ಬೆಂಗಳೂರು; ಬ್ಲಾಕ್ ಫಂಗಸ್ ಸೋಂಕು ವಾರದಲ್ಲಿ 400 ಮಂದಿಗೆ ಹರಡುತ್ತಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರವು ಆಂಪೋಟೆರಿಸಿನ್ ಬಿ ಔಷಧ ಖರೀದಿಗೆ ದರಪಟ್ಟಿ ಕರೆಯುವುದರಲ್ಲೇ ಕಾಲಹರಣ ಮಾಡುತ್ತಿದೆ. ಅತ್ತ ನೆರೆಯ ತೆಲಂಗಾಣ ಸರ್ಕಾರವು ಆಂಪೋಟೆರಿಸಿನ್ ಬಿ ಔಷಧ ಸ್ಟಾಕಿಸ್ಟ್‌ಗಳಿಗೆ ನೇರವಾಗಿ ಸರಬರಾಜು ಮಾಡಲು ಔಷಧ ಕಂಪನಿಗಳಿಗೆ ಸೂಚಿಸಿ ಪತ್ರ ಬರೆದಿದೆ.
ಕಪ್ಪು ಶಿಲೀಂಧ್ರ ಸೋಂಕಿತರು ಸಾವನ್ನಪ್ಪುತ್ತಿರುವವರ ಕುರಿತು ಮಾಹಿತಿ ಇಲ್ಲ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಇಂತಹ ಹೇಳಿಕೆಗಳನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದರೆ ಅತ್ತ ತೆಲಂಗಾಣ ಸರ್ಕಾರವು ಔಷಧ ಸರಬರಾಜು ಸಂಬಂಧ ಕ್ಷಿಪ್ರಗತಿಯಲ್ಲಿ ಕ್ರಮಕೈಗೊಂಡಿದೆ.
ಆಂಪೋಟೆರಿಸಿಯನ್ ಬಿ ಔಷಧ ತಯಾರಿಕೆ ಕಂಪನಿಗಳಿಗೆ 2021ರ ಮೇ 17ರಂದು ಪತ್ರ ಬರೆದಿರುವ ತೆಲಂಗಾಣ ಔಷಧ ನಿಯಂತ್ರಣ ಆಡಳಿತ ಮಂಡಳಿಯು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬ್ಲಾಕ್ ಫಂಗಸ್ ಸೋಂಕಿತ ರೋಗಿಗಳಿಗೆ ತಜ್ಞರ ಶಿಫಾರಸ್ಸಿನಂತೆ ಚುಚ್ಚುಮದ್ದು ನೀಡಬೇಕು. ಹೀಗಾಗಿ ಸ್ಟಾಕಿಸ್ಟ್‌ಗಳು ಒಂದೇ ಒಂದು ವಯಲ್‌ನ್ನೂ ತಜ್ಞರ ಸಮಿತಿಯ ಶಿಫಾರಸ್ಸಿಲ್ಲದೇ ಆಸ್ಪತ್ರೆಗಳಿಗೆ ನೇರವಾಗಿ ನೀಡಬಾರದು ಎಂದು ಸೂಚಿಸಿದೆ. ಈ ಪತ್ರದ ಪ್ರತಿ ‘ದಿ ಫೈಲ್’ ಗೆ ಲಭ್ಯವಾಗಿದೆ.
ಸೆಲಾನ್ ಲ್ಯಾಬ್, ಭಾರತ್ ಸಿರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್, ಮೈಲಾನ್, ಸಿಪ್ಲಾ, ಹಿಟಾರಿಯೋ, ಸನ್ ಫಾರ್ಮಾ, ಕ್ಯಾಡಿಲಾ, ನಿಯೋನ್ ಲ್ಯಾಬ್, ಯುನೈಟೆಡ್ ಬಯೋಟೆಕ್, ವ್ಹೊಕಾರ್ಟ್, ಜಾಲಿ ಹೆಲ್ತ್ ಕೇರ್, ಲೈಫ್ ಕೇರ್ ಇನ್ನೋವೇಷನ್, ಆಂಗ್ಲೋ ಫ್ರೆಂಚ್ ಡ್ರಗ್ಸ್ ಇಂಡಸ್ಟ್ರೀಸ್, ಪೆನೆಷಿಯಾ ಬಯೋ ಟೆಕ್ ಕಂಪನಿಗಳ ಮುಖ್ಯಸ್ಥರಿಗೆ ಪತ್ರವನ್ನು ಬರೆದಿದೆ.
ತೆಲಂಗಾಣದಂತೆ ಕರ್ನಾಟಕ ಸರ್ಕಾರವೂ ಆಂಪೋಟೆರಿಸಿಯನ್ ಬಿ ತಯಾರಿಸುವ ಕಂಪನಿಗಳಿಗೆ ಪತ್ರ ಬರೆಯಲು ಅವಕಾಶಗಳಿದ್ದರೂ ದರಪಟ್ಟಿ ಆಹ್ವಾನಿಸುವುದರಲ್ಲಿಯೇ ಕಾಲಹರಣ ಮಾಡುವ ಮೂಲಕ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ದಾಸ್ತಾನು ಮಾಡಿಕೊಳ್ಳುವುದರತ್ತ ಕ್ರಮ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಭಾರತ್ ಸಿರಮ್ಸ್ ಮತ್ತು ಮೈಲಾನ್ ಫಾರ್ಮಾ ಕಂಪನಿಗಳು ತಯಾರಿಸಿರುವ ಆಂಪೋಟೆರಿಸಿನ್ ಬಿ ಔಷಧವನ್ನು ಮೇ 31ರವರೆಗೆ ಒಟ್ಟು 44,250 ವಯಲ್ ಹಂಚಿಕೆ ಮಾಡಿದೆಯಾದರೂ ಕರ್ನಾಟಕದ ಬೇಡಿಕೆಗೆ ತಕ್ಕಂತೆ ಈ ಔಷಧವನ್ನು ಹಂಚಿಕೆ ಮಾಡಿಲ್ಲ. ಆಂಪೋಟೆರಿಸಿನ್ ಬಿ ಔಷಧಕ್ಕೆ ರಾಜ್ಯ ಸರ್ಕಾರವು 20,000 ವಯಲ್‌ಗೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಕೇವಲ 1,050 ಮಾತ್ರ ಹಂಚಿಕೆ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರ ಮತ್ತ ಗುಜರಾತ್‌ಗೆ ಹೆಚ್ಚು ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ 16,500 ಮತ್ತು ಗುಜರಾತ್‌ಗೆ 15,000 ಹಂಚಿಕೆ ಮಾಡಿದೆ. ರಾಜ್ಯದಲ್ಲಿಯೂ ಬ್ಲಾಕ್ ಫಂಗಸ್ ಹರಡುವಿಕೆ ಪ್ರಮಾಣವೂ ಹೆಚ್ಚಾಗುವ ಮೂಲಕ ಆತಂಕ ಮೂಡಿದ್ದರೂ ಕೇಂದ್ರ ಸರ್ಕಾರವು ಮೇ 31ರವರೆಗೆ ಕೇವಲ 1,050 ವಯಲ್‌ಗಳನ್ನಷ್ಟೇ ಹಂಚಿಕೆ ಮಾಡಿದೆ.
ಭಾರತ್ ಸಿರಮ್ಸ್ ಕಂಪನಿಯ 600 ಮತ್ತು ಮೈಲಾನ್ ಫಾರ್ಮಾ ಕಂಪನಿಯ 450 ವಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ ಭಾರತ್ ಸಿರಮ್ಸ್ 14,000 ಮತ್ತು ಮೈಲಾನ್ ಫಾರ್ಮಾದ 2,500 ಸೇರಿ ಒಟ್ಟು 16,500, ಗುಜರಾತ್‌ಗೆ ಭಾರತ್ ಸಿರಮ್ಸ್‌ನ 5,500 ಮತ್ತು ಮೈಲಾನ್ ಫಾರ್ಮಾದ 9,500 ಸೇರಿ ಒಟ್ಟು 15,000 ವಯಲ್‌ಗಳನ್ನು ಹಂಚಿಕೆ ಮಾಡಿದೆ.
ತಜ್ಞ ವೈದ್ಯರ ಪ್ರಕಾರ ಒಬ್ಬ ರೋಗಿಗೆ 15ರಿಂದ 20 ವಯಲ್ ಬೇಕು. ಭಾರತ್ ಸಿರಮ್ಸ್ ಬಿಡುಗಡೆ ಮಾಡಿರುವ ಈ ಔಷಧಕ್ಕೆ ಮಾರುಕಟ್ಟೆಯಲ್ಲಿ ಒಂದು ವಯಲ್‌ಗೆ 4,744 ರು.ಗಳಿವೆ. ಮೈಲಾನ್ ಕಂಪನಿ ದರ ಒಂದು ವಯಲ್‌ಗೆ 7,814 ರು. ಇದೆ. ಸಿರಮ್ಸ್ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್ ಬೇಕೇಂದರೆ 94,880 ರು. , ಮೈಲಾನ್ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್‌ಗೆ 1,56,280 ರು. ತೆತ್ತಬೇಕು. ಒಬ್ಬ ರೋಗಿಗೆ ದಿನಕ್ಕೆ ಮೂರು ವಯಲ್ ಎಂದು ಲೆಕ್ಕ ಹಾಕಿದರೂ ಭಾರತ್ ಸಿರಮ್ಸ್‌ನ ದರದ ಪ್ರಕಾರ 14,232, ಮೈಲಾನ್ ಕಂಪನಿ ದರದ ಪ್ರಕಾರ 23,442 ರು. ಬೇಕಾಗಲಿದೆ.