ಕೋವಿಡ್‌ ಲಸಿಕೆ; ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.14.50, ಕರ್ನಾಟಕದಲ್ಲಿ ಶೇ.18ರಷ್ಟೇ ಪ್ರಗತಿ

ಬೆಂಗಳೂರು; ದೇಶಾದ್ಯಂತ ಕಳೆದ 130 ದಿನಗಳಿಂದಲೂ ನಡೆಯುತ್ತಿರುವ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 14.50ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಈ ಪೈಕಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 3ರಷ್ಟು ಮಂದಿಗೆ ಮಾತ್ರ ಎರಡನೇ ಡೋಸ್‌ ನೀಡಲಾಗಿದೆ.

ಹಾಗೆಯೇ ದಕ್ಷಿಣದ ರಾಜ್ಯಗಳ ಒಟ್ಟು 24 ಕೋಟಿ ಜನಸಂಖ್ಯೆಯಲ್ಲಿ ಶೇ.16.50ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.18ರಷ್ಟು ಮಾತ್ರ ಲಸಿಕೆ ನೀಡಿದ್ದರೆ ಶೇ.3.7ರಷ್ಟು ಜನರಿಗಷ್ಟೇ 2ನೇ ಡೋಸ್‌ ನೀಡಲಾಗಿದೆ.

ಲಸಿಕಾಕರಣ ಅಭಿಯಾನದಲ್ಲಿ ಮೈಲಿಗಲ್ಲು ಸಾಧಿಸಲಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ಹೆಮ್ಮೆಯಿಂದ ಬೀಗುತ್ತಿರುವ ಬೆನ್ನಲ್ಲೇ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ಲಸಿಕಾಕರಣ ಅಭಿಯಾನವು ಮುಗ್ಗುರಿಸಿದೆ ಎಂಬುದನ್ನು ಸದ್ಯದ ಅಂಕಿ ಅಂಶಗಳು ಎತ್ತಿಹಿಡಿದಿವೆ.

ಅಂಕಿ ಅಂಶಗಳ ಪ್ರಕಾರ ಭಾರತ ಲಸಿಕಾರಣದಲ್ಲಿ ಸಾದಿಸಿರುವ ಪ್ರಗತಿ ಚಿಂತಾಜನಕವಾಗಿದೆ. ದೇಶದ ಕೇವಲ ಶೇ.3ರಷ್ಟು ಜನರನ್ನು ಮಾತ್ರ ಕೊರೊನಾ ವೈರಸ್‌ ಬಾರದಂತೆ ರಕ್ಷಿಸಲಾಗಿದೆ ಎನ್ನುವುದು ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದಕ ದೇಶವಾದ ಭಾರತಕ್ಕೆ ಅವಮಾನಕಾರಿ. ಅದೇ ರೀತಿ ಸಾಕಷ್ಟು ಸಂಪನ್ಮೂಲಗಳಿರುವ ಕರ್ನಾಟಕ ರಾಜ್ಯವು ಸಹ ಈ ವಿಚಾರದಲ್ಲಿ ದೇಶಧ ಅತ್ಯಂತ ಹಿಂದುಳಿದ ರಾಜ್ಯಗಳ ಸಾಲಿಗೆ ನಿಲ್ಲುತ್ತಿದೆ ಎನ್ನವುದು ಕರ್ನಾಟಕದ ಇಂದಿನ ಅಯೋಗ್ಯ ಆಡಳಿತ ವ್ಯವಸ್ಥೆ ಇದೆ ಎಂದು ಪ್ರತಿಬಿಂಬಿಸುತ್ತಿದೆ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಷ್ಟ್ರ ಸಮಿತಿ

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಮಾಹಿತಿ ಪ್ರಕಾರ ಲಸಿಕೆ ನೀಡಿಕೆಯು 20 ಕೋಟಿ ಗಡಿ ದಾಟಿದೆ. ಈ ಪೈಕಿ 15,77,10,407 ಮೊದಲ ಡೋಸ್ ಮತ್ತು 4,23,46,269 ಎರಡನೇ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಮೊದಲ ಡೋಸ್‌ ನೀಡಿಕೆಯ ಶೇಕಡವಾರು 11.3ರಷ್ಟಿದ್ದರೆ ಎರಡನೇ ಡೋಸ್‌ನಲ್ಲಿ ಶೇಕಡವಾರು ಕೇವಲ 3ರಷ್ಟು ಮಾತ್ರವಿದೆ.

ಕರ್ನಾಟಕದಲ್ಲಿ ಇದುವರೆಗೆ 1,27,02,864 ಡೋಸ್‌ ನೀಡಿದ್ದರೆ ಈ ಪೈಕಿ 1,00,40,790 ಮೊದಲ ಡೋಸ್‌ ಮತ್ತು 26,62,074 ಎರಡನೇ ಡೋಸ್‌ ನೀಡಲಾಗಿದೆ. ಇದು ಅಂದಾಜು 7 ಕೋಟಿ ಜನಸಂಖ್ಯೆಯಲ್ಲಿ ಶೇ.18ರಷ್ಟು ಜನರಿಗಷ್ಟೇ ಲಸಿಕೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಭಾರತದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟ ಶೇ. 34ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಅಂತೆಯೇ ಭಾರತದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಶೇ.42ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ.

ಪ್ರಮುಖ ರಾಜ್ಯಗಳ ಶೇಕಡವಾರು ವಿವರ (ಒಟ್ಟು ಜನಸಂಖ್ಯೆಗೆ)

ತೆಲಂಗಾಣ; ಶೇ.14
ಆಂಧ್ರಪ್ರದೇಶ; ಶೇ. 17.05
ಕೇರಳ; ಶೇ. 25
ತಮಿಳುನಾಡು; ಶೇ.10
ಗುಜರಾತ್‌ ; ಶೇ.25ರಷ್ಟು-
ಉತ್ತರಪ್ರದೇಶ ; ಶೇ. 7.5
ಮಹಾರಾಷ್ಟ್ರ; ಶೇ.17.5
ಮಧ್ಯಪ್ರದೇಶ; ಶೇ.12
ರಾಜಸ್ಥಾನ; ಶೇ.20.5
ದೆಹಲಿ; ಶೇ.17
ಬಿಹಾರ; ಶೇ.7.6
ಪಶ್ಚಿಮ ಬಂಗಾಳ; ಶೇ.14

ಸಾರ್ವಜನಿಕ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಷ್ಟೇ ಲಸಿಕೆ ನೀಡಲಾಗುತ್ತಿತ್ತಾದರೂ ಕಾರ್ಪೋರೇಟ್‌ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮೋದನೆ ನೀಡಿವೆ. ಆದರೂ ಲಸಿಕಾ ಅಭಿಯಾನವು ಯಶಸ್ವಿಯಾಗಿಲ್ಲ. ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಲಸಿಕೆಗಳು ದುಬಾರಿಯಾಗಿವೆ. ಜಗತ್ತಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಭಾರತದಲ್ಲಿ ಲಸಿಕಾಕರಣ ಅಭಿಯಾನವು ಮುಗ್ಗುರಿಸಿರುತ್ತಿರುವುದಕ್ಕೆ ವಕೀಲರ ವಲಯದಲ್ಲಿಯೂ ಅಸಮಾಧಾನ ವ್ಯಕ್ತವಾಗಿವೆ. ದೂರ ನೋಟದ ಕೊರತೆ ಮತ್ತು ಆಪತ್ತಿಗೆ ದಾಸ್ತಾನು ಮಾಡಿಕೊಳ್ಳದ ಉಡಾಫೆಯ ರಾಜಕಾರಣಕ್ಕೆ ಭಾರತ ದೊಡ್ಡ ಬೆಲೆ ತೆತ್ತಿದೆ ಎಂದು ವಕೀಲ ಕೆಬಿಕೆ ಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ.

 

ಲಸಿಕಾ ಉತ್ಪಾದಕರಿಂದ ನೇರವಾಗಿ ಖರೀದಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಲಸಿಕೆಗಳು ಇದೀಗ ಕಾರ್ಪೋರೇಟ್‌ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಆಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಖಾಸಗಿ ಅಸ್ಪತ್ರೆಯನ್ನು ನಡೆಸುತ್ತಿರುವ ಜಗದೀಶ್‌ ಹಿರೇಮಠ್‌ ಎಂಬುವರು ಟ್ವೀಟ್‌ ಕೂಡ ಮಾಡಿದ್ದಾರೆ.

ಸೆರಂ ಇನ್ಸ್ ಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್, ರಷ್ಯಾದ ಸ್ಪೂಟ್ನಿಕ್ ವಿ ಅನ್ನು ಮೂರನೇ ಲಸಿಕೆಯನ್ನಾಗಿ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದೆ. ಮತ್ತು ಅದನ್ನು ಕೆಲವು ಖಾಸಗಿ ಆಸ್ಪತ್ರೆಗಳು ಬಳಕೆ ಮಾಡುತ್ತಿದೆ. ಆ ಬಳಕೆ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಸಿಕೀಕರಣ ಅಭಿಯಾನವು ಜನವರಿ 16ರಂದು ಆರಂಭವಾಗಿತ್ತು. ಎರಡನೇ ಹಂತದ ಲಸಿಕೀಕರಣ ಅಭಿಯಾನ ಮಾರ್ಚ್ 1 ರಿಂದ ಆರಂಭವಾಗಿದೆ. ಅದರಲ್ಲಿ ಅತ್ಯಂತ ಸೂಕ್ಷ್ಮ ವಯೋಮಾನದವರ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟ ಜನರು ಮತ್ತು ಕೆಲವು ಅನಾರೋಗ್ಯ ಹೊಂದಿದ 45 ವರ್ಷ ಮೇಲ್ಪಟ್ಟ ಜನರಿಗೆ ಆದ್ಯತೆ ನೀಡಿದೆ.

ಇದು 2021ರ ಏಪ್ರಿಲ್ 1 ರಿಂದ ಮತ್ತಷ್ಟು ಸರಳೀಕರಣಗೊಂಡಿತ್ತಲ್ಲದೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾರಂಭಿಸಿದೆ. ಮೂರನೇ ಹಂತದಲ್ಲಿ 2021ರ ಮೇ 1 ರಿಂದ ಉದಾರೀಕೃತ ಬೆಲೆ ಮತ್ತು ತ್ವರಿತಗತಿಯಲ್ಲಿ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಈ ಕಾರ್ಯತಂತ್ರದಡಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್-19 ಲಸಿಕೆಗೆ ಅರ್ಹರು ಎಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಸರ್ಕಾರವು ತನ್ನ ಹೇಳಿಕೆಯಲ್ಲಿ ವಿವರಿಸಿದೆ.

the fil favicon

SUPPORT THE FILE

Latest News

Related Posts