. ಮೇ 27ರಂದು ಶಿಫಾರಸು ಮಾಡಿದ್ದ ಔಷಧ ಪಟ್ಟಿಯಲ್ಲಿ ಹೈಡ್ರೊಕ್ಲೊರೊಕ್ವಿನ್‌, ಐವರ್‌ಮೆಕ್ಟಿನ್‌, ಡಾಕ್ಸಿಸೈಕ್ಲಿನ್‌, ಜಿಂಕ್‌, ಮಲ್ಟಿ ವಿಟಮಿನ್‌ ಔಷಧಗಳನ್ನು ಸೇರಿಸಲಾಗಿತ್ತು.

the fil favicon

SUPPORT THE FILE

Latest News

Related Posts