ಬೆಂಗಳೂರು; ಬ್ಲಾಕ್ ಫಂಗಸ್ ಚಿಕಿತ್ಸೆಗೆ ನೀಡುವ ಆಂಪೋಟೆರಿಸಿನ್ ಬಿ ಔಷಧ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗಿರುವುದನ್ನು ‘ದಿ ಫೈಲ್’ ಬಹಿರಂಗಗೊಳಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದನಿ ಎತ್ತಿದ್ದಾರೆ.
ರಾಜ್ಯದಲ್ಲಿಯೂ ಬ್ಲಾಕ್ ಫಂಗಸ್ ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ಹೆಚ್ಚಿನ ಸಂಖ್ಯೆಯ ವಯಲ್‌ಗಳನ್ನು ಹಂಚಿಕೆ ಮಾಡಿತ್ತು. ‘ದಿ ಫೈಲ್’ ಈ ಕುರಿತು ಅಂಕಿ ಅಂಶಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ಅಲ್ಲದೆ ಕೇಂದ್ರದ ಧೋರಣೆಯನ್ನು ಟೀಕಿಸಿದ್ದಾರೆ.
‘ಕಪ್ಪು ಶಿಲೀಂಧ್ರ ರೋಗಿಗಳಿಗೆ ನೀಡುವ ಲಿಫೋಸೋಮಾಲ್ ಆಂಪೋಟೆರಿಸಿನ್ ಬಿ ಚುಚ್ಚುಮದ್ದು ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೆಚ್ಚಿನ ಲಸಿಕೆ ನೀಡಿದ್ದು,ಕರ್ನಾಟಕಕ್ಕೆ ಅತ್ಯಂತ ಕಡಿಮೆ ಹಂಚಿಕೆ ಮಾಡಲಾಗಿದೆ. ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಖರೀದಿಸಲು ತಕ್ಷಣ ಮುಂದಾಗಬೇಕು,’ ಎಂದು ಆಗ್ರಹಿಸಿದ್ದಾರೆ.
ಭಾರತ್ ಸಿರಮ್ಸ್ ಮತ್ತು ಮೈಲಾನ್ ಫಾರ್ಮಾ ಕಂಪನಿಗಳು ತಯಾರಿಸಿರುವ ಆಂಪೋಟೆರಿಸಿನ್ ಬಿ ಔಷಧವನ್ನು ಮೇ 31ರವರೆಗೆ ಒಟ್ಟು 44,250 ವಯಲ್ ಹಂಚಿಕೆ ಮಾಡಿದೆಯಾದರೂ ಕರ್ನಾಟಕದ ಬೇಡಿಕೆಗೆ ತಕ್ಕಂತೆ ಈ ಔಷಧವನ್ನು ಹಂಚಿಕೆ ಮಾಡಿಲ್ಲ. ಆಂಪೋಟೆರಿಸಿನ್ ಬಿ ಔಷಧಕ್ಕೆ ರಾಜ್ಯ ಸರ್ಕಾರವು 20,000 ವಯಲ್‌ಗೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು 1,050 ಹಂಚಿಕೆ ಮಾಡಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಬ್ಲಾಕ್ ಫಂಗಸ್ ; ಗುಜರಾತ್‌ಗೆ ಆಂಪೋಟೆರಿಸಿನ್ ಬಿ 15,000, ರಾಜ್ಯಕ್ಕೆ ಕೇವಲ 1,050 ವಯಲ್
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರ ಮತ್ತ ಗುಜರಾತ್‌ಗೆ ಹೆಚ್ಚು ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ 16,500 ಮತ್ತು ಗುಜರಾತ್‌ಗೆ 15,000 ಹಂಚಿಕೆ ಮಾಡಿದೆ. ರಾಜ್ಯದಲ್ಲಿಯೂ ಬ್ಲಾಕ್ ಫಂಗಸ್ ಹರಡುವಿಕೆ ಪ್ರಮಾಣವೂ ಹೆಚ್ಚಾಗುವ ಮೂಲಕ ಆತಂಕ ಮೂಡಿದ್ದರೂ ಕೇಂದ್ರ ಸರ್ಕಾರವು ಮೇ 31ರವರೆಗೆ ಕೇವಲ 1,050 ವಯಲ್‌ಗಳನ್ನಷ್ಟೇ ಹಂಚಿಕೆ ಮಾಡಿದೆ.
ಭಾರತ್ ಸಿರಮ್ಸ್ ಕಂಪನಿಯ 600 ಮತ್ತು ಮೈಲಾನ್ ಫಾರ್ಮಾ ಕಂಪನಿಯ 450 ವಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ ಭಾರತ್ ಸಿರಮ್ಸ್ 14,000 ಮತ್ತು ಮೈಲಾನ್ ಫಾರ್ಮಾದ 2,500 ಸೇರಿ ಒಟ್ಟು 16,500, ಗುಜರಾತ್‌ಗೆ ಭಾರತ್ ಸಿರಮ್ಸ್‌ನ 5,500 ಮತ್ತು ಮೈಲಾನ್ ಫಾರ್ಮಾದ 9,500 ಸೇರಿ ಒಟ್ಟು 15,000 ವಯಲ್‌ಗಳನ್ನು ಹಂಚಿಕೆ ಮಾಡಿದೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಂಚಿಕೆ ಮಾಡಿರುವ 1,050 ವಯಲ್‌ಗಳ ಪೈಕಿ ಬೌರಿಂಗ್ ಆಸ್ಪತ್ರೆಗೆ 1,000 ವಯಲ್‌ಗಳನ್ನು ಹಂಚಿಕೆ ಮಾಡಲಾಗಿದೆ. ವಿಜಯಪುರ, ಮಡಿಕೇರಿ, ಗುಲ್ಬರ್ಗಾ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳಲಾರಂಭಿಸಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಔಷಧದ ಅಭಾವ ತೀವ್ರವಾಗಿದೆ ಎಂದು ತಿಳಿದು ಬಂದಿದೆ.
ತಜ್ಞ ವೈದ್ಯರ ಪ್ರಕಾರ ಒಬ್ಬ ರೋಗಿಗೆ 15ರಿಂದ 20 ವಯಲ್ ಬೇಕು. ಭಾರತ್ ಸಿರಮ್ಸ್ ಬಿಡುಗಡೆ ಮಾಡಿರುವ ಈ ಔಷಧಕ್ಕೆ ಮಾರುಕಟ್ಟೆಯಲ್ಲಿ ಒಂದು ವಯಲ್‌ಗೆ 4,744 ರು.ಗಳಿವೆ. ಮೈಲಾನ್ ಕಂಪನಿ ದರ ಒಂದು ವಯಲ್‌ಗೆ 7,814 ರು. ಇದೆ. ಸಿರಮ್ಸ್ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್ ಬೇಕೇಂದರೆ 94,880 ರು. , ಮೈಲಾನ್ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್‌ಗೆ 1,56,280 ರು. ತೆತ್ತಬೇಕು. ಒಬ್ಬ ರೋಗಿಗೆ ದಿನಕ್ಕೆ ಮೂರು ವಯಲ್ ಎಂದು ಲೆಕ್ಕ ಹಾಕಿದರೂ ಭಾರತ್ ಸಿರಮ್ಸ್‌ನ ದರದ ಪ್ರಕಾರ 14,232, ಮೈಲಾನ್ ಕಂಪನಿ ದರದ ಪ್ರಕಾರ 23,442 ರು. ಬೇಕಾಗಲಿದೆ.
ಬ್ಲ್ಯಾಕ್ ಫಂಗಸ್ ಗೆ ನೀಡುವ ಲಿಪೋಸೋಮಲ್ ಆಂಪೋಟೆರಿಸಿನ್ ಬಿ ಔಷಧದ ಕೊರತೆಯೂ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.