ಕೇಂದ್ರದ ಅಸಡ್ಡೆ; ಕರ್ನಾಟಕಕ್ಕೆ 120, ಉತ್ತರಪ್ರದೇಶಕ್ಕೆ 1,630 ಮೆ.ಟನ್‌ ಆಮ್ಲಜನಕ ಪೂರೈಕೆ

ಬೆಂಗಳೂರು; ಕೋವಿಡ್‌ ದೃಢಪಟ್ಟ ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚಿವೆ. ಹೀಗಾಗಿ ಅಕ್ಸಿಜನ್‌ನ ಅಗತ್ಯತೆ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ರೈಲ್ವೆ ಮೂಲಕ ರಾಜ್ಯಕ್ಕೆ ಹಂಚಿಕೆ ಮಾಡಿರುವ ಆಕ್ಸಿಜನ್‌ ಪ್ರಮಾಣವು ಉಳಿದ ರಾಜ್ಯಗಳಿಗಿಂತ ಕಡಿಮೆ ಇದೆ.

ಕೇಂದ್ರ ಸರ್ಕಾರವು 375 ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಿರುವ ಒಟ್ಟು 5,735 ಮೆಟ್ರಿಕ್‌ ಟನ್‌ ಆಮ್ಲಜನಕದ ಪೈಕಿ ರಾಜ್ಯಕ್ಕೆ ಪೂರೈಕೆ ಆಗಿರುವುದು 120 ಮೆಟ್ರಿಕ್‌ ಟನ್‌ನಷ್ಟೇ. 5,735 ಮೆಟ್ರಿಕ್‌ ಟನ್‌ ಪೈಕಿ ಉತ್ತರ ಪ್ರದೇಶಕ್ಕೆ ಸಿಂಹಪಾಲು ದೊರೆತಿದೆ. ಹೈಕೋರ್ಟ್‌ ನೀಡಿದ್ದ ನಿರ್ದೇಶನದ ನಂತರವೂ ಕೇಂದ್ರ ಸರ್ಕಾರವು ಉಳಿದ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಆಕ್ಸಿಜನ್‌ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶಕ್ಕೆ 1,630 ಮೆಟ್ರಿಕ್‌ ಟನ್‌ ನೀಡಿರುವ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 120 ಮೆಟ್ರಿಕ್‌ ಟನ್‌ ಸರಬರಾಜು ಮಾಡಿದೆ. ಉಳಿದಂತೆ ಮಹಾರಾಷ್ಟ್ರಕ್ಕೆ 293 ಮೆಟ್ರಿಕ್‌ ಟನ್‌ ಸರಬರಾಜು ಆಗಿದೆಯಲ್ಲದೆ ಇನ್ನೂ 50 ಮೆಟ್ರಿಕ್‌ ಟನ್‌ ಸದ್ಯದಲ್ಲೆ ಮಹಾರಾಷ್ಟ್ರ ತಲುಪಲಿದೆ. ದೆಹಲಿಗೆ 2,383 ಮೆಟ್ರಿಕ್‌ ಟನ್‌, ತೆಲಂಗಾಣಕ್ಕೆ 123 ಮೆಟ್ರಿಕ್‌ ಟನ್‌, ಮಧ್ಯ ಪ್ರದೇಶಕ್ಕೆ 340 ಮೆಟ್ರಿಕ್‌ ಟನ್‌, ರಾಜಸ್ಥಾನಕ್ಕೆ 40 ಮೆಟ್ರಿಕ್‌ ಟನ್‌, ಹರ್ಯಾಣಕ್ಕೆ 812, ಉತ್ತರಾಖಂಡ್‌ಗೆ 120 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಕೆ ಮಾಡಿರುವುದು ಕೇಂದ್ರ ಸರ್ಕಾರದ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ.

ಕರ್ನಾಟಕದಲ್ಲಿ ಆಮ್ಲಜನಕದ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಕಾಲದಲ್ಲಿ ಆಮ್ಲಜನಕ ದೊರೆಯದ ಕಾರಣ ರಾಜ್ಯದಲ್ಲಿ ಕಳೆದ ದಿನಗಳಲ್ಲಿ 40ಕ್ಕಿಂತಲೂ ಹೆಚ್ಚು ಮಂದಿ ಕೋವಿಡ್‌ ಪೀಡಿತರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಒಟ್ಟಾರೆ ಆಕ್ಸಿಜನ್ ಬೇಡಿಕೆ ದಿನಕ್ಕೆ 1,800 ಮೆಟ್ರಿಕ್ ಟನ್‌ನಷ್ಟಿದೆ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ದಿನ ಕೇವಲ 865 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಮಾತ್ರ ಪೂರೈಕೆಯಾಗುತ್ತಿದೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನ 935 ಮೆಟ್ರಿಕ್ ಟನ್ ಆಕ್ಸಿಜನ್ ಅಭಾವ ಎದುರಾಗಿದೆ.

ಲಿಕ್ವಿಡ್‌ ಆಕ್ಸಿಜನ್‌ನ್ನು ವಿವಿಧ ರಾಜ್ಯಗಳಿಗೆ ಹಂಚುವ ಕಾಲಕ್ಕೆ ಆ ರಾಜ್ಯಗಳಲ್ಲಿ ಇರುವ ಸಕ್ರಿಯ ಪ್ರಕರಣಗಳು ಮತ್ತು ತೀವ್ರ ನಿಗಾ ಘಟಕದಲ್ಲಿರುವಂತಹ ಪ್ರಕರಣಗಳು ಆಧಾರವಾಗಿರಬೇಕು. ಇದರಡಿಯಲ್ಲಿ ಕರ್ನಾಟಕಕ್ಕೆ ಅತಿಮುಖ್ಯವಾಗಿ ಬೆಂಗಳೂರು ನಗರಕ್ಕೆ ಉತ್ತರ ಪ್ರದೇಶಕ್ಕೆ ನೀಡಿದ ಆದ್ಯತೆಯನ್ನೇ ನೀಡಬೇಕಿದೆ. ಆದರೆ ಉತ್ತರ ಪ್ರದೇಶಕ್ಕೆ ಸುಮಾರು 1,630 ಮೆಟ್ರಿಕ್‌ ಟನ್‌ ಆಮ್ಲಜನಕ ನೀಡಲಾಗಿದೆ. ಕರ್ನಾಟಕಕ್ಕೆ 120 ಮೆ.ಟನ್‌ ನೀಡಿದ್ದಾರೆ. ಇದು ಮೇಲ್ನೋಟಕ್ಕೆ ಕರ್ನಾಟಕದೆಡೆಗೆ ಕೇಂದ್ರ ಸರ್ಕಾರ ಹೊಂದಿರುವ ಅಸಡ್ಡೆಯ ಧೋರಣೆ ಎತ್ತಿ ತೋರುತ್ತದೆ.

ಕೆಬಿಕೆ ಸ್ವಾಮಿ, ವಕೀಲರು

ಬೆಂಗಳೂರು, ಮಂಡ್ಯ, ಚಾಮರಾಜನಗರ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಆಕ್ಸಿಜನ್‌ ಕೊರತೆಯಿಂದಾಗಿ ಕೋವಿಡ್‌ ಪೀಡಿತ ರೋಗಿಗಳು ಜೀವನ್ಮರಣ ಹೋರಾಟಕ್ಕಿಳಿದಿದ್ದಾರೆ. ಆದರೂ ಬೇಡಿಕೆಗೆ ತಕ್ಕಂತೆ ರಾಜ್ಯಕ್ಕೆ ಆಕ್ಸಿಜನ್‌ ಲಭ್ಯವಾಗುತ್ತಿಲ್ಲ.

ಬಾಗಲಕೋಟೆಯಲ್ಲಿ ಆಕ್ಸಿಜನ್ ಅಭಾವ ಇದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 3 ಸಾವಿರ ಲೀಟರ್ ಆಕ್ಸಿಜನ್ & ಖಾಸಗಿ ಆಸ್ಪತ್ರೆಗಳಿಗೆ 14 ಸಾವಿರ ಲೀಟರ್ ಆಕ್ಸಿಜನ್ ಅಗತ್ಯವಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿದಿನ 1.5 ಸಾವಿರ ಲೀಟರ್ ಆಕ್ಸಿಜನ್, ಖಾಸಗಿ ಆಸ್ಪತ್ರೆಗಳಿಗೆ 6 ಸಾವಿರ ಲೀಟರ್ ಆಕ್ಸಿಜನ್ ಪೂರೈಕೆಯಾಗುತ್ತಿದೆ.

ಈ ಹೊತ್ತಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವೇ ನಾಪತ್ತೆಯಾಗಿದೆ. ಕರ್ನಾಟಕ ಇಂದು ದೇಶದಲ್ಲಿಯೇ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಪ್ರತಿದಿನದ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚು ಕಡಿಮೆ ಮೊದಲಿನ ಸ್ಥಾನಕ್ಕೆ ಪೈಪೋಟಿ ನೀಡುವಂತಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಪರಿಸ್ಥಿತಿ ಬಗ್ಗೆ ಸಾಕಷ್ಟು ಕಾಳಜಿ ವಹಿಸಿಲ್ಲ ಎನ್ನುವುದು ಮತ್ತು ಕರ್ನಾಟಕಕ್ಕೆ ಸರಬರಾಜು ಮಾಡುತ್ತಿರುವ ಆಮ್ಲಜನಕದ ಪ್ರಮಾಣವನ್ನು ನೋಡಿಯೇ ತೀರ್ಮಾನಿಸಬಹುದು. ಹೈಕೋರ್ಟ್‌ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕೆಲವೊಂದು ನಿರ್ದೇಶನಗಳನ್ನು ನೀಡದೇ ಇದ್ದರೆ ಪರಿಸ್ಥಿತಿ ಇನ್ನೂ ಭಯಾನಕವಾಗಿರುತ್ತಿತ್ತು. ಮತ್ತು ಅದು ಈಗಲೂ ಸುಧಾರಿಸಿಲ್ಲ ಎನ್ನುವುದಕ್ಕೆ ನೆನ್ನೆಯೂ ಸಹ ಕರ್ನಾಟಕದ ಆಸ್ಪತ್ರೆಗಳಲ್ಲಿ ಆಮ್ಲಜನಕವಿಲ್ಲದೇ ಸಾವಿನ ಪ್ರಕರಣಗಳು ವರದಿಯಾಗಿರುವುದೇ ಸಾಕ್ಷಿ.

ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು

ಕರ್ನಾಟಕ ರಾಷ್ಟ್ರಸಮಿತಿ

ಬಾಗಲಕೋಟೆ ಜಿಲ್ಲೆಗೆ ಪ್ರತಿನಿತ್ಯ 17 ಸಾವಿರ ಲೀಟರ್ ಆಕ್ಸಿಜನ್ ಅಗತ್ಯವಿದ್ದು, ಈಗ ಪ್ರತಿದಿನ 7.5 ಸಾವಿರ ಲೀಟರ್ ಆಕ್ಸಿಜನ್ ಅಷ್ಟೇ ಪೂರೈಕೆಯಾಗುತ್ತಿದೆ. ರೋಗಿಗಳು ಆಕ್ಸಿಜನ್ ಸಿಗದೆ ನರಳಿ ಪ್ರಾಣ ಬಿಡುತ್ತಿದ್ದಾರೆ ಎಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಅವರು ಇತ್ತೀಚೆಗಷ್ಟೇ ಟ್ವೀಟ್‌ ಮಾಡಿದ್ದನ್ನು ಸ್ಮರಿಸಬಹುದು.

ರಾಜ್ಯದಲ್ಲಿ ಮೇ 11ರ ಅಂತ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ 2013193 ಇದ್ದರೆ, 5,87,452 ಸಕ್ರಿಯ ಪ್ರಕರಣಗಳಿವೆ. ಮೇ 10ರ ಅಂತ್ಯಕ್ಕೆ 39,510 ಹೊಸ ಪ್ರಕರಣಗಳು ವರದಿಯಾಗಿವೆ.

ಈಗ ಕರ್ನಾಟಕಕ್ಕೆ ಲಭಿಸಿರುವ ಆಮ್ಲಜನಕ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಶ್ರೇಯಸ್ಸು ಲಭಿಸಬೇಕೇ ವಿನಃ ಕೇಂದ್ರ ಸರ್ಕಾರ ಅಥವಾ ಬೇರೆ ಯಾವುದೇ ರಾಜಕೀಯ ವ್ಯಕ್ತಿಗೆ ಸೇರತಕ್ಕದ್ದಲ್ಲ. ಆಡಳಿತದಲ್ಲಿ ಇರುವವರು ನಿರ್ಲಕ್ಷ್ಯ ತೋರಿದ ಕಾರಣದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕಾಲದಲ್ಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲೂ ತೀವ್ರ ಮುಖಭಂಗಕ್ಕೊಳಗಾದ ಮೇಲೆ ನ್ಯಾಯಾಲಯದ ಆದೇಶ ಉಲ್ಲಂಘಿಸಲು ಸಾಧ್ಯವಿರದ ಕಾರಣ ಕರ್ನಾಟಕಕ್ಕೆ ಅಲ್ಪ ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕವನ್ನು ನೀಡಿ ಕಣ್ಣೊರೆಸುವ ನಾಟಕವಾಡುತ್ತಿದೆ ಎನ್ನುತ್ತಾರೆ ವಕೀಲ ಕೆಬಿಕೆ ಸ್ವಾಮಿ.

the fil favicon

SUPPORT THE FILE

Latest News

Related Posts