ಲಸಿಕೆ ದರ ಏರಿಕೆ!; ಸೇವಾ ಶುಲ್ಕ ಪರಿಷ್ಕರಿಸಿ 300 ರು. ಹೆಚ್ಚಳಕ್ಕೆ ಒತ್ತಡ

ಬೆಂಗಳೂರು; ಲಸಿಕೆಯ ಡೋಸ್‌ವೊಂದಕ್ಕೆ ಸರ್ಕಾರ 100 ರು. ವಿಧಿಸಿದ್ದ ಸೇವಾ ಶುಲ್ಕಕ್ಕಿಂತಲೂ ಹೆಚ್ಚಿನ ದರ ವಸೂಲು ಮಾಡುತ್ತಿರುವ ಕಾರ್ಪೋರೇಟ್‌ ವಲಯ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಇದೀಗ ಸೇವಾ ಶುಲ್ಕ ಪರಿಷ್ಕರಿಸಿ ಹೆಚ್ಚಳಕ್ಕೆ ಪಟ್ಟು ಹಿಡಿದಿವೆ.

ಸರ್ಕಾರ ಈಗಾಗಲೇ ವಿಧಿಸಿರುವ ಶುಲ್ಕ ಕಡಿಮೆ ಎಂದು ವಾದಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಶುಲ್ಕದ ಮೊತ್ತವನ್ನು 300 ರು.ಗಳಿಗೆ ಹೆಚ್ಚಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದೆ. ಒಂದು ವೇಳೆ ಸರ್ಕಾರವೇನಾದರೂ ಖಾಸಗಿ ಆಸ್ಪತ್ರೆಗಳ ಮುಂದೆ ಮಂಡಿಯೂರಿದರೆ ಈಗಾಗಲೇ ವಸೂಲಿ ಮಾಡುತ್ತಿರುವ ಲಸಿಕೆ ದರ ಇನ್ನಷ್ಟು ಹೆಚ್ಚಲಿದೆ.

ಸೇವಾ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡುವ ಸಂಬಂಧ ಫನಾ ಅಧ್ಯಕ್ಷ ಡಾ ಎಚ್‌ ಎಂ ಪ್ರಸನ್ನ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ 2021ರ ಮೇ 23ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಫನಾ ಬರೆದಿರುವ ಪತ್ರದ ಮೇಲೆ ಇಲಾಖೆ ಈವರೆವಿಗೂ ಯಾವ ನಿರ್ಧಾರವನ್ನೂ ಪ್ರಕಟಿಸಿಲ್ಲ. ಈ ಸಂಬಂಧ ಕಡತವನ್ನು ಸಚಿವ ಡಾ ಕೆ ಸುಧಾಕರ್‌ ಅವರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

‘ಸರಬರಾಜುದಾರರಿಂದ 4-5 ಪಟ್ಟು ಹೆಚ್ಚಳ ದರದಲ್ಲಿ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಲಸಿಕೆಗಳ ಸುರಕ್ಷತೆ ಮತ್ತು ಸಾಗಾಣಿಕೆಗೆ ಹೆಚ್ಚಿನ ವೆಚ್ಚವಾಗಲಿದೆ. ಅಲ್ಲದೆ ಇತರೆ ವೆಚ್ಚಗಳನ್ನೂ ಭರಿಸಬೇಕಿರುವ ಕಾರಣ ಸೇವಾ ಶುಲ್ಕವನ್ನು ಪರಿಷ್ಕರಿಸಿ 300 ರು.ಗಳಿಗೆ ಹೆಚ್ಚಿಸಬೇಕು,’ ಎಂದು ಫನಾ ಅಧ್ಯಕ್ಷ ಡಾ ಎಚ್‌ ಎಂ ಪ್ರಸನ್ನ ಅವರು ಕೋರಿದ್ದಾರೆ.

ಫನಾ ಕೋರಿಕೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತಳೆಯದಿದ್ದರೂ ಬಹುತೇಕ ಕಾರ್ಪೋರೇಟ್‌ ಆಸ್ಪತ್ರೆಗಳು ಡೋಸ್‌ವೊಂದಕ್ಕೆ 1,250 ರು. ಶುಲ್ಕ ವಸೂಲು ಮಾಡಿವೆ. ಸೇವಾ ಶುಲ್ಕ ನಿಗದಿಪಡಿಸುವ ಸಂಬಂಧ 2021ರ ಏಪ್ರಿಲ್‌ 30ರಂದು ಸಭೆ ನಡೆದಿತ್ತು. ಲಸಿಕೆ ನೀಡುವ ಖಾಸಗಿ ಆಸ್ಪತ್ರೆಗಳು 100 ರು.ಗಳನ್ನಷ್ಟೇ ಸೇವಾ ಶುಲ್ಕವನ್ನಾಗಿ ವಿಧಿಸಬೇಕು ಎಂದು ಸಭೆಯಲ್ಲಿ ನಿರ್ಣಯವಾಗಿತ್ತು. ಆದರೂ ಈ ನಿರ್ಣಯವನ್ನು ಖಾಸಗಿ ಆಸ್ಪತ್ರೆಗಳು ಪಾಲಿಸಿರಲಿಲ್ಲ.

ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್‌ನ ಒಂದು ಡೋಸ್‌ಗೆ 850 ರು.,, ಕೊವಾಕ್ಸಿನ್‌ಗೆ 1,250 ರು. ಸ್ಪುಟ್ನಿಕ್‌ ವಿ ಲಸಿಕೆಗೆ 1,250 ರು. ವಿಧಿಸಿವೆ. ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಂಬಂಧಿ ಡಾ ಶರಣ್‌ ಪಾಟೀಲ್‌ ಅವರ ಒಡೆತನದ ಸ್ಪರ್ಶ ಆಸ್ಪತ್ರೆಯೂ ಸೇರಿದಂತೆ ಹಲವು ಆಸ್ಪತ್ರೆಗಳು ಲಸಿಕೆಗೆ 850 ರು.ನಿಂದ 1,250 ರು.ವರೆಗೂ ಶುಲ್ಕ ವಿಧಿಸಿವೆ.

ತಾನು ಉತ್ಪಾದಿಸುತ್ತಿರುವ ‘ಕೋವಿಶೀಲ್ಡ್‌’ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 600 ರೂ.ಗೆ ಪೂರೈಕೆ ಮಾಡುವುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಈಗಾಗಲೇ ಘೋಷಿಸಿದೆ. ಅದು ಲಸಿಕೆ ಬೆಲೆ ಎಂದೂ ಹೇಳಿತ್ತು. ಈ ಬೆಲೆ ಮೇಲೆ ಆಸ್ಪತ್ರೆಗಳು ರಾಜ್ಯ ಸರ್ಕಾರ ನಿಗದಿಪಡಿಸಿರುವ 100 ರು. ಸೇವಾ ಶುಲ್ಕವೂ ಸೇರಿದಂತೆ 700 ರು. ವಿಧಿಸಬೇಕಿತ್ತು. ಆದರೆ ಬಹುತೇಕ ಕಾರ್ಪೋರೇಟ್‌ ಆಸ್ಪತ್ರೆಗಳು ಕೋವಿಶೀಲ್ಡ್‌ ಒಂದು ಡೋಸ್‌ಗೆ 850 ರು. ವಸೂಲಿ ಮಾಡುತ್ತಿವೆ. ಅಲ್ಲದೆ ಬಹುತೇಕ ಆಸ್ಪತ್ರೆಗಳು ಒಂದೊಂದು ದರ ವಸೂಲು ಮಾಡುತ್ತಿವೆ.

ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲಿಚ್ಛಿಸುವವರು ಪ್ರತೀ ಡೋಸ್ ಗೆ 250 ರೂ ನೀಡಿ ಲಸಿಕೆ ಪಡೆಯಬೇಕಾಗಿದೆ. ಮೂಲಗಳ ಪ್ರಕಾರ ಲಸಿಕೆ ದರ 150 ರೂ ಇದ್ದು 100 ರೂ ಸೇವಾ ಶುಲ್ಕ ಸೇರಿ ಒಟ್ಟು 250 ರೂಗಳನ್ನು ದರವಾಗಿ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲೇ ನಿಗದಿಪಡಿಸಿದೆ. ಅಲ್ಲದೆ ಈ ದರ ಸರ್ಕಾರದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಆದರೂ ಕಾರ್ಪೋರೇಟ್‌ ಆಸ್ಪತ್ರೆಗಳು 850 ರು.ನಿಂದ 1,250 ರು.ವರೆಗೂ ವಿಧಿಸುತ್ತಿವೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಯಾವ ದರದಲ್ಲಿ ಲಸಿಕೆ ಖರೀದಿ ಮಾಡಿವೆ ಎಂಬ ಬಗ್ಗೆ ವಿವರಗಳನ್ನೂ ಬಹಿರಂಗಗೊಳಿಸಿಲ್ಲ.

ಕೇಂದ್ರ ಸರ್ಕಾರ ಸೂಚಿಸಿರುವ ಬೆಲೆಯನ್ನು ಒಪ್ಪದ ಖಾಸಗಿ ಆಸ್ಪತ್ರೆಗಳು ದರ ಏರಿಕೆಗೆ ತಮ್ಮದೇ ಆದ ಸಮರ್ಥನೆಯನ್ನು ಮುಂದೊಡ್ಡಿದ್ದಾರೆ. ಕೋವಿಶೀಲ್ಡ್‌ ಲಸಿಕೆಯನ್ನು 660ರಿಂದ 670 ರು ದರದಲ್ಲಿ (ಜಿಎಸ್‌ಟಿ ಮತ್ತು ಸಾಗಾಣಿಕೆ ಸೇರಿ) ಖರೀದಿಸಲಾಗುತ್ತಿದೆ. ಲಸಿಕೆಗಳಲ್ಲಿ ಶೇ.5ರಿಂದ 6ರಷ್ಟು ವ್ಯರ್ಥವಾಗಲಿದೆ. ಇದೆಲ್ಲವನ್ನೂ ಸೇರಿಸಿದರೆ ಲಸಿಕೆ ಡೋಸ್‌ವೊಂದಕ್ಕೆ 710 ರಿಂದ 715 ರು ತಗುಲಲಿದೆ. ಅಲ್ಲದೆ ಲಸಿಕೆ ಸ್ಯಾನಿಟೈಸರ್‌, ಸಿಬ್ಬಂದಿ ಪಿಪಿಇ ಕಿಟ್‌, ಬಯೋ ಮೆಡಿಕಲ್‌ ತ್ಯಾಜ್ಯ ವಿಲೇವಾರಿ ಇತರೆ ವೆಚ್ಚ 170ರಿಂದ 180 ರು. ಆಗಲಿದೆ.

the fil favicon

SUPPORT THE FILE

Latest News

Related Posts