ಬೆಂಗಳೂರು; ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವೇಗವಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಈ ಎರಡೂ ಜಿಲ್ಲೆಗೆ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸರಬರಾಜು ಮಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಈ ಸಂಬಂಧ ಯಾವುದೇ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದು ಬಹಿರಂಗವಾಗಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಪ್ರತಿ ದಿನ 60ರಿಂದ 70 ಟನ್ ಆಕ್ಸಿಜನ್ ಸರಬರಾಜು ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಮೈಸೂರು ಮತ್ತು ಚಾಮರಾಜನಗರಕ್ಕೆ ಪೂರೈಕೆ ಆಗುತ್ತಿರುವುದು ಕೇವಲ 15ರಿಂದ 20 ಟನ್ ಮಾತ್ರ.
ಆಕ್ಸಿಜನ್ ಕೊರತೆಯಿಂದ ಕಳೆದ 24 ಗಂಟೆಗಳಲ್ಲಿ ಚಾಮರಾಜನಗರದಲ್ಲಿ 23 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿರುವ ಬೆನ್ನಲ್ಲೇ ಈ ಎರಡೂ ಜಿಲ್ಲೆಗಳಿಗೆ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ ಎಂಬ ಅಂಶ ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್’ ಜತೆ ಮಾತನಾಡಿದ ಮೈಸೂರಿನ ಮಹತಿ ಆಕ್ಸಿಜನ್ ಕಂಪನಿ ಪ್ರತಿನಿಧಿ ಶಾಂತರಾಮು ಅವರು ಆಕ್ಸಿಜನ್ ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಕೊರತೆಯ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.
ಶಾಂತರಾಮ ಅವರು ಪ್ರತಿನಿಧಿಸುವ ಕಂಪನಿಯು ಕಳೆದ ಒಂದು ವಾರದಲ್ಲಿ ಚಾಮರಾಜನಗರಕ್ಕೆ 80 ಸಿಲಿಂಡರ್ ಅಂದರೆ 1ಟನ್‌ನಷ್ಟು ಮಾತ್ರ ಆಕ್ಸಿಜನ್ ಪೂರೈಕೆ ಮಾಡಿದೆ. ಇವರ ಪ್ರಕಾರ ಮೈಸೂರು ನಗರವೊಂದಕ್ಕೇ ಪ್ರತಿ ದಿನ 5 ಟನ್ ಪ್ರಮಾಣದ ಆಕ್ಸಿಜನ್ ಪೂರೈಕೆ ಆಗಬೇಕು. ಆದರೆ ಸದ್ಯ ಪೂರೈಕೆ ಆಗುತ್ತಿರುವುದು ಕೇವಲ 1 ಟನ್ ಮಾತ್ರ.
‘ನಮ್ಮದು ಸಣ್ಣ ಪ್ರಮಾಣದ ಘಟಕ. ನಮ್ಮ ಕಂಪನಿಯು ಮಂಡ್ಯ ಸೇರಿ ಸುತ್ತಲಿನ ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಯಾವ ಜಿಲ್ಲೆಗೆ ಎಷ್ಟೆಂದು ಸರಬರಾಜು ಮಾಡಲಿ. ನಮಗಂತೂ ಒತ್ತಡವಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಆಕ್ಸಿಜನ್ ಬೇಕೆಂದು ಕೇಳುತ್ತದೆ. ಹೀಗಾಗಿ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಆಕ್ಸಿಜನ್ ಸಮಸ್ಯೆಯನ್ನು ಬಗೆಹರಿಸಬೇಕು. ರಾಜ್ಯದಲ್ಲಿರುವ ಉಕ್ಕು ಉತ್ಪಾದನಾ ಘಟಕಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ತರಿಸಿಕೊಳ್ಳಬೇಕು,’ ಎನ್ನುತ್ತಾರೆ ಮಹತಿ ಕಂಪನಿಯ ಶಾಂತರಾಮು.
ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದಾರೆ. ಈ ಪೈಕಿ ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಅಳಲು ತೋಡಿಕೊಂಡಿದ್ದರು.
ಭಾನುವಾರ ರಾತ್ರಿ 12.30 ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮೈಸೂರಿನ ಸೌತ್ರನ್ ಗ್ಯಾಸ್ ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜನಗರಕ್ಕೆ ನಿನ್ನೆ ಮಧ್ಯರಾತ್ರಿಯೇ ರವಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೂ 12 ಮಂದಿಗೆ ಸೂಕ್ತ ಸಂದರ್ಭದಲ್ಲಿ ಆಕ್ಸಿಜನ್ ಲಭ್ಯವಾಗದ ಕಾರಣ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಪ್ರಕರಣಕ್ಕೆ ಆಕ್ಸಿಜನ್ ಪೂರೈಕೆಯಲ್ಲಿ ಲೋಪ ಕಾರಣವಾಗಿದೆ ಎಂದಿರುವ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರು ಇದರಲ್ಲಿ ತಪ್ಪಿತಸ್ಥರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದಿದ್ದಾರೆ.
ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದರೆ ಮೊದಲೇ ಏಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ?, ಆಕ್ಸಿಜನ್ ಸಿಲಿಂಡರ್ ಪೂರೈಕೆ ಸಮಸ್ಯೆಯಾಗಿದ್ದನ್ನು ಯಾಕೆ ಸರ್ಕಾರದ ಗಮನಕ್ಕೆ ತರಲಿಲ್ಲ ಎಂದು ಡಿಸಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಯಡಿಯೂರಪ್ಪ ನಿರ್ದೇಶನ ನೀಡಿದ್ದು ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.