ಮುಂದುವರೆದ ಕೇಂದ್ರದ ಅಸಡ್ಡೆ; ಉತ್ತರ ಪ್ರದೇಶಕ್ಕೆ 3,310, ಕರ್ನಾಟಕಕ್ಕೆ 240 ಮೆ.ಟನ್‌ ಆಮ್ಲಜನಕ

ಬೆಂಗಳೂರು; ಕೇಂದ್ರ ಸರ್ಕಾರವು ಆಮ್ಲಜನಕ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ ತಾರತಮ್ಯವನ್ನು ‘ದಿ ಫೈಲ್‌’ ಬಹಿರಂಗಪಡಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಕೂಡ ಕೇಂದ್ರದ ಮಲತಾಯಿ ಧೋರಣೆಯನ್ನು ಪ್ರಶ್ನಿಸಿದ್ದಾರೆ. ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಮೂಲಕ ಮೇ 11 ಮತ್ತು ಮೇ 12ರಂದು ರಾಜ್ಯಕ್ಕೆ ಆಮ್ಲಜನಕವನ್ನು ಹಂಚಿಕೆ ಮಾಡಿದೆಯಾದರೂ ತಾರತಮ್ಯವನ್ನು ಮುಂದುವರೆಸಿದೆ. ಎರಡು ಬಾರಿಯೂ ಉತ್ತರ ಪ್ರದೇಶಕ್ಕೇ ಸಿಂಹಪಾಲು ದೊರೆತಿದೆ.

ದೇಶದ 9 ರಾಜ್ಯಗಳಿಗೆ 2 ಬಾರಿ ಹಂಚಿಕೆ ಮಾಡಿರುವ ಒಟ್ಟು 11,995 ಮೆಟ್ರಿಕ್‌ ಟನ್‌ ಪೈಕಿ ಕರ್ನಾಟಕಕ್ಕೆ ಕೇವಲ 240 ಮೆ.ಟನ್‌ ದೊರೆತಿದೆ. ಇದೇ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ 3,310 ಮೆ.ಟನ್‌ ಪ್ರಮಾಣದಲ್ಲಿ ಆಮ್ಲಜನಕ ಹಂಚಿಕೆ ಮಾಡಿದೆ.

ಕೇಂದ್ರದ ಈ ಅಸಡ್ಡೆಯನ್ನು ಪ್ರಶ್ನಿಸಿರುವ ಎಚ್‌ ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿಯೂ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಕರ್ನಾಟಕಕ್ಕೆ 1,200 ಟನ್‌ ಆಮ್ಲಜನಕ ಪೂರೈಸುವಂತೆ ಕೋರ್ಟ್‌ ಈಗಾಗಲೇ ಆದೇಶಿಸಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಕೇವಲ 120 ಟನ್‌ ಆಮ್ಲಜನಕ ಮಾತ್ರ ಪೂರೈಕೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?’ ಎಂದು ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಕರ್ನಾಟಕಕ್ಕಿಂತ ಉತ್ತರ ಪ್ರದೇಶಕ್ಕೆ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗಿದೆ. ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಬಯಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಎಂದೂ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಟ್ವೀಟ್‌ ಮೂಲಕ ಉತ್ತರಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯಕ್ಕೆ 1,015 ಮೆಟ್ರಿಕ್‌ ಟನ್‌ ಮತ್ತು ವಿಶೇಷ ಹಂಚಿಕೆ ರೂಪದಲ್ಲಿ 60 ಮೆ.ಟನ್‌ ಸೇರಿ ಒಟ್ಟು 1,075 ಮೆ.ಟನ್‌ ಆಕ್ಸಿಜನ್‌ ಹಂಚಿಕೆ ಮಾಡಿದೆ. 120 ಮೆಟ್ರಿಕ್‌ ಟನ್‌ ಹಂಚಿಕೆಯಾಗಿರುವುದು ಆಕ್ಸಿಜನ್‌ ಎಕ್ಸ್‌ಪ್ರೆಸ್‌ವೊಂದರಿಂದ ಎಂದು ಉತ್ತರಿಸಿದ್ದಾರೆ.

ಮೇ 11ರಂದು ಕೇಂದ್ರ ಸರ್ಕಾರವು 375 ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಿರುವ ಒಟ್ಟು 5,735 ಮೆಟ್ರಿಕ್‌ ಟನ್‌ ಆಮ್ಲಜನಕದ ಪೈಕಿ ರಾಜ್ಯಕ್ಕೆ ಪೂರೈಕೆ ಆಗಿರುವುದು 120 ಮೆಟ್ರಿಕ್‌ ಟನ್‌ನಷ್ಟೇ. 5,735 ಮೆಟ್ರಿಕ್‌ ಟನ್‌ ಪೈಕಿ ಉತ್ತರ ಪ್ರದೇಶಕ್ಕೆ ಸಿಂಹಪಾಲು ದೊರೆತಿತ್ತು. ‘ದಿ ಫೈಲ್‌’ ಈ ಕುರಿತು ಮೇ 11ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಕೇಂದ್ರದ ಅಸಡ್ಡೆ; ಕರ್ನಾಟಕಕ್ಕೆ 120, ಉತ್ತರಪ್ರದೇಶಕ್ಕೆ 1,630 ಮೆ.ಟನ್‌ ಆಮ್ಲಜನಕ ಪೂರೈಕೆ

ಉತ್ತರ ಪ್ರದೇಶಕ್ಕೆ 1,630 ಮೆಟ್ರಿಕ್‌ ಟನ್‌ ನೀಡಿರುವ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 120 ಮೆಟ್ರಿಕ್‌ ಟನ್‌ ಸರಬರಾಜು ಮಾಡಿದೆ. ಉಳಿದಂತೆ ಮಹಾರಾಷ್ಟ್ರಕ್ಕೆ 293 ಮೆಟ್ರಿಕ್‌ ಟನ್‌ ಸರಬರಾಜು ಆಗಿದೆಯಲ್ಲದೆ ಇನ್ನೂ 50 ಮೆಟ್ರಿಕ್‌ ಟನ್‌ ಸದ್ಯದಲ್ಲೆ ಮಹಾರಾಷ್ಟ್ರ ತಲುಪಲಿದೆ. ದೆಹಲಿಗೆ 2,383 ಮೆಟ್ರಿಕ್‌ ಟನ್‌, ತೆಲಂಗಾಣಕ್ಕೆ 123 ಮೆಟ್ರಿಕ್‌ ಟನ್‌, ಮಧ್ಯ ಪ್ರದೇಶಕ್ಕೆ 340 ಮೆಟ್ರಿಕ್‌ ಟನ್‌, ರಾಜಸ್ಥಾನಕ್ಕೆ 40 ಮೆಟ್ರಿಕ್‌ ಟನ್‌, ಉತ್ತರಾಖಂಡ್‌ಗೆ 120 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಕೆ ಮಾಡಿರುವುದು ಕೇಂದ್ರ ಸರ್ಕಾರದ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ.


ಮೇ 12ರಂದು 396 ಟ್ಯಾಂಕರ್‌ಗಳ ಮೂಲಕ 6,260 ಮೆ.ಟನ್‌ ವೈದ್ಯಕೀಯ ಅಮ್ಲಜನಕವನ್ನು 9 ರಾಜ್ಯಗಳಿಗೆ ಹಂಚಿಕೆಮಾಡಿದೆ. ಇದರಲ್ಲಿ ದೆಹಲಿಗೆ 2,404 ಮೆಟ್ರಿಕ್‌ ಟನ್‌, ಹರ್ಯಾಣಕ್ಕೆ 939, ಮಹಾರಾಷ್ಟ್ರಕ್ಕೆ 407, ತೆಲಂಗಾಣಕ್ಕೆ 123, ಮಧ್ಯಪ್ರದೇಶಕ್ಕೆ 360, ರಾಜಸ್ಥಾನಕ್ಕೆ 40, ಉತ್ತರಾಖಂಡ್‌ಗೆ 120, ಉತ್ತರ ಪ್ರದೇಶಕ್ಕೆ 1,680 ಮತ್ತು ಕರ್ನಾಟಕಕ್ಕೆ 120 ಮೆಟ್ರಿಕ್ ಟನ್‌ ಹಂಚಿಕೆ ಮಾಡಿದೆ.

ಕರ್ನಾಟಕದಲ್ಲಿ ಆಮ್ಲಜನಕದ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಕಾಲದಲ್ಲಿ ಆಮ್ಲಜನಕ ದೊರೆಯದ ಕಾರಣ ರಾಜ್ಯದಲ್ಲಿ ಕಳೆದ ದಿನಗಳಲ್ಲಿ 40ಕ್ಕಿಂತಲೂ ಹೆಚ್ಚು ಮಂದಿ ಕೋವಿಡ್‌ ಪೀಡಿತರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಒಟ್ಟಾರೆ ಆಕ್ಸಿಜನ್ ಬೇಡಿಕೆ ದಿನಕ್ಕೆ 1,800 ಮೆಟ್ರಿಕ್ ಟನ್‌ನಷ್ಟಿದೆ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ದಿನ ಕೇವಲ 865 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಮಾತ್ರ ಪೂರೈಕೆಯಾಗುತ್ತಿದೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನ 935 ಮೆಟ್ರಿಕ್ ಟನ್ ಆಕ್ಸಿಜನ್ ಅಭಾವ ಎದುರಾಗಿದೆ.

the fil favicon

SUPPORT THE FILE

Latest News

Related Posts