ರೆಮ್‌ಡಿಸಿವಿರ್‌; 34,109 ವಯಲ್ಸ್‌ ಬಾಕಿ ಉಳಿಸಿಕೊಂಡ ಸಿಪ್ಲಾ, ಜ್ಯುಬಿಲಿಯೆಂಟ್‌ಗೆ ನೋಟೀಸ್‌

ಬೆಂಗಳೂರು; ನಿಗದಿತ ರೆಮ್‌ಡಿಸಿವಿರ್‌ ವಯಲ್ಸ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡದ ಸಿಪ್ಲಾ ಮತ್ತು ಜ್ಯುಬಿಲಿಯೆಂಟ್‌ ಕಂಪನಿಗೆ ರಾಜ್ಯ ಸರ್ಕಾರವು ಕಾನೂನು ಕ್ರಮ ಜರುಗಿಸುವ ನೋಟೀಸ್‌ ಜಾರಿ ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ದೇಶಿಸಿದ ಪ್ರಕಾರ ರೆಮ್‌ಡಿಸಿವಿರ್‌ ವಯಲ್ಸ್‌ಗಳನ್ನು ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಸಿಪ್ಲಾ ಕಂಪನಿ ಮತ್ತು ಜ್ಯುಬಿಲಿಯೆಂಟ್‌ ಕಂಪನಿಗೆ 2021ರ ಮೇ 11ರಂದು ನೋಟೀಸ್‌ ಜಾರಿಗೊಳಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರೆಮ್‌ಡಿಸಿವಿರ್‌ ಒಂದೊಂದು ವಯಲ್ಸ್‌ಗೆ 40 ರಿಂದ 50 ಸಾವಿರ ರು. ದರದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರಾಜ್ಯ ಸರ್ಕಾರವು ಎರಡು ಕಂಪನಿಗಳಿಗೆ ನೀಡಿರುವ ನೋಟೀಸ್‌ ಮುನ್ನೆಲೆಗೆ ಬಂದಿದೆ.

ಕೋವಿಡ್‌ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉದ್ಭವವಾಗಿರುವ ಔಷಧಗಳ ಕೊರತೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸಿದೆ ಎಂದು ತಿಳಿದು ಬಂದಿದೆ. ಕೋವಿಡ್‌ ಸಂದರ್ಭದಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳು ಸೂಕ್ತ ಸಮಯದಲ್ಲಿ ದೊರಕದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ಕಂದಾಯ ಇಲಾಖೆಯೂ ಇದೀಗ ಕೈಜೋಡಿಸಿದೆ. ಸಚಿವ ಆರ್‌ ಅಶೋಕ್‌ ಅವರ ಸೂಚನೆಯಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನೋಟೀಸ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ಸಿಪ್ಲಾ ಮತ್ತು ಜ್ಯುಬಿಲಿಯೆಂಟ್‌  ಕಂಪನಿಗಳು ಒಟ್ಟು 62,000 ರೆಮ್‌ಡಿಸಿವಿರ್‌ ವಯಲ್ಸ್‌ಗಳನ್ನು ಪೂರೈಕೆ ಮಾಡಲು 2021ರ ಮೇ 1ರಂದು ರಾಜ್ಯ ಸರ್ಕಾರ ನಿರ್ದೇಶಿಸಿತ್ತು. ಆದರೆ ಈ ಕಂಪನಿಗಳು 27,901 ವಯಲ್ಸ್‌ಗಳನ್ನು ಮೇ 10ರ ಅಂತ್ಯಕ್ಕೆ ಸರಬರಾಜು ಮಾಡಿದೆ. ಇನ್ನೂ 34,109 ವಯಲ್ಸ್‌ಗಳನ್ನು ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕಂಪನಿಗಳ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್‌ 58 ಮತ್ತು 60 ಹಾಗೂ ಐಪಿಸಿ ಸೆಕ್ಷನ್‌ 188ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಸಿಪ್ಲಾ ಕಂಪನಿಯು ಪೂರೈಕೆ ಮಾಡಬೇಕಿದ್ದ ಒಟ್ಟು 30,000 ರೆಮ್‌ಡಿಸಿವಿರ್‌ ವಯಲ್ಸ್‌ ಪೈಕಿ ಮೇ 9ರ ಹೊತ್ತಿಗೆ 10,840 ಮತ್ತು 32,000 ವಯಲ್ಸ್‌ಗಳನ್ನು ಸರಬರಾಜು ಮಾಡಬೇಕಿದ್ದ ಜ್ಯುಬಿಲಿಯೆಂಟ್‌ ಕಂಪನಿಯು ಕೇವಲ 17,061 ವಯಲ್ಸ್‌ಗಳನ್ನು ಪೂರೈಕೆ ಮಾಡಿತ್ತು. ಆದರೆ ಇದೇ ಅವಧಿಯಲ್ಲಿ ಈ ಎರಡೂ ಕಂಪನಿಗಳು ಮುಕ್ತ ಮಾರುಕಟ್ಟೆಯಲ್ಲಿ ರೆಮ್‌ಡಿಸಿವಿರ್‌ ವಯಲ್ಸ್‌ಗಳನ್ನು ಸರಬರಾಜು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ದಾಖಲೆ ಪ್ರಕಾರ ಸಿಪ್ಲಾ ಕಂಪನಿಯು 2021ರ ಮೇ 21ರಿಂದ 10ರವರೆಗೆ 27,344 ರೆಮ್‌ಡಿಸಿವಿರ್‌ ವಯಲ್ಸ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಅವಧಿಯಲ್ಲಿ ಸರ್ಕಾರಕ್ಕೆ ಒಂದೇ ಒಂದು ವಯಲ್ಸ್‌ ಪೂರೈಕೆ ಮಾಡಿಲ್ಲ.

ಅದೆ ರೀತಿ ಜ್ಯುಬಿಲಿಯೆಂಟ್‌ ಮೇ 21ರಿಂದ 10ರವರೆಗೆ ರಾಜ್ಯ ಸರ್ಕಾರಕ್ಕೆ 25,900 ವಯಲ್ಸ್‌ಗಳನ್ನು ಸರಬರಾಜು ಮಾಡಿದೆ. ಮುಕ್ತ ಮಾರುಕಟ್ಟೆಗೆ 3,401 ವಯಲ್ಸ್‌ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹಿಟಾರಿಯೋ ಕಂಪನಿ ಮೇ 21ರಿಂದ 10ರವರೆಗೆ ಒಂದೇ ಒಂದು ವಯಲ್ಸ್‌ ಸರ್ಕಾರಕ್ಕೆ ಬಿಡುಗಡೆ ಮಾಡಿಲ್ಲ. ಆದರೆ ಮುಕ್ತ ಮಾರುಕಟ್ಟೆಗೆ 99,090 ಸರಬರಾಜು ಮಾಡಿದೆ.

ಡಾ ರೆಡ್ಡೀಸ್‌ ಲ್ಯಾಬ್‌ ಕೂಡ ಸರ್ಕಾರಕ್ಕೆ ಒಂದೇ ಒಂದು ವಯಲ್ಸ್‌ ಸರಬರಾಜು ಮಾಡಿಲ್ಲ. ಮುಕ್ತ ಮಾರುಕಟ್ಟೆಗೆ 3,300 ವಯಲ್ಸ್‌ ಬಿಡುಗಡೆ ಮಾಡಿದೆ. ಕ್ಯಾಡಿಲಾ ಕಂಪನಿಯು ಕೂಡ ಸರ್ಕಾರಕ್ಕೆ ಒಂದೇ ಒಂದು ವಯಲ್ಸ್‌ ಬಿಡುಗಡೆ ಮಾಡಿಲ್ಲ. ಮುಕ್ತ ಮಾರುಕಟ್ಟೆಗೆ 400 ವಯಲ್ಸ್‌ ಸರಬರಾಜು ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.
ಮೇ 21ರಿಂದ ಮೇ 10ವರೆಗೆ ಒಟ್ಟು 3,15,155 ವಯಲ್ಸ್‌ಗಳು ಸರಬರಾಜು ಆಗಿರುವ ಪೈಕಿ ರಾಜ್ಯ ಸರ್ಕಾರಕ್ಕೆ 1,17,825 ಮತ್ತು ಮುಕ್ತ ಮಾರುಕಟ್ಟೆಗೆ 1,97,330 ಹಲವು ಕಂಪನಿಗಳು ವಯಲ್ಸ್‌ಗಳನ್ನು ಬಿಡುಗಡೆ ಮಾಡಿದೆ.

ರೆಮ್‌ಡಿಸಿವಿರ್‌ ತಯಾರಿಕೆ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಿದ್ದವು. ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌ ಸೇರಿದಂತೆ ಕೆಲ ಕಂಪನಿಗಳು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಪೂರೈಕೆ ಮಾಡಿ ಒಟ್ಟು ಅಂದಾಜು 20 ಕೋಟಿ ರು ವಹಿವಾಟು ನಡೆಸಿತ್ತು. ಕೇವಲ 7 ದಿನದಲ್ಲಿಯೇ 20 ಕೋಟಿ ವಹಿವಾಟು ನಡೆಸಿದ್ದ ಕಂಪನಿಗಳ ಲಾಭಕೋರತನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಈವರೆವಿಗೂ ಕಡಿವಾಣ ಹಾಕಿಲ್ಲ. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts